IMG 20230526 155604

ಪಾವಗಡ: ಜೂ. 1 ರಿಂದ ಟೋಲ್ ಹಣವನ್ನು ಜನರಿಂದ ಪಾವತಿ ಮಾಡಿಕೊಳ್ಳಬಾರದು…!

DISTRICT NEWS ತುಮಕೂರು
  • ಸರ್ಕಾರ ಟೋಲ್ ಹಾಕುವುದಾದರೆ ಪಕ್ಕದಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿ ಟೋಲ್
  • ಜೂ. 1 ರಿಂದ ಟೋಲ್ ಹಣವನ್ನು ಜನರಿಂದ ಪಾವತಿ ಮಾಡಿಕೊಳ್ಳಬಾರದು

ತುಮಕೂರು- ಜಿಲ್ಲೆಯಲ್ಲಿ ನಂಜುಂಡಪ್ಪ ವರದಿ ಪ್ರಕಾರ ಅತಿ ಹಿಂದುಳಿದಿರುವ ತಾಲ್ಲೂಕುಗಳಾಗಿರುವ ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ತಾಲ್ಲೂಕಿನ ಜನರು ಸಂಚರಿಸುವ ರಾಜ್ಯ ಹೆದ್ದಾರಿಯಲ್ಲಿ ಸ್ಥಾಪಿಸಲಾಗಿರುವ ಟೋಲ್‍ನಲ್ಲಿ ಸರ್ವೀಸ್ ರಸ್ತೆ ನಿರ್ಮಿಸದೆ ಶುಲ್ಕ ವಸೂಲಿ ಮಾಡಬಾರದು ಎಂದು ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

K.N.Rajanna 1


ಕೊರಟಗೆರೆ ಸಮೀಪ ರಾಜ್ಯ ಹೆದ್ದಾರಿಯಲ್ಲಿ ರಾಜ್ಯ ಸರ್ಕಾರದ ವತಿಯಿಂದ ಎರಡು ಟೋಲ್‍ಗಳನ್ನು ಸ್ಥಾಪಿಸಲಾಗಿದೆ. ಈ ಟೋಲ್‍ಗಳಲ್ಲಿ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿರುವುದರಿಂದ ಮಧುಗಿರಿ, ಕೊರಟಗೆರೆ ಹಾಗೂ ಪಾವಗಡ ತಾಲ್ಲೂಕಿನ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಮಧುಗಿರಿ, ಕೊರಟಗೆರೆ ಹಾಗೂ ಪಾವಗಡ ಈ ಮೂರು ತಾಲ್ಲೂಕುಗಳು ನಂಜುಂಡಪ್ಪ ವರದಿಯಲ್ಲಿ ಅತಿ ಹಿಂದುಳಿದ ತಾಲ್ಲೂಕು ಎಂದು ನಮೂದಾಗಿದೆ. ಸರ್ಕಾರ ಟೋಲ್ ಹಾಕುವುದಾದರೆ ಪಕ್ಕದಲ್ಲಿ ಸರ್ವೀಸ್ ರಸ್ತೆ ನಿರ್ಮಿಸಿ ಟೋಲ್ ಸ್ಥಾಪಿಸಬೇಕಾಗಿತ್ತು. ನಾವು ಓಡಾಡುವ ರಸ್ತೆಯಲ್ಲಿ ನಮಗೆ ಉಚಿತವಾಗಿ ಓಡಾಡುವ ಅವಕಾಶ ಇದ್ದೇ ಇರುತ್ತದೆ. ಸರ್ವೀಸ್ ರಸ್ತೆ ಮಾಡದೆ ಟೋಲ್ ಹಾಕಿರುವುದರಿಂದ ಈ ಭಾಗದ ಜನರಿಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.


ಚುನಾವಣೆಯಲ್ಲಿ ನಮ್ಮನ್ನು ಗೆಲ್ಲಿಸಿದರೆ ಟೋಲ್ ತೆಗೆಸುತ್ತೇವೆ ಎಂದು ಜನರಿಗೆ ನಾನು, ಡಾ. ಜಿ. ಪರಮೇಶ್ವರ್ ಹಾಗೂ ವೆಂಕಟೇಶ್ ಅವರು ಮನವಿ ಮಾಡಿದ್ದೇವು. ಮೇ 30ಕ್ಕೆ ಈ ಟೋಲ್‍ನಲ್ಲಿ ಹಣ ವಸೂಲಿ ಮಾಡುವ ಗುತ್ತಿಗೆ ಅವಧಿ ಮುಗಿಯುತ್ತಿದೆ. ಹಾಗಾಗಿ ಜೂನ್ 1 ರಿಂದ ಮತ್ತೆ ಈ ಟೋಲ್‍ಗಳ ಗುತ್ತಿಗೆ ಅವಧಿಯನ್ನು ನವೀಕರಿಸಿ ಶುಲ್ಕ ವಸೂಲಿ ಮಾಡಬಾರದು ಎಂಬುದು ನಾನೂ ಸೇರಿದಂತೆ ಡಾ. ಜಿ. ಪರಮೇಶ್ವರ್, ವೆಂಕಟೇಶ್ ಅವರ ಒತ್ತಾಯವಾಗಿದೆ ಎಂದಿದ್ದಾರೆ.

IMG 20230526 155636

ಒಂದು ವೇಳೆ ಟೋಲ್ ಹಾಕುವುದಾದರೆ ಸರ್ವೀಸ್ ರಸ್ತೆ ಮಾಡಿ ಹಾಕಿಕೊಳ್ಳಲಿ. ಇದಕ್ಕೆ ನಮ್ಮ ಅಡ್ಡಿಯಿಲ್ಲ. ಸರ್ವೀಸ್ ರಸ್ತೆ ನಿರ್ಮಿಸದೇ ಟೋಲ್ ಹಣ ವಸೂಲಿ ಮಾಡುವುದು ಅವೈಜ್ಞಾನಿಕ. ಹಾಗಾಗಿ ಜೂ. 1 ರಿಂದ ಟೋಲ್‍ನಲ್ಲಿ ವಾಹನ ಸವಾರರಿಂದ ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕು. ಒಂದು ವೇಳೆ ಜನರ ಭಾವನೆಗಳಿಗೆ ಸ್ಪಂದಿಸದೆ ವ್ಯತಿರಿಕ್ತವಾಗಿ ನಡೆದರೆ ಅದಕ್ಕೆ ಜನರು ಅವರದೇ ಆದ ರೀತಿಯಲ್ಲಿ ಭಾವನೆಗಳನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ನಾವ್ಯಾರು ಕಾರಣರಾಗುವುದಿಲ್ಲ.

ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಬೇಕು ಎಂದಿರುವ ಶಾಸಕ ಕೆ.ಎನ್. ರಾಜಣ್ಣ ಅವರು, ಜೂ. 1 ರಿಂದ ಟೋಲ್ ಹಣವನ್ನು ಜನರಿಂದ ಪಾವತಿ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದ್ದಾರೆ.

Leave a Reply

Your email address will not be published. Required fields are marked *