ಕೋವಿಡ್‍ನಿಂದ ಅನಾಥರಾದ ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸರ್ಕಾರದ ಜವಾಬ್ದಾರಿ : ಸಿಎಂ
ಬೆಂಗಳೂರು, ಡಿಸೆಂಬರ್ 27 :
ಕೋವಿಡ್‍ನಿಂದ ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಆರೋಗ್ಯ ಮತ್ತು ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ತಿಳಿಸಿದರು.
ಅವರು ಇಂದು ಕಂದಾಯ ಇಲಾಖೆಯ ರಾಜ್ಯ ವಿಪತ್ತು ನಿರ್ವಹಣೆಯ ವತಿಯಿಂದ ನ್ಯಾಪನಲ್ ಕಾಲೇಜು ಮೈದಾನದಲ್ಲಿ ಕೋವಿಡ್ನಿಂದ ಮೃತಪಟ್ಟ ವ್ಯಕ್ತಿಯ ಬಿಪಿಎಲ್ ಕುಟುಂಬಕ್ಕೆ ಪರಿಹಾರ ಚೆಕ್ ವಿತರಿಸಿ ಮಾತನಾಡಿದರು.
ಮೃತಪಟ್ಟ ವ್ಯಕ್ತಿಯ ಬಿಪಿಎಲ್ ಕುಟುಂಬ ಸದಸ್ಯರಿಗೆ 1 ಲಕ್ಷ ರೂ. ಪರಿಹಾರ ನೀಡುವ ಯೋಜನೆಗೆ 300 ಕೋಟಿ ರೂ. ವೆಚ್ಚ ಮಾಡಲಾಗಿದೆ. ಕೇಂದ್ರ ಸರ್ಕಾರದ ರೂ.50,000 ಗಳ ಪರಿಹಾರವನ್ನು ಡಿಬಿಟಿ ಮಾಡಲಾಗಿದೆ. ಪರಿಹಾರ ನೀಡುವ ಮೂಲಕ ಸರ್ಕಾರ ಈ ಕುಟುಂಬಗಳ ಜೊತೆ ಇದೆ ಎಂಬ ಭರವಸೆಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಕೋವಿಡ್‍ನ ಸಮರ್ಥ ನಿರ್ವಹಣೆ :
ಕರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಆರೋಗ್ಯವಾಗಿದ್ದಂತಹ ಕುಟುಂಬದ ಸದಸ್ಯರು ಹಠಾತ್ತನೇ ಮೃತಪಟ್ಟಲ್ಲಿ ಬಹಳ ದು:ಖ ಕಾಡುತ್ತದೆ. ಈ ಸಾಂಕ್ರಾಮಿಕ ಬಹಳ ಕುಟುಂಬಗಳನ್ನು ಅನಾಥರನ್ನಾಗಿ ಮಾಡಿದೆ. ಆಧುನಿಕ ವೈದ್ಯಕೀಯ ಚಿಕಿತ್ಸೆಯ ಕಾಲಘಟ್ಟದಲ್ಲಿ ಕರೋನಾ ಸಾಂಕ್ರಾಮಿಕ ಯಾರು ಊಹಿಸಿರಲಾರದಂಥತ್ತು. ಅತಿ ಹೆಚ್ಚು ಸಂಖ್ಯೆಯ ಭಾರತ ದೇಶ ಕೋವಿಡ್‍ನ್ನು ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಸಮರ್ಥವಾಗಿ ನಿರ್ವಹಿಸಿರುವುದು ಒಂದು ವಿಶ್ವ ದಾಖಲೆ. ದೇಶದ ಜನಸಂಖ್ಯೆಗೆ ಲಸಿಕೆ ಪೂರೈಸುವುದು ದೊಡ್ಡ ಸವಾಲಾಗಿತ್ತು. ಸ್ವದೇಶಿಯಾದ ಲಸಿಕೆಯ 104 ಕೋಟಿ ಮೊದಲನೇ ಡೋಸ್ ನ್ನು ಈಗಾಗಲೇ ನೀಡಲಾಗಿದೆ. ಶೇ.67 ರಷ್ಟು 2ನೇ ಡೋಸ್ ನ್ನು ದೇಶದಲ್ಲಿ ನೀಡಲಾಗಿದೆ ಎಂದರು.
ಮನೆಮನೆಗೆ ತೆರಳಿ ಲಸಿಕೆ :
ರಾಜ್ಯದಲ್ಲಿ ಶೇ. 97 ರಷ್ಟು ಮೊದಲನೇ ಡೋಸ್ ಹಾಗೂ ಶೇ. 76 ರಷ್ಟು 2 ನೇ ಡೋಸ್ ನ್ನು ಡಿಸೆಂಬರ್ ಅಂತ್ಯದೊಳಗೆ ನೀಡಲಾಗುವುದು. ಗ್ರಾಮೀಣ ಭಾಗಗಳಲ್ಲಿ ಮನೆಮನೆಗೆ ತೆರಳಿ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರಿನಲ್ಲಿ ಶೇ.90 ರಷ್ಟು ಲಸಿಕೆ ನೀಡಲಾಗಿದ್ದು. ಇನ್ನುಳಿದ ಶೇ.10 ರಷ್ಟು ಜನತೆಗೆ ಮನೆಮನೆಗೆ ತೆರಳಿ ಲಸಿಕೆ ಅಭಿಯಾನ ನಡೆಸಲು ಆಯಾ ಕ್ಷೇತ್ರದ ಶಾಸಕರು, ಅಧಿಕಾರಿಗಳು ಗಮನ ಹರಿಸಬೇಕು. ಈ ರೀತಿ ರಾಜ್ಯದ ಜನತೆಯನ್ನು ಆರೋಗ್ಯದ ಸುರಕ್ಷಾ ಚಕ್ರದೊಳಗೆ ತರಲು ಸಾಧ್ಯ ಎಂದು ತಿಳಿಸಿದರು.
ಆರೋಗ್ಯ ಮೂಲಸೌಕರ್ಯ ವೃದ್ಧಿ :
ಆರೋಗ್ಯಕರ, ಸ್ವಚ್ಛ ಸಮಾಜ, ಮಾರ್ಗಸೂಚಿಗಳ ಪಾಲನೆಯ ಬಗ್ಗೆ ಎಲ್ಲೆಡೆ ಅರಿವು ಮೂಡಿಸಲಾಗುತ್ತಿದೆ. ರಾಜ್ಯದ ಆರೋಗ್ಯ ಮೂಲಸೌಕರ್ಯವನ್ನೂ ಸುಧಾರಿಸಲಾಗುತ್ತಿದೆ. 25000 ಬೆಡ್ , 7000 ಐಸಿಯು ಬೆಡ್, 9000 ಆಕ್ಸಿಜನ್ ಬೆಡ್‍ಗಳ ನಿರ್ಮಾಣ ಮಾಡಲಾಗಿದೆ. ಕೋವಿಡ್ ಚಿಕಿತ್ಸೆಗೆ ಔಷಧಿಗಳ ಪೂರೈಸಲಾಗಿದೆ. ಪ್ರತಿ ಜಿಲ್ಲೆಯಲ್ಲಿ ಹಾಗೂ ಬೆಂಗಳೂರಿನಲ್ಲಿ 100 ಕ್ಕಿಂತ ಹೆಚ್ಚು ಆರ್‍ಟಿಪಿಸಿಆರ್ ಪರೀಕ್ಷಾ ಘಟಕಗಳು ಸ್ಥಾಪಿಸಲಾಗಿದೆ. ಕೋವಿಡ್ ಮೂರನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ಸನ್ನದ್ಧವಾಗಿದೆ. 4000 ವೈದ್ಯರ ನೇಮಕಾತಿಯನ್ನು ಮಾಡಲಾಗಿದೆ. ರಾಜ್ಯದ ಜನ ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ತಿಳಿಸಿದರು.
ಜನರ ಸಂಕಷ್ಟಕ್ಕೆ ಸ್ಪಂದಿಸುವ ಜೀವಂತಿಕೆಯ ಸರ್ಕಾರ :
ಜನರ ಸಂಕಷ್ಟಕ್ಕೆ ಸ್ಪಂದಿಸುವ ರೀತಿಯಲ್ಲಿ ಸರ್ಕಾರದ ಜೀವಂತಿಕೆ ಆಧರಿಸಿದೆ. ಇತ್ತೀಚೆಗಷ್ಟೇ ರಾಜ್ಯಾದ್ಯಂತ ಅಕಾಲಿಕ ಮಳೆಯಿಂದಾಗಿ ವ್ಯಾಪಕವಾಗಿ ಬೆಳೆಹಾನಿ ಉಂಟಾಯಿತು. ಎನ್‍ಡಿಆರ್‍ಎಫ್ ಪರಿಹಾರದೊಂದಿಗೆ ರಾಜ್ಯ ಸರ್ಕಾರ ದುಪ್ಪಟ್ಟು ಬೆಳೆಪರಿಹಾರವನ್ನು ನೀಡುತ್ತಿದೆ ಎಂದರು.
ಬೆಂಗಳೂರಿನ ಯೋಜನಾಬದ್ಧ ಬೆಳವಣಿಗೆ :
ಸರ್ಕಾರ ಬೆಂಗಳೂರಿನ ಅಭಿವೃದ್ಧಿಗೂ ಬದ್ಧರಾಗಿದ್ದು. ನಗರದ ಅಮೂಲಾಗ್ರ ಬದಲಾವಣೆಗೆ ಯೋಜನೆ ರೂಪಿಸಲಾಗುವುದು. ಪ್ರತಿ ವಾರ್ಡಿನ ಅಭಿವೃದ್ಧಿಗೆ ಯೋಜನೆಯನ್ನು ರೂಪಿಸಲಾಗುವುದು.
ಬೆಂಗಳೂರಿನ ಯೋಜನಾಬದ್ಧ ಬೆಳವಣಿಗೆಗೆ ಸಮಗ್ರವಾಗಿ ರೂಪಿಸಿ ನಿಗಧಿತ ಸಮಯದಲ್ಲಿ ಪೂರ್ಣಗೊಳಿಸಲಾಗುವುದು. ರಾಜಾಕಾಲುವೆಗಳ ನಿರ್ಮಾಣಕ್ಕೆ ಡಿಪಿಆರ್ ಸಿದ್ಧಪಡಿಸಲಾಗುತ್ತಿದ್ದು, ಶಾಶ್ವತ ಪರಿಹಾರ ಒದಗಿಸಲಾಗುವುದು. ಅಕ್ರಮ ಕಟ್ಟಡ ನಿರ್ಮಾಣಕ್ಕೆ ತೆರವುಗೊಳಿಸಲು ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.