IMG 20211120 WA0008

BJP: 2024ರ ವೇಳೆಗೆ ಪ್ರತಿ ಮನೆಗೂ ನಳ್ಳಿ ನೀರು….!

Genaral STATE

2024ರ ವೇಳೆಗೆ ಪ್ರತಿ ಮನೆಗೂ ನಳ್ಳಿ ನೀರು- ಕೆ.ಎಸ್.ಈಶ್ವರಪ್ಪ

ಬೆಂಗಳೂರು: ರಾಜ್ಯದ ಪ್ರತಿ ಮನೆಗೂ ನಳ್ಳಿ ಮೂಲಕ ಕುಡಿಯುವ ನೀರು ನೀಡಲು ಕೇಂದ್ರ ಸರಕಾರ ಮುಂದಾಗಿದೆ. 2024ರಲ್ಲಿ ರಾಜ್ಯದ ಪ್ರತಿ ಮನೆಗೂ ನಳ್ಳಿ ನೀರು ನೀಡಲು ಉದ್ದೇಶಿಸಲಾಗಿದೆ. ಇದಕ್ಕೆ ಗ್ರಾಮ ಪಂಚಾಯಿತಿ ಸದಸ್ಯರ ಸಹಕಾರ ಉತ್ತಮವಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಕೆ.ಎಸ್. ಈಶ್ವರಪ್ಪ ಅವರು ತಿಳಿಸಿದರು.

ಜನಸ್ವರಾಜ್ ಯಾತ್ರೆಯ ನೇತೃತ್ವ ವಹಿಸಿದ್ದ ಅವರು, ಇಂದು ಚಾಮರಾಜನಗರದಲ್ಲಿ ಸಮಾವೇಶದಲ್ಲಿ ಹಾಗೂ ಮೈಸೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನರೇಂದ್ರ ಮೋದಿಯವರು ನರೇಗಾದಡಿ 13 ಕೋಟಿ ಮಾನವ ದಿನಗಳನ್ನು ರಾಜ್ಯಕ್ಕೆ ಗುರಿಯಾಗಿ ನೀಡಿದ್ದರು. ನವೆಂಬರ್‍ಗೆ ಈ ಗುರಿ ತಲುಪಲಾಗಿತ್ತು. ಮನವಿ ಬಳಿಕ 2 ಕೋಟಿ ಹೆಚ್ಚುವರಿ ಮಾನವದಿನಗಳನ್ನು ಕೊಡಲಾಗಿತ್ತು ಎಂದು ವಿವರಿಸಿದರು. ಈ ಬಾರಿಯೂ 13 ಕೋಟಿ ಮಾನವ ದಿನಗಳ ಗುರಿ ಸಾಧಿಸಲಾಗಿದೆ. ಈಗ ಪ್ರತಿಯೊಬ್ಬರಿಗೆ 100 ದಿನಗಳ ಬದಲಾಗಿ 150 ದಿನಗಳ ಮಾನವ ದಿನಕ್ಕೆ ಅವಕಾಶ ಕೊಡಲಾಗುತ್ತಿದೆ ಎಂದು ವಿವರಿಸಿದರು. ಕೆರೆ ಅಭಿವೃದ್ಧಿ, ಕಲ್ಯಾಣಿಗಳ ಅಭಿವೃದ್ಧಿ, ನೀರಾವರಿ ಸಂಬಂಧ ನರೇಗಾ ಯೋಜನೆ ಉಪಯುಕ್ತ ಎಂದರು.
ಕೋವಿಡ್ ನಿರ್ವಹಣೆಗೆ ಪಂಚಾಯಿತಿ ಅಧ್ಯಕ್ಷರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಿದ್ದು, ಪ್ರಯೋಜನ ಲಭಿಸಿದೆ. ಉಚಿತ ಲಸಿಕೆ- ಉಚಿತ ರೇಷನ್ ಕೊಡಲಾಗಿತ್ತು. ಕೇಂದ್ರ- ರಾಜ್ಯ ಸರಕಾರಗಳ ಈ ಕ್ರಮದಿಂದ ಪ್ರಯೋಜನವಾಗಿದೆ. ಸೋಲಾರ್ ಲೈಟ್‍ಗಳನ್ನು ಗ್ರಾಮ ಪಂಚಾಯಿತಿ ಪ್ರದೇಶದಲ್ಲಿ ಹಾಕಲಾಗಿದೆ ಎಂದು ತಿಳಿಸಿದರು.IMG 20211120 WA0007

ಅಂತರ್ಜಲ ಹೆಚ್ಚಳಕ್ಕೂ ಆದ್ಯತೆ ಕೊಡಲಾಗಿದೆ. ಕೇಂದ್ರದ ಗ್ರಾಮೀಣ ಸಡಕ್ ಯೋಜನೆಗೆ 5314 ಕಿಮೀ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ. ರಸ್ತೆ, ನೀರು, ಶೌಚಾಲಯ ಸೇರಿ ಸರ್ವತೋಮುಖ ಅಭಿವೃದ್ಧಿಗೆ ನಮ್ಮ ಸರಕಾರಗಳು ಬದ್ಧವಾಗಿದೆ. ಈ ಚುನಾವಣೆಯಲ್ಲೂ ಸಂಘಟನೆ- ಅಭಿವೃದ್ಧಿ ಕಾರ್ಯಗಳಿಂದ ಪಕ್ಷ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸದಿಂದ ನುಡಿದರು.

ಬಿಜೆಪಿ ಬೆಂಬಲಿತ ಗರಿಷ್ಠ ಮತದಾರರಿದ್ದು, ಇನ್ನೊಂದೆಡೆ ನರೇಂದ್ರ ಮೋದಿಯವರ ನೇತೃತ್ವದ ಸರಕಾರದ ಅಭಿವೃದ್ಧಿ ಕಾರ್ಯಗಳು ಮತ್ತು ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ- ಬಸವರಾಜ ಬೊಮ್ಮಾಯಿ ನೇತೃತ್ವದ ಸರಕಾರಗಳ ಜನಪರ ಅಭಿವೃದ್ಧಿ ಕಾಮಗಾರಿಗಳು ನಮ್ಮ ಗೆಲುವಿಗೆ ಶ್ರೀರಕ್ಷೆ ಎಂದು ತಿಳಿಸಿದರು. ಬಿಜೆಪಿ 15ರಿಂದ 16ಕ್ಕೂ ಹೆಚ್ಚು ವಿಧಾನಪರಿಷತ್ ಸ್ಥಾನಗಳನ್ನು ಗೆದ್ದುಕೊಳ್ಳಲಿದ್ದು, ವಿಧಾನಪರಿಷತ್‍ನಲ್ಲೂ ಸ್ಪಷ್ಟ ಬಹುಮತ ಪಡೆಯಲಿದೆ ಎಂದರು.

ಕಾಂಗ್ರೆಸ್ ಪಕ್ಷದ ಕಮಿಷನ್ ಕಾರಣಕ್ಕೇ ಅವರು ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದಾರೆ ಎಂದು ಅವರು ಇದಕ್ಕೂ ಮೊದಲು ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಸಂಬಂಧ ಪ್ರಶ್ನೆಗೆ ಉತ್ತರ ನೀಡಿದರು. ಜೆಡಿಎಸ್‍ನಲ್ಲಿ ಶಂಖ ಊದಲೂ ಜನ ಇಲ್ಲ ಎಂಬುದು ಈ ಚುನಾವಣೆ ಬಳಿಕ ಸಾಬೀತಾಗಲಿದೆ ಎಂದು ಇನ್ನೊಂದು ಪ್ರಶ್ನೆಗೆ ಉತ್ರರಿಸಿದರು.

ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಮುಂದಿನ ವಿಧಾನಪರಿಷತ್, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮಾತ್ರವಲ್ಲದೆ ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಂಚಾಯಿತಿ ಸದಸ್ಯರ ಪಾತ್ರ ಅತ್ಯಂತ ಮಹತ್ವದ್ದು ಎಂದು ತಿಳಿಸಿದರು.
ರಾಜ್ಯದ ಸಚಿವರಾದ ಆರ್.ಅಶೋಕ್ ಅವರು ಮಾತನಾಡಿ, ಕುಟುಂಬ ರಾಜಕೀಯದಿಂದ ಜೆಡಿಎಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಂಡಿದೆ. ಈಗ ಸ್ಪರ್ಧೆ ಏನಿದ್ದರೂ ಬಿಜೆಪಿ- ಕಾಂಗ್ರೆಸ್ ನಡುವೆ ಇದೆ. ಬಿಜೆಪಿ ನಿರಂತರ ಗೆಲುವಿನಿಂದ ಮುನ್ನಡೆಯುತ್ತಿದೆ ಎಂದು ವಿವರಿಸಿದರು.

ರಾಜ್ಯದ ಸಚಿವರಾದ ಎಸ್.ಟಿ. ಸೋಮಶೇಖರ್, ಜಿಲ್ಲಾಧ್ಯಕ್ಷರಾದ ಮಂಗಳಾ ಸೋಮಶೇಖರ್, ಬಿಜೆಪಿ ರಾಜ್ಯ ಉಪಾಧ್ಯಕ್ಷರಾದ ಎಂ. ಶಂಕರಪ್ಪ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಅಶ್ವಥ್‍ನಾರಾಯಣ, ರಾಜ್ಯ ಕಾರ್ಯದರ್ಶಿಗಳಾದ ವಿನಯ್ ಬಿದರೆ, ರಾಜ್ಯ ವಕ್ತಾರರಾದ ಎಮ್.ಜಿ. ಮಹೇಶ್, ಶಾಸಕರು, ಜನಪ್ರತಿನಿಧಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು