ನ್ಯಾಷನಲ್ ಹೆರಾಲ್ಡ್ ನೆಪದಲ್ಲಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಅವರಿಗೆ ಇ.ಡಿ. ಕಿರುಕುಳ ವಿರೋಧಿಸಿ ಜೂ.13 ರಂದು ಪ್ರತಿಭಟನೆ: ಡಿ ಕೆ ಶಿವಕುಮಾರ್
ಬೆಂಗಳೂರು: ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕೇಂದ್ರ ಸರಕಾರ ಅನಗತ್ಯ ಕಿರುಕುಳ ನೀಡುತ್ತಿದ್ದು, ಜೂನ್ 13 ರಂದು ದೇಶದ ಎಲ್ಲಾ ಭಾಗಗಳಲ್ಲಿರುವ ಇ.ಡಿ. ಕಚೇರಿ ಮುಂದೆ ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರು ಪ್ರತಿಭಟನೆ ಮಾಡಲು ತೀರ್ಮಾನಿಸಿದ್ದೇವೆ. ಆದರ ಅಂಗವಾಗಿ ಬೆಂಗಳೂರಿನ ಶಾಂತಿನಗರದ ಡಬಲ್ ರೋಡ್ ಬಳಿಯಿರುವ ಇ.ಡಿ. ಕಚೇರಿ ಮುಂದೆ ಸೋಮವಾರ ಬೆಳಗ್ಗೆ 10 ಗಂಟೆಗೆ ಪ್ರತಿಭಟನೆ ನಡೆಸಲಾಗುವುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಶನಿವಾರ ಮಾಧ್ಯಮಗೋಷ್ಠಿ ನಡೆಸಿದ ಅವರು ಹೇಳಿದ್ದಿಷ್ಟು;
‘ಸಂಸತ್ ಸದಸ್ಯರು ಹಾಗೂ ಎಐಸಿಸಿ ಪದಾಧಿಕಾರಿಗಳು ದೆಹಲಿಯಲ್ಲಿ ನಡೆಯಲಿರುವ ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ. ದೆಹಲಿಯ ಕಾಂಗ್ರೆಸ್ ಕಚೇರಿಯಿಂದ ಇ.ಡಿ.ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು ರಾಹುಲ್ ಗಾಂಧಿಯವರನ್ನು ಎಷ್ಟು ಹೊತ್ತು ವಿಚಾರಣೆ ನಡೆಸಲಾಗುವುದೋ ಅಷ್ಟೊತ್ತು ಪ್ರತಿಭಟನೆ ಮಾಡಲಾಗುವುದು.
ಬೆಂಗಳೂರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕರೆ ನೀಡುತ್ತೇನೆ. ಈ ಪ್ರತಿಭಟನೆಯಲ್ಲಿ ರಾಜ್ಯದ ಎಲ್ಲಾ ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಲಿದ್ದಾರೆ.
ಈ ಪ್ರತಿಭಟನೆ ವಿಚಾರವಾಗಿ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್ ಮುಖಂಡರ ಜೊತೆ ಚರ್ಚೆ ನಡೆಸಿದ್ದೇವೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ರಾಜ್ಯದ ಇತರೆ ಭಾಗಗಳಿಂದ ಪ್ರತಿಭಟನೆಗೆ ಆಗಮಿಸುವವರು ಹಿಂದಿನ ದಿನವೇ ಬೆಂಗಳೂರಿಗೆ ಬರಬೇಕೆಂದು ಈ ಮೂಲಕ ಕರೆ ನೀಡುತ್ತಿದ್ದೇವೆ.
ನಾವು ಇ.ಡಿ. ಕಚೇರಿ ಒಳಗೆ ಪ್ರವೇಶ ಮಾಡುವುದಿಲ್ಲ. ರಾಷ್ಟ್ರದ ಜನತೆಯ ನೋವನ್ನು ವ್ಯಕ್ತಪಡಿಸಲು ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ.
ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಈ ದೇಶದ ಪ್ರಧಾನ ಮಂತ್ರಿಯಾಗಲು ಎರಡು ಬಾರಿ ಅವಕಾಶ ಸಿಕ್ಕರೂ ದೇಶದ ಹಿತಕ್ಕಾಗಿ ವಿಶ್ವದ ಶ್ರೇಷ್ಠ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಪ್ರಧಾನ ಮಂತ್ರಿ ಸ್ಥಾನ ತ್ಯಾಗ ಮಾಡಿದ್ದಾರೆ.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ರಾಜಕೀಯ ತ್ಯಾಗ ಹಾಗೂ ಬೆಳವಣಿಗೆಯನ್ನು ಸಹಿಸದ ಬಿಜೆಪಿ ಸರ್ಕಾರ ಅವರ ವಿರುದ್ಧ ವಿನಾಕಾರಣ ಕೇಂದ್ರ ತನಿಖಾ ಸಂಸ್ಥೆಗಳನ್ನು ಬಿಟ್ಟು ಕಿರುಕುಳ ನೀಡುತ್ತಿದೆ.
ಬಿಜೆಪಿ ಸರ್ಕಾರವೇ ಈ ಹಿಂದೆ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಬಿಟ್ಟಿದ್ದರೂ ಗಾಂಧಿ ಕುಟುಂಬಕ್ಕೆ ತೊಂದರೆ ಕೊಡುವ ಉದ್ದೇಶದಿಂದ ಮತ್ತೆ ಆ ಪ್ರಕರಣವನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಿ ತನಿಖೆ ಆರಂಭಿಸಲಾಗಿದೆ.
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಜವಾಹರಲಾಲ್ ನೆಹರು ಅವರ ಕಾಲದಿಂದ ಆರಂಭವಾಗಿದ್ದು, ಇದು ಕಾಂಗ್ರೆಸ್ ಪಕ್ಷದ ಪತ್ರಿಕೆಯಾಗಿದೆ. ಮಾಧ್ಯಮ ಪ್ರಜಾಪ್ರಭುತ್ವ ವ್ಯವಸ್ಥೆಯ ಭಾಗವಾಗಿದ್ದು ಇದನ್ನು ನಡೆಸಲು ಅನೇಕ ಸಮಸ್ಯೆಗಳು ಎದುರಾಗುತ್ತದೆ. ಅಂದಿನಿಂದ ಆ ಪತ್ರಿಕೆಯ ಆಸ್ತಿಪಾಸ್ತಿಗಳನ್ನು ಉಳಿಸಿಕೊಂಡು ಬರಲಾಗಿದೆ.
ಈ ಹಿಂದೆ ಆಸ್ಕರ್ ಫರ್ನಾಂಡಿಸ್ ಅವರು ಅದಕ್ಕೆ ಟ್ರಸ್ಟಿಯಾಗಿದ್ದು, ಈಗ ಆಸ್ಥಾನಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ನೇಮಿಸಲಾಗಿದೆ.
ಈ ಪ್ರಕರಣದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಆರ್ಥಿಕ ವ್ಯವಹಾರ ನಡೆಸಿದ್ದಾರೆ ಎಂಬ ಆರೋಪದ ಮೇಲೆ ತನಿಖೆ ಆರಂಭಿಸಿದೆ.
ನಮ್ಮ ನಾಯಕರುಗಳು ಇಂತಹ ಬೆದರಿಕೆಗಳಿಗೆ ಹೆದರುವುದಿಲ್ಲ. ಅವರು ಜೈಲಿಗೆ ಹೋಗಲು ಸಿದ್ಧರಿದ್ದಾರೆ. ಗಾಂಧಿ ಕುಟುಂಬದ ಇಂದಿರಾಗಾಂಧಿ ಹಾಗೂ ರಾಜೀವ್ ಗಾಂಧಿಯವರು ಈ ದೇಶಕ್ಕಾಗಿ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ.
ಸೋನಿಯಾ ಗಾಂಧಿಯವರಿಗೆ ಸೋಂಕು ತಗುಲಿರುವ ಹಿನ್ನೆಲೆಯಲ್ಲಿ ಅವರ ವಿಚಾರಣೆ ಕಾಲಾವಧಿಯನ್ನು ವಿಸ್ತರಿಸಲಾಗಿದ್ದು, ರಾಹುಲ್ ಗಾಂಧಿಯವರು ಜೂನ್ 13ರಂದು ಇಡಿ ಕಚೇರಿ ಮುಂದೆ ವಿಚಾರಣೆಗೆ ಹಾಜರಾಗಲಿದ್ದಾರೆ.
ಹೀಗಾಗಿ ದೇಶಾದ್ಯಂತ ಕಾಂಗ್ರೆಸ್ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರು ಎಲ್ಲಾ ಇ.ಡಿ. ಕಚೇರಿಗಳ ಮುಂದೆ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ.’
ರಾಜ್ಯಸಭೆ ಚುನಾವಣೆ:
ನಿನ್ನೆ ನಡೆದ ರಾಜ್ಯ ಸಭೆ ಚುನಾವಣೆಯಲ್ಲಿ ನಮ್ಮ ಪಕ್ಷದ 69 ಶಾಸಕರಿಗೆ ವಿಪ್ ಜಾರಿ ಮಾಡಿದ್ದು, ಓರ್ವ ಪಕ್ಷೇತರ ಶಾಸಕ ಹಾಗೂ ಜೆಡಿಎಸ್ ಶಾಸಕರೊಬ್ಬರು ಸೇರಿದಂತೆ ನಮ್ಮ ಪಕ್ಷಕ್ಕೆ 71 ಮತಗಳು ಬಂದಿದೆ.
ನಮಗೆ ಆಧಾರಸ್ತಂಭವಾಗಿರುವ ಎಲ್ಲ ಶಾಸಕರಿಗೆ, ಪಕ್ಷೇತರ ಶಾಸಕ ಶರತ್ ಬಚ್ಚೇಗೌಡರಿಗೆ, ಕಾಂಗ್ರೆಸ್ ಪಕ್ಷದ ಸಿದ್ಧಾಂತ ಬೆಂಬಲಿಸಿ ನಮ್ಮ ಅಭ್ಯರ್ಥಿ ಪರ ಮತ ಹಾಕಿದ ಶ್ರೀನಿವಾಸ ಗೌಡರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ.
ನಮ್ಮ ಪಕ್ಷದ ಪರವಾಗಿ ನಿಂತ ಎಲ್ಲರಿಗೂ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ.
ಎರಡನೇ ಪ್ರಾಶಸ್ತ್ಯ ಮತಗಳು ಬಿಜೆಪಿಗೆ ಹೋಗಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ ಬಿಜೆಪಿಗೆ ಮತ ಹಾಕಿರುವುದನ್ನು ಯಾರೂ ನೋಡಿಲ್ಲ. ಮೊದಲ ಪ್ರಾಶಸ್ತ್ಯದ ಅಷ್ಟೂ ಮತಗಳು ನಮಗೆ ಬಂದಿವೆ. ಎಲ್ಲ ಪಕ್ಷಗಳಿಗೂ ಅವರದೇ ಆದ ಒತ್ತಡವಿತ್ತು. 69 ಮತಗಳನ್ನು ನಾನೇ ಕಣ್ಣಾರೆ ಕಂಡಿದ್ದೇನೆ. ನಮ್ಮ ಪಕ್ಷದ ಯಾವುದೇ ಶಾಸಕರು ಬಿಜೆಪಿ ಅಭ್ಯರ್ಥಿಗೆ ಮತ ಹಾಕಿಲ್ಲ. ಬೇರೆ ಪಕ್ಷಕ್ಕೆ ಹೆಚ್ಚುವರಿ ಮತಗಳು ಬಂದಿರುವ ವಿಚಾರ ನನಗೆ ಗೊತ್ತಿಲ್ಲ’ ಎಂದು ತಿಳಿಸಿದರು.
ಕಾಂಗ್ರೆಸ್ ನಾಯಕರೇ ಬಿಜೆಪಿಗೆ ಬೆಂಬಲ ನೀಡಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ ನೋವಿನಲ್ಲಿ ಇರುವವರು ನೋವಿನಿಂದ ಮಾತನಾಡುತ್ತಾರೆ. ಸಂತೋಷದಲ್ಲಿ ಇರುವವರು ಸಂತೋಷದಲ್ಲಿ ಮಾತನಾಡುತ್ತಾರೆ. ಅವರು ತಮ್ಮದೇ ಆದ ಪದಗಳನ್ನು ಬಳಸಿ ಮಾತನಾಡುತ್ತಾರೆ. ಎಲ್ಲವನ್ನೂ ಸಂತೋಷದಿಂದ ಸ್ವೀಕರಿಸುತ್ತೇವೆ ‘ ಎಂದರು.
ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡು ಯಾವ ಸಂದೇಶ ರವಾನಿಸುತ್ತಿದ್ದೀರಿ ಎಂಬ ಪ್ರಶ್ನೆಗೆ, ‘ ಪಕ್ಷದ ಕಾರ್ಯಕರ್ತರನ್ನು ಕೇಳಿ, ಹೇಳುತ್ತಾರೆ. ಇಲ್ಲಿ ಲಾಭ-ನಷ್ಟ ವಿಚಾರ ಬೇರೆ. ಇಲ್ಲಿ ನಮ್ಮ ಪಕ್ಷ ಸ್ವಾಭಿಮಾನದಿಂದ ತೆಗೆದುಕೊಂಡ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಬೇರೆಯವರಿಗೆ ಸ್ವಾಭಿಮಾನ ಇರುವಂತೆ ನಮ್ಮ ಪಕ್ಷಕ್ಕೂ ಸ್ವಾಭಿಮಾನವಿದೆ’ ಎಂದು ಉತ್ತರಿಸಿದರು.
ಇನ್ನು ಅನೇಕ ಶಾಸಕರು ನಿಮ್ಮ ಪರ ಇದ್ದಾರಾ ಎಂಬ ಪ್ರಶ್ನೆಗೆ, ‘ ನಮಗೆ ಬೇರೆ, ಬೇರೆ ಪಕ್ಷಗಳ ಶಾಸಕರ ಬೆಂಬಲ ಇತ್ತು. ಹೀಗಾಗಿ ನಾವು ಆತ್ಮಸಾಕ್ಷಿ ಮತ ಕೇಳಿದೆವು. ನಮಗೆ ಕಳೆದ ಬಾರಿಯ ಘಟನೆ ಮರುಕಳಿಸುವ ಇಚ್ಛೆ ಇರಲಿಲ್ಲ. ಹೀಗಾಗಿ ನಾವು ಯಾರಿಗೂ ಮನವಿ ಮಾಡಲಿಲ್ಲ ‘ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ಪೈಪೋಟಿಯಲ್ಲಿ ಬಿಜೆಪಿ ಗೆಲುವು ಸಾಧಿಸಿತು ಎಂಬ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಈ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಹೇಗೆ ಬಂದಿತ್ತು? ಅದಕ್ಕೆ ಜವಾಬ್ದಾರಿ ಯಾರು? ಕುಮಾರಸ್ವಾಮಿ ಅವರು ಈ ಬಗ್ಗೆ ಏನು ಹೇಳಿದ್ದಾರೆ? ಸರ್ಕಾರ ಬಿದ್ದರೂ ಪರವಾಗಿಲ್ಲ ಎಂದು ವಿದೇಶಕ್ಕೆ ಹೋಗಿದ್ದೆ ಎಂದು ಅವರು ಹೇಳಿಕೊಂಡಿದ್ದಾರೆ. ಆಗ ನಮಗೆ ಎಷ್ಟು ನೋವಾಗಿದೆ. ನಾವು ಬೀದಿಗೆ ಬಂದಿದ್ದೆವು. ಜೆಡಿಎಸ್ ನವರು ಅವರ ಪಕ್ಷ ಕಟ್ಟಿಕೊಂಡು 123 ಸ್ಥಾನ ಗೆಲ್ಲಲಿ. ನಾವು ನಮ್ಮ ಪಕ್ಷ ಕಟ್ಟಿಕೊಂಡು 150 ಸ್ಥಾನ ಗೆಲ್ಲುತ್ತೇವೆ. ಬಿಜೆಪಿಯವರು ಅವರ ಪಕ್ಷ ಕಟ್ಟಿಕೊಂಡು 150 ಗೆಲ್ಲಲಿ’ ಎಂದರು.
ನೂಪುರ್ ಶರ್ಮಾ ಅವರ ಹೇಳಿಕೆ ಸೃಷ್ಟಿಸಿರುವ ವಿವಾದದ ಬಗ್ಗೆ ಕೇಳಿದ ಪ್ರಶ್ನೆಗೆ, ‘ ಇದು ರಾಷ್ಟ್ರ ಬಿಜೆಪಿ ಸರ್ಕಾರದ ವೈಫಲ್ಯ. ಕಾಂಗ್ರೆಸ್ ಪಕ್ಷದ ಅಧ್ಯಕ್ಷನಾಗಿ ನಾನು ಮನವಿ ಮಾಡಿಕೊಳ್ಳುವುದಿಷ್ಟೇ. ಈ ವಿದೇಶಿ ಬಂಡವಾಳ ತಂದು ರಾಜ್ಯವನ್ನು ಅಭಿವೃದ್ಧಿ ಮಾಡಬೇಕಿದೆ. ಇಷ್ಟು ದಿನ ನಾವೆಲ್ಲರೂ ಅಣ್ಣ ತಮ್ಮಂದಿರಂತೆ ಬದುಕಿದ್ದು, ಮುಂದೆಯೂ ಅದೇ ರೀತಿ ಇರೋಣ. ಯಾವುದೇ ಪ್ರಚೋದನೆಗೆ ಒಳಗಾಗದೆ, ಸಮಾಜದಲ್ಲಿ ಶಾಂತಿ ಕಾಪಾಡೋಣ’ ಎಂದರು.
ಕಾಂಗ್ರೆಸ್ ಹಾಗೂ ಜೆಡಿಎಸ್ ನಿಂದ ಸಾಕಷ್ಟು ಜನ ಬರಲಿದ್ದಾರೆ ಎಂಬ ಸಚಿವ ಅಶ್ವತ್ಥ ನಾರಾಯಣ ಅವರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ‘
ಗಂಡಸರು ಮನಸ್ಸು ಮಾಡಿದರೆ ಯಾರನ್ನು ಬೇಕಾದರೂ ಕರೆದುಕೊಂಡು ಹೋಗಬಹುದು. ಅವರಿಗೆ ಶುಭ ಕೋರುತ್ತೇನೆ’ ಎಂದರು.