ಕಳಪೆ ಗುಣಮಟ್ಟದ ಬಿತ್ತನೆ ಬೀಜಗಳ ಬಗ್ಗೆ ಸಿ.ಎಂ ಗಮನಹರಿಸಬೇಕು: ಮಾಜಿ ಸಚಿವ ಬಂಡೆಪ್ಪ ಖಾಶಂಪೂರ್
ಬೀದರ್ (ಜೂ.29): ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಬೀದರ್ ಜಿಲ್ಲೆಯಲ್ಲಿ ಕಳಪೆ ಗುಣಮಟ್ಟದ ಸೋಯಾಬೀನ್ ಬಿತ್ತನೆ ಬೀಜಗಳನ್ನು ಕೃಷಿ ಇಲಾಖೆಯಿಂದ ವಿತರಿಸಲಾಗಿದ್ದು, ಮುಖ್ಯಮಂತ್ರಿಗಳು ಈ ಬಗ್ಗೆ ಗಮನಹರಿಸಬೇಕೆಂದು ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಮಾಜಿ ಸಚಿವರಾಗಿರುವ ಬಂಡೆಪ್ಪ ಖಾಶಂಪೂರ್ ಆಗ್ರಹಿಸಿದ್ದಾರೆ.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಕಮಠಾಣಾದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೀದರ್ ಜಿಲ್ಲೆಯ ರೈತರು ಸಾವಿರಾರು ರೂಪಾಯಿಗಳನ್ನು ಖರ್ಚು ಮಾಡಿ ಜಮೀನುಗಳನ್ನು ಬಿತ್ತನೆಗೆ ಸಿದ್ದಗೊಳಿಸಿ, ನಂತರ ಕೃಷಿ ಇಲಾಖೆಯಿಂದ ನೀಡಿರುವ ಸೋಯಾಬೀನ್ ಬೀಜಗಳನ್ನು ಖರೀದಿಸಿ ಬಿತ್ತನೆ ಮಾಡಿದ್ದಾರೆ. ಆದರೆ ಬೀಜಗಳು ಮೊಳಕೆಯೇ ಬಂದಿಲ್ಲ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಮುಖ್ಯಮಂತ್ರಿಗಳು ಈ ಬಗ್ಗೆ ಹೆಚ್ಚಿನ ಗಮನವಹಿಸಿ ಸೋಯಾಬೀನ್ ಬಿತ್ತನೆ ಮಾಡಿ ಸಂಕಷ್ಟಕ್ಕೆ ಸಿಲುಕಿದ ರೈತರ ಜಮೀನುಗಳನ್ನು ಸರ್ವೇ ನಡೆಸಿ ಪರಿಹಾರ ನೀಡಬೇಕು. ಅಲ್ಲದೇ ಕೂಡಲೇ ಪರ್ಯಾಯವಾಗಿ ಉದ್ದು, ಹೆಸರು ಬೀಜಗಳನ್ನು ಕೃಷಿ ಇಲಾಖೆಯಿಂದ ವಿತರಿಸಿ ಬಿತ್ತನೆಗೆ ಅನುಕೂಲ ಮಾಡಿಕೊಡಬೇಕು ಎಂದು ಬಂಡೆಪ್ಪ ಖಾಶಂಪೂರ್ ಒತ್ತಾಯಿಸಿದ್ದಾರೆ.