ಬಿಬಿಎಂಪಿಯ ಮಹದೇವಪುರ ಹಾಗೂ ಯಲಹಂಕ ವಲಯ ವ್ಯಾಪ್ತಿಯ ವಿವಿಧ ಸ್ಥಳಗಳ 18 ಒತ್ತುವರಿಗಳ ತೆರವು ಕಾರ್ಯಾಚರಣೆ:
ಬಿಬಿಎಂಪಿ ವ್ಯಾಪ್ತಿಯಲ್ಲಿ ರಾಜಕಾಲುವೆಯ ಒತ್ತುವರಿಗಳ ತೆರವು ಕಾರ್ಯಾಚರಣೆಯು ಸಕ್ರಿಯವಾಗಿ ನಡೆಯುತ್ತಿದ್ದು, ಇಂದು ಮಹದೇವಪುರ ವಲಯ ಹಾಗೂ ಯಲಹಂಕ ವಲಯ ಸೇರಿದಂತೆ ಒಟ್ಟು 18 ಒತ್ತುವರಿಗಳನ್ನು ತೆರವುಗೊಳಿಸಲಾಗಿರುತ್ತದೆ.
ಮಹದೇವಪುರ ವಲಯ ವ್ಯಾಪ್ತಿಯಲ್ಲಿ ಶಾಂತಿನಿಕೇತನ ಲೇಔಟ್, ಪಾಪಯ್ಯ ರೆಡ್ಡಿ ಲೇಔಟ್, ಚೆಲ್ಲಘಟ್ಟ ಹಾಗೂ ಯಲಹಂಕ ವಲಯ ಸ್ಯಾಟಲೈಟ್ ಟೌನ್ ನಲ್ಲಿ ರಾಜಕಾಲುವೆ ಒತ್ತುವರಿಯನ್ನು ಪಾಲಿಕೆಯ ಇಂಜಿನಿಯರ್‌ಗಳು, ಕಂದಾಯ ಅಧಿಕಾರಿಗಳು, ಮಾರ್ಷಲ್‌ಗಳು, ಪೊಲೀಸ್ ಸಿಬ್ಬಂದಿಯ ಭದ್ರತೆಯೊಂದಿಗೆ 2 ಹಿಟಾಚಿ ಹಾಗೂ 8 ಜೆಸಿಬಿ ಯಂತ್ರಗಳ ಮೂಲಕ ತೆರವು ಕಾರ್ಯಾಚರಣೆ ನಡೆಸಲಾಗಿರುತ್ತದೆ.
ಮಹದೇವಪುರ ವಲಯ ಚೆಲ್ಲಘಟ್ಟದ ಸರ್ವೇ ಸಂ. 70/14 ರಲ್ಲಿರುವ ನಲಪಾಡ್ ಅಕಾಡೆಮಿ ವತಿಯಿಂದ 2.5 ಮೀಟರ್ ಅಗಲ ಹಾಗೂ 150.5 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ರಾಜಕಾಲುವೆಯ ಮೇಲೆ ಕಾಂಕ್ರಿಟ್ ಅಳವಡಿಸಿ ಎತ್ತರವಾಗಿ ಕಾಂಪೌಂಡ್ ಗೋಡೆ ಹಾಗೂ ಕಾಂಪೌಂಡ್ ಗೋಡೆಯ ಮೇಲೆ ಫೆನ್ಸಿಂಗ್ ಅಳವಡಿಸಲಾಗಿರುತ್ತದೆ. ಸದರಿ ಒತ್ತುವರಿಯಲ್ಲಿ ಇಂದು ಸುಮಾರು 50 ಮೀಟರ್ ನಷ್ಟು ಒತ್ತುವರಿ ತೆರವು ಮಾಡಲಾಗಿದ್ದು, ಒತ್ತುವರಿ ತೆರವು ಕಾರ್ಯಾಚರಣೆ ಪ್ರಕ್ರಿಯೆಯಲ್ಲಿರುತ್ತದೆ.
ಶಾಂತಿನಿಕೇತನ ಲೇಔಟ್ ನಲ್ಲಿ 7 ಕಟ್ಟಡ ಹಾಗೂ 4 ಕಾಂಪೌಂಡ್ ಗೋಡೆಗಳನ್ನು ತೆರವುಗೊಳಿಸಲಾಗಿರುತ್ತದೆ. ಪಾಪಯ್ಯ ರೆಡ್ಡಿ ಲೇಔಟ್ ನಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದ ಅಪಾರ್ಟ್ಮ್ಂಟ್ ಗೋಡೆ ಹಾಗೂ ರಾಜಕಾಲುವೆಯ ಖಾಲಿ ಜಾಗದ ಮೇಲೆ ನಿರ್ಮಿಸಿಕೊಂಡಿದ್ದ 4 ಶೇಡ್ ಗಳನ್ನು ತೆರವುಗೊಳಿಸಲಾಗಿದೆ. ಬಸವನಪುರದಲ್ಲಿ 1 ಕಾಂಪೌಂಡ್ ಗೋಡೆ ಹಾಗೂ 1 ಖಾಲಿ ಜಾಗದ ಒತ್ತುವರಿ ತೆರವುಗೊಳಿಸಿ ಪಾಲಿಕೆ ವಶಕ್ಕೆ ಪಡೆಯಲಾಗಿರುತ್ತದೆ.
ಯಲಹಂಕ ವಲಯದ ಸ್ಯಾಟಲೈಟ್ ಟೌನ್ ವ್ಯಾಪ್ತಿಯಲ್ಲಿ ಎನ್.ಸಿ.ಬಿ.ಎಸ್ ಇನ್ಸ್ಟಿಟ್ಯೂಟ್ ವತಿಯಿಂದ 120 ಮೀಟರ್ ಉದ್ದದ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಜೆಸಿಬಿಯ ಮೂಲಕ ತೆರವುಗೊಳಿಸಲಾಗಿದೆ.
ನಗರದಲ್ಲಿ ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡಿರುವುದನ್ನು ಭೂಮಾಪಕರ ಮೂಲಕ ಸಮೀಕ್ಷೆ ಮಾಡಿ ಮಾರ್ಕಿಂಗ್ ಮಾಡಿಕೊಂಡು ಒತ್ತುವರಿ ತೆರವು ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಒತ್ತುವರಿ ಆಗಿರುವ ಪ್ರದೇಶಗಳ ತೆರವು ಕಾರ್ಯಾಚರಣೆ ಮುಂದುವರಿಸಲಾಗುತ್ತದೆ.