ಭಾರತ ಇಂದು ಶತಕೋಟಿ ಡೋಸ್ ಕೊರೊನಾ ಲಸಿಕೆ ಪೂರೈಸುವ ಮೂಲಕ ಮಹತ್ತರ ಮೈಲಿಗಲ್ಲು ಸಾಧಿಸಿತು.
ಭಾರತದಲ್ಲಿ ವಿತರಿಸಲಾಗಿರುವ ಲಸಿಕೆಯ ಪ್ರಮಾಣ ಅಮೆರಿಕಾ ಮತ್ತು ಐರೋಪ್ಯ ರಾಷ್ಟ್ರಗಳ ಒಟ್ಟು ಲಸಿಕೆಗಿಂತ ಹೆಚ್ಚಾಗಿದೆ.
ಈ ನೂರು ಕೋಟಿ ಡೋಸ್ ಗಳಲ್ಲಿ ಕರ್ನಾಟಕದ ಪಾಲು 6.21 ಕೋಟಿ ಡೋಸ್. ಜನವರಿ 16ರಂದು ಆರಂಭವಾದ ಲಸಿಕಾ ಅಭಿಯಾನ ಕೇವಲ 9 ತಿಂಗಳುಗಳಲ್ಲಿ ಶತಕೋಟಿ ಪೂರೈಸುವ ಮೂಲಕ ವಿಶ್ವದ ಅತ್ಯಂತ ದೊಡ್ಡ ಹಾಗೂ ವೇಗವಾದ ಲಸಿಕಾ ಅಭಿಯಾನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಈ ಮಹತ್ತರ ಸಾಧನೆಗೆ ದೇಶದ ಖ್ಯಾತ ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದ ಪರಿಣಿತರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಕೇವಲ 9 ತಿಂಗಳಲ್ಲಿ ನೂರು ಕೋಟಿ ಲಸಿಕೆ ನೀಡಿರುವುದು ಬಹುದೊಡ್ಡ ಸಾಧನೆ. ಈ ಪೈಕಿ ಬಹುತೇಕ ಲಸಿಕೆ ಉಚಿತವಾಗಿದೆ. ಇಂತಹ ಅದ್ಭುತ ಶ್ರಮ ವಹಿಸಿದ ಸರ್ಕಾರ ಅಭಿನಂದನಾರ್ಹವಾಗಿದೆ. ಸಾಂಕ್ರಾಮಿಕದ ಆರಂಭದಿಂದಲೇ ಕರ್ನಾಟಕವು ಇದರ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿದೆ.
ಲಸಿಕೆ ವಿತರಣೆಗೆ ನಾಲ್ಕು ಮುಖ್ಯವಾದ ಸವಾಲುಗಳಿತ್ತು. ಲಸಿಕೆ ಹಿಂಜರಿಕೆ ನಿವಾರಿಸುವುದು, ಉಚಿತ ಲಸಿಕೆ ಒಡಗಿಸುವುದು, ಸೂಕ್ತ ಹಂಚಿಕೆ ಹಾಗೂ ಗ್ರಾಮೀಣ ಭಾಗಗಳಿಗೆ ತಲುಪಿಸುವುದು. ಈ ನಾಲ್ಕು ಸವಾಲುಗಳನ್ನು ಪ್ರಧಾನಿ ಮೋದಿ ಅವರ ನೇತೃತ್ವದ ಸರ್ಕಾರ ಯಶಸ್ವಿಯಾಗಿ ಎದುರಿಸಿದೆ.
- ಡಾ.ಸುದರ್ಶನ್ ಬಲ್ಲಾಳ್, ಮಣಿಪಾಲ್ ಆಸ್ಪತ್ರೆ ಮುಖ್ಯಸ್ಥ
ಇದು ಪ್ರತಿ ಭಾರತೀಯರಿಗೆ ಹೆಮ್ಮೆಯ ಕ್ಷಣ. ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನವು ಕೇವಲ 9 ತಿಂಗಳಲ್ಲಿ 100 ಕೋಟಿಯ ಸಾಧನೆ ಮಾಡಿದೆ. ತಳಮಟ್ಟದಲ್ಲಿ ಕೆಲಸ ಮಾಡುವ ಜೊತೆಗೆ, ಲಸಿಕಾ ಅಭಿಯಾನ ರೂಪಿಸುವ ಯೋಜನೆ, ಅನುಷ್ಠಾನ, ನಿರ್ವಹಣೆ, ಪಾಲುದಾರರ ನಿರ್ವಹಣೆ ಮೊದಲಾದ ಕ್ರಮಗಳು ಇಲ್ಲಿ ಮುಖ್ಯ ಪಾತ್ರ ವಹಿಸಿವೆ.
- ಡಾ.ಅರುಂಧತಿ ಚಂದ್ರಶೇಖರ್, ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕಿ
ಕೊರೊನಾ ಸಂಕ್ರಾಮಿಕದ ವಿರುದ್ಧ ಹೋರಾಡಲು ಲಸಿಕೆ ಅತ್ಯಂತ ಪ್ರಭಾವಿ ಅಸ್ತ್ರವಾಗಿದ್ದು, ಪ್ರಧಾನಿ ಮೋದಿ, ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರ ನೇತೃತ್ವದಲ್ಲಿ ಇದನ್ನು ಸಮರ್ಪಕವಾಗಿ ಬಳಸಲಾಗಿದೆ. ಕೊರೊನಾ ಮುಕ್ತ ದೇಶವಾಗುವತ್ತ ಭಾರತ ದೊಡ್ಡ ಹೆಜ್ಜೆ ಇಟ್ಟಿದೆ.
ಡಾ.ಎಂ.ಕೆ.ಸುದರ್ಶನ್, ಅಧ್ಯಕ್ಷರು, ಕೋವಿಡ್ ತಾಂತ್ರಿಕ ಸಲಾಹಾ ಸಮಿತಿ
ಕೊರೊನಾ ಲಸಿಕೆ ಅಭಿಯಾನದಲ್ಲಿ ಬೇಡಿಕೆ ಮತ್ತು ಪೂರೈಕೆಯ ನಿರ್ವಹಣೆ, ಸರಬರಾಜು ಮತ್ತು ವಿತರಣೆಯ ನಿರ್ವಹಣೆ, ಆರೋಗ್ಯ ಸಿಬ್ಬಂದಿಗಳನ್ನು ನಿರಂತರವಾಗಿ ಹುರಿದಿಂಬಿಸಿವುದು ಮುಖ್ಯವಾಗಿದ್ದು ರಾಜ್ಯ ಸರ್ಕಾರ ಇದನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದೆ. ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಆಗಾಗ್ಗೆ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ ಲಸಿಕೆ ಹಿಂಜರಿಕೆ ತಗ್ಗಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದಾರೆ.
ಡಾ.ಸಿ.ಎನ್.ಮಂಜುನಾಥ್, ಸದಸ್ಯರು, ತಾಂತ್ರಿಕ ಸಲಹಾ ಸಮಿತಿ
ಎರಡು ವರ್ಷಗಳ ಹಿಂದೆ ಹೊಸ ಲಸಿಕೆ ಸಂಶೋಧನೆ ಮತ್ತು ದೇಶೀಯ ಉತ್ಪಾದನೆ ಇರಲಿ, ಇಷ್ಟು ಜನಕ್ಕೆ ಅತೀ ಕಡಿಮೆ ಸಮಯದಲ್ಲಿ ಲಸಿಕೆ ನೀಡಬಹುದು ಎಂದೂ ಯಾರೂ ಯೋಚಿಸಿರಲಿಲ್ಲ. ಈ ಸಾಧನೆಯ ಶ್ರೇಯಸ್ಸು ಪ್ರಧಾನಿ ಮೋದಿ ಅವರ ನಾಯಕತ್ವಕ್ಕೆ, ರಾಜ್ಯ ಸರ್ಕಾರಗಳಿಗೆ, ಹಳ್ಳಿ ಹಳ್ಳಿಗೂ, ಮನೆ ಮನೆಗೂ ಲಸಿಕೆ ತಲುಪಿಸಲು ಶ್ರಮಿಸಿದ ಮುಂಚೂಣಿ ಕಾರ್ಯಕರ್ತರಿಗೆ ಸಲ್ಲುತ್ತದೆ. ಭಾರತ ಇಂದು ಕೋವಿಡ್ ವಿರುದ್ಧ ಹೆಚ್ಚಿನ ಸುರಕ್ಷತೆ ಸಾಧಿಸಿದೆ ಎಂದು ಹೇಳಬಹುದು.
ಡಾ.ದೇವಿ ಶೆಟ್ಟಿ
ನಮ್ಮ ವಿಜ್ಞಾನಿಗಳ ಆವಿಷ್ಕಾರ, ಪ್ರಧಾನಿ ಮೋದಿ ಅವರ ನಾಯಕತ್ವ, ಆರೋಗ್ಯ ಸಿಬ್ಬಂದಿ ಹಾಗೂ ಮುಂಚೂಣಿ ಕಾರ್ಯಕರ್ತರ ಶ್ರಮ ಇಲ್ಲದೆ ಈ ಸಾಧನೆ ಸಾಧ್ಯವಾಗುತ್ತಿರಲಿಲ್ಲ. ವಿರೋಧ ಪಕ್ಷಗಳು ನಮ್ಮ ದೇಧದ ಲಸಿಕಾ ಅಭಿಯಾನದ ಬಗ್ಗೆ ಟೀಕೆ ಮಾಡಿದ್ದವು. ಆದರೆ ನಮ್ಮ ದೇಶದ ಸಾಮರ್ಥ್ಯ ಏನು ಎಂದು ಇಂದು ಪ್ರಧಾನಿ ಮೋದಿ ಅವರು ನಿರೂಪಿಸಿದ್ದಾರೆ. 100 ಕೋಟಿ ಲಸಿಕೆಯಲ್ಲಿ ಕರ್ನಾಟಕದ ಪಾಲು 6.12 ಕೋಟಿ ಎನ್ನುವ ಬಗ್ಗೆ ತೃಪ್ತಿ ಇದೆ.
ಡಾ.ಕೆ.ಸುಧಾಕರ್, ಆರೋಗ್ಯ ಸಚಿವರು