IMG20220105111334 scaled

ಪಾವಗಡ:ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಜೀರ್ಣೋದ್ಧಾರ ಕ್ಕೆ ಆಗ್ರಹ….!

DISTRICT NEWS ತುಮಕೂರು

ಪಾವಗಡ: ಅಂತ್ಯ ಸುಬ್ರಮಣ್ಯ ಎಂದೇ ಪ್ರಸಿದ್ಧವಾಗಿರುವ ನಾಗಲಮಡಿಕೆ ಸುಬ್ರಹ್ಮಣ್ಯ ಸ್ವಾಮಿ ದೇಗುಲ ಜೀರ್ಣೋದ್ಧಾರ ಮಾಡಬೇಕು ಎಂದು ಒತ್ತಾಯಿಸಿ ವಿವಿಧ ಸಂಘಟನೆಗಳು ಗ್ರೇಡ್ 2 ತಹಶೀಲ್ದಾರ್ ಚಂದ್ರಶೇಖರ್ ಅವರಿಗೆ ಮನವಿ ಸಲ್ಲಿಸಿದರು.  ನಾಗಲಮಡಿಕೆಯ ಸುಬ್ರಮಣ್ಯೇಶ್ವರ ದೇವಸ್ಥಾನಕ್ಕೆ ಸುಮಾರು 500 ವರ್ಷಗಳ ಇತಿಹಾಸವಿದ್ದು, ನಾಗಲಮಡಿಕೆ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಾಲಯ ಶಿಥಿಲಾವಸ್ಥೆ ತಲುಪಿದೆ ಹಾಗೂ ಮೂಲಭೂತ ಸೌಕರ್ಯಗಳಾದ  ಶೌಚಾಲಯ, ಕುಡಿಯುವ ನೀರು, ವಸತಿ ಗೃಹ, ಸ್ನಾನಗೃಹ  ಸೌಕರ್ಯಗಳಿಲ್ಲದೆ ಭಕ್ತಾದಿಗಳಿಗೆ ಸಮಸ್ಯೆಯಾಗುತ್ತಿದೆ ಎಂದು ಆರೋಪಿಸಿದರು.

ಉತ್ತರಪಿನಾಕಿನಿ ನದಿಗೆ ಕಟ್ಟಲಾದ ಚೆಕ್ ಡ್ಯಾಂ ತುಂಬಿದೆ. ಇತ್ತೀಚೆಗೆ ಇಬ್ಬರು ಯುವಕರು ಚೆಕ್ ಡ್ಯಾಂ ಗೆ ಬಿದ್ದು ಮೃತಪಟ್ಟಿದ್ದಾರೆ. ಮುಂಜಾಗ್ರತಾ ಕ್ರಮ ವಹಿಸದಿರುವುದು ಅವಘಡಗಳಿಗೆ ಪ್ರಮುಖ ಕಾರಣ ಎಂದು ದೂರಿದರು.ದೇಗುಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ಅಗತ್ಯ ಮೂಲ ಸೌಕರ್ಯ ಕಲ್ಪಿಸಬೇಕು.  ದೇಗುಲದ ಜೀರ್ಣೋದ್ಧಾರ ಮಾಡಿ ಅಭಿವೃದ್ಧಿಪಡಿಸಬೇಕು. ದೇಗುಲಕ್ಕೆ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸಬೇಕು. ಉತ್ತರ ಪಿನಾಕಿನಿ ಚೆಕ್ ಡ್ಯಾಂ ಬಳಿ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಅಗತ್ಯ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು. 

ಹೆಲ್ಪ್ ಸೊಸೈಟಿ ಅಧ್ಯಕ್ಷ ಮಾನಂ ಶಶಿಕಿರಣ್, ನಲಿಗಾನಹಳ್ಳಿ ಮಂಜುನಾಥ್, ಕರ್ನಾಟಕ ರಕ್ಷಣಾ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಿನಾರಾಯಣ, ನಾಗೇಂದ್ರ, ಶಶಿಕಲಾ, ನರಸಂಹಮೂರ್ತಿ, ನಾಗರತ್ನ, ಚಂದ್ರು, ಮಂಜುನಾಥ್, ಮಲ್ಲಿಕಾರ್ಜುನ್,  ಚಿನ್ಮಯ ಪೌಂಡೇಶನ್ ಸತ್ಯಲೋಕೇಶ್, ಕರ್ನಾಟಕ ರಾಜ್ಯ ರೈತ ಸಂಘ ತಾಲ್ಲೂಕು ಘಟಕದ ಅಧ್ಯಕ್ಷ ಪೂಜಾರಪ್ಪ, ಶಶಿಕಲಾ, ಲೋಕೇಶ್, ಬೇಕರಿ ನಾಗರಾಜು ಉಪಸ್ಥಿತರಿದ್ದರು.