IMG 20220113 WA0024

BJP: ಸಿ.ಎಂ. ಕುರ್ಚಿಯ ಸ್ಪರ್ಧೆಗಾಗಿ ಕಾಂಗ್ರೆಸ್ ಪಾದಯಾತ್ರೆ

POLATICAL STATE


ಸಿ.ಎಂ. ಕುರ್ಚಿಯ ಸ್ಪರ್ಧೆಗಾಗಿ ಕಾಂಗ್ರೆಸ್ ಪಾದಯಾತ್ರೆ

ಬೆಂಗಳೂರು: ಮುಖ್ಯಮಂತ್ರಿ ಕುರ್ಚಿಯ ಸ್ಪರ್ಧೆಯಲ್ಲಿ ನಾ ಮುಂದೆ ತಾ ಮುಂದೆ ಎಂದು ಸ್ಪರ್ಧೆಗೆ ಇಳಿವಂತೆ ಕಾಂಗ್ರೆಸ್‍ನವರು ಭಂಡತನದ ಪಾದಯಾತ್ರೆ ಮಾಡುತ್ತಿದ್ದಾರೆ. ಕಾಂಗ್ರೆಸ್‍ನವರಿಗೆ ಸಾಮಾನ್ಯ ಜ್ಞಾನದ ಗುಲಗಂಜಿಯೂ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಮತ್ತು ವಿಧಾನಪರಿಷತ್ ಸದಸ್ಯರಾದ ಎನ್ ರವಿಕುಮಾರ್ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಹೆಚ್ಚಳದ ನಡುವೆ ಪಾದಯಾತ್ರೆ ಬೇಡ ಎಂದು ಹೈಕೋರ್ಟ್ ಹೇಳಿದ ವಿಷಯವನ್ನು ಸರಕಾರ ಮೊದಲೇ ತಿಳಿಸಿತ್ತು ಎಂದು ನೆನಪಿಸಿದರು. ಮುಖ್ಯಮಂತ್ರಿಗಳ ಮನವಿ, ಸಚಿವರ ಮನವಿ, ಜನರ ಅಭಿಪ್ರಾಯವನ್ನು ಧಿಕ್ಕರಿಸಿ ಪತ್ರಿಕಾ ಸಂಪಾದಕೀಯದ ಸಲಹೆಯನ್ನೂ ಬದಿಗೊತ್ತಿ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯರವರು ಮೇಕೆದಾಟು ಸಂಬಂಧ ಪಾದಯಾತ್ರೆ ಆರಂಭಿಸಿದರು ಎಂದು ಟೀಕಿಸಿದರು.
ಕೋವಿಡ್ ತೀವ್ರ ಹೆಚ್ಚಳ ಆಗುತ್ತಿರುವಾಗ ಈ ಪಾದಯಾತ್ರೆ ಬೇಕಿತ್ತೇ? ಎಂದು ಕಾಂಗ್ರೆಸ್ಸಿಗರನ್ನು ಕೇಳಿರುವ ಹೈಕೋರ್ಟ್ ಪಾದಯಾತ್ರೆ ನಿಲ್ಲಿಸಿ ಎಂದು ಕಾಂಗ್ರೆಸ್‍ಗೆ ಸೂಚಿಸಿದೆ. ಅದೇರೀತಿ ಪಾದಯಾತ್ರೆ ನಿಲ್ಲಿಸಬಾರದೇ ಎಂದು ರಾಜ್ಯ ಸರಕಾರವನ್ನೂ ಪ್ರಶ್ನಿಸಿದೆ ಎಂದರು. ಮಾನವೀಯತೆಯ ಲವಲೇಶವಿಲ್ಲದೆ ಈ ಪಾದಯಾತ್ರೆ ಮಾಡಲಾಗುತ್ತಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಶಾಸಕಿ ಮಲ್ಲಾಜಮ್ಮ, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್, ಮಂಜುಳಾ ಮಾನಸ, ವಿಧಾನಪರಿಷತ್ ಹಿರಿಯ ಸದಸ್ಯ ಸಿ.ಎಂ.ಇಬ್ರಾಹಿಂ, ಮಾಜಿ ಸಿಎಂ ವೀರಪ್ಪ ಮೊಯಿಲಿ, ಮಾಜಿ ಸಚಿವ ರೇವಣ್ಣ ಅವರಿಗೆ ಈಗಾಗಲೇ ಕೋವಿಡ್ ಬಂದಿದೆ. ಇದರಲ್ಲಿ ಪಾಲ್ಗೊಂಡ ಬಹಳಷ್ಟು ಜನರಿಗೆ ಕೋವಿಡ್ ಬಂದಿದೆ ಎಂದು ನುಡಿದರು.
ನಿನ್ನೆ ರಾಮನಗರದಲ್ಲಿ ಪರೀಕ್ಷೆ ಮಾಡಿದ 100 ಜನರ ಪೈಕಿ 30 ಜನರಿಗೆ ಕೋವಿಡ್ ಇದೆ. ಇದು ಇನ್ನೂ ಹೆಚ್ಚಾಗುತ್ತಿದೆ. ಕಾಂಗ್ರೆಸ್‍ನದು ಪಾದಯಾತ್ರೆಯಲ್ಲ; ಕೋವಿಡ್ ಹೆಚ್ಚಳದ ಜಾತ್ರೆ ಎಂದು ಆರೋಪಿಸಿದರು. ಪಾದಯಾತ್ರೆ ವಿಚಾರ ಹೈಕಮಾಂಡ್‍ಗೆ ಗೊತ್ತಿತ್ತು. ಆದರೆ, ಉಸ್ತುವಾರಿ ಸುರ್ಜೇವಾಲಾ ಅವರು ಪರಿಸ್ಥಿತಿ ಕೈಮೀರಿದರೆ ಪಾದಯಾತ್ರೆ ನಿಲ್ಲಿಸಿ ಎಂದು ಇವತ್ತು ಸೂಚನೆ ಕೊಡುತ್ತಿದ್ದಾರೆ. ಇನ್ನೂ ಎಷ್ಟು ಕೈಮೀರಬೇಕು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ ಕೋವಿಡ್ ಪ್ರಮಾಣ ಹೆಚ್ಚಳದಲ್ಲಿ ಕಾಂಗ್ರೆಸ್ ಮತ್ತು ಆ ಪಕ್ಷದ ಹೈಕಮಾಂಡ್ ಪಾತ್ರ ದೊಡ್ಡದಾಗಿದೆ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ರನ್ನು ಸಿಎಂ ಮಾಡಲು ಮತ್ತು ಅವರ ಬೇಳೆ ಬೇಯಿಸಲು ಹೈಕಮಾಂಡ್ ಕೂಡ ಕೋವಿಡ್ ಹೆಚ್ಚಿಸಲು ಸಹಾಯ ಮಾಡುತ್ತಿದೆ. ಪಾದಯಾತ್ರೆ ಮುಂದೂಡಿಕೆಗೆ ಹೈಕಮಾಂಡ್ ಯಾಕೆ ಮುಂದಾಗಲಿಲ್ಲ ಎಂದು ಕೇಳಿದರು. ಡಿ.ಕೆ.ಶಿವಕುಮಾರ್ ಒಬ್ಬರಿಗೇ ಪಾದಯಾತ್ರೆಯ ಲಾಭ ಸಿಗಬಾರದೆಂದು ಸಿದ್ದರಾಮಯ್ಯರು ತಮಗೆ ಅನಾರೋಗ್ಯವಿದ್ದರೂ ಕಷ್ಟಪಟ್ಟು ಪಾದಯಾತ್ರೆಯಲ್ಲಿ ಭಾಗವಹಿಸಿದ್ದಾರೆ ಎಂದು ವಿವರಿಸಿದರು.
ರಾಜ್ಯ ಸರಕಾರ ನೂರಾರು ಜನರ ವಿರುದ್ಧ ಪ್ರಕರಣ ದಾಖಲಿಸಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಶಾಸಕರೇ ನಿಯಮಗಳನ್ನು ಉಲ್ಲಂಘಿಸಿದ್ದು ಸರಿಯೇ? ಎಂದು ಕೇಳಿದರು. ಮೇಕೆದಾಟು ವಿಳಂಬಕ್ಕೆ ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೇ ಕಾರಣ. 2013ರಿಂದ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಯಾವುದೇ ತಡೆಯಾಜ್ಞೆ ಇರಲಿಲ್ಲ. ಇದರ ಬಗ್ಗೆ ಕಾಂಗ್ರೆಸ್ ವಲಯದಲ್ಲೇ ಚರ್ಚೆ ನಡೆದಿದೆ. ಶಿವಕುಮಾರ್ ಮತ್ತು ಎಂ.ಬಿ.ಪಾಟೀಲರಿಗೆ ಮಂಪರು ಪರೀಕ್ಷೆ ಮಾಡಲಿ ಎಂದು ಆಗ್ರಹಿಸಿದರು.
5,912 ಕೋಟಿಗೆ ಡಿಪಿಆರ್ ಮಾಡಿ ಟೆಂಡರ್ ಕರೆಯುವಾಗ 9 ಸಾವಿರ ಕೋಟಿಗೆ ಏರಿಸಲಾಯಿತು. ಕಮಿಷನ್ ಹಂಚಿಕೆ ವಿಚಾರದಲ್ಲಿ ಒಪ್ಪಂದ ಆಗದುದೇ ಯೋಜನೆ ವಿಳಂಬಕ್ಕೆ ಕಾರಣ ಎಂದರು. ಹಿರಿಯ ದಲಿತ ನಾಯಕ ಗೋವಿಂದ ಕಾರಜೋಳರನ್ನು ಮೂರ್ಖ ಎಂದು ಕರೆದ ಎಂ.ಬಿ.ಪಾಟೀಲರು ಕೂಡಲೇ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು. ಪಾದಯಾತ್ರೆಯನ್ನು ಕಾಂಗ್ರೆಸ್‍ನವರು ನಿಲ್ಲಿಸದೆ ಇದ್ದರೆ ಸರಕಾರವು ಅದನ್ನು ನಿಲ್ಲಿಸಬೇಕೆಂದು ಮನವಿ ಮಾಡಿದರು.
ರಾಜ್ಯ ವಕ್ತಾರರು ಹಾಗೂ ವಿಧಾನಪರಿಷತ್ ಸದಸ್ಯರಾದ ಡಾ|| ತೇಜಸ್ವಿನಿ ಗೌಡ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ಮೇಕೆದಾಟು ವಿಚಾರದಲ್ಲಿ ಸಲಹೆಗಳನ್ನು ಸರ್ವಪಕ್ಷ ಸಭೆಯಲ್ಲಿ ತಿಳಿಸಬೇಕಿತ್ತು. ಇವರು ಪರಮ ಸ್ವಾರ್ಥಕ್ಕಾಗಿ ಮತ್ತು ರಾಜಕೀಯ ಲಾಭಕ್ಕಾಗಿ ಈ ಪಾದಯಾತ್ರೆ ಮಾಡಿದ್ದಾರೆ ಎಂದು ಟೀಕಿಸಿದರು. ಮೊದಲು ಕೋವಿಡ್ ಲಸಿಕೆ ಹಾಕಿಸಿಕೊಳ್ಳದಿರಿ ಎಂದರು. ಈಗ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಸೇರಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಕೋವಿಡ್ ತಗುಲಿದಂತೆ ಕಾಣುತ್ತದೆ ಎಂದರು.
ಹಿಂದೆ ಸರಕಾರ ನಡೆಸಿದ ಖರ್ಗೆ, ಎಚ್.ಕೆ.ಪಾಟೀಲ ಅವರಂಥ ಹಿರಿಯ ನಾಯಕರು ಕಾನೂನು ಉಲ್ಲಂಘಿಸಿದ್ದಾರೆ. ಈ ಪಾದಯಾತ್ರೆ ನಿಗ್ರಹ ನಮ್ಮ ಸರಕಾರಕ್ಕೆ ದೊಡ್ಡ ಸವಾಲೇನೂ ಅಲ್ಲ. ಪ್ರತಿಪಕ್ಷ ನಾಯಕರಿಗೂ ಬೋಧನೆ ಮಾಡಬೇಕಾದ ಸ್ಥಿತಿ ಬಂದರೆ ಹೇಗೆ? ಎಂದು ಕೇಳಿದರು.
ಹೈಕಮಾಂಡ್‍ಗೆ ಎಲ್ಲವೂ ಗೊತ್ತಿದೆ. ಯಾತಕ್ಕಾಗಿ ವೈದ್ಯರು, ನರ್ಸ್‍ಗಳು, ವೈದ್ಯಕೀಯ ಸಿಬ್ಬಂದಿ, ಲಸಿಕೆಗಾಗಿ ಸರಕಾರ ಹಣ ಖರ್ಚು ಮಾಡಬೇಕು? ಹೋಟೆಲ್‍ಗಳನ್ನು ಪಡೆದು ಆಸ್ಪತ್ರೆಯನ್ನಾಗಿ ಯಾಕೆ ಪರಿವರ್ತಿಸಬೇಕಿತ್ತು? ಇಷ್ಟು ಸಮರ್ಥವಾಗಿ ಪ್ರಧಾನಿಯವರು ಕೋವಿಡ್ ನಿಭಾಯಿಸುವ ವೇಳೆ ಕಾಂಗ್ರೆಸ್ ಪಕ್ಷವು ಪರಮ ಬೇಜವಾಬ್ದಾರಿಯಿಂದ ವರ್ತಿಸಿದೆ. ಜೀವ ತೆಗೆಯುವ ಹಕ್ಕು ನಮ್ಮದೆಂದು ಕಾಂಗ್ರೆಸ್ಸಿಗರು ವರ್ತಿಸಿದ್ದನ್ನು ಜನರು ಗಮನಿಸಿ ಪಾಠ ಕಲಿಸಲಿದ್ದಾರೆ ಎಂದರು.
ಕೋವಿಡ್ ನಿಗ್ರಹದ ಜವಾಬ್ದಾರಿ ಜಿಲ್ಲಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿ ಮೇಲಿದೆ. ಅವನ್ಯಾರು ಡಿಸಿ, ಎಡಿಸಿ, ಎಸ್ಪಿ ಎಂದು ಪ್ರಶ್ನಿಸುವ ಮನೋಭಾವ ಸಲ್ಲದು ಎಂದರು. ಇದು ರಾಜಪ್ರಭುತ್ವ ಅಲ್ಲ; ಇದು ಪ್ರಜಾಪ್ರಭುತ್ವ ವ್ಯವಸ್ಥೆ ಎಂದು ನೆನಪಿಸಿದರು. ಕೋವಿಡ್ ಜಾತ್ರೆಯನ್ನು ನಿಲ್ಲಿಸಿ ಎಂದು ಆಗ್ರಹಿಸಿದರು.
ಗೃಹ ಸಚಿವರನ್ನು ಮಲ್ಲ ಯುದ್ಧ, ಜಟ್ಟಿ ಯುದ್ಧಕ್ಕಾಗಿ ಮಾಡಿಲ್ಲ. ಅವರು ಕಾನೂನು ಪರಿಪಾಲಿಸುವವರು ಎಂದು ವಿವರಿಸಿದರು. ಪಾದಯಾತ್ರೆ ಕೋವಿಡ್‍ನ ಸೂಪರ್ ಸ್ಪ್ರೆಡರ್ ಆಗಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು.