IMG 20220608 WA0015

ಸಂಶೋಧನೆ ಅಭಿವೃದ್ಧಿಗೆ ಶೇ 30 ಹಣ ಮೀಸಲಿಡಿ ..!

BUSINESS

ಸಂಶೋಧನೆ ಅಭಿವೃದ್ಧಿಗೆ ಶೇ 30 ಹಣ ಮೀಸಲಿಡಿ* : ಅಶ್ವತ್ಥನಾರಾಯಣ

ಬೆಂಗಳೂರು: ನವೋದ್ಯಮಗಳು ತಮ್ಮ ಆದಾಯದಲ್ಲಿ ಶೇ.30ರಷ್ಟನ್ನಾದರೂ ಸಂಶೋಧನೆ ಮತ್ತು ಅಭಿವೃದ್ಧಿಗೆ ಮೀಸಲಿಡಬೇಕು. ಇಲ್ಲದೆ ಹೋದರೆ ದೇಶಕ್ಕೇನೂ ಪ್ರಯೋಜನವಿಲ್ಲ. ನವೋದ್ಯಮಗಳು ಭಾರತವನ್ನೇ ಉತ್ಪಾದನೆಯ ತೊಟ್ಟಿಲನ್ನಾಗಿ ಬೆಳೆಸುವ ಗುರಿ ಇಟ್ಟುಕೊಳ್ಳಬೇಕು ಎಂದು ಐಟಿ ಮತ್ತು ಬಿಟಿ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ.

ಅಖಿಲ ಭಾರತ ರೋಬೋಟಿಕ್ಸ್ ಮತ್ತು ಇನ್ನೋವೇಶನ್ ಸಮಿತಿಯು (ಎಐಸಿಆರ್ಎ) ಏರ್ಪಡಿಸಿರುವ ‘ಇಂಡಿಯಾ ಫಸ್ಟ್ ಟೆಕ್ ಸ್ಟಾರ್ಟಪ್-2022’ ಸಮಾವೇಶಕ್ಕೆ ಅವರು ಬುಧವಾರ ಇಲ್ಲಿ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕರ್ನಾಟಕವೆಂದರೆ ಇಲ್ಲಿ ಭಾರತವೇ ಅಡಗಿದೆ. ನಮ್ಮಲ್ಲಿರುವಷ್ಟು ಕಾಸ್ಮೋಪಾಲಿಟನ್ ಸಂಸ್ಕೃತಿ ದೇಶದ ಉಳಿದ ಭಾಗಗಳಲ್ಲಿ ಇಲ್ಲ. ನಮ್ಮಲ್ಲಿ ಭಾಷೆ, ಧರ್ಮ ಇತ್ಯಾದಿಗಳ ಹೆಸರಿನಲ್ಲಿ ಸಂಕುಚಿತ ಧೋರಣೆಯನ್ನು ಯಾವತ್ತೂ ಬೆಳೆಸಿಲ್ಲ. ರಾಜ್ಯವು ಇಡೀ ಜಗತ್ತಿನ ಜನರನ್ನು ಸ್ವಾಗತಿಸುತ್ತದೆ’ ಎಂದರು.

ರಾಜ್ಯವು ಮೊದಲಿನಿಂದಲೂ ಉದ್ಯಮಶೀಲ ವಾತಾವರಣಕ್ಕೆ ಪ್ರೋತ್ಸಾಹ ಕೊಡುತ್ತಲೇ ಬಂದಿದೆ. ಇತ್ತೀಚಿನ ದಶಕಗಳಲ್ಲಿ ಐಟಿ, ಬಿಟಿ ಜತೆಗೆ ಆಧುನಿಕ ತಂತ್ರಜ್ಞಾನಗಳಿಗೆ ತೆರೆದುಕೊಂಡಿದ್ದು, ಇಡೀ ಜಗತ್ತಿನ ಗಮನ ಸೆಳೆಯಲಾಗಿದೆ ಎಂದು ಅವರು ನುಡಿದರು.

ಎನ್ಇಪಿ ಜಾರಿಯಲ್ಲಿ ಉದ್ಯಮಗಳ ಅಗತ್ಯ, ಅವರಿಗೆ ಬೇಕಾದ ಕೌಶಲ್ಯ, ಸೂಕ್ತ ಪಠ್ಯಕ್ರಮ, ಸಂವಹನ ತರಬೇತಿ, ಇಂಟರ್ನ್ಶಿಪ್ ಇತ್ಯಾದಿಗಳಿಗೆ ಗಮನ ಕೊಡಲಾಗಿದೆ ಎಂದು ಅವರು ಹೇಳಿದರು.

ಉದ್ಯಮಶೀಲತೆಗೆ ಪ್ರೋತ್ಸಾಹ ಕೊಡುವ ವಿಚಾರದಲ್ಲಿ ರಾಜ್ಯ ಸರಕಾರವು ಕೇಂದ್ರ ಸರಕಾರದ ಜತೆ ಹೆಜ್ಜೆ ಇಡುತ್ತಿದೆ. ಇದಕ್ಕೆ ತಕ್ಕಂತೆ ಬೆಂಗಳೂರು ನಗರವು ದೇಶದ ನವೋದ್ಯಮ ರಾಜಧಾನಿಯಾಗಿ ಹೊರಹೊಮ್ಮಿದೆ ಎಂದು ಅವರು ಪ್ರತಿಪಾದಿಸಿದರು.
ಕಾರ್ಯಕ್ರಮದಲ್ಲಿ ಎಐಸಿಆರ್ಎ ಉಪಾಧ್ಯಕ್ಷೆ ಅಲಕಾ ಸಚದೇವ್ ಮುಂತಾದವರಿದ್ದರು.