IMG 20211113 WA0010

JD(S) : ಮಳೆಯಿಂದ ಅನ್ನದಾತ ಆಪತ್ತಿನಲ್ಲಿದ್ದಾನೆ ಸರಕಾರ ರೈತರ ನೆರವಿಗೆ ಧಾವಿಸಬೇಕು- ಹೆಚ್ ಡಿ ಕೆ

Genaral STATE

ಮಳೆಯಿಂದ ಅನ್ನದಾತ ಆಪತ್ತಿನಲ್ಲಿದ್ದಾನೆ
ಸರಕಾರ ರೈತರ ನೆರವಿಗೆ ಧಾವಿಸಬೇಕೆಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒತ್ತಾಯ
*ರಾಜ್ಯದಲ್ಲಿ ಮಳೆಯಿಂದ 7.31 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ನಾಶ^
***
ಬೆಂಗಳೂರು: ಕೋವಿಡ್‌ ವೇಳೆ ತೀವ್ರ ಸಂಕಷ್ಟಕ್ಕೀಡಾಗಿದ್ದ ರಾಜ್ಯದ ರೈತರು, ಈಗ ಭಾರೀ ಮಳೆಯಿಂದ ಮತ್ತೊಮ್ಮೆ ಇನ್ನಿಲ್ಲದ ಕಷ್ಟಕ್ಕೆ ಸಿಲುಕಿದ್ದು ಸರಕಾರ ಕೂಡಲೇ ಅವರ ನೆರವಿಗೆ ಶಾವಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದಾರೆ.

ಈ ಬಗ್ಗೆ ಇಂದು ಬೆಳಗ್ಗೆ ಸರಣಿ ಟ್ವೀಟ್‌ ಮಾಡಿರುವ ಅವರು;  ರಾಜ್ಯದ ಉದ್ದಗಲಕ್ಕೂ 7.31 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆದ ಬೆಳೆ ನೀರು ಪಾಲಾಗಿದ್ದು, ಅನ್ನದಾತ ಆಪತ್ತಿಗೆ ಸಿಲುಕಿದ್ದಾನೆ ಎಂದು ಅವರು ತಿಳಿಸಿದ್ದಾರೆ.

ಟ್ವೀಟ್‌ ನ ಪೂರ್ಣ ಸಾರಾಂಶ ಇಲ್ಲಿದೆ;

#ಕೋವಿಡ್ ಮಹಾಮಾರಿಯಿಂದ ತತ್ತರಿಸಿದ್ದ ಜನ ಈಗ ಮಳೆಯಿಂದ ಕಷ್ಟಕ್ಕೆ ಸಿಲುಕಿದ್ದಾರೆ. ಮತ್ತೆ ಅವರು ಬದುಕು ಕಟ್ಟಿಕೊಳ್ಳುವ ಮುನ್ನವೇ ಮಳೆ ಸಂಕಷ್ಟಕ್ಕೀಡು ಮಾಡಿದೆ.  ಬೆಳೆದ ಬೆಳೆ ಕಣ್ಮುಂದೆಯೇ ಕೊಚ್ಚಿಹೋಗುತ್ತಿದೆ. ನಾಡಿಗೆ ಅನ್ನ ಕೊಡುವ ಅನ್ನದಾತ ಆಪತ್ತಿನಲ್ಲಿದ್ದಾನೆ.

ಮಾಧ್ಯಮಗಳಿಗೆ ಅಧಿಕಾರಿಗಳೇ ನೀಡಿರುವ ಮಾಹಿತಿಯಂತೆ ಜುಲೈ-ನವೆಂಬರ್ʼನಲ್ಲಿ 7.31 ಲಕ್ಷ ಹೆಕ್ಟೇರ್ ಅಥವಾ ಅದಕ್ಕಿಂತ ಹೆಚ್ಚು ಪ್ರದೇಶದಲ್ಲಿ ಬೆಳೆದ ಬೆಳೆ ಮಳೆ ಪಾಲಾಗಿದೆ. ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು, ಮಧ್ಯ ಕರ್ನಾಟಕ, ಹಳೆ ಮೈಸೂರು, ಬಯಲು ಸೀಮೆ ಸೇರಿ ರಾಜ್ಯದ ಉದ್ದಗಲಕ್ಕೂ ಮಳೆಯ ರುದ್ರನರ್ತನ ಮುಂದುವರಿದೆ.

ಸಾವಿರಾರು ಕೋಟಿ ರೂ. ಮೌಲ್ಯದ ಬೆಳೆ ನಾಶವಾಗಿದೆ. ಚಿಕ್ಕಮಗಳೂರು, ಕೊಡಗಿನಲ್ಲಿ ಕಾಫಿ ತೋಟಗಳು ಪೂರ್ಣ ನಾಶವಾಗಿವೆ. ಬಯಲುಸೀಮೆ ಜಿಲ್ಲೆಗಳಲ್ಲಿ ಮಳೆ ಪ್ರಳಯವನ್ನೇ ಸೃಷ್ಟಿಸಿದೆ. ಕೆರೆಕಟ್ಟೆಗಳು ಒಡೆದುಹೋಗಿ ಗ್ರಾಮಗಳಿಗೆ ಸಂಪರ್ಕವೇ ತಪ್ಪಿಹೋಗಿದೆ. ಹಳ್ಳಿಗಳು ನಡುಗಡ್ಡೆಗಳಾಗಿವೆ. ತೋಟಗಳು ಕೆರೆಗಳಾಗಿವೆ.

ಕೋಲಾರ ಜಿಲ್ಲೆ ಒಂದರಲ್ಲೇ ಅತಿ ಹೆಚ್ಚು ಬೆಳೆ ನಾಶವಾಗಿದೆ. ಮಾಧ್ಯಮಗಳಿಗೆ ಅಧಿಕಾರಿಗಳೇ ಕೊಟ್ಟಿರುವ  ಮಾಹಿತಿಯಂತೆ ಆ ಒಂದು ಜಿಲ್ಲೆಯಲ್ಲೇ 34,447 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಬೆಳೆಯನ್ನು ಮಳೆ ನುಂಗಿದೆ. 14 ಜಿಲ್ಲೆಗಳಲ್ಲಿ 48,000 ಹೆಕ್ಟೇರ್ʼಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಫಸಲು ರೈತರ ಕೈಗೆ ಸಿಕ್ಕಿಲ್ಲ.

ಕರ್ನಾಟಕದ ರೈತರು ಇಷ್ಟು ದೊಡ್ಡ ಸಂಕಷ್ಟಕ್ಕೆ ಹಿಂದೆಂದೂ ಸಿಲುಕಿರಲಿಲ್ಲ. ಈ ವಿಷಯದಲ್ಲಿ ರಾಜ್ಯ ಸರಕಾರ ಮಾಡಿರುವುದೇನು? ಸಚಿವರು ಎಲ್ಲಿದ್ದಾರೆ? ಅಧಿಕಾರಿಗಳೇನು ಮಾಡುತ್ತಿದ್ದಾರೆ? ಸರಕಾರ ಸಭೆಗಳಿಗೆ ಸೀಮಿತವಾದರೆ ಪ್ರಯೋಜನ ಶೂನ್ಯ. ಅಧಿಕಾರಿಗಳು ಹಳ್ಳಿಗಳತ್ತ ನಡೆಯಲಿ.

ಜಿಲ್ಲೆಗಳಿಗೆ ಕೋವಿಡ್ ಉಸ್ತುವಾರಿಗಳೆಂದು ನೇಮಕವಾದ ಸಚಿವರು ಎಲ್ಲಿ? ಅನೇಕ ಸಚಿವರಂತೂ ಜಿಲ್ಲೆಗಳ ಕಥೆ ಹಾಗಿರಲಿ, ಅವರ ಕಚೇರಿಗಳಲ್ಲೇ ಪತ್ತೆ ಇಲ್ಲ. ಮುಖ್ಯಮಂತ್ರಿಗಳು ಕೂಡಲೇ ಸಚಿವರನ್ನು ಜಿಲ್ಲೆಗಳಿಗೆ ಅಟ್ಟಬೇಕು. ಮಳೆ-ಬೆಳೆ ಪರಿಹಾರ ಕಾರ್ಯಕ್ರಮಗಳನ್ನು ತುರ್ತಾಗಿ ಕೈಗೆತ್ತಿಕೊಳ್ಳುವಂತೆ ನಿರ್ದೇಶನ ನೀಡಬೇಕು.

ಇಷ್ಟೆಲ್ಲ ಅನಾಹುತ ಆಗುತ್ತಿದ್ದರೂ ಕೃಷಿ ಸಚಿವರು, ಅವರ ಇಲಾಖೆ ಹಾಗೂ ಕಂದಾಯ ಇಲಾಖೆ ಏನು ಮಾಡುತ್ತಿದೆ? ಈಗಾಗಲೇ ಬೆಳೆ ಹಾನಿ ಬಗ್ಗೆ ಸಮೀಕ್ಷೆ ಮಾಡಲಾಗಿದೆಯಾ? ಬೆಳೆ ವಿಮೆ ಪರಿಸ್ಥಿತಿ ಏನು? ಕಾಟಾಚಾರಕ್ಕೆ ಸರ್ವೇ ಮಾಡಿ ಸಭೆಗಳಲ್ಲಿ ಕಾಲಹರಣ ಮಾಡುವುದು ಬೇಡ.

ಜನಸ್ವರಾಜ್ ಯಾತ್ರೆ ಹೆಸರಿನಲ್ಲಿ ಜಾತ್ರೆ ಮಾಡುವ ಸಮಯ ಇದಲ್ಲ. ಶಂಖ ಊದಿಕೊಂಡು ಹೋಗಿ ರೈತರ ಕಣ್ಣೀರನ್ನು  ಅಣಕಿಸಬೇಡಿ. ಕೃಷಿ ಕಾಯ್ದೆ ವಾಪಸ್ ಪಡೆದೆವು ಎಂದು ಬೀಗುತ್ತಾ ರೈತರ ತಾಳ್ಮೆಯನ್ನು ಪರೀಕ್ಷಿಸಬೇಡಿ. ಸರಕಾರವು ಅಧಿಕಾರ ರಾಜಕಾರಣದಲ್ಲಿ ಮುಳುಗಿ ಮನುಷ್ಯತ್ವ ಮರೆಯಬಾರದು.

ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಾರೆ.