IMG 20220705 WA0025

ಗೃಹ ಸಚಿವರ ರಾಜಿನಾಮೆ ಕೇಳಲು ಕಾಂಗ್ರೆಸ್‍ಗೆ ನೈತಿಕ ಹಕ್ಕಿಲ್ಲ….!

Genaral STATE

ಗೃಹ ಸಚಿವರ ರಾಜಿನಾಮೆ ಕೇಳಲು ಕಾಂಗ್ರೆಸ್‍ಗೆ ನೈತಿಕ ಹಕ್ಕಿಲ್ಲ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಜುಲೈ 05: ಪಿಎಸ್ ಐ ನೇಮಕಾತಿ ಪ್ರಕರಣ ಗಮನಕ್ಕೆ ಬಂದ ತಕ್ಷಣವೇ ಪ್ರಾಥಮಿಕ ತನಿಖೆ ಮಾಡಿಸಿ, ಕೂಡಲೇ ಸಿಐಡಿ ಗೆ ತನಿಖೆಯನ್ನು ವಹಿಸಲಾಯಿತು. ಅತ್ಯಂತ ಪ್ರಾಮಾಣಿಕವಾಗಿ, ದಕ್ಷತೆಯಿಂದ ಗೃಹ ಸಚಿವರು ಕೆಲಸ ಮಾಡಿದ್ದಾರೆ. ಅವರ ಪ್ರಾಮಾಣಿಕತೆ ಮತ್ತು ದಕ್ಷತೆ ಇರುವುದರಿಂದಲೇ ಪ್ರಕರಣ ಹೊರಬಂದಿದೆ. ಗೃಹ ಸಚಿವರ ರಾಜಿನಾಮೆ ಕೇಳಲು ಕಾಂಗ್ರೆಸ್ ಗೆ ನೈತಿಕ ಹಕ್ಕಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ತಮ್ಮ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು.

ಕಾಂಗ್ರೆಸ್ ನವರ ಕಾಲದಲ್ಲಿ ಪಿಎಸ್‍ಐ ನೇಮಕಾತಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿತ್ತು. ಪ್ರಕರಣ ದಾಖಲಾಗಿ ಹಿರಿಯ ಪೋಲಿಸ್ ಅಧಿಕಾರಿ ಆರೋಪಿಯಾಗಿದ್ದರು. ಮುಂದೆ ಏನಾಯಿತು? ಬಂಧನ ದೂರದ ಮಾತು, ಅವರನ್ನು ವಿಚಾರಣೆಯೂ ಮಾಡಲಿಲ್ಲ. ಇಂಥ ದಿಟ್ಟ ಕ್ರಮವನ್ನು ತೆಗೆದುಕೊಳ್ಳುತ್ತಾರೆ ಎಂದರೆ, ಅಧಿಕಾರಿಗಳಿಗೆ ಯಾವುದೇ ಮುಲಾಜಿಗೆ ಒಳಗಾಗದೆ ತನಿಖೆ ಕೈಗೊಳ್ಳಲು ಮುಕ್ತ ಅಧಿಕಾರವನ್ನು ಅಧಿಕಾರಿಗಳಿಗೆ ನೀಡಲಾಗಿದೆ. ನಮಗೆ ಇಂಥ ಚಟುವಟಿಕೆಗಳ ಬಗ್ಗೆ ಜೀರೋ ಟಾಲರೆನ್ಸ್ ಇದೆ ಹಾಗೂ ವ್ಯವಸ್ಥೆಯನ್ನು ಸ್ವಚ್ಛಗೊಳಿಸಲು ದೊಡ್ಡವರಾಗಲೀ, ಸಣ್ಣವರಾಗಲಿ ಸ್ವಚ್ಛ ಮಾಡುವ ಕೆಲಸ ನಿರಂತರವಾಗಿ ನಡೆಯಬೇಕೆಂಬ ದೃಷ್ಟಿಯಿಂದ ಈ ಕೆಲಸ ಮಾಡಿದ್ದೇವೆ. ಕಾಂಗ್ರೆಸ್ ಇದ್ದಿದ್ದರೆ, ಇದೇ ಪ್ರಕರಣವನ್ನು ವ್ಯವಸ್ಥಿತವಾಗಿ ಮುಚ್ಚಿಹಾಕುತ್ತಿದ್ದರು. ಹಿಂದೆ ಹೀಗೆ ಮಾಡಿದ್ದಾರೆ. ವಿವರಗಳನ್ನು ಕೊಡಲು ನಾನು ಸಿದ್ಧ. ಯಾರ ರಾಜಿನಾಮೆಯನ್ನು ಕೇಳುವ ಹಕ್ಕು ಅವರಿಗಿಲ್ಲ ಎಂದರು.

ಪ್ರಕರಣದಲ್ಲಿ 50 ಜನರನ್ನು ಬಂಧಿಸಲಾಗಿದ್ದು, 20 ಜನ ಪೊಲೀಸ್ ಅಧಿಕಾರಿಗಳೇ ಇದ್ದಾರೆ. ಯಾರನ್ನು , ಯಾವುದನ್ನೂ ಮುಚ್ಚಿಡುವ ಪ್ರಯತ್ನ ಮಾಡಿಲ್ಲ. ಬಹಳ ನಿಯತ್ತಿನಿಂದ ದಕ್ಷತೆಯಿಂದ ಕೆಲಸ ಮಾಡಿದ್ದಾರೆ. ಯಾರೂ ರಾಜಿನಾಮೆ ಕೊಡುವ ಪ್ರಶ್ನೆಯೇ ಇಲ್ಲ. ಅವರು ಇದ್ದದ್ದರಿಂದಲೇ ಇದೊಂದು ಅಂತಿಮ ಘಟ್ಟ ಮುಟ್ಟಿದೆ ಎಂದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಗೃಹ ಸಚಿವರು ಸದನವನ್ನು ತಪ್ಪು ದಾರಿಗೆ ಎಳೆದಿದ್ದರಿಂದ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದಿರುವ ಬಗ್ಗೆ ಪ್ರತಿಕ್ರಿಯೆ ನೀಡಿ ಆ ಸಂದರ್ಭದಲ್ಲಿ ಮಾಹಿತಿ ಇರಲಿಲ್ಲ. ಮಾಹಿತಿ ಗೊತ್ತಾದ ಬಳಿಕೆ ಏನು ಮಾಡಿದರು, ಎಷ್ಟು ದಕ್ಷತೆಯಿಂದ ಮಾಡಿದರು ಎನ್ನುವುದು ಮುಖ್ಯವಾಗುತ್ತದೆ ಎಂದರು. ವಿರೋಧಪಕ್ಷದವರು ಗಾಳಿಯಲ್ಲಿ ಹೇಳಿಕೆ ನೀಡುವುದಲ್ಲ. ಸರ್ಕಾರ ಗಂಭೀರವಾಗಿ ಪರಿಗಣಿಸಿರದಿದ್ದರೆ, ಪ್ರಕರಣ ಹೊರಗೆ ಬರುತ್ತಿರಲಿಲ್ಲ. ಸಿಐಡಿ, ಎಸಿಬಿ ಒಳ್ಳೆ ಕೆಲಸ ಮಾಡಿದ್ದಾರೆ. ಎಲ್ಲಿ ಪುರಾವೆ ಇದೆಯೋ ಅಲ್ಲಿ ತನಿಖೆ ಮಾಡಲಾಗಿದೆ. ಪುರಾವೆ ಇಲ್ಲದೆ ಏನೂ ಮಾಡಲಾಗುವುದಿಲ್ಲ ಎಂದರು.