ಪಾವಗಡ: ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಸಿ.ಐ.ಟಿ.ಯು ನೇತೃತ್ವದಲ್ಲಿ ಶುಕ್ರವಾರ ತಹಶೀಲ್ದಾರ್ ಕಛೇರಿ ಮುಂಭಾಗ ಕಾರ್ಮಿಕರು ಪ್ರತಿಭಟಿಸಿದರು.
ಕಾರ್ಮಿಕರಿಗೆ ಶೈಕ್ಷಣಿಕ, ವೈದ್ಯಕೀಯ ಸೌಲಭ್ಯ ಕಲ್ಪಿಸುತ್ತಿಲ್ಲ. ಮಂಡಳಿಯಲ್ಲಿ ಇರುವ ಹಣವನ್ನು ಕಾರ್ಮಿಕರಿಗಾಗಿ ವಿನಿಯೋಗಿಸದೆ ಖಾಲಿ ಮಾಡಲಾಗುತ್ತಿದೆ. ರಾಜ್ಯದ ಬಿಜೆಪಿ ಸರ್ಕಾರ ಕಾರ್ಮಿಕರಿಗೆ ಯಾವುದೇ ಸೌಲಭ್ಯ ನೀಡುತ್ತಿಲ್ಲ ಎಂದು ಪ್ರತಿಭಟನಾ ನಿರತರು ಆರೋಪಿಸಿದರು.
ಕಾಯ್ದೆಯಲ್ಲಿರುವ ಯಾವುದೇ ಸೌಲಭ್ಯವನ್ನು ನೀಡದೆ ಅನ್ಯಾಯ ಎಸಗಲಾಗುತ್ತಿದೆ. ಕಾರ್ಮಿಕರಿಗೆ ಕೋವಿಡ್ ವೇಳೆಯಲ್ಲಿ ಯಾವುದೇ ಸೌಲಭ್ಯ ನೀಡದೆ ವಂಚಿಸಲಾಗುತ್ತಿದೆ. ಕಾರ್ಮಿಕರ ವೈದ್ಯಕೀಯ ವೆಚ್ಚಕ್ಕೆ ಸಂಬಂಧಿಸಿದಂತೆ ಖಾಸಗಿ ಆಸ್ಪತ್ರೆಗಳಿಗೆ ಹಣ ನೀಡಿ ಹಣ ಪೋಲು ಮಾಡಲಾಗುತ್ತಿದೆ ಎಂದು ದೂರಿದರು.
ರೈತರ ಚಳುವಳಿಯಲ್ಲಿ ಮಡಿದ ರೈತರಿಗೆ, ಕೋವಿಡ್ ವೇಳೆ ಮೃತಪಟ್ಟವರಿಗೆ ಈವರೆಗೆ ಪರಿಹಾರ ವಿತರಿಸಿಲ್ಲ. ಕಟ್ಟಡ ಸಾಮಗ್ರಿಗಳ ಮೇಲೆ ವಿಧಿಸಲಾಗುವ ಸರಕು ಸೇವೆ ತೆರಿಗೆ ಕಡಿಮೆ ಮಾಡಬೇಕು. ಮಂಡಳಿಯಲ್ಲಿ ಇರುವ ಹಣವನ್ನು ಕಾರ್ಮಿಕರಿಗಾಗಿ ವಿನಿಯೋಗಿಸಬೇಕು. ಕಾರ್ಮಿಕರಿಗಾಗಿ ಉತ್ತಮ ಯೋಜನೆಗಳನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಪಟ್ಟಣದ ನಿರೀಕ್ಷಣಾ ಮಂದಿರದಿಂದ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ಗ್ರೇಡ್ 2 ತಹಶೀಲ್ದಾರ್ ಸುಮತಿ ಅವರಿಗೆ ಮನವಿ ಸಲ್ಲಿಸಿದರು.
ಜಿಲ್ಲಾ ಘಟಕದ ಅದ್ಯಕ್ಷ ಬಿ. ಉಮೇಶ್, ಸಂಚಾಲಕಿ ಭಾಗ್ಯಮ್ಮ, ರಾಮಾಂಜಿ, ಅಂಜಯ್ಯ, ನಾಗರಾಜು, ಗಂಗಾಧರ್, ಮುತ್ಯಾಲಪ್ಪ, ಶಿವಗಂಗಮ್ಮ ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸುಲು ಎ