IMG 20220108 WA0003

₹4,236 ಕೋಟಿ ಮೊತ್ತದ 87 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ…!

BUSINESS

₹4,236 ಕೋಟಿ ಮೊತ್ತದ 87 ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ನೀಡಿದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ

  • 128ನೇ ರಾಜ್ಯ ಮಟ್ಟದ ಏಕ ಗವಾಕ್ಷಿ ತೆರವು ಸಮಿತಿಯಲ್ಲಿ ನಿರ್ಧಾರ.
  • ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್.ನಿರಾಣಿ ನೇತೃತ್ವದಲ್ಲಿ ನಡೆದ ಸಭೆ.
  • ರಾಜ್ಯದಲ್ಲಿ 12,251 ಉದ್ಯೋಗ ಸೃಜನೆ
  • ₹50 ಕೋಟಿ ಮೊತ್ತದ 13 ಯೋಜನೆಗಳಿಗೆ ಅಸ್ತು
    *₹50 ಕೋಟಿ ರೂ.ಗಿಂತ ಕಡಿಮೆ ಮೊತ್ತದ 74 ಹೊಸ ಯೋಜನೆಗಳಿಗೆ ಹಸಿರು ನಿಶಾನೆ
  • ಕೈಗಾರಿಕೆಗಳ ಪುನಶ್ಚೇತನ ಮತ್ತು ಬಂಡವಾಳ ಹೂಡಿಕೆಗೆ ಉತ್ತೇಜನ

ಬೆಂಗಳೂರು,ಜ.7- ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಮತ್ತಷ್ಟು ಉತ್ತೇಜನ ನೀಡಲು ಮುಂದಾಗಿರುವ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯು,₹4.236.26 ಕೋಟಿ ಮೊತ್ತದ 87 ಯೋಜನೆಗಳಿಗೆ ಅನುಮೋದನೆ ನೀಡಿದೆ.

ಇದರಿಂದ ರಾಜ್ಯದಲ್ಲಿ ಸುಮಾರು 12,251ಕ್ಕೂ ಹೆಚ್ಚಿನ ಉದ್ಯೋಗಗಳು ಸೃಜನೆಯಾಗುವ ನಿರೀಕ್ಷೆ ಇದೆ.

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್ ನಿರಾಣಿ ಅವರ ಅಧ್ಯಕ್ಷತೆಯಲ್ಲಿ ಗುರುವಾರ ಸಂಜೆ ನಡೆದ 128ನೇ ರಾಜ್ಯ ಮಟ್ಟದ ಏಕಗವಾಕ್ಷಿ ತೆರವು ಸಮಿತಿ (ಎಸ್‍ಎಲ್‍ಡಬ್ಲ್ಯೂಸಿಸಿ) ಸಭೆಯಲ್ಲಿ ಈ ಮಹತ್ವದ ತೀರ್ಮಾನ ತೆಗೆದುಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಸಮಿತಿಯು ₹50 ಕೋಟಿಗೂ ಹೆಚ್ಚು ಹೂಡಿಕೆಯ 13 ಪ್ರಮುಖ ಬೃಹತ್ ಮತ್ತು ಮಧ್ಯಮ ಗಾತ್ರದ ಕೈಗಾರಿಕಾ ಯೋಜನೆಗಳಿಗೆ ಅನುಮೋದನೆ ಕೊಟ್ಟಿದೆ.

₹2,986.80 ಕೋಟಿ ಮೌಲ್ಯದ ಈ ಯೋಜನೆಗಳಿಗೂ ರಾಜ್ಯದಲ್ಲಿ 4660 ಜನರಿಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ ಎಂದು ಅಂದಾಜಿಸಲಾಗಿದೆ.

ಅಲ್ಲದೆ ಸಮಿತಿಯು ಸಭೆಯಲ್ಲಿ₹15 ಕೋಟಿ ಗಿಂತ ಹೆಚ್ಚಿನ ಹಾಗೂ ₹50 ಕೋಟಿ ರೂ.ಗಿಂತ ಕಡಿಮೆ ಹೂಡಿಕೆಯ 74 ಹೊಸ ಯೋಜನೆಗಳಿಗೆ ಅನುಮತಿ ನೀಡಲಾಗಿದೆ.

₹1249.46 ಕೋಟಿ ಮೌಲ್ಯದ ಈ ಯೋಜನೆಗಳು ರಾಜ್ಯದಲ್ಲಿ 7591 ಜನರಿಗೆ ಉದ್ಯೋಗಗಳನ್ನು ಸೃಷ್ಟಿಸುತ್ತವೆ. ಒಟ್ಟು ₹4,236.26 ಕೋಟಿ ರೂ.ಗಳ ಹೂಡಿಕೆಗೆ 12,251 ಜನರಿಗೆ ಉದ್ಯೋಗಾವಕಾಶ ಕಲ್ಪಿಸಲಾಗಿದೆ.

ಅನುಮೋದಿಸಲಾದ ಹೊಸ ಹೂಡಿಕೆಗಳಲ್ಲಿ ಟೆಕ್ರೆನ್ ಬ್ಯಾಟರಿಸ್ ಪ್ರೈವೇಟ್ ಲಿಮಿಟೆಡ್ ₹480 ಕೋಟಿ, ಉದ್ಯೋಗ – 200; ನಿಯೋಟ್ರೆಕ್ಸ್ ಸ್ಟೀಲ್ ಪ್ರೈವೇಟ್ ಲಿಮಿಟೆಡ್‍ನಿಂದ 150 ವ್ಯಕ್ತಿಗಳಿಗೆ ಉದ್ಯೋಗಾವಕಾಶದೊಂದಿಗೆ ₹340 ಕೋಟಿ; 270 ಉದ್ಯೋಗಗಳೊಂದಿಗೆ ಸೀಮೆನ್ಸ್ ಹೆಲ್ತ್‍ಕೇರ್ ಪ್ರೈವೇಟ್ ಲಿಮಿಟೆಡ್‍ನಿಂದ ₹313.20 ಕೋಟಿ ಹೂಡಿಕೆ ಮಾಡಿದೆ.

ಸುಪ್ರೀಮ್ ಶುಗರ್ಸ್ ಪ್ರೈವೇಟ್ ಲಿಮಿಟೆಡ್‍ನಿಂದ ₹306.82 ಕೋಟಿ ಯೋಜನೆಯು 315 ವ್ಯಕ್ತಿಗಳಿಗೆ ಅಂದಾಜು ಉದ್ಯೋಗ ಸೃಷ್ಟಿ; 1000 ಜನರಿಗೆ ಉದ್ಯೋಗ ಸೃಷ್ಟಿಯೊಂದಿಗೆ ಪವನ್ ಶಕ್ತಿ ಪೇಪರ್ಸ್ ಪ್ರೈವೇಟ್ ಲಿಮಿಟೆಡ್‍ನಿಂದ ₹276 ಕೋಟಿ ಯೋಜನೆ ಇದಾಗಿದೆ.

ತಾಂಟಿಯಾ ಪೇಪರ್ಸ್ ಪ್ರೈವೇಟ್ ಲಿಮಿಟೆಡ್‍ನಿಂದ ₹276 ಕೋಟಿ ಹೂಡಿಕೆ, ಉದ್ಯೋಗ – 1000 ಮತ್ತು ₹210 ಕೋಟಿ ಹೂಡಿಕೆ ಪುಡ್ ಸೊಲ್ಯೂಷನ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‍ನಿಂದ 310 ಉದ್ಯೋಗಗಳನ್ನು ಸೃಷ್ಟಿಸುವ ನಿರೀಕ್ಷೆಯಿದೆ.

ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಕೈಗಾರಿಕೆ ಮತ್ತು ವಾಣಿಜ್ಯ) ಇವಿ ರಮಣ ರೆಡ್ಡಿ, ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಮತ್ತು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಗುಂಜನ್ ಕೃಷ್ಣ, ಕೆಐಎಡಿಬಿ ಸಿಇಒ ಎನ್ ಶಿವಶಂಕರ, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜ್ ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.

EoM