ಆನೇಕಲ್ ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ: ಮೂವರು ಆರೋಪಿಗಳ ಬಂಧನ
ಆಂಧ್ರಪ್ರದೇಶ ಮೂಲದ ರಾಜಶೇಖರ ರೆಡ್ಡಿ ಎಂಬ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಆರು ಮಂದಿ ಸೇರಿ ಕೊಲೆ ಮಾಡಿದ್ದರು. ಇವರಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದು, ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಆನೇಕಲ್: ಕಳೆದ ಎರಡು ವಾರದ ಹಿಂದೆ ಆನೇಕಲ್ ಪಟ್ಟಣದ ಕೇಂದ್ರ ಸಚಿವ ಎ.ನಾರಾಯಣ ಸ್ವಾಮಿ ಮನೆ ಮುಂದಿನ ಮುಖ್ಯ ರಸ್ತೆಯಲ್ಲಿ ಕಾರು ಅಡ್ಡಗಟ್ಟಿ ಬರ್ಬರವಾಗಿ ರಿಯಲ್ ಎಸ್ಟೇಟ್ ಉದ್ಯಮಿಯನ್ನು ಕೊಲೆ ಮಾಡಲಾಗಿತ್ತು.
ಆಂಧ್ರಪ್ರದೇಶ ಮೂಲದ ರಾಜಶೇಖರ ರೆಡ್ಡಿ (32) ಕೊಲೆಯಾದ ವ್ಯಕ್ತಿ. ಚಂದಾಪುರ ಬಳಿಯ ಬನಹಳ್ಳಿಯ ಶ್ರೀನಿವಾಸ್(24) ಶೆಟ್ಟಿಹಳ್ಳಿ ಗ್ರಾಮದ ಕಾರ್ತಿಕ್ (21) ಮತ್ತು ಆನೇಕಲ್ ಪಟ್ಟಣದ ಪಂಪ್ ಹೌಸ್ ವಾಸಿ ಗಣೇಶ್(22) ಎಂಬವರನ್ನು ಪ್ರಕರಣದಲ್ಲಿ ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಉದ್ಯಮಿ ಕೊಲೆಗೆ ಒಂದು ಕೋಟಿ ಇಪ್ಪತ್ತು ಲಕ್ಷದವರೆಗೆ ಸುಪಾರಿ ನೀಡಲಾಗಿತ್ತು. ಪ್ರಖ್ಯಾತ ವ್ಯಕ್ತಿಯೊಬ್ಬರು ಜಮೀನಿಗೆ ಸಂಬಂಧಿಸಿದಂತೆ ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಮೂಲಗಳಿಂದ ಮೇಲ್ನೋಟಕ್ಕೆ ತಿಳಿದುಬಂದಿದೆ.
ಮಾರುತಿ ಸ್ವಿಫ್ಟ್ ಕಾರಿನಲ್ಲಿ ಚಂದಾಪುರ ಮುಖ್ಯರಸ್ತೆಯ ಮೂಲಕ ತೆರಳುತ್ತಿದ್ದಾಗ ಎರಡು ಬೈಕ್ಗಳಲ್ಲಿ ಬಂದ ಆರು ಮಂದಿ ಕಾರು ಅಡ್ಡಗಟ್ಟಿ, ಕಾರಿನ ಗಾಜು ಒಡೆದಿದ್ದರು. ಬಳಿಕ ರಾಜಶೇಖರ ಅವರನ್ನು ಮಾರಕಾಸ್ತ್ರಗಳಿಂದ ಕೊಲೆ ಮಾಡಿ ಪರಾರಿಯಾಗಿದ್ದರು. ಅಲ್ಲಿಂದ ಆರೋಪಿಗಳ ಬೆನ್ನು ಹತ್ತಿದ್ದ ಆನೇಕಲ್ ಸಿಐ ಮಹಾನಂದ್ ಮೂವರು ಆರೋಪಿಗಳನ್ನು ಸೋಮವಾರ ಬಂಧಿಸಿ, ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.