ಸರ್ಕಾರದ ಸೇವೆ ಜನರ ಮನೆ ಬಾಗಿಲಿಗೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಜನವರಿ 07 :
ಸರ್ಕಾರದ ಸೇವೆ ಜನರ ಮನೆ ಬಾಗಿಲಿಗೆ ಮುಟ್ಟಿದಾಗ ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಕೆಎಎಸ್ ಅಧಿಕಾರಿಗಳ ಸಂಘದ ಹೊಸ ಕೊಠಡಿಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ಹಾಗೂ 2022ರ ದಿನಚರಿ ಮತ್ತು ಕ್ಯಾಲೆಂಡರ್ ನ್ನು ಬಿಡುಗಡೆ ಮಾಡಿ ಮಾತನಾಡಿದರು.
ಕರ್ನಾಟಕವನ್ನು ದೇಶದ ನಂ.1 ರಾಜ್ಯವನ್ನಾಗಿಸಲು ಸರ್ವಪ್ರಯತ್ನಗಳನ್ನು ಮಾಡುವ ಕರೆ ನೀಡಿದರು. ಕೋವಿಡ್ ಒಡ್ಡಿರುವ ಸವಾಲುಗಳನ್ನು ಮೆಟ್ಟಿನಿಂತು ಸರ್ಕಾರದ ಕಾರ್ಯಕ್ರಮಗಳು ಜನರಿಗೆ ತಲುಪುವಂತಾಗಬೇಕು. ಗ್ರಾಮ ಮಟ್ಟದಲ್ಲಿ ಸರ್ಕಾರದ ಸವಲತ್ತುಗಳನ್ನು ಜನರಿಗೆ ತಲುಪಿಸುವ ಗ್ರಾಮ ಒನ್ ಹಾಗೂ ಜನಸೇವಕ ಕಾರ್ಯಕ್ರಮಗಳನ್ನು ಜನವರಿ 26 ರಂದು ಚಾಲನೆ ನೀಡಲಾಗುವುದು. ಈ ಕಾರ್ಯಕ್ರಮಗಳನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು. ಸರ್ಕಾರದ ಸೇವೆ ಜನರ ಮನೆ ಬಾಗಿಲಿಗೆ ಮುಟ್ಟಿದಾಗ ಸರ್ಕಾರದ ಬಗ್ಗೆ ಜನರಲ್ಲಿ ವಿಶ್ವಾಸ ಮೂಡುತ್ತದೆ ಎಂದು ತಿಳಿಸಿದರು.
ಮೈಸೂರಿನ ರಾಜವಂಶಸ್ಥರು ವ್ಯವಸ್ಥಿತ ಆಡಳಿತ ನೀಡಬೇಕೆಂಬ ಉದ್ದೇಶದಿಂದ ಪ್ರಗತಿಪರ ಚಿಂತನೆಯಿಂದ , ನಾಡನ್ನು ಅಭಿವೃದ್ಧಿ ಪಥದೆದೆ ಒಯ್ಯುವಂತಹ ಕೆಲಸಗಳನ್ನು ಮೈಸೂರು ಆಡಳಿತ ಸೇವೆಯ ಮೂಲಕ ಮಾಡಿದ್ದಾರೆ. ಮಹಿಳೆಯರಿಗೆ ಶಿಕ್ಷಣ, ನೀರಾವರಿ, ಬ್ಯಾಂಕ್ ಸ್ಥಾಪನೆ, ಕಾರ್ಖಾನೆಗಳು, ವಿದ್ಯುಚ್ಛಕ್ತಿ ಉತ್ಪಾದನಾ ಕಾರ್ಯಗಳನ್ನು ಪ್ರಾರಂಭಿಸಿ, ಇವುಗಳ ನಿರ್ವಹಣೆಗಾಗಿ ಈ ಸೇವೆ ಪ್ರಾರಂಭಿಸಲಾಯಿತು. ಹಳೆಯ ಕರ್ನಾಟಕ ಹಾಗೂ ನವ ಕರ್ನಾಟಕದ ಅಭಿವೃದ್ಧಿಯಲ್ಲಿ ಕರ್ನಾಟಕ ಆಡಳಿತ ಸೇವೆ ಮಹತ್ವದ ಪಾತ್ರ ವಹಿಸಿದೆ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಶ್ರೀಕಂಠಯ್ಯ, ಸಿದ್ಧಯ್ಯ ಪುರಾಣಿಕ್ ರಂತಹ ಸಾಹಿತ್ಯ ಕ್ಷೇತ್ರದ ದಿಗ್ಗಜರು ಕರ್ನಾಟಕ ಆಡಳಿತ ಸೇವೆಗೆ ಸೇರಿದವರು. ಈ ಸೇವೆಯಲ್ಲಿ ಪರಿಣತಿ, ಪ್ರತಿಭೆ ಹಾಗೂ ವ್ಯಕ್ತಿತ್ವ ವಿಕಸನದ ಸಾಧನೆಗೆ ಈ ಸೇವೆ ಸಹಕಾರ ನೀಡಿದೆ. ಯಾವುದೇ ಇಲಾಖೆಗಳಲ್ಲಿ ಸೇವೆ ಮಾಡಿದರೂ ತಮ್ಮದೇ ಆದ ಹೆಜ್ಜೆಗುರುತುಗಳನ್ನು ಮೂಡಿಸಲು ಮುಖ್ಯಮಂತ್ರಿಗಳು ತಿಳಿಸಿದರು.
ರಾಜ್ಯದ ಜನರ ಹಿತದೃಷ್ಟಿಯಿಂದ ಒಳ್ಳೆಯ ಆಡಳಿತ ನೀಡುವ ಜನೋಪಯೋಗಿ ಆಡಳಿತ ವ್ಯವಸ್ಥೆ, ತಳಸ್ತರದಲ್ಲಿರುವವರಿಗೆ ನ್ಯಾಯ ಒದಗಿಸುವ , ದೀನದಲಿರಿಗೆ ಸರ್ಕಾರದ ಕಾರ್ಯಕ್ರಮಗಳು ತಲುಪುವ ದಿಸೆಯಲ್ಲಿ ಕೆಎಎಸ್ ಅಧಿಕಾರಿಗಳ ಸೇವೆ ಸಲ್ಲಿಸಬೇಕು. ಕೆಳಸ್ತರದ ಅಧಿಕಾರಿಗಳು ದೊಡ್ಡ ಮಟ್ಟದ ಬದಲಾವಣೆ ತರಬಲ್ಲರು. ಕರ್ನಾಟಕವನ್ನು ಅಭಿವೃದ್ಧಿಗೊಳಿಸುವಲ್ಲಿ ಕೆಎಎಸ್ ಅಧಿಕಾರಿಗಳು ಮಹತ್ವದ ಪಾತ್ರ ವಹಿಸುತ್ತಾರೆ. ಕೆಎಎಸ್ ಅಧಿಕಾರಿಗಳ ನೇಮಕಾತಿ,ಮುಂಬಡ್ತಿ. ನಿವೃತ್ತಿ ನಂತರದ ಸವಲತ್ತುಗಳೂ ಸೇರಿದಂತೆ ಇನ್ನಿತರ ಬೇಡಿಕೆಗೆ ಸರ್ಕಾರ ಸ್ಪಂದಿಸುತ್ತದೆ ಎಂದು ತಿಳಿಸಿದರು.
ಆರೋಗ್ಯ ಸಚಿವ ಡಾ: ಕೆ.ಸುಧಾಕರ್, ಇಂಧನ ಸಚಿವ ಸುನೀಲ್ ಕುಮಾರ್, ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಮುಖ್ಯ ಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್, ಕೆ.ಎ. ಎಸ್.ಅಧಿಕಾರಿಗಳ ಸಂಘದ ಅಧ್ಯಕ್ಷ ಎಲೀಸ್ ಆಂಡ್ರೂಸ್ ಮೊದಲಾದವರು ಉಪಸ್ಥಿತರಿದ್ದರು