IMG 20220227 WA0007

ಚಿತ್ರನಟ ಅಂಬರೀಶ್ ಸ್ಮಾರಕಕ್ಕೆ ಶಂಕುಸ್ಥಾಪನೆ….!

FILM NEWS

ಚಿತ್ರನಟ ಅಂಬರೀಶ್ ಸ್ಮಾರಕಕ್ಕೆ ಮುಖ್ಯಮಂತ್ರಿ ಗಳಿಂದ ಶಂಕುಸ್ಥಾಪನೆ

ಸುತ್ತಮುತ್ತಲಿನ ರಾಜ್ಯಗಳ ಜನರೂ ಬಂದು ನೋಡುವಂಥ ಉತ್ತಮ ಸ್ಮಾರಕ ನಿರ್ಮಾಣ ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು, ಫೆಬ್ರವರಿ 27: ಕರ್ನಾಟಕ ಮಾತ್ರವಲ್ಲದೆ ಸುತ್ತಮುತ್ತಲಿನ ರಾಜ್ಯಗಳ ಜನರೂ ಬಂದು ನೋಡುವಂಥ ಉತ್ತಮ ಸ್ಮಾರಕ ನಿರ್ಮಾಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕಂಠೀರವ ಸ್ಟುಡಿಯೋದಲ್ಲಿ ಚಿತ್ರನಟ ಅಂಬರೀಶ್ ಅವರ ಸ್ಮಾರಕ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡುತ್ತಿದ್ದರು.

“ಅಂಬರೀಶ್ ಅವರನ್ನು ಯಾವಾಗಲೂ ಅಂಬರೀಶ್ ಎಂದೇ ಸಂಬೋಧಿಸುತ್ತಿದ್ದೆ. ಈಗಲೂ ಹಾಗೆಯೇ ಕರೆಯುತ್ತೇನೆ. ನಮ್ಮದು 40 ವರ್ಷಗಳಿಗೂ ಮಿಗಿಲಾದ ಸ್ನೇಹ. ಒಟ್ಟಿಗೆ ಓಡಾಡಿ, ಸಮಯ ಕಳೆದಿದ್ದೇವೆ.ಊಟ ಮಾಡಿದ್ದೇವೆ. ಕರ್ನಾಟಕದಾದ್ಯಂತ ಸುತ್ತಿದ್ದೇವೆ. ಮಾಡಬಹುದಾದ್ದನ್ನು ಮಾಡಬಾರದ್ದನ್ನು ಮಾಡಿದ್ದೇವೆ” ಅಂಬರೀಶ್ ಅವರೊಂದಿಗಿನ ಒಡನಾಟವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಮರಿಸಿದ ಬಗೆ ಇದು.

“ಅಂಬರೀಶ್ ತೆರೆದ ಪುಸ್ತಕವಿದ್ದಂತೆ. ಯಾವುದನ್ನೂ ಮುಚ್ಚಿಡುತ್ತಿರಲಿಲ್ಲ. ಯಾರು ತಮ್ಮ ಮನದಾಳದ ಇಚ್ಛೆಯಂತೆ ಜೀವನ ನಡೆಸಲು ಸಾಧ್ಯವಾಗುತ್ತದೆಯೋ ಅವರು ನಿಜವಾದ ಧೀರ. ನಹಲವಾರು ನಾಯಕಣತರನ್ನು ನೋಡಿದ್ದೇವೆ. ನಮ್ಮ ಆತ್ಮಸಾಕ್ಷಿಯಂತೆ ನಡೆದುಕೊಳ್ಳುವುದು ಎಷ್ಟು ಕಷ್ಟಸಾಧ್ಯವೆಂದು ವೈರಲ್ಲರಿಗೂ ಗೊತ್ತಿದೆ. ಆದರೆ ಅಂಬರೀಶ್ ಮಾತ್ರ ಏನೇ ಬಂದರೂ ಆತ್ಮಸಾಕ್ಷಿಗೆ ವಿರುದ್ಧವಾಗಿ ಒಂದು ದಿನವೂ ಬದುಕಲಿಲ್ಲ. ತನ್ನ ಸ್ವಂತ ಇಚ್ಚಾಶಕ್ತಿಯ ಮೇಲೆ ಬದುಕಿದಂತಹ ಒಬ್ಬ ಮೇರು ನಟ ಅಂಬರೀಶ್. ಇದು ದೈವದತ್ತ ಕೊಡುಗೆ. ಅತ್ಯಂತ ಆತ್ಮೀಯ. ಅವನ ಬಾಯಲ್ಲಿ ‘ಲೇ.’ಎಂದು ಕರೆಸಿಕೊಳ್ಳುವ ಬಯಕೆ ಅವರ ಸ್ನೇಹಿತರಲ್ಲಿತ್ತು. ಅವರು ಗೌರವ ನೀಡಿ ಮಾತನಾಡಿದರೆ ಆ ವ್ಯಕ್ತಿ ಆತ್ಮೀಯರಲ್ಲವೆಂದು ಅನಿಸುತ್ತಿತ್ತು. ಬಾಲ್ಯ, ಚಿತ್ರರಂಗ, ರಾಜಕೀಯದಲ್ಲಿಯೂ ಹಾಗೆಯೇ ಇದ್ದವರು. ಹುಟ್ಟಿನಿಂದ ನಾಯಕತ್ವದ ಗುಣಗಳು ಅವರಲ್ಲಿತ್ತು. ಸಿನಿಮಾದಲ್ಲಿ ಖಳನಾಯಕನ ಪಾತ್ರ ಮಾಡಿದರೂ, ನಾಯಕನ ಪಾತ್ರವರ್ ಅವರಿಗೆ ಶೋಭೆಯನ್ನು ತಂದುಕೊಟ್ಟಿತು ಎಂದರು.

ಸ್ನೇಹ ಜೀವಿ

IMG 20220227 WA0006

ಸ್ನೇಹಕ್ಕೆ ಬಹಳ ಬೆಲೆ ನೀಡಿ, ಅದಕ್ಕಾಗಿ ಏನು ಬೇಕಾದರೂ ಮಾಡುತ್ತಿದ್ದ ವ್ಯಕ್ತಿ ಅವರು. ಬೆಂಗಳೂರಿನಲ್ಲಿ ಶೂಟಿಂಗ್ ಮಾಡುವಾಗ ನಾಲ್ಕೈದು ಜನ ಸ್ನೇಹಿತರು ಕಾರಿನ ಹಾರ್ನ್ ಹೊಡೆದರೆ ಸಾಕು ಹೇಗಿದ್ದರೂ ಬಿಟ್ಟು ಬರುತ್ತಿದ್ದರು. ನಿರ್ಮಾಪಕರು ಮನೆಗೆ ಬಂದು ಚಿತ್ರೀಕರಣದ ವೇಳೆ ದಯಮಾಡಿ ಬರಬೇಡಿ ಎಂದು ಹೇಳಿ ಹೋದ ಪ್ರಸಂಗವನ್ನು ಮುಖ್ಯ ಮಂತ್ರಿಗಳು ಸ್ಮರಿಸಿದರು.

ಅಧಿಕಾರ ಧಿಕ್ಕರಿಸಿ ರಾಜಕಾರಣ
ಬಡವರಿಗೆ, ರೈತರಿಗಾಗಿ ಹೃದಯ ಮಿಡಿಯುತ್ತಿತ್ತು. ಕರ್ನಾಟಕವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಬೇಕೆಂಬ ತುಡಿತ ಅವರಲ್ಲಿತ್ತು. ಆದರೆ ಅಂಬರೀಶನಿಗೆ ಅಧಿಕಾರಕ್ಕೆ ಅಂಟಿಕೊಳ್ಳುವ ಗುಣವಿರಲಿಲ್ಲ. ಅಧಿಕಾರವಿರಲಿ, ಇಲ್ಲದಿರಲಿ ಅದನ್ನು ಧಿಕ್ಕರಿಸಿಯೇ ರಾಜಕಾರಣ ಮಾಡಿದವರು. ಅಂತಹ ವ್ಯಕ್ತಿ ಗಳು ಬಹಳ ಕಡಿಮೆ. ಕೇಂದ್ರ ಸಚಿವರಿದ್ದಾಗ ಕಾವೇರಿ ವಿವಾದ ಎದುರಾದಾಗ ಒಂದು ಕ್ಷಣವೆಯೂ ಯೋಚಿಸದೆ, ಅವರು ರಾಜಿನಾಮೆಯನ್ನು ಬಿಸಾಡಿ ಬಂದವರು. ಕಾವೇರಿ ಹೋರಾಟದಲ್ಲಿ ಅಧಿಕಾರ ತ್ಯಾಗ ಮಾಡಿದ್ದು ಅಂಬರೀಶ್ ಮಾತ್ರ ಎಂದರು.

ಮಂಡ್ಯ ಪ್ರೀತಿ
ಮಂಡ್ಯ ಅಂದರೆ ಅವರಿಗೆ ಪಂಚಪ್ರಾಣ. ಮಂಡ್ಯದವರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರನ್ನು ಮಾತನಾಡಿಸಿ ಪರಿಹಾರ ಕಲ್ಪಿಸುತ್ತಿದ್ದರು. ಅವರಿದ್ದಲ್ಲಿ ಜೀವಂತಿಕೆ ಇರುತ್ತಿತ್ತು. ವಿದ್ಯುತ್ ಸಂಚಾರವಾದಂಥ ಪರಿಣಾಮ ಇರುತ್ತಿತ್ತು ಎಂದರು.

ಅವರು ಇನ್ನಷ್ಟು ಕಾಲ ನಮ್ಮೊಡನೆ ಇರಬೇಕಿತ್ತು. ಕನ್ನಡ ಚಿತ್ರರಂಗದ ಹೆಸರನ್ನು ಇತರೆ ರಾಜ್ಯದಲ್ಲಿಯೂ ಅಭಿಮಾನಪೂರ್ವಕವಾಗಿ ತೆಗೆಡಿಕೊಳ್ಳುವಂತೆ ಮಾಡಿದ್ದರು. ಅಜಾತಶತ್ರು ಎಂದು ಅವರನ್ನು ಕರೆಯಲಾಗುತ್ತಿತ್ತು. ಯಾರೊಂದಿಗೂ ದ್ವೇಷ ಸಾಧಿಸುತ್ತಿರಲಿಲ್ಲ.

ಅವರನ್ನು ಕಾಣಲು 5 ಲಕ್ಷ ಕ್ಕಿಂತಲೂ ಹೆಚ್ಚು ಜನ ಬಿಜಾಪುರದಲ್ಲಿ ಸೇರಿದ್ದರು ಎಂದು ನೆನೆಸಿಕೊಂಡ ಮುಖ್ಯಮಂತ್ರಿಗಳು, ಅವರು ಯಾವುದೇ ತರಬೇತಿ ಇಲ್ಲದೆ ಅಲ್ಲೇ ಮಾಡಿ ತೋರಿಸುವ ನೈಜ ನಟನೆ ಇತ್ತು. ಅತ್ಯಂತ ಗಟ್ಟಿಯಾದ ಬಾಳ ಸಂಗಾತಿ ಸುಮಲತಾ.ಅವರದ್ದು ಅನ್ಯೋನ್ಯ ದಾಂಪತ್ಯ. ಅಂಬರೀಶ್ ಅವರ ಗುಣಧರ್ಮಗಳನ್ನು ಸುಮಲತಾ ಅವರು ರೂಢಿಸಿಕೊಂಡಿದ್ದಾರೆ.
ಅವರ ಪುತ್ರ ಅಭಿಷೇಕ್ ಸಹ ಅವರ ತಂದೆಯ ಗುಣಗಳನ್ನು ಪಡೆದು ಆದಷ್ಟು ಬೇಗ ಮತ್ತೊಮ್ಮೆ ಅಂಬರೀಶ್ ಅವರನ್ನು ಪರಿಚಯಿಸುತ್ತಾರೆ ಎಂಬ ನಿರೀಕ್ಷೆ ಇದೆ ಎಂದರು. ಕಲಾರಂಗಕ್ಕೆ ಉತ್ತಮ ಸೇವೆ ದೊರಕಬೇಕು.

ಪುನೀತ್ ಸ್ಮಾರಕ

ಡಾ: ರಾಜ್ ಕುಮಾರ್, ವಿಷ್ಣುವರ್ಧನ್,ಶಂಕರ್ ನಾಗ್, ಪುನೀತ್ ರಾಜ್ ಕುಮಾರ್, ಮೇರು ನಟರನ್ನು ನಾಡು ಕಳೆದುಕೊಂಡಿದೆ. ಪುನೀತ್ ಅವರ ಸ್ಮಾರಕ ವನ್ನು ಸದ್ಯದಲ್ಲಿಯೇ ನಿರ್ಮಿಸಲಾಗುವುದು ಹಾಗೂ ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ದಿನಾಂಕವನ್ನೂ ಘೋಷಿಸಲಾಗುವುದು ಎಂದರು.

ಅಂಬರೀಶ್ ಸ್ಮಾರಕ ನಿರ್ಮಾಣಕ್ಕೆ ಅಡಿಗಲ್ಲು ಹಾಕುವ ಸಣ್ಣ ಕೃತಜ್ಞತೆ ಹೇಳುವ ಭಾಗ್ಯ ನನಗೆ ದೊರೆತಿದೆ. ಅವರು ಎಲ್ಲೇ ಇದ್ದರೂ ಅವರು ನಮ್ಮನ್ನು ನೆನೆಸಿಕೊಳ್ಳುತ್ತಾರೆ ಎಂದರು.