ನರೇಗಾ ಕಾಮಗಾರಿಗಾಗಿ ಕೆರೆಕಟ್ಟೆಯ ಎತ್ತರ ಕೋಡಿಯ ಎತ್ತರಕ್ಕಿಂತಲೂ ಕಡಿಮೆ ಇದ್ದರಿಂದ ಜಮೀನುಗಳು ಮುಳುಗುವ ಸಾಧ್ಯತೆ , ಆತಂಕದಲ್ಲಿ ರೈತರು.
ಪಾವಗಡ: ತಾಲೂಕಿನಾದ್ಯಂತ ರಣ ಮಳೆಯಿಂದಾಗಿ ಕೆರೆಕುಂಟೆಗಳು ಕೋಡಿ ಬಿದ್ದು ಹರಿದಿದ್ದು, ಗಾಯದ ಮೇಲೆ ಬರೆ ಎಳೆದಂತೆ, ತಾಲ್ಲೂಕಿನ ಎರ್ರಗಮ್ಮನಹಳ್ಳಿ ಗ್ರಾಮದ ಕುಂಟೆ ಕಟ್ಟೆಯನ್ನು ನರೇಗಾ ಕಾಮಗಾರಿಗಾಗಿ ಕಡಿಮೆ ಮಾಡಿದ ಕಾರಣ ಕುಂಟೆ ಕೆಳಗಿನ ಸಾಕಷ್ಟು ಜಮೀನುಗಳು ಮುಳುಗಡೆಯಾಗುವ ಸಂಭವವಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಬೂದಿಬೆಟ್ಟ ಗ್ರಾಮ ಪಂಚಾಯಿತಿಯ ಎರ್ರಗಮ್ಮನಹಳ್ಳಿ ಗ್ರಾಮದ ಕುಂಟೆ ಹೂಳೆತ್ತುವ, ಕಟ್ಟೆ ದುರಸ್ಥಿ ಮಾಡುವ ಸಲುವಾಗಿ ಕುಂಟೆಯಲ್ಲಿದ್ದ ಗಿಡಗಳನ್ನುಕಿತ್ತು ಹಾಕಲಾಗಿದ್ದು. ಕಟ್ಟೆಯ ಮೇಲೆ ಡ್ರೋಸಿಂಗ್ ಮಾಡಿಸಿದ ಕಾರಣ ಕಟ್ಟೆಯ ಎತ್ತರ ಕೋಡಿಯ ಎತ್ತರಕ್ಕಿಂತಲೂ ಕಡಿಮೆಯಾಗಿದೆ.
ಕುಂಟೆಯು ಬಹುತೇಕ ತುಂಬಿದ್ದು, ಕುಂಟೆ ಕೆಳಭಾಗದಲ್ಲಿರುವ ಜಮೀನುಗಳಲ್ಲಿ ಬೆಳೆಯಲಾದ ಶೇಂಗಾ, ಟೊಮೊಟೊ, ತೊಗರಿ, ಮಾವು ಇತ್ಯಾದಿ ಬೆಳೆಗಳು ಮುಳುಗಡೆಯಾಗುವ ಆತಂಕದಲ್ಲಿ ರೈತರಿದ್ದಾರೆ.
ಬೇಸಿಗೆಯಲ್ಲಿ ಕಾಮಗಾರಿ ಮುಕ್ತಾಯಗೊಳಿಸಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ. ಶೀಘ್ರ ಕಾಮಗಾರಿ ಮುಂದುವರೆಸಿ ಕಟ್ಟೆಯ ಎತ್ತರವನ್ನು ಹೆಚ್ಚಿಸಿ ಬೆಳೆಗಳನ್ನು ಉಳಿಸಿಕೊಡಬೇಕೆಂದು ರಾಮಲಿಂಗಪ್ಪ, ರವಿ, ಗಂಗಾಧರಪ್ಪ, ಬಲರಾಮ, ಗಂಗಾಧರ, ರಾಮಾಂಜಿನಪ್ಪ, ಸಣ್ಣಲಿಂಗಪ್ಪ, ಬೊಮ್ಮಯ್ಯ, ರಾಜಪ್ಪ ಒತ್ತಾಯಿಸಿದ್ದಾರೆ.
ವರದಿ- ಶ್ರೀನಿವಾಸಲು ಎ