IMG 20230525 WA0052

JD(S) : ಸುಳ್ಳು ಗ್ಯಾರಂಟಿಗಳ ವಿರುದ್ಧ ಹೋರಾಟ….!

POLATICAL STATE

ಜೆಡಿಎಸ್ ಆತ್ಮಾವಲೋಕನ ಸಭೆ: ಪಕ್ಷದ ಸಂಘಟನೆ ಬಲಪಡಿಸಲು ಹೆಚ್.ಡಿ.ಕುಮಾರಸ್ವಾಮಿ ಸಂಕಲ್ಪ

ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಕಾಂಗ್ರೆಸ್ ಸರಕಾರದ ಭವಿಷ್ಯ ನಿಂತಿದೆ ಎಂದ ಮಾಜಿ ಸಿಎಂ

ಸುಳ್ಳು ಗ್ಯಾರಂಟಿಗಳ ವಿರುದ್ಧ ಹೋರಾಟ; ಮುಖಂಡರಿಗೆ ರಣವೀಳ್ಯ ನೀಡಿದ ಕುಮಾರಸ್ವಾಮಿ


ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಬಹಳ ನೊಂದು ಮಾತನಾಡಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಮುಂದಿನ ದಿನಗಳಲ್ಲಿ ಪಕ್ಷವನ್ನು ಬಲಿಷ್ಟಗೊಳಿಸಲು ರಾಜಿ ಇಲ್ಲದೆ ಕೆಲಸ ಮಾಡುವೆ ಎಂದು ಘೋಷಣೆ ಮಾಡಿದರು.

ಬೆಂಗಳೂರಿನಲ್ಲಿ ಗುರುವಾರ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರ ಸಮ್ಮುಖದಲ್ಲಿ ಹಮ್ಕಿಕೊಳ್ಳಲಾಗಿದ್ದ ಆತ್ಮಾವಲೋಕನ ಸಭೆಯಲ್ಲಿ ಅವರು ಮಾತನಾಡಿದರು.

IMG 20230525 WA0054

ಗೆದ್ದರೆ ನಾವು ಗೆಲುವಿನ ಕಾರಣಗಳನ್ನು ಹುಡುಕಲು ಹೋಗುವುದಿಲ್ಲ. ಸೋತರೆ ಕಾರಣಗಳನ್ನು ಹುಡುಕಬೇಕಾಗುತ್ತದೆ. ನಾನು ಹುಡುಕುತ್ತಿದ್ದೇನೆ, ಆ ಕಾರಣಗಳೇನು ಎನ್ನುವುದು ನನಗೆ ಗೊತ್ತಿದೆ ಎಂದು ಅವರು ಹೇಳಿದರು.

ಕೊನೆ ಕ್ಷಣದಲ್ಲಿ ನಾನು ನನ್ನ ಅಭ್ಯರ್ಥಿಗಳಿಗೆ ನಿರೀಕ್ಷಿತ ಆರ್ಥಿಕ ನೆರವು ಕೊಡಲಾಗಲಿಲ್ಲ. ಅಂತಿಮ ಕ್ಷಣದಲ್ಲಿ ನನ್ನ ಪಕ್ಷಗಳ ಅಭ್ಯರ್ಥಿಗಳಿಗೆ ನೆರವು ಕೊಡುವುದು ಕಷ್ಟವಾಯಿತು. ನಿಮ್ಮ ಸಹಾಯಕ್ಕೆ ನಿಲ್ಲದೆ ಹೋದ ಕಾರಣಕ್ಕೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆ ಎಂದು ಅವರು ಸೋತ ಅಭ್ಯರ್ಥಿಗಳ ಕ್ಷಮೆ ಕೇಳಿದರು.

IMG 20230525 WA0053

ಕಾಂಗ್ರೆಸ್ ಪಕ್ಷ ವ್ಯವಸ್ಥಿತವಾಗಿ ಅಪಪ್ರಚಾರ ನಡೆಸಿತು. ಸುಳ್ಳು ಗ್ಯಾರಂಟಿಗಳು ಹಾಗೂ ಕೂಪನ್ ಗಳನ್ನು ಕೊಟ್ಟು ಜನರಿಗೆ ವಂಚಿಸಿ ಅಧಿಕಾರಕ್ಕೆ ಬಂದಿದೆ ಕಾಂಗ್ರೆಸ್ ಕುತಂತ್ರದಿಂದ ಗೆದ್ದಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತಮ್ಮದೇ ಕುತಂತ್ರಗಾರಿಕೆ ಮಾಡಿದರು. ಅವರ ಪಕ್ಷದವರು ಒಂದು ಸಮುದಾಯವನ್ನು ನಮ್ಮ ವಿರುದ್ಧ ಎತ್ತಿ ಕಟ್ಟಿದರು ಎಂದು ಟೀಕಾಪ್ರಹಾರ ನಡೆಸಿದರು.

ಕಾಂಗ್ರೆಸ್, ಬಿಜೆಪಿ ಪಕ್ಷಗಳು ಹೇರಳವಾಗಿ ಹಣ ವೆಚ್ಚ ಮಾಡಿದವು, ಆಮಿಷಗಳನ್ನು ಒಡ್ಡಿದವು. ಅವುಗಳಿಗೆ ಪೈಪೋಟಿ ಕೊಡಲು ನನ್ನಿಂದ ಸಾಧ್ಯವಾಗಲಿಲ್ಲ. ನಾನು ಅಂತಹ ಕೆಲಸ ಮಾಡಲು ಹೋಗಲಿಲ್ಲ. ವೈಯಕ್ತಿಕ ನೆಲೆಗಟ್ಟಿನಲ್ಲಿ ಯಾರನ್ನೂ ನಾವು ಟೀಕೆ ಮಾಡಲಿಲ್ಲ, ತೇಜೋವಧೆ ಮಾಡಲಿಲ್ಲ, ಅಭಿವೃದ್ಧಿ ವಿಷಯ ಇಟ್ಟುಕೊಂಡು ಹೋದೆವು. ಅದಕ್ಕಾಗಿ ನಾವು ಸೋಲಬೇಕಾಯಿತು ಎಂದು ಮಾಜಿ ಮುಖ್ಯಮಂತ್ರಿ ಅವರು ಬೇಸರ ವ್ಯಕ್ತಪಡಿಸಿದರು.

ಬಿಜೆಪಿಯಿಂದ ನಲುಗಿದ ಒಂದು ಸಮಾಜದ ಪರವಾಗಿ ನಾವು ದನಿ ಎತ್ತಿದೆವು, ಅಚಲವಾಗಿ ಬೆಂಬಲ ಕೊಟ್ಟೆವು, ಹೆಜ್ಜೆ ಹೆಜ್ಜೆಗೂ ಅವರಿಗೆ ಬಿಜೆಪಿ ಸರಕಾರ ತೊಂದರೆ ಕೊಟ್ಟಾಗ ಧೈರ್ಯವಾಗಿ ನಿಂತೆವು. ಆದರೆ ಅವರು ನಮ್ಮ ಪಕ್ಷದ ಪರವಾಗಿ ನಿಲ್ಲದೆ ಹೋದರು ಎಂದು ಕುಮಾರಸ್ವಾಮಿ ಅವರು ನೊಂದು ನುಡಿದರು.

ಆರ್ಥಿಕ ಸಮಸ್ಯೆಗಳೂ ನಮ್ಮ ಸೋಲಿಗೆ ಕಾರಣ, ಅಭ್ಯರ್ಥಿಗಳ ಖರ್ಚಿಗೆ ನಾವು ಹಣ ಕೊಡಲಿಲ್ಲ. ಬಿಜೆಪಿ ಕಾಂಗ್ರೆಸ್ ಪಕ್ಷಗಳಿಗೆ ಸರಿ ಸಮವಾಗಿ ಖರ್ಚು ಮಾಡಲು ನಮ್ಮಿಂದ ಆಗಲಿಲ್ಲ. ಕೇವಲ 600 ಮತಗಳಲ್ಲಿ ಸೋತ ಕುಮಟಾ ಕ್ಷೇತ್ರದ ಸೂರಜ್ ನಾಯಕ್ ಸೋನಿ ಅವರ ಸೋಲು ನನಗೆ ಅತೀವ ನೋವು ಉಂಟು ಮಾಡಿದೆ.

ಫಲಿತಾಂಶದಿಂದ ಧೃತಿಗೆಡಬೇಕಿಲಿಲ್ಲ. 1989ರಲ್ಲಿ ದೇವೇಗೌಡರು ಎರಡು ಕ್ಷೇತ್ರಗಳಲ್ಲಿ ಸೋತಿದ್ದರು. ಆ ನಂತರ ಐದು ವರ್ಷಗಳಲ್ಲಿ ದೇವೇಗೌಡರ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ರಾಜ್ಯ ಸರಕಾರ ಬಂದು ಅವರು ಮುಖ್ಯಮಂತ್ರಿ ಆಗಿ, ಆ ನಂತರ ಪ್ರಧಾನಿಯೂ ಅದರು. ಇಂಥ ಸೋಲು ಶಾಶ್ವತ ಅಲ್ಲ, ಹಾಗಂತ ಮೈಮರೆಯಬೇಡಿ ಎಂದು ಮುಖಂಡರಿಗೆ ತಾಕೀತು ಮಾಡಿದರು ಮಾಜಿ ಮುಖ್ಯಮಂತ್ರಿಗಳು.

IMG 20230525 WA0057

ಲೋಕಸಭೆ ಚುನಾವಣೆ ನಂತರ ಏನು ಬೇಕಾದರೂ ಆಗಬಹುದು:

ಮುಂದಿನ ಲೋಕಸಭೆ ಚುನಾವಣೆ ಫಲಿತಾಂಶದ ಮೇಲೆ ಈ ಸರಕಾರದ ಭವಿಷ್ಯ ನಿಂತಿದೆ. ಈ ಸರಕಾರ ಇರಬಹುದು ಅಥವಾ ಹೋಗಬಹುದು. ನಾನೇನು ಭವಿಷ್ಯ ಹೇಳುತ್ತಿಲ್ಲ, ಆ ನಂತರ ಏನೆಲ್ಲಾ ಬೆಳೆವಣಿಗೆ ನಡೆಯಿತ್ತೂ ಗೊತ್ತಿಲ್ಲ. ಏನು ಬೇಕಾದರೂ ಆಗಬಹುದು ಎಂದರು ಅವರು.

ಕಾಂಗ್ರೆಸ್ 135 ಕ್ಷೇತ್ರ ಗೆದ್ದಿದೆ, ಆದರೆ ಆ ಸರಕಾರದಲ್ಲಿ ವಿಶ್ವಾಸದ ಕೊರತೆ ಇದೆ. ಜನರ ಕೆಲಸ ಮಾಡಲು ಅವರಿಗೆ ಆಗುತ್ತಿಲ್ಲ. ಆದರೆ ನಾವು ಸಂಘಟನೆ ಕಡೆ ಗಮನಕ್ಕೆ ಕೊಡೋಣ, ವಿಷಯಾಧಾರಿತವಾಗಿ ನಾವು ಹೋರಾಟ ನಡೆಸಬೇಕು. ಸಂಘಟನೆಯನ್ನು ಬಳಪಡಿಸಿಕೊಂಡು ಜನರ ಜತೆ ನಿಲ್ಲೋಣ ಎಂದು ಅವರು ಹೇಳಿದರು.

ಜಿಲ್ಲಾಧ್ಯಕ್ಷರಿಗೆ ಚಳಿ ಬಿಡಿಸಿದ ಮಾಜಿ ಸಿಎಂ:

ಸಮರ್ಥ ಅಭ್ಯರ್ಥಿಗಳನ್ನು ತಯಾರು ಮಾಡುವಲ್ಲಿ, ಜಿಲ್ಲಾ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡುವಲ್ಲಿ ಲೋಪ ಎಸಗಿರುವ ಪಕ್ಷದ ಜಿಲ್ಲಾ ಅಧ್ಯಕ್ಷರುಗಳನ್ನು ಮಾಜಿ ಮುಖ್ಯಮಂತ್ರಿಗಳು ತರಾಟೆಗೆ ತೆಗೆದುಕೊಂಡರು.

ಅಧ್ಯಕ್ಷಗಿರಿ ಎಂದರೆ ಸ್ವಂತ ಜಹಗೀರು ಅಲ್ಲ, ಸಂಘಟನೆಯನ್ನು ಸರಿಯಾಗಿ ಮಾಡಿಲ್ಲ, ಯಾರೂ ಸಮರ್ಥವಾಗಿ ಕೆಲಸ ಮಾಡಿಲ್ಲ, ಎಲ್ಲಾ ಹಂತಗಳಲ್ಲಿಯೂ ಸಂಘಟನೆ ಸೋತಿದೆ, ನಾನೇ ಅಭ್ಯರ್ಥಿ ಹುಡುಕಿ ಕೊಡಬೇಕಾದ ಪರಿಸ್ಥಿತಿ ಬಂದಿದೆ, ಹಾಗಾದರೆ ಜಿಲ್ಲಾಧ್ಯಕ್ಷರು ಮಾಡಿದ್ದೇನು? ಇವರೇನು ಅಲಂಕಾರಕ್ಕೆ ಇದ್ದಾರಾ? ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಆರ್ಥಿಕವಾಗಿ ನಾನೆಷ್ಟು ಕಷ್ಟಪಟ್ಟೆ ಎನ್ನುವುದು ನನಗಷ್ಟೇ ಗೊತ್ತು, ಯಾರೂ ನನ್ನ ನೋವು ಹಂಚಿಕೊಳ್ಳಲು ಮುಂದೆ ಬರಲಿಲ್ಲ. ಹಿಂದೆ ಯಾರನ್ನಾದರೂ ಹಾಳು ಮಾಡಬೇಕಾದರೆ ಹಳೆಯ ಲಾರಿ ಕೊಡಿಸು ಎನ್ನುವ ಮಾತಿತ್ತು. ಈಗ ಯಾರ ಮನೆಯನ್ನಾದರೂ ಹಾಳು ಮಾಡಬೇಕಾದರೆ ಅವರನ್ನು ರಾಜಕೀಯಕ್ಕೆ ಕರೆದುಕೊಂಡು ಬಂದು ಅಭ್ಯರ್ಥಿ ಮಾಡು ಎನ್ನುವಂತೆ ಆಗಿದೆ. ಈ ಚುನಾವಣೆಯಲ್ಲಿ ಕಂಡಂಥ ಕಟುಸತ್ಯ ಇದು.
ನಿಮ್ಮನ್ನು ಮತೆ ಅಭ್ಯರ್ಥಿಗಳಾಗಿ ಎಂದು ಹೇಳುವ ಧೈರ್ಯ ನನ್ನಲ್ಲಿ ಉಳಿದಿಲ್ಲ ಎಂದು ಕುಮಾರಸ್ವಾಮಿ ಅವರು ಅಭ್ಯರ್ಥಿಗಳನ್ನು ಉದ್ದೇಶಿಸಿ ಹೇಳಿದರು.

IMG 20230525 WA0055

ಗ್ಯಾರಂಟಿಗಳ ಬಗ್ಗೆ ದನಿ ಎತ್ತಿ:

ನಾವು ಹಣದಿಂದ ಚುನಾವಣೆ ನಡೆಸಲು ಸಾಧ್ಯವಿಲ್ಲ. ರಾಜಕೀಯ ಮಾಡಲಾಗದು. ಜನರ ಮನಸ್ಸು ಗೆದ್ದು ರಾಜಕಾರಣ ಮಾಡಬೇಕು. ಈಗ ಐದು ಗ್ಯಾರಂಟಿ ಜಾರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಸರಕಾರ ಈಗ ಷರತ್ತು ಅನ್ವಯ ಅನ್ನುತ್ತಿದೆ. ನಂಗೂ ಫ್ರೀ ನಿಂಗೂ ಫ್ರೀ ಎಂದವರು ಈಗ ಕಂಡಿಷನ್ಸ್ ಬಗ್ಗೆ ಮಾತನಾಡುತ್ತಿದ್ದಾರೆ. ಸಿದ್ದರಾಮಯ್ಯ ಹೇಳಿದ್ದೇನು, ಡಿಕೆಶಿ ಹೇಳಿದ್ದೇನು? ಖರ್ಗೆ ಹೇಳಿದ್ದೇನು? ಇದನ್ನೇ ನಾವು ಜನರ ಮುಂದೆ ಇಡಬೇಕು. ಈ ಬಗ್ಗೆಯೇ ಆಂದೋಲನವನ್ನೇ ಮಾಡಬೇಕು. ಜನರ ಜತೆ ನಿಲ್ಲಬೇಕು. ಜನರನ್ನೇ ಆಂದೋಲನಕ್ಕೆ ಧುಮುಕುವಂತೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಅವರು ಕರೆ ನೀಡಿದರು.

ಕೆಲ ಅಭ್ಯರ್ಥಿಗಳಿಗೆ ಚಾಟಿ:

ಬೆಂಗಳೂರು ನಗರದಲ್ಲಿ ಪಕ್ಷ ಸಂಘಟನೆ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಕುಮಾರಸ್ವಾಮಿ ಅವರು, ಕಳೆದ ಹಲವು ವರ್ಷಗಳಿಂದ ರಾಜಧಾನಿಯಲ್ಲಿ ಪಕ್ಷದ ಸಂಘಟನೆ ನೆನೆಗುದಿಗೆ ಬಿದ್ದಿದೆ. ಚುನಾವಣೆ ಹತ್ತಿರಕ್ಕೆ ಬಂದಾಗ ಬಂದು ಗೋಳಾಡಿ ಬೀ ಫಾರಂ ತೆಗೆದುಕೊಂಡು ಹೋಗುತ್ತೀರಿ, ಆಮೇಲೆ ಯಾವನೋ ಜತೆ ಮ್ಯಾಚ್ ಫಿಕ್ಸಿಂಗ್ ಮಾಡಿಕೊಳ್ಳುತ್ತೀರಿ ಎಂದು ಖಾರವಾಗಿ ಕೆಲವರ ಮೇಲೆ ಚಾಟಿ ಬೀಸಿದರು.

ಇನ್ನು ಮುಂದೆ ಬೆಂಗಳೂರಿನಲ್ಲಿ ಸಂಘಟನೆ ಬಗ್ಗೆ ನಿರ್ಲಕ್ಷ್ಯ ಮಾಡುವುದಿಲ್ಲ. ನಗರದ ನಾಲ್ಕು ವಿಭಾಗಕ್ಕೆ ನಾಲ್ವರು ಅಧ್ಯಕ್ಷರನ್ನು ಮಾಡಿ ಆದೇಶ ಹೊರಡಿಸಿ ವೇದಿಕೆಯ ಮೇಲೆ ಕೂತಿದ್ದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅವರಿಗೆ ಸೂಚನೆ ನೀಡಿದ ಮಾಜಿ ಮುಖ್ಯಮಂತ್ರಿಗಳು,
ಒಬ್ಬರಿಗೆ ಕೊಟ್ಟರೆ ಅವರು ಏಕ ಚಕ್ರಾಧಿಪತ್ಯ ಮಾಡಿಕೊಳ್ಳುತ್ತಾರೆ ಎಂದು ಕಿಡಿಕಾರಿದರು.

ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೇಗೌಡರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಕೆ.ಎ.ತಿಪ್ಪೇಸ್ವಾಮಿ, ಟಿ.ಎ.ಶರವಣ, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಸೇರಿದಂತೆ ಎಲ್ಲ ನೂತನ ಶಾಸಕರು, ಮಾಜಿ ಶಾಸಕರು, ಸೋತ ಅಭ್ಯರ್ಥಿಗಳು, ಜಿಲ್ಲಾ ಅಧ್ಯಕ್ಷರು ಸಭೆಯಲ್ಲಿ ಹಾಜರಿದ್ದರು.