ಪ್ರಧಾನಿ ಮೋದಿ ಅವರಿಂದ ರಾಜ್ಯದ ಅತ್ಯಾಧುನಿಕ ತಂತ್ರಜ್ಞಾನದ 150 ಉನ್ನತೀಕರಿಸಿದ ಕೌಶಲ್ಯ ಕೇಂದ್ರಗಳ ಲೋಕಾರ್ಪಣೆ
ಬೆಂಗಳೂರು ಜೂನ್ 20, (ಕರ್ನಾಟಕ ವಾರ್ತೆ)
ಜಾಗತಿಕ ಕೈಗಾರಿಕೆ ಹಾಗೂ ಅಸೆಂಬ್ಲಿ ಲೈನುಗಳಲ್ಲಿ ಉದ್ಯೋಗಾವಕಾಶ ಕಲ್ಪಿಸಲು ಯುವಜನತೆಗೆ ಅತ್ಯಾಧುನಿಕ ತಂತ್ರಜ್ಞಾನಗಳ ತಳಹದಿ ನೀಡಲು ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಟಾಟಾ ಟೆಕ್ನೋಲಜಿಸ್ ಸಹಯೋಗದೊಂದಿಗೆ ಮೊದಲ ಹಂತದಲ್ಲಿ ರಾಜ್ಯದ ಆಯ್ದ 150 ಕೈಗಾರಿಕಾ ತರಬೇತಿ ಸಂಸ್ಥೆ (ಐಟಿಐ) ಗಳನ್ನು ಉನ್ನತೀಕರಿಸಿದ್ದು, ಇಂದು ಸನ್ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಬೆಂಗಳೂರಿನ ಡಾ. ಬಿ. ಆರ್. ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾನಿಲಯ ಆವರಣದಲ್ಲಿ ಲೋಕಾರ್ಪಣೆ ಮಾಡಿದರು.
ಎರಡು ದಿನಗಳ ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಇಂದು ಬೆಂಗಳೂರು ನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳಗೆ ಚಾಲನೆ ನೀಡಿದರು. ಕೌಶಲ್ಯ ಕೇಂದ್ರಗಳ ಲೋಕಾರ್ಪಣೆ ಕಾರ್ಯಕ್ರಮ ನೆರವೇರಿಸಿಕೊಟ್ಟ ಅವರು ಇದೇ ಆವರಣದಲ್ಲಿ ಆಯೋಜಿಸಲಾಗಿದ್ದ ಐಟಿಐ ಉನ್ನತೀಕರಣ ಭಾಗವಾಗಿ ಅಳವಡಿಸಲಾದ ಯಂತ್ರೋಪಕರಣಗಳ ಪ್ರದರ್ಶನವನ್ನು ವೀಕ್ಷಿಸಿ, ಅವುಗಳು ಕಾರ್ಯ ನಿರ್ವಹಿಸುವ ಬಗ್ಗೆ ಮಾಹಿತಿ ಪಡೆದರು. ಐಟಿಐಗಳ ಉನ್ನತೀಕರಣದತ್ತ ರಾಜ್ಯದ ಸಾಧನೆಯನ್ನು ಶ್ಲಾಘಿಸಿದ ಪ್ರಧಾನಿ ಅವರು ದೇಶದೆಲ್ಲೆಡೆ ಇದೇ ರೀತಿಯ ಬೆಳವಣಿಗೆ ಅಗತ್ಯವಿದೆ ಎಂದು ತಿಳಿಸಿದರು. ತರಬೇತಿ ನಿರತ ವಿದ್ಯಾರ್ಥಿಗಳೊಂದಿಗೆ ಅವರ ತರಬೇತಿ ಮತ್ತು ಮುಂದಿನ ಗುರಿಗಳ ಬಗ್ಗೆ ಸಮಾಲೋಚನೆಯನ್ನೂ ಅವರು ನಡೆಸಿದರು.
ಕರ್ನಾಟಕ ಸರ್ಕಾರವು ರಾಜ್ಯದ ಆಯ್ದ 150 ಐಐಟಿಗಳನ್ನು ತಾಂತ್ರಿಕ ಚಟುವಟಿಕೆ ಕೇಂದ್ರಗಳನ್ನಾಗಿ ಪರಿವರ್ತಿಸಿ ಆಧುನಿಕ ಕಲ್ಪನೆಯ ಯೋಜನೆಯನ್ನು ಪ್ರಾರಂಭಿಸಿದ್ದು, ಕೌಶಲ್ಯಾಭಿವೃದ್ಧಿಯ ಅಪೇಕ್ಷೆಯಲ್ಲಿರುವ ವಿದ್ಯಾರ್ಥಿಗಳು ಹಾಗೂ ಉದ್ಯಮದ ವೃತ್ತಿನಿರತರಿಗೆ 23 ಅಲ್ಪಾವಧಿಯ ಶಿಕ್ಷಣ ಕ್ರಮ ಗಳನ್ನು ಅಳವಡಿಸಲಾಗಿದೆ. ಅತ್ಯಾಧುನಿಕ ಉಪಕರಣಗಳನ್ನು ಬಳಸಿ ಪ್ರಾಯೋಗಿಕ ತರಬೇತಿಯನ್ನು ನೀಡಲಾಗುತ್ತಿದೆ.
ಈ ಎಲ್ಲಾ ಐಟಿಐ ಸಂಸ್ಥೆಗಳಲ್ಲಿ ಈಗಾಗಲೇ 2021 22ರಲ್ಲಿ ದೀರ್ಘಾವಧಿಯ 11 ಶಿಕ್ಷಣಕ್ರಮಗಳು ಹಾಗೂ ಅಲ್ಪಾವಧಿಯ 23 ಶಿಕ್ಷಣಕ್ರಮಗಳು ಪ್ರಾರಂಭ ಗೊಂಡಿರುತ್ತವೆ. 11 ವಿವಿಧ ಅತ್ಯಾಧುನಿಕ ವಲಯಗಳಲ್ಲಿ ಕೈಗಾರಿಕೆ 4.0 ದರ್ಜೆಯ ತರಬೇತಿಯನ್ನು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದ್ದು, ವೈಮಾನಿಕ ಮತ್ತು ರಕ್ಷಣಾ ವಲಯ, ಗೃಹಬಳಕೆಯ ವಿದ್ಯುನ್ಮಾನ ಉಪಕರಣಗಳು, ಮರಗೆಲಸ ಮತ್ತು ಸೈನ್ ಬೋರ್ಡ್, ಇಂಧನ, ರೈಲ್ವೆ, ಕೃಷಿ, ವಿದ್ಯುತ್ ಚಾಲಿತ ವಾಹನಗಳು, ಮೂಲಸೌಕರ್ಯ, ಪ್ಯಾಕೇಜಿಂಗ್ ಉದ್ಯಮ, ಹಡಗು ನಿರ್ಮಾಣ, ಕರಕುಶಲ ವಸ್ತುಗಳು ಆಟಿಕೆಗಳ ಉದ್ಯಮ, ವಾಹನೋದ್ಯಮ, ಆಹಾರ ಹಾಗೂ ಪಾನೀಯ, ಲೋಹ ಮತ್ತು ಗಣಿಗಾರಿಕೆ, ಔಷಧೀಯ ಉದ್ಯಮ ಹಾಗೂ ಸ್ಮಾರ್ಟ್ ಸಿಟಿ ವಲಯಗಳಲ್ಲಿ ತರಬೇತಿಯನ್ನು ನೀಡಲಾಗುತ್ತಿದೆ.
ಕಟ್ಟಡ ಮೂಲಸೌಕರ್ಯ ಸ್ಥಾಪನೆ 150 ನವೀನ ಕಾರ್ಯಾಗಾರಗಳು 72 ನವೀನ ತಂತ್ರಜ್ಞಾನ ಪ್ರಯೋಗಶಾಲೆಗಳು 78 ಪ್ರಯೋಗ ಶಾಲೆಗಳ ಉನ್ನತಿಕರಣಉನ್ನತಿಕರಣ ಈ ಯೋಜನೆಯ ಮುಖ್ಯಾಂಶಗಳಾಗಿವೆ.
ಟಾಟಾ ಟೆಕ್ನಾಲಜೀಸ್ ಹಾಗೂ ಇತರೆ ಹಲವು ಸಂಸ್ಥೆಗಳ ಸಹಯೋಗದೊಂದಿಗೆ ಉನ್ನತೀಕರಿಸಿ ತಂತ್ರಜ್ಞಾನ ಕೇಂದ್ರಗಳಾಗಿ ಪರಿವರ್ತನೆಗೊಳಿಸಲಾಗಿರುವ ಬಾಗಲಕೋಟೆಯ ನಾಲ್ಕು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮೂರು, ಬೆಂಗಳೂರು ನಗರ ಜಿಲ್ಲೆಯ ಮೂರು, ಬೆಳಗಾವಿಯ ಜಿಲ್ಲೆಯ ಆರು, ಬಳ್ಳಾರಿಯ ಐದು, ಬೀದರ್ ಜಿಲ್ಲೆಯ ಐದು ಚಾಮರಾಜನಗರ ಜಿಲ್ಲೆಯ ಐದು ಚಿಕ್ಕಬಳ್ಳಾಪುರ ಜಿಲ್ಲೆಯ ನಾಲ್ಕು, ಚಿಕ್ಕಮಗಳೂರಿನ ಐದು ಚಿತ್ರದುರ್ಗ ಜಿಲ್ಲೆಯ ಐದು, ದಕ್ಷಿಣ ಕನ್ನಡ ಜಿಲ್ಲೆಯ ಐದು ದಾವಣಗೆರೆಯ ಐದು, ಧಾರವಾಡ ಜಿಲ್ಲೆಯ ಮೂರು ಗದಗ ಜಿಲ್ಲೆಯ ನಾಲ್ಕು, ಹಾಸನದ ಎಂಟು, ಹಾವೇರಿಯ ನಾಲ್ಕು, ಕಲಬುರಗಿಯ ಒಂಭತ್ತು, ಕೊಡಗು ಜಿಲ್ಲೆಯ ಎರಡು, ಕೋಲಾರ ಜಿಲ್ಲೆಯ ನಾಲ್ಕು, ಕೊಪ್ಪಳದ ಆರು, ಮಂಡ್ಯ ಜಿಲ್ಲೆಯ ಆರು, ಮೈಸೂರು ಜಿಲ್ಲೆಯ ಎಂಟು, ರಾಯಚೂರು ಜಿಲ್ಲೆಯ ಮೂರು, ರಾಮನಗರ ಜಿಲ್ಲೆಯ ಮೂರು, ಶಿವಮೊಗ್ಗ ಜಿಲ್ಲೆಯ ಆರು, ತುಮಕೂರು ಜಿಲ್ಲೆಯ ಏಳು, ಉಡುಪಿ ಜಿಲ್ಲೆಯ ನಾಲ್ಕು, ಉತ್ತರ ಕನ್ನಡ ಜಿಲ್ಲೆಯ ಏಳು, ವಿಜಯನಗರದ ಮೂರು, ವಿಜಯಪುರ ಜಿಲ್ಲೆಯ ಆರು ಮತ್ತು ಯಾದಗಿರಿ ಜಿಲ್ಲೆಯ ಎರಡು ಐಟಿಐಗಳನ್ನು ಇಂದು ಲೋಕಾರ್ಪಣೆ ಮಾಡಲಾಯಿತು.
ಇದೇ ಸಂದರ್ಭದಲ್ಲಿ ರಾಜ್ಯದ ಘನತೆವೆತ್ತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಉನ್ನತ ಶಿಕ್ಷಣ ಸಚಿವರಾದ ಅಶ್ವಥ್ ನಾರಾಯಣ್ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಎಸ್ ಸೆಲ್ವಕುಮಾರ್ ಮತ್ತು ಇತರರು ಉಪಸ್ಥಿತರಿದ್ದರು.