2023ರಲ್ಲಿ ರಾಜ್ಯ ವಿಧಾನಸಭೆಯಲ್ಲಿ ಕಮಲ ಅರಳಲಿದೆ- ಬಸವರಾಜ ಬೊಮ್ಮಾಯಿ
ಬೆಂಗಳೂರು: ಮೋದಿಜಿ ನಾಮಬಲ, ಅಭಿವೃದ್ಧಿ ಕಾರ್ಯಕ್ರಮಗಳ ಬಲ ಹಾಗೂ ಸಂಘಟನೆಯ ಬಲದಿಂದ ರಾಜ್ಯದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ. 2023ರಲ್ಲಿ ವಿಧಾನಸಭೆಯಲ್ಲಿ ಕಮಲ ಅರಳಲಿದೆ. ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನುಡಿದರು.
ಪಂಚರಾಜ್ಯ ಚುನಾವಣೆಯಲ್ಲಿ ಉಸ್ತುವಾರಿಗಳಾಗಿ ಜವಾಬ್ದಾರಿ ವಹಿಸಿದ ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ ಮತ್ತು ಕೇಂದ್ರ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರಿಗೆ ಇಂದು ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಗ್ಗಟ್ಟಿನ ಮಂತ್ರ, ಶ್ರಮದಿಂದ ರಾಜ್ಯದಲ್ಲೂ 24 ಗಂಟೆ ನಿರಂತರ ದುಡಿದು ಬಿಜೆಪಿಗೆ ಗೆಲುವು ಸಿಗಬೇಕಿದೆ. ಯೋಜನಾಬದ್ಧ ಚುನಾವಣೆ ಮಾಡೋಣ. ಒಟ್ಟಾಗಿ ನಿಲ್ಲೋಣ. ಒಂದುಗೂಡಿ ಗೆಲುವು ತರೋಣ ಎಂದರು.
ನರೇಂದ್ರ ಮೋದಿಜಿ ಅವರ ನಾಯಕತ್ವಕ್ಕೆ ಲಭಿಸಿದ ಗೆಲುವು ಇದಾಗಿದೆ. 2024ರ ಸೆಮಿ ಫೈನಲ್ ಚುನಾವಣೆಯ ಸಾಧನೆ ಇದು. ಉತ್ತರ ಪ್ರದೇಶದಲ್ಲಿ ಮೋದಿಜಿ, ಯೋಗಿ ಅವರ ನಾಯಕತ್ವವನ್ನು ಜನರು ಒಪ್ಪಿಕೊಂಡಿದ್ದಾರೆ. ಜನರು ರಾಷ್ಟ್ರೀಯವಾದ, ಹಿಂದುತ್ವವನ್ನು ಒಪ್ಪಿಕೊಂಡಿದ್ದಾರೆ. ಉತ್ತರಾಖಂಡದಲ್ಲಿ ಅಭಿವೃದ್ಧಿಗೆ ಗೆಲುವು ಸಿಕ್ಕಿದೆ ಎಂದು ವಿಶ್ಲೇಷಿಸಿದರು.
ಗೋವಾ ಚುನಾವಣೆ ಅತ್ಯಂತ ಸಂಕೀರ್ಣವಾದುದು. ಕಾರ್ಯಕರ್ತರನ್ನು ಒಗ್ಗೂಡಿಸಿ ಜಯ ತಂದು ನೀಡಲಾಯಿತು. ಪಂಜಾಬ್‍ನ ಪಕ್ಷದ ನೆಲೆಗಟ್ಟನ್ನು ಗಟ್ಟಿಗೊಳಿಸಲಾಗಿದೆ ಎಂದು ತಿಳಿಸಿದರು. 4 ರಾಜ್ಯಗಳಲ್ಲಿ ಅಭೂತಪೂರ್ವವಾದ ಜಯವನ್ನು ಬಿಜೆಪಿ ಸಾಧಿಸಿ ದಾಖಲೆ ಮಾಡಿದೆ. ನಮ್ಮ ನಾಯಕರಾದ ಪ್ರಧಾನಿಗಳಾದ ಮೋದಿಜಿ ಅವರ ಶಕ್ತಿ ಜಗತ್ತಿಗೇ ಪರಿಚಯವಾಗಿದೆ ಎಂದರು.
ಬಿಜೆಪಿ ಆರಂಭದ ದಿನಗಳಿಂದಲೂ ಸಂಘಟನೆ ಬಲ ಆಧರಿತ ರಾಜಕಾರಣ ಮಾಡುತ್ತಿದೆ. ಕಾರ್ಯಕರ್ತರ ಪಡೆಯ ಮೂಲಕ ಜನಸಾಮಾನ್ಯರಿಗೆ ನಮ್ಮ ನೀತಿ ತಿಳಿಸುವ ಕಾರ್ಯ ನಡೆದಿದೆ. ಚುನಾವಣೆಯನ್ನು ತತ್ವದ ಆಧಾರದಲ್ಲಿ ಎದುರಿಸಲಾಗುತ್ತಿದೆ ಎಂದು ವಿವರಿಸಿದರು. ಇದರಿಂದ ನಮ್ಮ ವಿಚಾರಧಾರೆ ಒಪ್ಪಿ ಜನರು ನಮ್ಮತ್ತ ಆಕರ್ಷಿತರಾದರು ಎಂದರು. 2024ರಲ್ಲಿ ಪಂಜಾಬ್‍ನಲ್ಲಿ ಬಿಜೆಪಿ ಅತ್ಯಧಿಕ ಲೋಕಸಭಾ ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಸಂಸದರೂ ಆದ ನಳಿನ್‍ಕುಮಾರ್ ಕಟೀಲ್ ಅವರು ಮಾತನಾಡಿ, ಕರ್ನಾಟಕದಲ್ಲಿ ಮತ್ತೆ ಬಿಜೆಪಿ ಗೆಲುವುದು ಸಾಧಿಸಲಿದೆ ಎಂದ ಅವರು, ರಾಷ್ಟ್ರೀಯ ನಾಯಕತ್ವ ಕರ್ನಾಟಕದ ಕಾರ್ಯಕರ್ತರ ಮೇಲೆ ವಿಶ್ವಾಸ ಹೊಂದಿದೆ. ದಿಗ್ವಿಜಯ ಯಾತ್ರೆ ಮುಗಿಸಿ ಬಂದ ಮುಖಂಡರಿಗೆ ಅಭಿನಂದನೆ ಸಲ್ಲಿಸಿದರು.
ಕೆಪಿಸಿಸಿ ಎಂದರೆ ಅದು ಕನಕಪುರ ಕಾಂಗ್ರೆಸ್ ಆಗಲಿದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರೇ ತಿಳಿಸಿದ್ದಾರೆ ಎಂದು ತಿಳಿಸಿದರು. ಕೆಪಿಸಿಸಿಗೆ ಪದಾಧಿಕಾರಿಗಳ ನೇಮಕವೇ ಆಗಿಲ್ಲ ಎಂದು ಅವರು ತಿಳಿಸಿದ್ದಾಗಿ ಹೇಳಿದರು.
ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ ಅವರು ಮಾತನಾಡಿ, ಕರ್ನಾಟಕದಲ್ಲಿ ಅದ್ಭುತ ಬಜೆಟ್ ಅನ್ನು ಬೊಮ್ಮಾಯಿ ಅವರು ನೀಡಿದ್ದಾರೆ. ಮನೆಗೆ ದಾಖಲೆಪತ್ರ ತಲುಪಿಸುವ ಕಂದಾಯ ಇಲಾಖೆಯ ಕೆಲಸ ಆರಂಭವಾಗಿದೆ. ಯಡಿಯೂರಪ್ಪ, ಬೊಮ್ಮಾಯಿ ಅವರ ಕಾಲದ ಉತ್ತಮ ಕಾರ್ಯಗಳನ್ನು ಜನರಿಗೆ ತಲುಪಿಸಬೇಕಿದೆ. ಆ ಮೂಲಕ ಕರ್ನಾಟಕದಲ್ಲೂ ಗೆಲುವು ಸಾಧ್ಯವಾಗಬೇಕು ಎಂದು ತಿಳಿಸಿದರು.
ಉತ್ತರಾಖಂಡ ರಾಜ್ಯವನ್ನು ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ ರಚಿಸಲಾಯಿತು. 2001ರಲ್ಲಿ ರಾಜ್ಯ ರಚನೆ ಆದರೂ, 2002ರಲ್ಲಿ ನಾವು ಸೋತೆವು. ಅಧಿಕಾರ ಬದಲಾವಣೆ ಆಗುತ್ತಿತ್ತು. ಈ ಬಾರಿ ಕಾಂಗ್ರೆಸ್ ಬರಲಿದೆ ಎಂಬ ಭಾವನೆಯನ್ನು ಜನರಲ್ಲಿತ್ತು. ಆ ಭಾವನೆಯನ್ನು ಬದಲಾಯಿಸಿದ್ದು ಮೋದಿಯವರ ತಾಕತ್ತು ಮತ್ತು ದೂರದೃಷ್ಟಿ. ನಾವೂ ಕೆಲಸ ಮಾಡಿದ್ದೇವೆ. ರಾಷ್ಟ್ರೀಯ ಅಧ್ಯಕ್ಷರಾದ ನಡ್ಡಾ ಅವರ ಮಾರ್ಗದರ್ಶನವೂ ಸಿಕ್ಕಿತು. ಪಕ್ಷದ ಮುಖಂಡರು, ಕಾರ್ಯಕರ್ತರ ಜೊತೆ ಮಾತುಕತೆ ಮಾಡಿ ವಿಶ್ವಾಸ ಮೂಡಿಸಲಾಗಿದೆ. ಅದರ ಫಲವಾಗಿ ಈ ಫಲಿತಾಂಶ ಲಭಿಸಿದೆ ಎಂದರು. ಮೋದಿ ಸರಕಾರ ಬಂದ ಬಳಿಕ ಅಭಿವೃದ್ಧಿ ಎಂಬುದು ಅಜೆಂಡಾ ಆಗಿದೆ. ಅದರ ಪರಿಣಾಮವಾಗಿ ಬಿಜೆಪಿ ಪರ ಫಲಿತಾಂಶ ಬಂದಿದೆ ಎಂದರು.
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಿ.ಟಿ. ರವಿ ಅವರು ಮಾತನಾಡಿ, ನಿರ್ಣಯ ತೆಗೆದುಕೊಳ್ಳುವ ಪ್ರಕ್ರಿಯೆಯಲ್ಲಿ ಯೋಗದಾನ ನಮ್ಮದಾಗಿತ್ತು. ನೀತಿ, ನಿಯತ್ತು, ನರೇಂದ್ರ ಮೋದಿಯವರ ವಿಶ್ವಮಾನ್ಯ ನೇತೃತ್ವ ಇದ್ದ ಕಾರಣ ಗೆಲುವು ಸಹಜವಾಗಿಯೇ ಬಂದಿದೆ. ಬಿಜೆಪಿ ಗೆಲುವು ದೇಶಹಿತಕ್ಕೆ ಪೂರಕವಾಗಿ ಕೆಲಸ ಮಾಡಿದೆ ಎಂದು ವಿಶ್ಲೇಷಿಸಿದರು.
ಪಕ್ಷದ ಪ್ರತಿಯೊಬ್ಬ ಕಾರ್ಯಕರ್ತ ಬಿಜೆಪಿ ಮಾಲೀಕರು ಎಂದು ತಿಳಿಸಿ ಬೂತ್ ಗೆಲುವಿನ ಗುರಿಯನ್ನು ನೀಡಲಾಯಿತು. ಮೋದಿಯವರ ಅಭಿವೃದ್ಧಿ ಕಾರ್ಯಗಳು ಈ ದಾಖಲೆಯ ಗೆಲುವಿಗೆ ಕಾರಣ ಎಂದರು.
ಕೇಂದ್ರ ಸಚಿವರಾದ ಕು. ಶೋಭಾ ಕರಂದ್ಲಾಜೆ ಅವರು ಮಾತನಾಡಿ, ಉತ್ತರ ಪ್ರದೇಶ 25 ಕೋಟಿ ಜನಸಂಖ್ಯೆ ಹೊಂದಿದ ಬೃಹತ್ ರಾಜ್ಯ. 35 ವಿವಿಧ ಭಾಷೆ ಮಾತನಾಡುವ ಪ್ರದೇಶ ಇಲ್ಲಿನದು. ಮೊದಲ 2 ತಿಂಗಳು ಜಿಲ್ಲೆಗಳ ಸಂಘಟನಾತ್ಮಕ ಪ್ರವಾಸಕ್ಕೆ ಒತ್ತು ಕೊಡಲಾಯಿತು. ಗೊಂದಲ ಸರಿಮಾಡಿ ಸಂಘಟನೆ ಬಲಪಡಿಸಿ ಕೊನೆಯ 3 ತಿಂಗಳ ಕಾಲ ಅಲ್ಲೇ ಉಳಿದು ಶ್ರಮಿಸಿದ್ದಾಗಿ ವಿವರಿಸಿದರು. ತುಂಬಾ ಚೆನ್ನಾಗಿ ಕೆಲಸ ಮಾಡುವ ಕಾರ್ಯಕರ್ತರ ತಂಡ ಅಲ್ಲಿದೆ. ತಂಡದ ಒಟ್ಟಾರೆ ಕೆಲಸದ ಪರಿಣಾಮವಾಗಿ ಗೆಲ್ಲಲು ಸಾಧ್ಯವಾಯಿತು ಎಂದು ವಿವರಿಸಿದರು.
ತಿಂಗಳಿಗೆ 2 ಬಾರಿ ಪಡಿತರ ಸರಿಯಾಗಿ ಸಿಗುತ್ತಿದ್ದುದು, ಗೂಂಡಾಗಿರಿ ಇಲ್ಲದ ಕಾನೂನು ಸುವ್ಯವಸ್ಥೆ, ಕೇಂದ್ರ ಸರಕಾರದ ವಿವಿಧ ಯೋಜನೆಗಳು ಸರಿಯಾಗಿ ತಲುಪಿದ್ದುದೇ ಚುನಾವಣೆ ಅಜೆಂಡಾ ಆಗಿತ್ತು. ಜಾತಿ ಧರ್ಮಕ್ಕೂ ಮೀರಿ ಮತಗಳು ಬಿಜೆಪಿಗೆ ಸಿಕ್ಕಿದೆ ಎಂದರು.
. ಪ್ರಲ್ಹಾದ್ ಜೋಶಿ, ಸಿ.ಟಿ. ರವಿ, ಕು. ಶೋಭಾ ಕರಂದ್ಲಾಜೆ, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ್ ಟೆಂಗಿನಕಾಯಿ ಅವರನ್ನು ಸನ್ಮಾನಿಸಲಾಯಿತು. ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ರಾಜ್ಯ ಉಪಾಧ್ಯಕ್ಷರಾದ ನಿರ್ಮಲ್ ಕುಮಾರ್ ಸುರಾಣ, ಪ್ರಧಾನ ಕಾರ್ಯದರ್ಶಿಗಳಾದ ಎನ್.ರವಿಕುಮಾರ್, ಮಹೇಶ್ ಟೆಂಗಿನಕಾಯಿ, ಸಚಿವರಾದ ವಿ.ಸೋಮಣ್ಣ, ಮುನಿರತ್ನ, ಸಂಸದರಾದ ಪಿ.ಸಿ.ಮೋಹನ್, ಎಸ್.ಸಿ.ಮೋರ್ಚಾ ರಾಜ್ಯಾಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.