ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಲು ಒತ್ತಾಯ…!
ಪಾವಗಡ: ತಾಲ್ಲೂಕಿನ ಶಾಲೆಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿ ಹೆಲ್ಪ್ ಸೊಸೈಟಿ ಪದಾಧಿಕಾರಿಗಳು ಸೋಮವಾರ ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ ಅವರಿಗೆ ಮನವಿ ಸಲ್ಲಿಸಿದರು.
ಕೋವಿಡ್ 19 ಹಿನ್ನೆಲೆ ಕಳೆದ 2 ವರ್ಷ ಶಾಲೆಗಳು ನಡೆದಿಲ್ಲ. ತಾಲ್ಲೂಕಿನ ಬಹುತೇಕ ಶಾಲೆಗಳ ಕೊಠಡಿಗಳು ಶಿಥಿಲಾವಸ್ಥೆಯಲ್ಲಿವೆ. ಶೌಚಾಲಯ, ಕುಡಿಯುವ ನೀರಿನ ಸಮಸ್ಯೆಯೂ ಇದೆ. ಇತ್ತೀಚೆಗೆ ಬೀಳುತ್ತಿರುವ ಮಳೆಯಿಂದ ಮೇಲ್ಛಾವಣಿ ಸೋರಿ ಮಕ್ಕಳು ಕುಳಿತುಕೊಳ್ಳಲೂ ಸಮಸ್ಯೆಯಾಗುತ್ತಿದೆ ಎಂಬ ದೂರುಗಳು ಕೇಳಿಬರುತ್ತಿವೆ ಎಂದು ದೂರಿದರು.
ಈಗಾಗಲೆ 1 ರಿಂದ 5ನೇ ತರಗತಿವರೆಗೆ ಶಾಲೆ ಪ್ರಾರಂಭವಾಗಿದ್ದು, ಮಕ್ಕಳಿಗೆ ಮೂಲ ಸೌಕರ್ಯಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು. ಅಂತಹ ಶಾಲೆಗಳಿಗೆ ಭೇಟಿ ನೀಡಿ ಕೂಡಲೆ ಸಮಸ್ಯೆ ಪರಿಹರಿಸಬೇಕು. ಶೌಚಾಲಯ, ಕೊಠಡಿಗಳ ದುರಸ್ಥಿ, ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ಬೇಕರಿ ನಾಗರಾಜ, ಪಳವಳ್ಳಿ ಗ್ರಾಮ ಪಂಚಾಯತಿ ಸದಸ್ಯಪಿ.ಬಿ. ದಿನೇಶ್ ಕುಮಾರ್, ಸಾಗರ್, ಸಾಯಿಕುಮಾರ್, ಭೀಮರಾಜ್, ರಾಕೇಶ್ ಉಪಸ್ಥಿತರಿದ್ದರು.
ವರದಿ: ಎ ಶ್ರೀನಿವಾಸುಲು