: ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸುವಂತೆ ಪ್ರತಿಭಟನೆ….!
ಪಾವಗಡ: ತುಂಗಭದ್ರಾ ಕುಡಿಯುವ ನೀರಿನ ಯೋಜನೆಯಡಿ ನೂತನ ಟ್ಯಾಂಕ್ ನಿರ್ಮಿಸಬೇಕು ಎಂದು ಗುಂಡ್ಲಹಳ್ಳಿ ಗ್ರಾಮಸ್ಥರು ಬುಧವಾರ ಗ್ರಾಮದ ಹಳೆಯ ಟ್ಯಾಂಕ್ ಮುಂಭಾಗ ಪ್ರತಿಭಟಿಸಿದರು.
ಕುಡಿಯುವ ನೀರು ಪೂರೈಸುವ ಸಲುವಾಗಿ ಗ್ರಾಮದಲ್ಲಿ ನೂತನ ಟ್ಯಾಂಕ್ ನಿರ್ಮಿಸದೆ ಗುತ್ತಿಗೆ ಪಡೆದಿರುವ ಕಂಪನಿಯವರು 10 ವರ್ಷಗಳ ಹಿಂದೆ ನಿರ್ಮಿಸಿರುವ ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ಗೆ ನೀರು ಹರಿಸುವುದಾಗಿ ತಿಳಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದರು.
ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ಗುಣಮಟ್ಟದಿಂದ ಕೂಡಿದೆ ಎಂದು ಅಧಿಕಾರಿಗಳು ಗ್ರಾಮಸ್ಥರ ಮನವೊಲಿಸುತ್ತಿದ್ದಾರೆ. ಯೋಜನೆಯಡಿ ಟ್ಯಾಂಕ್ ನಿರ್ಮಿಸದೆ ಗ್ರಾಮಸ್ಥರಿಗೆ ಅನ್ಯಾಯವೆಸಗಲಾಗುತ್ತಿದೆ. ಹಳೆಯ ಟ್ಯಾಂಕ್ ಗೆ ನೀರು ಪೂರೈಸಿ ಸಮಸ್ಯೆಯಾದಲ್ಲಿ ಅದಕ್ಕೆ ಕಂಪನಿ, ಅಧಿಕಾರಿಗಳು ಹೊಣೆಗಾರರಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಸುಮಾರು 5 ನೂರು ಮನೆಗಳು, 1 ಸಾವಿರಕ್ಕೂ ಹೆಚ್ಚು ಜನ ಸಂಖ್ಯೆ ಇರುವ ಗ್ರಾಮದಲ್ಲಿ ನೂತನ ಟ್ಯಾಂಕ್ ನಿರ್ಮಿಸಬೇಕು. ಭವಿಷ್ಯದಲ್ಲಿ ನೀರಿನ ಸಮಸ್ಯೆಯಾಗದಂತೆ ಶಿಥಿಲಾವಸ್ಥೆಯಲ್ಲಿರುವ ಟ್ಯಾಂಕ್ ದುರಸ್ಥಿ ಮಾಡಬೇಕು. ದುರಸ್ಥಿ ಮಾಡಲಾಗದಿದ್ದರೆ ನೆಲ ಸಮ ಮಾಡಿ ಅನಾಹುತ ತಪ್ಪಿಸಬೇಕು ಎಂದು ಒತ್ತಾಯಿಸಿದರು.
ನಲಿಗಾನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ದುಗ್ಗಮ್ಮ, ಸದಸ್ಯ ಜಿ.ಆರ್.ಲಿಂಗಾನಾಯಕ, ಮುಖಂಡರಾದ ಛಲಪತಿ, ನಾಗರಾಜು, ವೆಂಕಟಾಚಲಪತಿ, ರಾಮಾಂಜಿನಪ್ಪ, ಮಾರಪ್ಪ, ಶಿವಪ್ಪ, ಶಿವಕುಮಾರ್, ನರಸಿಂಹ, ಗಂಗಾಧರ, ಅಂಜಯ್ಯ ಉಪಸ್ಥಿತರಿದ್ದರು.
ವರದಿ: ಎ ಶ್ರೀನಿವಾಸುಲು