IMG 20220524 WA0018

ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ.ಶರವಣ ನಾಮಪತ್ರ

POLATICAL STATE

👆
ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ಟಿ.ಎ.ಶರವಣ ನಾಮಪತ್ರ

ವಿಧಾನಸೌಧದಲ್ಲಿ ಪಕ್ಷ ಅಭ್ಯರ್ಥಿಯನ್ನು ಘೋಷಣೆ ಮಾಡಿದ ಹೆಚ್.ಡಿ.ಕುಮಾರಸ್ವಾಮಿ, ಸಿ.ಎಂ.ಇಬ್ರಾಹಿಂ


ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಇಂದು ನಾಮಪತ್ರ ಸಲ್ಲಿಸಲು ಕೊನೆದಿನವಾಗಿದ್ದು, ಜೆಡಿಎಸ್‍ ಅಭ್ಯರ್ಥಿಯಾಗಿ ಮೇಲ್ಮನೆಯ ಮಾಜಿ ಸದಸ್ಯ ಟಿ.ಎ.ಶರವಣ ಅವರು ನಾಮಪತ್ರ ಸಲ್ಲಿಸಿದರು.

ವಿಧಾನಸೌಧದಲ್ಲಿ ಇಂದು ಚುನಾವಣಾಧಿಕಾರಿಯೂ ಆಗಿರುವ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ, ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ, ಜೆಡಿಎಸ್‍ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಬಂಡೆಪ್ಪ ಕಾಶೆಂಪೂರ್, ತಿಪ್ಪೇಸ್ವಾಮಿ, ಶಾಸಕ ಆಶ್ವಿನ್ ಕುಮಾರ್ ಮತ್ತಿತರ ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.

IMG 20220524 WA0016

ಟಿ.ಎ.ಶರವಣ ಅವರ ನಾಮಪತ್ರಕ್ಕೆ ಪಕ್ಷದ ಹತ್ತು ಸೂಚಕರಾಗಿದ್ದರು.

ನಾಮಪತ್ರ ಸಲ್ಲಿಕೆಯಾದ ನಂತರ ಪಕ್ಷದ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಕುಮಾರಸ್ವಾಮಿ ಅವರು ಮಾಧ್ಯಮಗಳ ಜತೆ ಮಾತನಾಡಿದರು.

ಸಣ್ಣ ಪ್ರಮಾಣದ ಅರ್ಯ ವೈಶ್ಯ ಸಮುದಾಯದ ಶರವಣ ಅವರಿಗೆ ಟಿಕೆಟ್ ನೀಡಿದ್ದೇವೆ. ನಮ್ಮ ಪಕ್ಷದ ಅಧ್ಯಕ್ಷರು ಹಾಗೂ ಮಾಜಿ ಪ್ರಧಾನ ಮಂತ್ರಿಗಳಾದ ಹೆಚ್.ಡಿ.ದೇವೇಗೌಡ ಅವರ ಸೂಚನೆಯ ಮೇರೆಗೆ ಶರವಣ ಅವರಿಗೆ ಅವಕಾಶ ನೀಡಿದ್ದೇವೆ ಎಂದರು.

ಶರವಣ ಅವರು ಪಕ್ಷಕ್ಕೆ ದುಡಿದಿದ್ದಾರೆ. ಪಕ್ಷದ ಎಲ್ಲ ಆಗುಹೋಗುಗಳಿಗೆ ಸ್ಪಂದಿಸಿದ್ದಾರೆ. ಕಳೆದ ನಾಲ್ಕೈದು ವರ್ಷದಲ್ಲಿ ಬೆಂಗಳೂರು ನಗರದಲ್ಲಿ ಹಾಗೂ ಅವರ ಸಮಾಜದ ವಿಶ್ವಾಸ ಮೂಡಿಸುವಲ್ಲಿ ಕೆಲಸ ಮಾಡಿದ್ದಾರೆ. ಮೈನ್ಯೂಟ್ ಕಮ್ಯುನಿಟಿಗೆ ಅವಕಾಶ ಕೊಡಬೇಕು ಅಂತ ಕೊಟ್ಟಿದ್ದೇವೆ. ಅವರು ಸಕ್ರೀಯವಾಗಿ ಕೆಲಸ ಮಾಡಿದ್ದಾರೆ ಹಾಗೂ ಯಾವುದೇ ಆತಂಕ ಇಲ್ಲದೇ ಪಕ್ಷದ ಪರ ಮಾತಾಡಿದ್ದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮುಂದಿನ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಶರವಣ ಅವರಿಗೆ ಟಾಸ್ಕ್ ಕೂಡ ನೀಡಲಾಗಿದೆ. ಬಸವನಗುಡಿ, ಚಿಕ್ಕಪೇಟೆ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಹೇಳಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿಗಳು ತಿಳಿಸಿದರು.

ಧನ್ಯವಾದ ಹೇಳಿದ ಶರವಣ:

ನಾಮಪತ್ರ ಸಲ್ಲಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಟಿ.ಎ.ಶರವಣ ಅವರು, ಪಕ್ಷ ನಿಷ್ಠೆಯನ್ನು ಗಮನಿಸಿ ಎರಡನೇ ಬಾರಿ ವಿಧಾನ ಪರಿಷತ್ ನಲ್ಲಿ ಸೇವೆ ಸಲ್ಲಿಸಲು ವರಿಷ್ಠರು ಅವಕಾಶ ಕೊಟ್ಟಿದ್ದಾರೆ. ದೇವೇಗೌಡರಿಗೆ, ಕುಮಾರಸ್ವಾಮಿ ಅವರಿಗೆ ಹಾಗೂ ಪಕ್ಷದ ಶಾಸಕರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಸಣ್ಣ ಸಮಾಜದಿಂದ ಬಂದಿದ್ದೇನೆ, ಹಾಗಿದ್ದರೂ ಬೆಳೆಯಲು ಅವಕಾಶ ಕೊಟ್ಟಿದ್ದಾರೆ. ನನ್ನ ಜವಾಬ್ದಾರಿ ‌ಇನ್ನಷ್ಟು ಜಾಸ್ತಿಯಾಗಿದೆ. ಹೆಚ್.ಡಿ.ಕುಮಾರಸ್ವಾಮಿ ಅವರನ್ನು ಮೂರನೇ ಬಾರಿಗೆ ಪಟ್ಟಾಭಿಷೇಕ ಆಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುತ್ತೇನೆ ಎಂದರು.