IMG 20211115 WA0031

JD(S) :ಇಂಥವರೇ ರಾಜಕೀಯಕ್ಕೆ ಬರಬೇಕು ಎಂದು ಸಂವಿಧಾನದಲ್ಲಿ ಗೆರೆ ಹಾಕಲಾಗಿದೆಯಾ?

POLATICAL STATE

ಇಂಥವರೇ ರಾಜಕೀಯಕ್ಕೆ ಬರಬೇಕು ಎಂದು ಸಂವಿಧಾನದಲ್ಲಿ ಗೆರೆ ಹಾಕಲಾಗಿದೆಯಾ?

ಬಿಜೆಪಿ ‘ಕುಟುಂಬ ರಾಜಕಾರಣ ರಾಜಕೀಯ’ಕ್ಕೆ ತಿರುಗೇಟು ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ ಅವರು

ಬಿಜೆಪಿ ಪಕ್ಷ ಶಾಸಕರನ್ನು ದುಡ್ಡಿಗೆ ಖರೀದಿಸಿ ಚುನಾವಣೆ ವ್ಯವಸ್ಥೆಯನ್ನು ಹಾಳು ಮಾಡಿದೆ

ಸ್ಕೂಟರ್ ಪೆಟ್ರೋಲ್’ಗೆ ಕಾಸಿಲ್ಲದಿದ್ದವರೂ ಈಗ ಹೇಗಿದ್ದಾರೆ ಎನ್ನುವುದು ಗೊತ್ತಿದೆ!
****

ಬೆಂಗಳೂರು: ಭಾರತೀಯ ಸಂವಿಧಾನದಲ್ಲಿ ನಿರ್ಧಿಷ್ಟವಾಗಿ ಇಂಥವರೇ ರಾಜಕೀಯಕ್ಕೆ ಬರಬೇಕು ಎಂದು ಗೆರೆ ಎಳೆಯಲಾಗಿದೆಯಾ? ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿಯನ್ನು ನೇರವಾಗಿ ಪ್ರಶ್ನೆ ಮಾಡಿದರು.

ಜೆಡಿಎಸ್ ಕುಟುಂಬ ರಾಜಕಾರಣ ಮಾಡುತ್ತಿದೆ, ಪಕ್ಷವು ದೇವೇಗೌಡರ ಕುಟುಂಬಕ್ಕೆ ಮಾತ್ರ ಸೀಮಿತವಾಗಿದೆ ಎಂದು ಟ್ವೀಟರ್ ನಲ್ಲಿ ಬಿಜೆಪಿ ಮಾಡಿದ್ದ ಟೀಕೆಗೆ ಮಾಧ್ಯಮಗೋಷ್ಟಿಯಲ್ಲಿ ತಿರುಗೇಟು ಕೊಟ್ಟ ಅವರು, “ಬಿಜೆಪಿ ಕುಟುಂಬ ರಾಜಕಾರಣದಲ್ಲಿ ತೊಯ್ದಾಡುತ್ತಿದೆ. ತನ್ನ ಹುಳುಕನ್ನು ಮರೆಮಾಚಲು ಜೆಡಿಎಸ್ ಮೇಲೆ ಕೆಸರು ಎರಚುತ್ತಿದೆ” ಎಂದರು.

ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಇಲ್ಲವೇ? ನಾವೂ ಒಂದು ಪಟ್ಟಿ ಕೊಟ್ಟಿದ್ದೇವೆ. ಇನ್ನು ಬೇಕಾದಷ್ಟು ಪಟ್ಟಿಗಳಿವೆ. ಹೇಳುತ್ತಾ ಹೋದ್ದರೆ ಅದು ಮುಗಿಯದ ಕಥೆ ಆಗುತ್ತದೆ. ಸುಮ್ಮನೆ ನಮ್ಮ ಕುಟುಂಬದ ತಂಟೆಗೆ ಬರುವುದು ಬೇಡ ಎಂದು ಬಿಜೆಪಿಗೆ ಎಚ್ಚರಿಕೆ ನೀಡಿದರು.

ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ರಾಜಕಾರಣಕ್ಕೆ ಬರಬಹುದು. ಎಲ್ಲ ವೃತ್ತಿಗಳಲ್ಲೂ ಇರುವಂತೆ ರಾಜಕೀಯದಲ್ಲೂ ಕುಟುಂಬ ಸದಸ್ಯರು ರಾಜಕಾರಣಕ್ಕೆ ಬರುವುದು ಹೊಸತೇನಲ್ಲ. ಚಿತ್ರರಂಗ, ವೈದ್ಯ ಕ್ಷೇತ್ರದಲ್ಲೂ ಇದೆಯಲ್ಲವೇ? ಕಾಂಗ್ರೆಸ್, ಬಿಜೆಪಿ ಸೇರಿದಂತೆ ಎಲ್ಲ ಪಕ್ಷಗಳಲ್ಲೂ ಕುಟುಂಬ ರಾಜಕಾರಣ ಇದೆ. ಬಿಜೆಪಿ ನಿರ್ದಿಷ್ಟವಾಗಿ ನಮ್ಮ ಕುಟುಂಬ ಮತ್ತು ನಮ್ಮ ಪಕ್ಷದ ಬಗ್ಗೆ ಮಾತನಾಡುವುದು ಏಕೆ? ಸುಖಾಸುಮ್ಮನೆ ಟ್ವೀಟ್ ಮಾಡುವುದು, ಮಾತನಾಡುವುದನ್ನು ನಿಲ್ಲಿಸದಿದ್ದರೆ ನಾವು ಕೂಡ ಅದೇ ಧಾಟಿಯಲ್ಲಿ ಉತ್ತರ ಕೊಡಬೇಕಾಗುತ್ತದೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

ದೇವೇಗೌಡರು ಸುದೀರ್ಘ ಅವಧಿಯಲ್ಲಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದಾರೆ ನಿಜ. ನಾಳೆ ಯಾರಾದರೂ ಬಂದರೂ ಅವರಿಗೆ ಆ ಪದವಿ ಬಿಟ್ಟುಕೊಡಲು ಅವರು ಸಿದ್ಧರಿದ್ದಾರೆ. ನಮ್ಮದು ಪ್ರಾದೇಶಿಕ ಪಕ್ಷ. ನಮ್ಮ ವೈಯಕ್ತಿಕ ವರ್ಚಸ್ಸಿನಲ್ಲೇ ಪಕ್ಷ ನಡೆಯಬೇಕು ಎಂದ ಅವರು; ದೇವೇಗೌಡರ ಕಾಲದಲ್ಲಿ ಬಿಟ್ ಕಾಯಿನ್ ಹಗರಣ ನಡೆದಿತ್ತಾ? ಹೋಗಲಿ, ನಾನು ಸಿಎಂ ಆಗಿದ್ದಾಗ ಯಾವುದಾದರೂ ಹಗರಣ ಆಗಿತ್ತಾ? ಅದ್ಯಾವುದೋ 150 ಕೋಟಿ ರೂಪಾಯಿ ಆರೋಪ ಹೊರಿಸಿದ್ದರು. ಆ ಸುಳ್ಳು ಆರೋಪ ಎಲ್ಲಿಗೆ ಹೋಯಿತು ಎನ್ನುವುದು ರಾಜ್ಯದ ಜನರಿಗೆ ಗೊತ್ತಿದೆ ಎಂದು ಬಿಜೆಪಿಗೆ ಅವರು ಟಾಂಗ್ ಕೊಟ್ಟರು.

ನಮ್ಮ ವೆಬ್ ತಾಣದಲ್ಲಿ ರಾಜ್ಯಾಧ್ಯಕ್ಷರ ಭಾವಚಿತ್ರ ಇಲ್ಲ ಎನ್ನುವ ಸುಳ್ಳನ್ನು ಬಿಜೆಪಿ ಹೇಳಿದೆ. ಮೊದಲು ನನ್ನ ಮತ್ತು ದೇವೇಗೌಡರ ಚಿತ್ರಗಳಿದ್ದು, ಹೆ ಚ್.ಕೆ. ಕುಮಾರಸ್ವಾಮಿ ಅವರ ಚಿತ್ರವೂ ಇದೆ. ಬಿಜೆಪಿ ವೆಬ್ ತಾಣಗಳಲ್ಲಿ ಮೊದಲು ಮೋದಿ ಅವರ ಚಿತ್ರ ಬಂದು ನಂತರ ಇತರೆ ನಾಯಕರ ಚಿತ್ರಗಳನ್ನು ಹಾಕಿಲ್ಲವೇ? ಬೇರೆಯವರ ತಟ್ಟೆಯತ್ತ ಬಿಜೆಪಿ ಕಣ್ಣೇಕೆ ಎಂದು ಅವರು ಪ್ರಶ್ನಿಸಿದರು.IMG 20211115 WA0032

ಬಿಜೆಪಿ ರಾಜಕೀಯ ಹಾಳು ಮಾಡಿದೆ:

ಬಿಜೆಪಿಯವರು ಎಂಥಾ ಹೀನ ರಾಜಕೀಯ ಮಾಡುತ್ತಿದ್ದಾರೆ ಎನ್ನುವುದು ದೇಶಕ್ಕೆ ಗೊತ್ತಿದೆ. ಶಾಸಕರನ್ನು ಖರೀದಿ ಮಾಡಿ ಚುನಾವಣೆ ಮತ್ತು ರಾಜಕೀಯ ವ್ಯವಸ್ಥೆಯನ್ನು ಹದಗೆಡಿಸುತ್ತಿದ್ದಾರೆ. ಇವತ್ತು ಆಪರೇಷನ್ ಕಮಲ ಇಡೀ ದೇಶವೆಲ್ಲಾ ಹಬ್ಬುತ್ತಿದೆ. ಇದು ಒಳ್ಳೆಯ ರಾಜಕಾರಣವಾ? ಎಂದು ಮಾಜಿ ಮುಖ್ಯಮಂತ್ರಿಗಳು ಪ್ರಶ್ನಿಸಿದರು.

ಸ್ಕೂಟರ್ ಗೆ ಪೆಟ್ರೋಲ್ ಹಾಕಿಸಲು ದುಡ್ಡು ಇಲ್ಲದವರು ಈಗ ಹೇಗಿದ್ದಾರೆ ಗೊತ್ತಾ?:

ನಾವು ಯಾರ ತಲೆ ಹೊಡೆದು ಹಣ ಸಂಪಾದಿಸಿಲ್ಲ. ಪಕ್ಷ ಸಂಘಟಿಸಲು ಸಾಲಸೋಲ ಮಾಡಿ ಒದ್ದಾಡುತ್ತಿದ್ದೇವೆ. ಎಲ್ಲವನ್ನೂ ನಾವೇ ಮಾಡಬೇಕು ಎಂದ ಅವರು, ಬಿಜೆಪಿಯವರು ಈ ಹಿಂದೆ ಯಾವ ರೀತಿ ಇದ್ದರು? ಈಗ ಹೇಗಿದ್ದಾರೆ ಎಂಬುದು ಗೊತ್ತಿದೆ. ಸ್ಕೂಟರ್ ಗೆ ಪೆಟ್ರೋಲ್ ಹಾಕಿಸಲು ದುಡ್ಡು ಇಲ್ಲದೆ ಇದ್ದವರು ಈಗ ಹೇಗಿದ್ದಾರೆ ಎನ್ನುವುದೂ ಗೊತ್ತಿದೆ ಎಂದು ಬಿಜೆಪಿ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು

ನನಗೆ ನೋಟಿಸ್ ಕೊಟ್ಟು ಏನ್ಮಾಡ್ತಾರೆ?:

ಬಿಟ್ ಕಾಯಿನ್ ಮತ್ತು ಜನಧನ್ ಖಾತೆಗಳ ಹಗರಣಗಳ ಬಗ್ಗೆ ಹೇಳಿಕೆ ನೀಡಿರುವ ಕುಮಾರಸ್ವಾಮಿ ಅವರಿಗೆ ಜಾರಿ ನಿರ್ದೇಶನಾಲಯ ನೋಟಿಸ್ ನೀಡಿ ತನಿಖೆಗೆ ಸಹಕಾರ ಪಡೆಯಲಿ ಎಂದು ಸಂಸದ ಪ್ರತಾಪ್ ಸಿಂಹ ನೀಡಿರುವ ಹೇಳಿಕೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕಿಯೆ ನೀಡಿದರು ಮಾಜಿ ಮುಖ್ಯಮಂತ್ರಿಗಳು.

ಜನಧನ್ ಖಾತೆಯಿಂದ ಹಣ ಎತ್ತಿರುವ ವಿಚಾರವನ್ನು ನಾನು ಹೇಳಿದ್ದೇನೆ. ಆ ಮಾಹಿತಿ ಎಲ್ಲ ಕಡೆ ವ್ಯಾಪಕವಾಗಿ ಚರ್ಚೆ ಆಗುತ್ತಿದೆ. ಈ ಬಗ್ಗೆ ತನಿಖೆ ನಡೆಸಿ ಜನರಿಗೆ ಸತ್ಯ ತಿಳಿಸಬೇಕಾದ ಕರ್ತವ್ಯ ಸರಕಾರದ್ದು. ಅವರು ನನಗೆ ನೋಟಿಸ್ ಕೊಟ್ಟು ಏನು ಮಾಡುತ್ತಾರೆ? ಎರಡು ಬಾರಿ ಸಂಸದರಾದವರು ಸ್ವಲ್ಪ ಜವಾಬ್ದಾರಿಯಿಂದ ಮಾತನಾಡಬೇಕು ಎಂದು ಕುಮಾರಸ್ವಾಮಿ ಅವರು ಹೇಳಿದರು.

ದೇಶದಲ್ಲಿ ನಡೆದ ದೊಡ್ಡ ದೊಡ್ಡ ಹಗರಣಗಳು ಏನಾದವು? ಯಾವ ಹಗರಣವನ್ನಾದರೂ ತಾರ್ಕಿಕ ಅಂತ್ಯಕ್ಕೆ ತೆಗೆದುಕೊಂಡು ಹೋಗಿದ್ದಾರಾ? ಇಲ್ಲ, ಸಣ್ಣಪುಟ್ಟದವರಿಗೆ ಮಾತ್ರ ಶಿಕ್ಷೆ ಕೊಡಿಸಿದ್ದಾರೆ ಅಷ್ಟೇ ಎಂದು ಅವರು ಹೇಳಿದರು.

ಕಾಂಗ್ರೆಸ್ ದಾಖಲೆ ಸಮೇತ ಹೇಳಿಕೆ ಹೋರಾಡಲಿ:

ಬಿಟ್ ಕಾಯಿನ್ ಹಗರಣದ ಬಗ್ಗೆ ಮಾತನಾಡುತ್ತಿರುವ ಕಾಂಗ್ರೆಸ್ ಪಕ್ಷ ದಾಖಲೆಗಳೊಂದಿಗೆ ಸ್ಪಷ್ಟವಾದ ಹೋರಾಟ ಮಾಡಬೇಕು. ವಿನಾಕಾರಣ ಮಾತಾನಾಡಿದರೆ ಪ್ರಯೋಜನ ಇಲ್ಲ. ಅವರು ಯಾರನ್ನು ಬೇಕಾದರೂ ಮುಳುಗಿಸುತ್ತಾರೆ. ಯಾರನ್ನು ಬೇಕಾದರೂ ತೇಲಿಸುತ್ತಾರೆ ಎಂದು ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ಅವರು ಉತ್ತರಿಸಿದರು.

ಪರಿಷತ್ ಅಭ್ಯರ್ಥಿಗಳು ಅಂತಿಮವಾಗಿಲ್ಲ:

ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಗೆ ನಡೆಯುತ್ತಿರುವ ಚುನಾವಣೆಗೆ ನಮ್ಮ ಪಕ್ಷದಿಂದ ಅಭ್ಯರ್ಥಿಗಳನ್ನು ಇನ್ನು ಅಂತಿಮಗೊಳಿಸಿಲ್ಲ. ಪಕ್ಷ ಗೆಲ್ಲುವ ಅವಕಾಶ ಇರುವ 6-8 ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಹಾಕುವ ಬಗ್ಗೆ ಚರ್ಚಿಸಲಾಗುತ್ತಿದೆ. ಈಗಾಗಲೇ ಮಂಡ್ಯ, ಚಿಕ್ಕಾಬಳ್ಳಾಪುರ, ಕೋಲಾರ, ತುಮಕೂರು ಕ್ಷೇತ್ರಗಳ ಬಗ್ಗೆ ನಾನೇ ಚರ್ಚೆ ನಡೆಸಿದ್ದೇನೆ. ಆದಷ್ಟು ಬೇಗ ಹೆಸರುಗಳನ್ನು ಅಂತಿಮಗೊಳಿಸುತ್ತೇವೆ ಎಂದು ಅವರು ಹೇಳಿದರು.

ಹಾಸನದಲ್ಲಿ ಅಭ್ಯರ್ಥಿ ಯಾರಾಗುತ್ತಾರೆ ಎನ್ನುವ ವಿಚಾರ ಇನ್ನೂ ನನ್ನವರೆಗೂ ಬಂದಿಲ್ಲ. ಜಿಲ್ಲೆಯಲ್ಲಿ ನಮ್ಮ ಪಕ್ಷದ ಆರು ಶಾಸಕರು ಇದ್ದು, ಇತ್ತೀಚೆಗೆ ಎಲ್ಲರೂ ಸೇರಿ ಸಭೆ ನಡೆಸಿದ್ದಾರೆ. ಆದಷ್ಟು ಬೇಗ ಅಲ್ಲಿಯೂ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸುತ್ತೇವೆ ಎಂದರು ಅವರು.

ಬಿಜೆಪಿ ಅವರು ಸುಮ್ಮನೆ ಇದ್ದರೆ ಒಳ್ಳೆಯದು. ಇಲ್ಲವಾದರೆ ಅವರ ಧಾಟಿಯಲ್ಲೇ ನಾವೂ ಉತ್ತರ ಕೊಡಬೇಕಾಗುತ್ತದೆ. ಜನರ ವಿಷಯಗಳ ಬಗ್ಗೆ ಮಾತನಾಡುವುದನ್ನು ಬಿಟ್ಟು ಕ್ಷುಲ್ಲಕ ವಿಚಾರಗಳ ಬಗ್ಗೆ ಆ ಪಕ್ಷ ಮಾತನಾಡುತ್ತಿದೆ.