IMG 20211115 WA0025

ನದಿಗಳ ಜೋಡಣೆ: ರಾಜ್ಯಗಳಿಗೆ ನೀರು ಹಂಚಿಕೆ ನಂತರ ಡಿಪಿಆರ್- ರಾಜ್ಯದ ಮನವಿ ಪರಿಗಣಿಸಲು ಅಮಿತ್ ಷಾ ಸೂಚನೆ

Genaral STATE

ನದಿಗಳ ಜೋಡಣೆ: ರಾಜ್ಯಗಳಿಗೆ ನೀರು ಹಂಚಿಕೆ ನಂತರ ಡಿಪಿಆರ್- ರಾಜ್ಯದ ಮನವಿ ಪರಿಗಣಿಸಲು ಅಮಿತ್ ಷಾ ಸೂಚನೆ

ಬೆಂಗಳೂರು, ನವೆಂಬರ್ 15- ಗೋದಾವರಿ, ಕೃಷ್ಣಾ, ಕಾವೇರಿ ಮತ್ತು ಪಾಲಾರ್ ನದಿ ಜೋಡಣೆ ಡಿಪಿಆರ್ ಸಿದ್ಧ ಪಡಿಸುವ ಮುನ್ನ ರಾಜ್ಯಗಳ ನೀರಿನ ಹಂಚಿಕೆ ಆಗಬೇಕೆಂದು ರಾಜ್ಯ ಸಲ್ಲಿಸಿರುವ ಅಹವಾಲು ಪರಿಗಣಿಸಿ, ಮುಂದುವರೆಯುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕೇಂದ್ರ ಜಲಶಕ್ತಿ ಮಂತ್ರಾಲಯಕ್ಕೆ ಸೂಚನೆ ನೀಡಿದ್ದಾರೆ.

ನವೆಂಬರ್ 14ರಂದು ತಿರುಪತಿಯಲ್ಲಿ ನಡೆದ ದಕ್ಷಿಣ ವಲಯ ಪರಿಷತ್ ಸಭೆಯಲ್ಲಿ ಭಾಗವಹಿಸಿ, ಬೆಂಗಳೂರಿಗೆ ಹಿಂದಿರುಗಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರಿಗೆ ಈ ಮಾಹಿತಿ ನೀಡಿದರು.

ನಿನ್ನೆ ನಡೆದ ಸಭೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಸಂಬಂಧಿಸಿದಂತೆ ಹಲವು ವಿಚಾರಗಳ ಇತ್ಯರ್ಥವಾಯಿತು. ಅಂತರರಾಜ್ಯ ನದಿ ವಿವಾದಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪರಿಷತ್ ನ ಅಧ್ಯಕ್ಷರೂ ಆಗಿರುವ ಕೇಂದ್ರ ಗೃಹ ಸಚಿವರು ಜಲಶಕ್ತಿ ಮಂತ್ರಾಲಯದ ಅಧಿಕಾರಿಗಳಿಗೆ ಹಲವು ಸೂಚನೆಗಳನ್ನು ನೀಡಿದ್ದಾರೆ. ವಿಶೇಷವಾಗಿ ನದಿ ಜೋಡಣೆ ಯೋಜನೆಗೆ ಸಂಬಂಧಿಸಿದಂತೆ ನೀರು ಹಂಚಿಕೆಯ ವಿಷಯವನ್ನು ಇತ್ಯರ್ಥ ಪಡಿಸುವಂತೆ ರಾಜ್ಯ ಒತ್ತಾಯಪೂರ್ವಕವಾಗಿ ಮಂಡಿಸಿರುವ ವಿಷಯವನ್ನು ಪರಿಗಣಿಸುವಂತೆ ಕೇಂದ್ರ ಗೃಹ ಸಚಿವರು ಅಧಿಕಾರಿಗಳಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.IMG 20211115 WA0023

ಅಂತೆಯೇ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣ-2ರ ತೀರ್ಪಿನ ಗಜೆಟ್ ಅಧಿಸೂಚನೆ ಹೊರಡಿಸಲು ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಯಿತು. ರಾಜ್ಯದ ನೀರಾವರಿ ಯೋಜನೆಗಳ ಕುರಿತು ಸಭೆಯಲ್ಲಿ ಗಟ್ಟಿಯಾಗಿ ನಮ್ಮ ವಿಚಾರಗಳನ್ನು ಮಂಡಿಸಲಾಯಿತು ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಇದರೊಂದಿಗೆ ಮೆಟ್ರೋ ಯೋಜನೆಗೆ ರೈಲ್ವೆ ಭೂಮಿ ನೀಡುವ ಕುರಿತು ಸಹ ಸಭೆಯಲ್ಲಿ ಪ್ರಸ್ತಾಪಿಸಲಾಯಿತು ಎಂದು ತಿಳಿಸಿದರು.

ಮೀನುಗಾರಿಕೆಯಲ್ಲಿ ಆಂಟಿ ಬಯೋಟಿಕ್ ಗಳ ಬಳಕೆಯಿಂದ ಮೀನು ರಫ್ತಿಗೆ ಅಡಚಣೆಯಾಗುತ್ತಿದೆ. ಈ ಕುರಿತು ಮೀನುಗಾರರು ಮುನ್ನೆಚ್ಚರಿಕೆ ವಹಿಸುವ ಕುರಿತು, ಪೊಕ್ಸೊ ಪ್ರಕರಣಗಳನ್ನು ಶೀಘ್ರವೇ ಇತ್ಯರ್ಥಪಡಿಸಲು, ನಿಗದಿತ ಅವಧಿಯೊಳಗೆ ಚಾರ್ಜ್ ಶೀಟ್ ಸಲ್ಲಿಸಲು ಕೇಂದ್ರ ಸಚಿವರು ಸೂಚನೆಗಳನ್ನು ನೀಡಿದರು.

ಮೇಕೆದಾಟು ಯೋಜನೆಯ ವಿಷಯವನ್ನು ಸಹ ಪ್ರಸ್ತಾಪಿಸಲಾಯಿತು. ಆದರೆ ತಮಿಳು ನಾಡಿನ ಮುಖ್ಯಮಂತ್ರಿಯವರು ಆಗಮಿಸಿರಲಿಲ್ಲ. ಹಾಗಾಗಿ ಚರ್ಚಿಸಲು ಸಾಧ್ಯವಾಗಿಲ್ಲ. ಆದರೆ ಕೇಂದ್ರ ಜಲಶಕ್ತಿ ಸಚಿವರು ಮತ್ತು ಸಚಿವಾಲಯಕ್ಕೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಎದುರಾಗಿರುವ ತೊಡಕು ನಿವಾರಿಸುವಂತೆ ಮನವಿ ಮಾಡಲಾಗುವುದು. ದೆಹಲಿಗೆ ತೆರಳಿದಾಗಲೂ ಕಾನೂನು ತಜ್ಞರ ಜೊತೆ ಈ ವಿಷಯದ ಕುರಿತು ಚರ್ಚಿಸಲಾಗಿದೆ ಎಂದು ಮುಖ್ಯಮಂತ್ರಿಯವರು ತಿಳಿಸಿದರು.

ಕರ್ನಾಟಕ ಹಾಗೂ ತಮಿಳುನಾಡು ರಾಜ್ಯಗಳ ಮಧ್ಯೆ ಸ್ವಾತಂತ್ರ್ಯಪೂರ್ವದಿಂದಲೂ ಜಲವಿವಾದ ಇದೆ. ತಮಿಳು ನಾಡು ನೀರಿನ ರಾಜಕಾರಣ ಮಾಡುತ್ತಿದೆ. ಕಾವೇರಿ ಜಲವಿವಾದ ನ್ಯಾಯಮಂಡಳಿಯ ತೀರ್ಪಿನಂತೆ ಕಾವೇರಿ ಜಲ ಮಂಡಳಿ ಅಸ್ತಿತ್ವಕ್ಕೆ ಬಂದರೂ ವಿವಿಧ ಯೋಜನೆಗಳಿಗೆ ಆಕ್ಷೇಪ ಸಲ್ಲಿಸಲಾಗುತ್ತಿದೆ. ರಾಜ್ಯವೂ ಆಕ್ಷೇಪ ಸಲ್ಲಿಸಿದೆ. ಈ ವಿಷಯಗಳು ನ್ಯಾಯಸಮ್ಮತ ತೀರ್ಮಾನವಾಗಬೇಕು ಎಂದು ಬಸವರಾಜ ಬೊಮ್ಮಾಯಿ ಅವರು ಅಭಿಪ್ರಾಯಪಟ್ಟರು.

ಪೆರಿಫೆರಲ್ ರಿಂಗ್ ರಸ್ತೆ ಕುರಿತಂತೆ ಈಗಾಗಲೇ 2 ಬಾರಿ ಸಭೆ ನಡೆಸಿದ್ದು, ಯೋಜನೆಯಲ್ಲಿ ಕೆಲವು ಮಾರ್ಪಾಡುಗಳಾಗಿದ್ದು, ಶೀಘ್ರವೇ ಇತ್ಯರ್ಥಗೊಳಿಸಲಾಗುವುದು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತ ಅವರು ತಿಳಿಸಿದರು.