IMG 20220301 WA0017

BJP: ಜೆಡಿ(ಎಸ್ ) ಮಾಜಿ ಶಾಸಕರು ‘ಕಮಲ’ ಕ್ಕೆ

POLATICAL STATE


ಇನ್ನಷ್ಟು ಕಾಂಗ್ರೆಸ್- ಜೆಡಿಎಸ್ ಮುಖಂಡರು ಶೀಘ್ರವೇ ಬಿಜೆಪಿಗೆ: ಬಸವರಾಜ ಬೊಮ್ಮಾಯಿ
ಬೆಂಗಳೂರು: ಕಾಂಗ್ರೆಸ್- ಜೆಡಿಎಸ್ ಇವೆರಡೂ ಪಕ್ಷಗಳ ಜನಹಿತ ಬಯಸುವ ಅನೇಕ ಮುಖಂಡರು ನಮ್ಮ ಸಂಪರ್ಕದಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳ ಇನ್ನಷ್ಟು ಮುಖಂಡರು ಬಿಜೆಪಿ ಸೇರಲಿದ್ದಾರೆ ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ದೇವನಹಳ್ಳಿಯ ಮಾಜಿ ಶಾಸಕರಾದ ಪಿಳ್ಳಮುನಿಶಾಮಪ್ಪ ಮತ್ತು ಅವರ ಬೆಂಬಲಿಗರ ಹಾಗೂ ಕಾಂಗ್ರೆಸ್ ಮುಖಂಡರ ಸೇರ್ಪಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ದೇವನಹಳ್ಳಿಯ ಮಾಜಿ ಶಾಸಕರಾದ ಪಿಳ್ಳಮುನಿಶಾಮಪ್ಪ ಅವರ ಸೇರ್ಪಡೆಯಿಂದ ಬಿಜೆಪಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ದೊಡ್ಡ ಶಕ್ತಿ ಲಭಿಸಲಿದೆ. ದೇವನಹಳ್ಳಿ ಪ್ರಗತಿಪರ ಚಿಂತನೆ ಇರುವ ಕ್ಷೇತ್ರ. ಅಲ್ಲಿನ ಜನಸಮುದಾಯದ ಆಶಯ ಕಾಂಗ್ರೆಸ್ ಪಕ್ಷದ ವಿರುದ್ಧವಾಗಿದೆ. ಇವತ್ತು ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್‍ನ ಹಲವು ಮುಖಂಡರು ಬಿಜೆಪಿ ಸೇರುತ್ತಿರುವುದರಿಂದ ಬಿಜೆಪಿ ನೇತೃತ್ವದ ಹೊಸ ರಾಜಕೀಯ ಸಮೀಕರಣ ಆಗುತ್ತಿದೆ ಎಂದರು.
ಇಂಥ ಸೇರ್ಪಡೆ ಕಾರ್ಯಕ್ರಮಗಳು ಮುಂದಿನ ಒಂದು ತಿಂಗಳು ನಡೆಯಲಿವೆ.. ಮುಂದಿನ ರಾಜಕಾರಣಕ್ಕೆ ಇದು ಸಾಕ್ಷಿ ಎಂದ ಅವರು, ಕಾಂಗ್ರೆಸ್ ಆಡಳಿತದಲ್ಲಿ ಯಾವುದೇ ವರ್ಗಕ್ಕೂ ಸಮಾಧಾನ ಇರಲಿಲ್ಲ. ಅಲ್ಲದೆ, ಕೆಲವು ವರ್ಗಕ್ಕೆ ಬಹಳಷ್ಟು ಅನ್ಯಾಯವಾಗಿತ್ತು ಎಂದು ವಿವರಿಸಿದರು. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷವನ್ನು ವಿರೋಧ ಪಕ್ಷದಲ್ಲಿ ಕೂರಿಸಲು ಮುಂದಾದರು. ಅಪವಿತ್ರ ಮೈತ್ರಿಯಿಂದ ಮಾಡಿದ ಸಮ್ಮಿಶ್ರ ಸರಕಾರದಿಂದ ಜನರಿಗೆ ಭ್ರಮನಿರಸನವಾಯಿತು ಎಂದರು.

IMG 20220301 WA0019


ಬಿಜೆಪಿ ಎಲ್ಲ ಸಂದರ್ಭಗಳಲ್ಲೂ ಕೇಂದ್ರದಲ್ಲಿ ಅತ್ಯುತ್ತಮ ಆಡಳಿತ ನೀಡುತ್ತಿದೆ. ರಾಜ್ಯದಲ್ಲೂ ಕ್ರಿಯಾಶೀಲ, ಜನಪರ ಸರಕಾರವಿದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಹೊಸ ಕಾರ್ಯಕ್ರಮಗಳ ಮೂಲಕ ಎಲ್ಲ ಸಮುದಾಯಗಳಿಗೆ ನ್ಯಾಯ ನೀಡಲಾಗುವುದು ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದವರು ಹೊರಗಡೆ ಅಧಿಕಾರಕ್ಕೆ ಬಂದಂತೆ ಪೋಸ್ ಕೊಡುತ್ತಾರೆ. ಒಳಗಡೆ ಪೊಳ್ಳುತನ ಇದೆ. ಅವರು ಏನೇ ಮಾಡಿದರೂ ಕಾಂಗ್ರೆಸ್ ಪಕ್ಷದ ದುರಾಡಳಿತ, ಸರ್ವಾಧಿಕಾರ ಧೋರಣೆಯನ್ನು ಕರ್ನಾಟಕದ ಜನರು ಒಪ್ಪಿಕೊಳ್ಳುವುದಿಲ್ಲ. ದೇವನಹಳ್ಳಿಯ ಎಲ್ಲ ಸಮುದಾಯದ ಮುಖಂಡರು ಬಿಜೆಪಿ ಸೇರುತ್ತಿದ್ದಾರೆ ಎಂದು ವಿವರಿಸಿದರು.
ನವ ಕರ್ನಾಟಕ, ನವ ಭಾರತ ನಿರ್ಮಾಣಕ್ಕೆ ಶ್ರಮಿಸೋಣ. ಹೊರಗಿನವರು – ಒಳಗಿನವರು ಎಂಬ ಪ್ರಶ್ನೆ ಇಲ್ಲ. ಇಂದಿನಿಂದ ಪಕ್ಷದ ಸಂಘಟನೆಗೆ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು. ದೇವನಹಳ್ಳಿಯ ಸರ್ವತೋಮುಖ ಅಭಿವೃದ್ಧಿಗೆ ರಾಜ್ಯ ಸರಕಾರ ಬದ್ಧವಿದೆ ಎಂದರು. ಉದ್ಯೋಗಕ್ಕೆ ಹೆಚ್ಚಿನ ಉತ್ತೇಜನ ಕೊಡುವ ನೀತಿ ನಿಯಮಾವಳಿ ರೂಪಿಸಲಾಗುವುದು ಎಂದು ತಿಳಿಸಿದರು. 2023ರಲ್ಲಿ ದೇವನಹಳ್ಳಿಯಲ್ಲಿ ಬಿಜೆಪಿ ಬಾವುಟ ಹಾರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ದಕ್ಷಿಣ ಮತ್ತು ಉತ್ತರ ಕರ್ನಾಟಕದಲ್ಲಿ ಬಿಜೆಪಿ ತನ್ನ ಶಕ್ತಿಯನ್ನು ಹೆಚ್ಚಿಸಿಕೊಂಡು ರಾಜ್ಯದಲ್ಲಿ ಮತ್ತೆ ಅಧಿಕಾರ ಪಡೆಯಲಿದೆ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಹೋರಾಟ- ಕಟೀಲ್
ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಸಿದ್ದರಾಮಣ್ಣನನ್ನು ಮುಗಿಸಲು ಮೇಕೆದಾಟು ಪಾದಯಾತ್ರೆ ಮಾಡುತ್ತಿದ್ದಾರೆ. ಮುಂದಿನ ಮುಖ್ಯಮಂತ್ರಿ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಹೋರಾಟ ಆರಂಭವಾಗಿದೆ. ಇನ್ನು 10 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷವು ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುವುದಿಲ್ಲ. ನಂತರ ರಾಜ್ಯವು ಕಾಂಗ್ರೆಸ್ ಮುಕ್ತ ಆಗಲಿದೆ ಎಂದು ನುಡಿದರು.
ಮೇಕೆದಾಟು ಪಾದಯಾತ್ರೆ ಅಧಿಕಾÀರಕ್ಕಾಗಿ ನಡೆಯುವ ಪಾದಯಾತ್ರೆ. ರಾಜ್ಯ, ರಾಷ್ಟ್ರ ಮತ್ತು ಬಿಬಿಎಂಪಿಯಲ್ಲಿ ಕಾಂಗ್ರೆಸ್ ಸುದೀರ್ಘ ಅವಧಿಯಲ್ಲಿ ಅಧಿಕಾರ ಅನುಭವಿಸಿದೆ. ಆಗ ಮೇಕೆದಾಟು ಯೋಜನೆ ಅನುಷ್ಠಾನ ಮಾಡಿ ಬೆಂಗಳೂರಿಗೆ ನೀರು ಕೊಡಬೇಕೆಂದು ಅವರಿಗೆ ಅನಿಸಲಿಲ್ಲ. ಇವತ್ತು ಪಾದಯಾತ್ರೆಯ ನಾಟಕ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಕರಾವಳಿಯಲ್ಲಿ ನಡೆಯುವ ಕಂಬಳಕ್ಕೆ ಜೋಡು ಕೋಣಗಳನ್ನು ಕಟ್ಟಿ ನೋಡಿಕೊಳ್ಳಲು ಒಬ್ಬರನ್ನು ಬಿಡಲಾಗುತ್ತದೆ. ಅದೇ ಮಾದರಿಯಲ್ಲಿ ಸುರ್ಜೇವಾಲರನ್ನು ಬಿಟ್ಟಿದ್ದಾರೆ. ನಮ್ಮವರು ಪ್ರಜಾಪ್ರಭುತ್ವದ ರಕ್ಷಣೆಗಾಗಿ ಜೈಲಿಗೆ ಹೋಗಿದ್ದಾರೆ. ಆದರೆ, ಕಾಂಗ್ರೆಸ್‍ನವರು ಲೂಟಿ ಮಾಡಿ ಜೈಲಿಗೆ ಹೋದವರು. ಪಂಚರಾಜ್ಯ ಚುನಾವಣಾ ಫಲಿತಾಂಶ ಬಂದ ಬಳಿಕ ರಾಜ್ಯದ ಅರ್ಧ ಕಾಂಗ್ರೆಸ್ ಖಾಲಿ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಲಿನ ಜೊತೆ ಸಕ್ಕರೆ ಸೇರಿದರೆ ಹಾಲು ಮಾತ್ರ ಕಾಣುತ್ತದೆ. ಸಕ್ಕರೆ ಕಾಣುವುದಿಲ್ಲ. ಆದರೆ, ಆ ಹಾಲು ಸಿಹಿಯಾಗುತ್ತದೆ. ಅದೇರೀತಿ ಈ ತಂಡ ಮುಂದೆ ದೇವನಹಳ್ಳಿಯಲ್ಲಿ ಸಿಹಿ ನೀಡಲಿದೆ ಎಂದು ವಿಶ್ವಾಸದಿಂದ ನುಡಿದರು.
ಸಮಾಜ, ಪಕ್ಷ ನಿಮ್ಮನ್ನು ಸ್ವೀಕರಿಸಿ ನೀವು ಇನ್ನಷ್ಟು ಎತ್ತರಕ್ಕೆ ಬೆಳೆಯುವಂತಾಗಲಿ. ಹಿಂದೆ ಪರಿವಾರವಾದಿಯಾಗಿದ್ದ ನೀವೀಗ ರಾಷ್ಟ್ರೀಯವಾದಿಯಾಗಿದ್ದೀರಿ ಎಂದು ಸೇರ್ಪಡೆಗೊಂಡವರಿಗೆ ತಿಳಿಸಿದರಲ್ಲದೆ, ವ್ಯಕ್ತಿಗಿಂತ ಪಕ್ಷ ಶ್ರೇಷ್ಠ. ಪಕ್ಷಕ್ಕಿಂತ ದೇಶ ಶ್ರೇಷ್ಠ ಎಂಬ ಚಿಂತನೆ ನಮ್ಮದು ಎಂದರು.
ಸ್ವಾತಂತ್ರ್ಯ ಬರುವ ವರೆಗೆ ಕಾಂಗ್ರೆಸ್‍ನಲ್ಲಿ ಭಾರತ್ ಮಾತಾ ಕಿ ಜೈ ಘೋಷಣೆ ಇತ್ತು. ಅನಂತರ ಅದು ಇಂದಿರಾ ಗಾಂಧಿ ಕೀ ಜೈ, ಸೋನಿಯಾ ಗಾಂಧಿ ಕಿ ಜೈ, ರಾಹುಲ್ ಗಾಂಧಿ ಕಿ ಜೈ ಎಂದು ಬದಲಾಗಿದೆ. ಕಾಂಗ್ರೆಸ್‍ನವರು ಯಾರೂ ಈಗ ದೇಶಕ್ಕೆ ಜಯಕಾರ ಕೂಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಜನತಾದಳದಲ್ಲೂ ದೇಶದ ಪರವಾಗಿ ಘೋಷಣೆ ಕೇಳಿದ್ದು ಅಪರೂಪ. ಅವುಗಳು ವ್ಯಕ್ತಿನಿಷ್ಠ ಪಕ್ಷಗಳಾದರೆ, ನಮ್ಮದು ದೇಶಭಕ್ತ ಪಕ್ಷ. ಸಿದ್ಧಾಂತ- ವಿಚಾರದ ಅಡಿಯಲ್ಲಿ ನಮ್ಮ ಪಕ್ಷ ಬೆಳೆದಿದೆ. ಹತ್ತಾರು ಜನರ ಬಲಿದಾನದಿಂದ ನಾವೀಗ ಆನಂದದಿಂದ ಅಧಿಕಾರ ಅನುಭವಿಸುತ್ತಿದ್ದೇವೆ ಎಂಬ ಅರಿವು ನಮ್ಮಲ್ಲಿದೆ. ಪಕ್ಷಕ್ಕಾಗಿ ದುಡಿಯಿರಿ ಎಂದು ಕಿವಿಮಾತು ಹೇಳಿದರು. ಕರ್ತವ್ಯ ಮತ್ತು ಕಾರ್ಯವನ್ನು ಗಮನಿಸಿ ಇಲ್ಲಿ ಅಧಿಕಾರ ಕೊಡಲಾಗುತ್ತದೆ. ಅವಕಾಶವನ್ನು ಉಪಯೋಗಿಸಿಕೊಂಡು ಬೆಳೆಯಿರಿ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದವರ ಹಗಲುಗನಸು- ಸಿ.ಟಿ.ರವಿ
ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷ ಹಗಲುಗನಸು ಕಾಣಲು ಜಿಎಸ್‍ಟಿ ತೆರಿಗೆ ಕಟ್ಟಬೇಕಾಗಿಲ್ಲ. ಅವರೀಗ ಹಗಲುಗನಸು ಕಾಣುತ್ತಿದ್ದಾರೆ ಎಂದು ಟೀಕಿಸಿದರು. ಮೋದಿ ಪ್ರಧಾನಿ ಆಗಲು ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ 2014ರಲ್ಲಿ ಹೇಳಿದ್ದರು ಎಂದು ನೆನಪಿಸಿದರಲ್ಲದೆ, “ಸಿದ್ದರಾಮಯ್ಯನವರೇ, ನಿಮ್ಮಪ್ಪನಾಣೆಗೂ ನೀವು ಅಧಿಕಾರಕ್ಕೆ ಬರುವುದಿಲ್ಲ” ಎಂದರು.
ತಮ್ಮ ಪಕ್ಷದ ಶಾಸಕನ ಮನೆಗೆ ಬೆಂಕಿ ಹಾಕಿದ ಕಾಂಗ್ರೆಸ್ ಪಕ್ಷದವರಿಗೆ ಯಾರಾದರೂ ಮತ ಕೊಡಲು ಸಾಧ್ಯವೇ ಎಂದು ಪ್ರಶ್ನಿಸಿದರು. ಬೆಂಕಿ ಹಾಕಿದವರು, ಗೂಂಡಾಗಿರಿ ಮಾಡಿದವರು ತಮ್ಮ ಸಹೋದರರೆಂದು ಹೇಳುವ ನೀತಿ ಇಲ್ಲದ ಪಕ್ಷ ಕಾಂಗ್ರೆಸ್ ಎಂದು ತಿಳಿಸಿದರು.
ಕಾಂಗ್ರೆಸ್‍ಗೆ ನೆಹರೂ ಕುಟುಂಬದ ಮಾಲೀಕತ್ವ ಇದೆ. ಜೆಡಿಎಸ್‍ಗೆ ದೊಡ್ಡ ಗೌಡರು, ಸಣ್ಣ ಗೌಡರು, ಮರಿಗೌಡರ ಓನರ್‍ಶಿಪ್ ಇದೆ. ನಾನು ಬಿಜೆಪಿ ಸೇರಿದಾಗ ನನ್ನ ಅಪ್ಪ ಗೌಡರ ಪಕ್ಷ ಸೇರಲು ಹೇಳಿದ್ದರು. ಆ ಪಕ್ಷ ಸೇರಿದ್ದರೆ ದೊಡ್ಡ ಗೌಡರು, ಸಣ್ಣ ಗೌಡರಿಗೆ, ಮರಿ ಗೌಡರಿಗೆ ಜೈ ಎನ್ನಬೇಕಿತ್ತು. ರಾಷ್ಟ್ರ ಭಕ್ತಿಯ ನನ್ನ ಪಕ್ಷ ನನಗೆ ಶಾಸಕ ಸ್ಥಾನ, ಸಚಿವ ಸ್ಥಾನ ಮಾತ್ರವಲ್ಲದೆ, ಇದೀಗ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯ ಸ್ಥಾನ ಕೊಟ್ಟಿದೆ ಎಂದು ನುಡಿದರು.
10 ಜನರಿಂದ 1951ರಲ್ಲಿ ಆರಂಭವಾದ ನಮ್ಮ ಪಕ್ಷ ಈಗ ಅತಿ ಹೆಚ್ಚು ಸದಸ್ಯರು ಎಂದರೆ 13 ಕೋಟಿ ಸದಸ್ಯರಿರುವ ವಿಶ್ವದ ದೊಡ್ಡ ಪಕ್ಷವಾಗಿ ಬೆಳೆದಿದೆ. ಅತಿ ಹೆಚ್ಚು ರಾಜ್ಯಗಳಲ್ಲೂ ಅಧಿಕಾರ ಪಡೆದಿದೆ ಎಂದರು.
ಎಲ್ಲರ ವಿಶ್ವಾಸದ ಜೊತೆ ಪಕ್ಷ ಬೆಳೆದಿದೆ. ನಮ್ಮ ಪಕ್ಷದಲ್ಲಿ ದೇಶ ಮೊದಲು. ಪಕ್ಷ ಮುಗಿಸಿ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳಲು ಇಲ್ಲಿ ಅವಕಾಶವಿಲ್ಲ. ಕೆಲವು ಪಕ್ಷಗಳಿಗೆ ಅಧಿಕಾರವೇ ಅಂತಿಮ ಗುರಿ. ನಮ್ಮ ಪಕ್ಷಕ್ಕೆ ಭಾರತ ಆತ್ಮನಿರ್ಭರ ಆಗುವ ಗುರಿ ಇದೆ. ಭಾರತವು ವಿಶ್ವಗುರು ಆಗಬೇಕೆಂಬ ನಿರೀಕ್ಷೆ ನಮ್ಮಲ್ಲಿದೆ ಎಂದರು. ದೇಶಕ್ಕೆ ತಾಕತ್ತು ಬರುವಂತೆ ಮೋದಿಜಿ ಅವರು ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ ಅವರು ಮಾತನಾಡಿ, ಪಕ್ಷದ ಸಕ್ರಿಯ ಕಾರ್ಯಕರ್ತನನ್ನು ಪಕ್ಷ ಗುರುತಿಸುತ್ತದೆ. ಬಿಜೆಪಿ ಸಂಸ್ಕಾರಯುತ ಪಕ್ಷ. ಉತ್ತಮ ವ್ಯಕ್ತಿತ್ವವನ್ನು ಪಕ್ಷ ಗುರುತಿಸುತ್ತದೆ ಎಂದು ತಿಳಿಸಿದರು.
ರಾಜ್ಯದ ಸಚಿವರಾದ ಕೆ ಸುಧಾಕರ್ ಅವರು ಮಾತನಾಡಿ, ಪ್ರಾಮಾಣಿಕ ನಾಯಕರಾದ ಪಿಳ್ಳಮುನಿಶಾಮಪ್ಪ ಅವರ ಸೇರ್ಪಡೆಯಿಂದ ಬಿಜೆಪಿ ಬಲ ಇನ್ನಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ಕಾಂಗ್ರೆಸ್- ಜೆಡಿಎಸ್‍ನ ಅನೇಕ ನಾಯಕರು ಬಿಜೆಪಿ ಸೇರಲಿದ್ದಾರೆ ಎಂದರು.
ಪಕ್ಷಕ್ಕೆ ಸೇರ್ಪಡೆಗೊಂಡ ಪಿಳ್ಳಮುನಿಶಾಮಪ್ಪ ಅವರು ಮಾತನಾಡಿ, ಬಿಜೆಪಿ ತತ್ವ -ಸಿದ್ಧಾಂತವನ್ನು ಒಪ್ಪಿ ಬೆಂಬಲಿಗರ ಜೊತೆ ಪಕ್ಷಕ್ಕೆ ಸೇರಿದ್ದಾಗಿ ತಿಳಿಸಿದರು. ಪ್ರಧಾನಿ ನರೇಂದ್ರ ಮೋದಿ ವiತ್ತು ರಾಜ್ಯದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ಜನಪರ ಕಾರ್ಯಕ್ರಮಗಳನ್ನು ಗಮನಿಸಿ ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದರು. ಬೆಂಗಳೂರು ಕೇಂದ್ರ ಸಂಸದರಾದ ಪಿ.ಸಿ. ಮೋಹನ್ ಅವರು ವೇದಿಕೆಯಲ್ಲಿದ್ದರು.
ಜನತಾದಳ ರಾಜ್ಯ ಸಂಘಟನಾ ಕಾರ್ಯದರ್ಶಿಗಳಾದ ಅಶ್ವಥಪ್ಪ, ದೇವನಹಳ್ಳಿ, ಚಿಕ್ಕಬಳ್ಳಾಪುರ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಚಂದ್ರಶೇಖರ್, ಭೂ ಮಂಜೂರಾತಿ ಸಮಿತಿ ಮಾಜಿ ಸದಸ್ಯರಾದ ಆರ್.ಎನ್. ಸುಬ್ಬೇಗೌಡ, ಹಿರಿಯ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರಾದ ಸಿ. ರಿಯಾಜ್, ದೇವನಹಳ್ಳಿ ಕಾಂಗ್ರೆಸ್ ಹಿರಿಯ ಮುಖಂಡರಾದ ಜೊಳ್ಳಪ್ಪನವರ ನಾರಾಯಣಸ್ವಾಮಿ, ಹಲವು ಮುಖಂಡರು ಮತ್ತು ಕಾರ್ಯಕರ್ತರು ಸೇರ್ಪಡೆಗೊಂಡರು.