ಪಾವಗಡ: ಕೃಷಿ ಉಪ ಚಟುವಟಿಕೆಗಳಲ್ಲಿ ತೊಡಗಿರುವ ಮಹಿಳೆಯರನ್ನು ಗುರುತಿಸಿ ಸರ್ಕಾರ ಅಗತ್ಯ ಸೌಕರ್ಯ ಕಲ್ಪಿಸಬೇಕು ಎಂದು ಆದಿಜನ ಪಂಚಾಯಿತಿ ತಾಲ್ಲೂಕು ಸಂಚಾಲಕ ಡಿಜೆಎಸ್ ನಾರಾಯಣಪ್ಪ ಒತ್ತಾಯಿಸಿದರು.
ತಾಲ್ಲೂಕಿನ ರಾಜವಂತಿಯಲ್ಲಿ ಸೋಮವಾರ ಆದಿಜನ ಪಂಚಾಯಿತಿ ಆಯೋಜಿಸಿದ್ದ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೃಷಿ ಕೂಲಿ ಕಾರ್ಮಿಕರು, ಹೈನುಗಾರಿಕೆ, ಕುರಿಗಾಹಿ ಮಹಿಳೆಯರು ಸೇರಿದಂತೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವವರನ್ನು ಸರ್ಕಾರ ಗುರುತಿಸಿ ರೈತ ಮಹಿಳೆಯರು ಎಂದು ಗುರುತಿನ ಚೀಟಿ ನೀಡಬೇಕು. ಫಹಣಿ ಇರುವ ರೈತರಿಗೆ ನೀಡುವ ೆಲ್ಲ ಸವಲತ್ತುಗಳನ್ನು ಇವರಿಗೂ ಕೊಡಬೇಕು ಎಂದು ಒತ್ತಾಯಿಸಿದರು.
ಗ್ರಾಮ ಪಂಚಾಯಿತಿ ಅಧಿಕಾರಿಗಳು ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಿರುವ ಶೇ24 ಅನುದಾನವನ್ನು ಸಮರ್ಪಕವಾಗಿ ಫಲಾನುಭವಿಗಳಿಗೆ ನೀಡಬೇಕು. ಅನುದಾನ ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಯಿತು. ಫಲಾನುಭವಿಗಳಿಗೆ ಗ್ಯಾಸ್ ಸ್ಟೌ, ಸಿಲಿಂಡರ್, ರೈತ ಮಹಿಳೆಯರಿಗೆ ತರಕಾರಿ ಬಿತ್ತನೆ ಬೀಜ ವಿತರಿಸಲಾಯಿತು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಭಾಗ್ಯಮ್ಮ, ತೋಟಗಾರಿಕೆ ಸಹಾಯಕ ಅಧಿಕಾರಿ ನಾಗೇಂದ್ರಪ್ಪ, ನರಸಿಂಹಪ್ಪ, ನರಸಿಂಹಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯಶ್ರೀ, ಉಪಾಧ್ಯಕ್ಷ ಶ್ರೀರಾಮಪ್ಪ, ಸದಸ್ಯ ಮಹೇಶ್, ರಾಧಮ್ಮ, ಲಿಂಗಣ್ಣ, ರಾಜು, ಹನುಮಂತರಾಯಪ್ಪ, ದಾಸಣ್ಣ, ಉಗ್ರಪ್ಪ, ಹೋಬಳಿ ಸಂಯೋಜಕಿ ಹನುಮಕ್ಕ ಉಪಸ್ಥಿತರಿದ್ದರು.
ಪಾವಗಡ ತಾಲ್ಲೂಕಿನ ರಾಜವಂತಿಯಲ್ಲಿ ಸೋಮವಾರ ಆದಿಜನ ಪಂಚಾಯಿತಿ ಆಯೋಜಿಸಿದ್ದ ರೈತ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗ್ಯಲಕ್ಷ್ಮಿ ಬಾಂಡ್, ಗ್ಯಾಸ್ ಸ್ಟೌ, ಸಿಲಿಂಡರ್, ತರಕಾರಿ ಬಿತ್ತನೆ ಬೀಜ ವಿತರಿಸಲಾಯಿತು. ಆದಿಜನ ಪಂಚಾಯಿತಿ ತಾಲ್ಲೂಕು ಸಂಚಾಲಕ ಡಿಜೆಎಸ್ ನಾರಾಯಣಪ್ಪ, ಸಹಾಯಕ ಅಧಿಕಾರಿ ನಾಗೇಂದ್ರಪ್ಪ, ನರಸಿಂಹಪ್ಪ, ನರಸಿಂಹಮೂರ್ತಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭವ್ಯಶ್ರೀ, ಉಪಾಧ್ಯಕ್ಷ ಶ್ರೀರಾಮಪ್ಪ ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸುಲು ಎ