IMG 20210919 WA0032

ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ಮುಂದಿನ ಅಸೆಂಬ್ಲಿ ಚುನಾವಣೆ….!

POLATICAL STATE


ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ
ಮುಂದಿನ ಅಸೆಂಬ್ಲಿ ಚುನಾವಣೆ-ಅರುಣ್ ಸಿಂಗ್

ಬೆಂಗಳೂರು: ಸರಳ, ಪ್ರಾಮಾಣಿಕ ರೀತಿಯಲ್ಲಿ ಮತ್ತು ಸಮರ್ಥ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದಲ್ಲಿ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ. ಅವರ ನೇತೃತ್ವದಲ್ಲೇ ಪಕ್ಷವು ಮುಂದಿನ ಅಸೆಂಬ್ಲಿ ಚುನಾವಣೆಯನ್ನು ಎದುರಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಕರ್ನಾಟಕದ ಉಸ್ತುವಾರಿಗಳಾದ ಅರುಣ್ ಸಿಂಗ್ ಅವರು ತಿಳಿಸಿದರು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರ ನೀಡಿದರು. ಯಡಿಯೂರಪ್ಪ ಅವರು ಅತ್ಯಂತ ಹಿರಿಯ ನಾಯಕರು. ಅವರು ಪ್ರಧಾನಮಂತ್ರಿಯವರನ್ನು ಭೇಟಿ ಮಾಡಿ ಬೇರೆಯವರಿಗೆ ಅವಕಾಶ ನೀಡುವ ದೃಷ್ಟಿಯಿಂದ ರಾಜೀನಾಮೆ ನೀಡಿದ್ದರು ಎಂದು ಅವರು ಇನ್ನೊಂದು ಪ್ರಶ್ನೆಗೆ ಉತ್ತರ ನೀಡಿದರು.


ಕಾಂಗ್ರೆಸ್ ಒಡೆದ ಮನೆಯಾಗಿದೆ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಜಗಳ ಹೆಚ್ಚಾಗಿದೆ. ಇಬ್ಬರ ಅನುಯಾಯಿಯಗಳು ತಮ್ಮ ಮುಖಂಡನೇ ಮುಖ್ಯಮಂತ್ರಿ ಆಗಬೇಕೆಂದು ಬಯಸುತ್ತಾರೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ಜಗಳ ಹೆಚ್ಚಾಗಲಿದೆ. ಕಾಂಗ್ರೆಸ್ ಪಕ್ಷದ ಕೇಂದ್ರ ನಾಯಕತ್ವ ಸಂಪೂರ್ಣ ವಿಫಲವಾಗಿದೆ. ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ ಅವರು ಸಂಪೂರ್ಣವಾಗಿ ವಿಫಲರಾಗಿದ್ದು, ಅವರಿಂದ ಇಲ್ಲಿನ ನಾಯಕರು ಯಾವುದೇ ರೀತಿಯ ಉತ್ತೇಜನವನ್ನು ನಿರೀಕ್ಷಿಸುವಂತಿಲ್ಲ ಎಂದು ನುಡಿದರು.

ನಮ್ಮ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದಾಗ ಮತ ಪ್ರಮಾಣ ಹೆಚ್ಚುತ್ತಾ ಸಾಗುತ್ತದೆ. ಆದರೆ, ರಾಹುಲ್ ಗಾಂಧಿ ಅವರು ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರೆ ಮತ ಪ್ರಮಾಣ ಕುಸಿಯುತ್ತದೆ. ಕಾಂಗ್ರೆಸ್ ನಾಯಕರು ತಳಮಟ್ಟದಲ್ಲಿಲ್ಲ. ಅವರು ಆರೋಪ ಮಾಡುವುದರಲ್ಲೇ ಇರುತ್ತಾರೆ. ಕಾಂಗ್ರೆಸ್ ಪಕ್ಷವು ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಆಡಳಿತ ನಡೆಸಿದಾಗ ತುಷ್ಟೀಕರಣ ನೀತಿಯನ್ನು ಅನುಸರಿಸುತ್ತಿದ್ದುದನ್ನು ಜನತೆ ಮರೆತಿಲ್ಲ ಎಂದು ತಿಳಿಸಿದರು. ಕಾಂಗ್ರೆಸ್‍ನ ಜಾತಿ- ಜಾತಿ ನಡುವೆ ಒಡೆದು ಆಳುವ ನೀತಿ, ಭ್ರಷ್ಟಾಚಾರದ ನೀತಿಯೂ ಜನರಿಗೆ ಗೊತ್ತಿದೆ ಎಂದರು.
ಬಸವರಾಜ ಬೊಮ್ಮಾಯಿ ಹಾಗೂ ಯಡಿಯೂರಪ್ಪ ಅವರ ಸರಕಾರಗಳ ಸಾಧನೆ ಮತ್ತು ಸಿದ್ದರಾಮಯ್ಯ ಅವರ ಸರಕಾರದ ವೈಫಲ್ಯಗಳನ್ನು ಜನರಿಗೆ ಮನವರಿಕೆ ಮಾಡಲಾಗುವುದು ಎಂದರಲ್ಲದೆ, ಸರಕಾರ ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದೆ. ಮುಖ್ಯಮಂತ್ರಿಗಳು ಪ್ರಾಮಾಣಿಕರಿದ್ದಾರೆ. ಕೆಳಮಟ್ಟದಲ್ಲಿ ಭ್ರಷ್ಟಾಚಾರ ಇದ್ದಲ್ಲಿ ಅದರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಪ್ರಶ್ನೆಗೆ ಉತ್ತರ ನೀಡಿದರು.
ರಾಜ್ಯದಲ್ಲಿ ಮುಂದೆಯೂ ಬಿಜೆಪಿ ಸರಕಾರ ಬರಲಿದೆ. 150ಕ್ಕೂ ಹೆಚ್ಚು ಶಾಸಕರ ಸ್ಥಾನವನ್ನು ನಾವು ಗೆಲ್ಲಲಿದ್ದೇವೆ ಎಂದ ಅವರು, ಮುರುಗೇಶ್ ನಿರಾಣಿ ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥ ಮಾಡಲಾಗಿದೆ ಎಂದು ಸ್ವತಃ ಅವರೇ ಹೇಳಿದ್ದಾರೆ ಎಂದು ಇನ್ನೊಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು.

ರಾಜ್ಯದಲ್ಲಿ ನಡೆದ ವಿಧಾನಸಭಾ ಉಪ ಚುನಾವಣೆಗಳು, ಪಾಲಿಕೆ ಚುನಾವಣೆ, ವಿಧಾನ ಪರಿಷತ್ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಪಕ್ಷ ಪಡೆದಿದೆ. ಬಿಜೆಪಿ ಗ್ರಾಫ್ ಮೇಲೇರುತ್ತಿದೆ. ಕಾಂಗ್ರೆಸ್ ಗ್ರಾಫ್ ಕೆಳಗಿಳಿಯುತ್ತಿದೆ ಎಂದು ವಿಧಾನಪರಿಷತ್ ಚುನಾವಣೆ ಫಲಿತಾಂಶ ಕುರಿತ ಇನ್ನೊಂದು ಪ್ರಶ್ನೆಗೆ ಅವರು ಉತ್ತರಿಸಿದರು..
ರಾಜ್ಯ ಸರಕಾರ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದೆ. ಪಕ್ಷ ಮತ್ತು ರಾಜ್ಯ ಸರಕಾರಗಳು ರಾಜ್ಯದ ಜನತೆಯ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿವೆ. ನಾಳೆ ಪಕ್ಷದ ರಾಜ್ಯ ಪದಾಧಿಕಾರಿಗಳ ಸಭೆ ಮತ್ತು ನಾಡಿದ್ದು ಪಕ್ಷದ ಕಾರ್ಯಕಾರಿಣಿ ಸಭೆಗಳು ನಡೆಯಲಿವೆ. ಈ ಸಭೆಗೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ.ನಡ್ಡಾ ಅವರು ಭಾಗವಹಿಸಬೇಕಿತ್ತು. ಇದೇವೇಳೆ ಅವರು ಪಕ್ಷದ ಮುಖಂಡರನ್ನು ಉದ್ದೇಶಿಸಿ ಭಾಷಣ ಮಾಡುವುದೆಂದು ನಿಗಪಡಿಸಲಾಗಿತ್ತು. ಕೋವಿಡ್ ಆತಂಕದಿಂದ ಹೊಸ ನಿಯಮಾವಳಿ ಜಾರಿಗೊಂಡಿದೆ. ಅದರನ್ವಯ 300ಕ್ಕೂ ಹೆಚ್ಚು ಜನರು ಭಾಗವಹಿಸುವಂತಿಲ್ಲ. ಇದೇ ಕಾರಣದಿಂದ ಜೆ.ಪಿ.ನಡ್ಡಾ ಅವರ ಕಾರ್ಯಕ್ರಮವನ್ನು ಮುಂದೂಡಲಾಗಿದೆ ಎಂದರು. ಪಕ್ಷದ ಕಾರ್ಯಕಾರಿಣಿ ಎಂದಿನಂತೆ ನಡೆಯಲಿದೆ. ಹಲವು ನಿರ್ಣಯಗಳನ್ನು ಅಂಗೀಕರಿಸಲಾಗುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಜೆ.ಪಿ.ನಡ್ಡಾ ಅವರು ಇದಕ್ಕಿಂತ ಹೆಚ್ಚು ದೊಡ್ಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬಿಜೆಪಿ, ಸರಕಾರದ ನಿಯಮಾವಳಿಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರುವ ಕೆಲಸ ಮಾಡುತ್ತಿದೆ. ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಸರಕಾರವು ಕೋವಿಡ್ ನಿಯಂತ್ರಣಕ್ಕೆ ಶ್ರಮಿಸುತ್ತಿದೆ. ಪ್ರಧಾನಮಂತ್ರಿಯವರು 15 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ಕೋವಿಡ್ ಲಸಿಕೆ ನೀಡುವುದಾಗಿ ಪ್ರಕಟಿಸಿರುವುದು ಶ್ಲಾಘನಾರ್ಹ ಎಂದು ತಿಳಿಸಿದರು.