ಕೇಂದ್ರದಲ್ಲಿ ಪ್ರಸ್ತಾಪಿಸಬೇಕಾದ ವಿಷಯಗಳ ಕುರಿತು ಸಂಸದರೊಂದಿಗೆ ಚರ್ಚೆ: ಮುಖ್ಯಮಂತ್ರಿ ಬೊಮ್ಮಾಯಿ
ನವದೆಹಲಿ, ಫೆಬ್ರುವರಿ 7- ಇಂದು ನಡೆದ ಸಂಸದರ ಸಭೆಯಲ್ಲಿ ಕೇಂದ್ರಕ್ಕೆ ಸಂಬಂಧಿಸಿದಂತೆ ರಾಜ್ಯದ ನೀರಾವರಿ , ರೈಲ್ವೆ, ನಗರಾಭಿವೃದ್ಧಿ, ಬಂದರು, ರಸ್ತೆ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಚರ್ಚೆಯಾಗಿದೆ. ಕೇಂದ್ರದಲ್ಲಿ ಯಾವ ವಿಷಯಗಳನ್ನು ಪ್ರಸ್ತಾಪ ಮಾಡಬೇಕೆನ್ನುವ ವಿಚಾರಗಳ ಬಗ್ಗೆ ಸೌಹಾರ್ದಯುತವಾಗಿ ಚರ್ಚೆ ನಡೆಸಲಾಯಿತು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಇಂದು ನವದೆಹಲಿಯಲ್ಲಿ ನಡೆಸಲಾದ ಸಂಸದರ ಸಭೆಯ ಕುರಿತು ಮಾಧ್ಯಮದವರಿಗೆ ಮಾಹಿತಿ ನೀಡಿದ ಮುಖ್ಯಮಂತ್ರಿಗಳು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕೂಡ ಸಂಸದರ ಸಭೆಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವರ ನೇತೃತ್ವದಲ್ಲಿ ಬಜೆಟ್ ನಲ್ಲಿ ಘೋಷಿಸಿರುವ ಯೋಜನೆಗಳನ್ನು ಅನುಷ್ಠಾನ ಮಾಡಲು ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ. 15 ನೆ ಹಣಕಾಸು ಯೋಜನೆಯಡಿ ಮಂಜೂರಾತಿ ದೊರೆತಿರುವ ಯೋಜನೆಗಳನ್ನು ಸಂಪೂರ್ಣವಾಗಿ ರಾಜ್ಯಕ್ಕೆ ಒದಗಿಸಿಕೊಡುವುದಾಗಿಯೂ ಭರವಸೆ ನೀಡಿದ್ದಾರೆ ಎಂದರು.
ವಿತ್ತ ಸಚಿವರೊಂದಿಗೆ ನಡೆದ ಮಾತುಕತೆಯಲ್ಲಿ 1 ಲಕ್ಷ ಕೋಟಿ ರೂ.ಗಳ ಬಂಡವಾಳ ಅನುದಾನದಲ್ಲಿ 50 ವರ್ಷಗಳ ಅವಧಿಗೆ ಬಡ್ಡಿರಹಿತವಾಗಿ ಒಂದು ಲಕ್ಷ ಕೋಟಿ ರೂ.ಗಳನ್ನು ರಾಜ್ಯಕ್ಕೆ ಸಾಲದ ರೂಪದಲ್ಲಿ ನೀಡಬೇಕೆನ್ನುವ ಬಗ್ಗೆ ಚರ್ಚೆಯಾಗಿದೆ. ಕರ್ನಾಟಕಕ್ಕೆ ಎಷ್ಟು ಬರಬೇಕೆನ್ನುವುದು ಚರ್ಚೆಯಾಗಿ ಸುಮಾರು 3800 ರಿಂದ 4000 ಕೋಟಿ ರೂ.ಗಳು ದೊರೆಯಬಹುದೆಂಬ ಅಂದಾಜಿದೆ ಎಂದರು.