IMG 20211027 WA0020

ಪಾವಗಡ: ರೈತರ ಪ್ರತಿಭಟನೆ…!

DISTRICT NEWS ತುಮಕೂರು

ಪಾವಗಡ: ತಾಲ್ಲೂಕಿನ ನಾಗಲಮಡಿಕೆ ರಸ್ತೆಯಲ್ಲಿರುವ ಜಮೀನಿನಲ್ಲಿ ಬುಧವಾರ ಸಮರ್ಪಕ ಪರಿಹಾರ ನೀಡದೆ ಬೃಹತ್ ಗಾತ್ರದ ವಿದ್ಯುತ್ ಕಂಬಗಳನ್ನು ಅಳವಡಿಸಬಾರದು ಎಂದು ಆಗ್ರಹಿಸಿ ರೈತರು ವಿಷದ ಬಾಟಲಿ ಹಿಡಿದು ಪ್ರತಿಭಟಿಸಿದರು.
ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿದ್ಯುತ್ ಕಂಬ ನಿರ್ಮಿಸುವ ಕಾಮಗಾರಿ ನಡೆಸುವವರಿಗೆ ಭದ್ರತೆ ನೀಡುವಂತೆ ಸೂಚನೆ ನೀಡಿದ ಹಿನ್ನೆಲೆ ತಾಲ್ಲೂಕಿನ 4 ಠಾಣೆಯ ಇನ್ ಸ್ಪೆಕ್ಟರ್, ಸಬ್ ಇನ್ ಸ್ಪೆಕ್ಟರ್, 40 ಕ್ಕೂ ಹೆಚ್ಚು ಸಿಬ್ಬಂದಿ ಪಳವಳ್ಳಿ ಬಳಿಯ ಜಮೀನಿಗೆ ಆಗಮಿಸಿದ್ದರು.
ರೈತರು ನಮಗೆ ಈವರೆಗೆ ಪರಿಹಾರ ನೀಡಿಲ್ಲ. ಪರಿಹಾರ ನೀಡದೆ ಕೆಲ ಜಮೀನುಗಳಲ್ಲಿ ವಿದ್ಯುತ್ ಟವರ್ ಅಳವಡಿಸಿದ್ದಾರೆ. ಕೆಲ ರೈತರಿಗೆ ಹೆಚ್ಚಿನ ಪರಿಹಾರ ನೀಡಿದ್ದಾರೆ. ಪರಿಹಾರ ನಿಗದಿ ಮಾಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
2016 ರಲ್ಲಿ ನೀಡಿದ ಜಿಲ್ಲಾಧಿಕಾರಿಗಳ ಆದೇಶ ತೋರಿಸಲಾಗುತ್ತಿದೆ. ಆದೇಶದಲ್ಲಿ ಸರಿಯಾದ ಮಾಹಿತಿ ಇಲ್ಲ. 5 ವರ್ಷದ ಹಿಂದೆ ಜಮೀನಿಗೆ ಇದ್ದ ಬೆಲೆ ಇದೀಗ ದುಪ್ಪಟ್ಟಾಗಿದೆ. ಆದರೆ ಹಳೆಯ ಪರಿಹಾರ ನೀಡುತ್ತೇವೆ ಎಂದು ಗುತ್ತಿಗೆದಾರರು ತಿಳಿಸುತ್ತಿದ್ದಾರೆ. ಮಳೆ ಬೆಳೆ ಇಲ್ಲದೆ ಕಂಗಾಲಾಗಿರುವ ರೈತರ ಮೇಲೆ ಕಂಪನಿಯವರು ಪೊಲೀಸರನ್ನು ಕರೆ ತಂದು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ದೂರಿದರು.
ನನ್ನ 2 ಕಿಡ್ನಿ ವಿಫಲವಾಗಿವೆ. ನಾನು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲೂ ಸಾಧ್ಯವಾಗದ ಸ್ಥಿತಿಯಲ್ಲಿದ್ದೇನೆ. ಇಂತಹ ಸ್ಥಿತಿಯಲ್ಲಿ ಹೇಳದೆ ಕೇಳದೆ ಜಮೀನಿನಲ್ಲಿ ಬಲವಂತವಾಗಿ ಟವರ್ ಅಳವಡಿಸಲು ಮುಂದಾಗಿರುವುದು ಅಮಾನವೀಯ. ಅಧಿಕಾರಿಗಳ ಕಣ್ಣೆದುರಲ್ಲಿಯೇ ದೌರ್ಜನ್ಯ ಎಸಗಲಾಗುತ್ತಿದೆ ಎಂದು ರೈತ ಎರಿಸ್ವಾಮಿ ಅಳಲನ್ನು ತೋಡಿಕೊಂಡರು.
ತಹಶೀಲ್ದಾರ್ ಕೆ.ಆರ್. ನಾಗರಾಜು ಸ್ಥಳಕ್ಕೆ ಆಗಮಿಸಿ ರೈತರ ಮನವೊಲಿಸಲು ಪ್ರಯತ್ನಿಸಿ ವಿಫಲರಾದರು.

ಜಮೀನಿನಲ್ಲಿ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ರೈತ ಯರಿಸ್ವಾಮಿ ಅವರನ್ನು ತುರ್ತು ವಾಹನದಲ್ಲಿ ಪಟ್ಟಣದ ಆಸ್ಪತ್ರೆಗೆ ದಾಖಲಿಸಲಾಯಿತು. ಕಾನೂನು ಸೇವಾ ಪ್ರಾಧಿಕಾರಕ್ಕೆ ಈ ಬಗ್ಗೆ ಯರಿಸ್ವಾಮಿ ದೂರು ಸಲ್ಲಿಸಿದರು.
ಗ್ರಾಮ ಪಂಚಾಯಿತಿ ಸದಸ್ಯ ಪಿ.ಬಿ.ದಿನೇಶ್ ಕುಮಾರ್, ರೈತರಾದ ಶ್ರೀನಿವಾಸ್, ನರಸಿಂಹಪ್ಪ, ಸುಶೀಲಮ್ಮ, ಓಬಣ್ಣ, ರಾಮು, ತೋಟಿ ಓಬಳೇಶ್, ಸುಮನ್, ಗಂಗಾಧರ್ ನಾಯ್ಡು, ಮಾನಂ ಶಸಶಿಕಿರಣ್, ಬೇಕರಿ ನಾಗರಾಜು ಉಪಸ್ಥಿತರಿದ್ದರು.

ವರದಿ: ಎ ಶ್ರೀನಿವಾಸುಲು