ನೈತಿಕ ಹೊಣೆ ಹೊತ್ತು ಸಿಎಂ, ಗೃಹಸಚಿವರು ರಾಜೀನಾಮೆ ನೀಡಬೇಕು, ಇಲ್ಲದಿದ್ದರೆ ರಾಜ್ಯಪಾಲರೇ ಸರ್ಕಾರವನ್ನು ವಜಾಗೊಳಿಸಬೇಕು: ಡಿ.ಕೆ. ಶಿವಕುಮಾರ್ ಆಗ್ರಹ
ಬೆಂಗಳೂರು:
ಪಿಎಸ್ ಐ ಅಕ್ರಮ ಪ್ರಕರಣದಲ್ಲಿ ಎಡಿಜಿಪಿ ಅಮೃತ್ ಪೌಲ್ ಅವರ ಬಂಧನವಾಗಿದ್ದು, ಸರ್ಕಾರ ಈ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದೆ. ಹಗರಣದ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯಪಾಲರೇ ರಾಜ್ಯ ಸರ್ಕಾರವನ್ನು ವಜಾಗೊಳಿಸಿ ರಾಜ್ಯದ ಮಾನ ಉಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ಜಂಟಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು ಹೇಳಿದ್ದಿಷ್ಟು:
‘ಈಗ ನಡೆದಿರುವ ಬೆಳವಣಿಗೆ ಕರ್ನಾಟಕಕ್ಕೆ ಕಪ್ಪು ಚುಕ್ಕೆಯಾಗಿದೆ. ಚುಕ್ಕೆ ಚಿಕ್ಕದಾಗಿ ಕಾಣುತ್ತಿರಬಹುದು. ಆದರೆ ಇದರಿಂದ ರಾಜ್ಯದ ಆಡಳಿತ ಹಾಗೂ ಘನತೆಗೆ ಮಸಿ ಬಳಿದಂತಾಗಿದೆ. ಈ ಸಮಯದಲ್ಲಿ ಜನಸಾಮಾನ್ಯರ ರಕ್ಷಣೆಗೆ ಬಂದಿರುವ ನ್ಯಾಯಾಂಗಕ್ಕೆ ಸಾಷ್ಟಾಂಗ ನಮಸ್ಕರಿಸುವೆ. ಆದರೆ ರಾಜ್ಯದಲ್ಲಿ ನ್ಯಾಯಾಂಗಕ್ಕೂ ರಕ್ಷಣೆ ಇಲ್ಲದಂತಾಗಿದೆ.
ನ್ಯಾಯಮೂರ್ತಿಗಳು ತಮ್ಮ ಸ್ಥಾನಕ್ಕೆ ಕಂಟಕ ಬಂದಿರುವ ರೀತಿ ದುಗುಡ ಹೇಳಿಕೊಂಡಿದ್ದಾರೆ. ಪ್ರತಿ ಸಂದರ್ಭದಲ್ಲಿ ನ್ಯಾಯಾಲಯ ಏನು ಹೇಳಿದೆ, ಸರ್ಕಾರ ಏನು ಬಯಸಿದೆ, ಈ ವಹಗರಣದಲ್ಲಿ ಮಾಹಿತಿ ನೀಡದೇ ಮುಚ್ಚಿಹಾಕಲು ಹೇಗೆ ಪ್ರಯತ್ನಿಸಿದೆ ಎಂಬುದು ದಾಖಲೆಗಳಿಂದ ಜಗಜ್ಜಾಹೀರಾಗಿದೆ.
545 ಪಿಎಸ್ಐ ಹುದ್ದೆಗಳಿಗೆ 1.20 ಲಕ್ಷ ಯುವಕರು ಅರ್ಜಿ ಹಾಕಿ, ಅದರಲ್ಲಿ 52 ಸಾವಿರ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಅರ್ಹರಾಗುತ್ತಾರೆ. ಸುಮಾರು 300 ಹುದ್ದೆಗಳ ನೇಮಕ ಅಕ್ರಮವಾಗಿ ಆಗಿದೆ. ಪಿಎಸ್ಐ ನೇಮಕ ಅಕ್ರಮದಲ್ಲಿ ಅಂಗಡಿ ಓಪನ್ ಆಗಿತ್ತು. ಉಪ್ಪಿನಂಗಡಿ ಓಪನ್ ಇದ್ದ ಕಾರಣಕ್ಕೆ, ಅದನ್ನು ಕೊಳ್ಳಲು ಯುವಕರು ಹೋಗಿದ್ದರು. ಅಂಗಡಿ ತೆಗೆಯದಿದ್ದರೆ ಯುವಕರು ಹೋಗುತ್ತಿದ್ದರೇ? ಈ ಉಪ್ಪಿನಂಗಡಿ ಯಾರದ್ದು? ಎಂಬ ತನಿಖೆ ಆಗಬೇಕು. ಆದರೆ ಸರ್ಕಾರ ಈ ಅಕ್ರಮದಲ್ಲಿ ಶಾಮೀಲಾಗಿ ಕೇವಲ ಖರೀದಿ ಮಾಡಿದವರನ್ನು ಮಾತ್ರ ಬಂಧಿಸಿ, ದೊಡ್ಡವರನ್ನು ಬಿಟ್ಟಿದೆ.
ಈಗ ಎಡಿಜಿಪಿ ವಿಚಾರಣೆ ಮಾಡಿದ್ದು, ಐಪಿಎಸ್ ಅಧಿಕಾರಿಯನ್ನು ಬಂಧಿಸಿದ್ದಾರೆ. ಬಂಧಿಸಿದ ಅರ್ಧಗಂಟೆಯಲ್ಲಿ ಆರೋಗ್ಯ ಪರೀಕ್ಷೆಗೆ ಕಳಿಸುತ್ತೀರಲ್ಲ, ನಿಮಗೆ ನಾಚಿಕೆ ಆಗುವುದೇ ಇಲ್ಲವೇ? ಯಾವುದೇ ವಿಚಾರಣೆ ಮಾಡಬೇಕಾದರೆ, ಅವರ ಹೇಳಿಕೆ, ಅವರ ಕೆಳ ಅಧಿಕಾರಿಗಳ ಹೇಳಿಕೆ, ಸರಿಯಾಗಿದೆಯೇ ಇಲ್ಲವೇ? ಎಂದು ಸುದೀರ್ಘ ಚರ್ಚೆ ನಡೆಸಿ ದಾಖಲಾತಿ ಸಂಗ್ರಹಿಸಿದ ನಂತರ ಅವರನ್ನು ವೈದ್ಯರ ಪರೀಕ್ಷೆಗೆ ಕಳುಹಿಸುವುದು ವಾಡಿಕೆ. ಕೋರ್ಟ್ ಹೇಳಿತೆಂದು ಅರ್ಧಗಂಟೆಯಲ್ಲಿ ಬಂಧಿಸಲಾಗಿದೆ. ಎಡಿಜಿಪಿ ಅವರ ಬಂಧನ ಕೇವಲ ನ್ಯಾಯಾಂಗ ಹಾಗೂ ಜನರ ಕಣ್ಣೊರೆಸುವ ತಂತ್ರವಾಗಿದೆ. ಬೇರೊಂದು ಪ್ರಕರಣದಲ್ಲಿ ಅಲೋಕ್ ಕುಮಾರ್ ಅವರನ್ನು ದಿನವಿಡೀ ವಿಚಾರಣೆ ಮಾಡಿದ್ದಿರಿ. ರಾಹುಲ್ ಗಾಂಧಿ ಅವರಿಗೆ 50 ತಾಸುಗಳ ವಿಚಾರಣೆ ಮಾಡಿದ್ದೀರಿ. ಆದರೆ ಈ ಪ್ರಕರಣದಲ್ಲಿ ಕೇವಲ ಅರ್ಧ ಗಂಟೆಯಲ್ಲಿ ವಿಚಾರಣೆ ಮುಗಿಸಿದ್ದೀರಿ.
ಈ ಪ್ರಕರಣದಲ್ಲಿ ಸುಮಾರು 300 ರಿಂದ 500 ಕೋಟಿಯಷ್ಟು ಅವ್ಯವಹಾರ ನಡೆದಿದೆ ಎಂಬ ಮಾತುಗಳು ಕೇಳಿಬಂದಿವೆ. ಇದೆಲ್ಲದರ ಸಂಪೂರ್ಣ ವಿಚಾರಣೆ ಮಾಡದೇ ಅವರನ್ನು ಬಂಧಿಸಿ ವಿಚಾರಣೆ ಮುಕ್ತಾಯಗೊಳಿಸಲು ಮುಂದಾಗಿದ್ದಾರೆ.
ನಿನ್ನೆ ಡಿಸಿ ಹಾಗೂ ಎಡಿಜಿಪಿ ಬಂಧಿಸಲಾಗಿದೆ. ನಾವು ಈ ಹಿಂದೆಯೇ ಹಗರಣದಲ್ಲಿ ಇವರ ಕೈವಾಡವಿದೆ, ಕ್ರಮ ಕೈಗೊಳ್ಳುವಂತೆ ಹೇಳಿದ್ದೆವು. ಈ ಎಲ್ಲ ಅಕ್ರಮಗಳಿಗೂ ಸರ್ಕಾರವೇ ನೇರಹೊಣೆ. ಹೀಗಾಗಿ ಮುಖ್ಯಮಂತ್ರಿಗಳು ನೈತಿಕ ಹೊಣೆ ಹೊತ್ತು ರಾಜಿನಾಮೆ ಕೊಡಬೇಕು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಾಂಗ ತನಿಖೆ ನಡೆಸಬೇಕು. ಈ ಬಗ್ಗೆ ವಿರೋಧ ಪಕ್ಷದ ನಾಯಕರು ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದಾರೆ.
ಇನ್ನು ಸದನದಲ್ಲಿ ಈ ನೇಮಕಾತಿಯಲ್ಲಿ ಯಾವುದೇ ಅಕ್ರಮ ನಡೆದಿಲ್ಲ ಎಂದು ಸದನದಲ್ಲಿ ಆರು ಬಾರಿ ಸುಳ್ಳು ಹೇಳಿ, ತಪ್ಪು ಮಾಹಿತಿ ನೀಡಿ ರಾಜ್ಯದ ದಾರಿ ತಪ್ಪಿಸಿದ ಗೃಹ ಸಚಿವರ ಮೇಲೆಯೂ ಕೇಸು ದಾಖಲಿಸಬೇಕು. ಅವರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
ಈ ಪ್ರಕರಣವನ್ನು ನಮ್ಮ ಪಕ್ಷದ ವಕ್ತಾರರು ಬಯಲಿಗೆಳೆದರೆ ಅವರಿಗೆ ನಾಲ್ಕು ಬಾರಿ ನೊಟೀಸ್ ಕೊಟ್ಟಿದ್ದಾರೆ. ಈ ರೀತಿ ಇತಿಹಾಸದಲ್ಲಿ ಎಲ್ಲೂ ನಡೆದಿರಲಿಲ್ಲ. ನೊಟೀಸ್ ಜಾರಿ ಮಾಡಿ ಹೆದರಿಸುವ ಪ್ರಯತ್ನ ಮಾಡಿದ್ದಾರೆ. ಇನ್ನು ಈ ಪ್ರಕರಣದ ವಿಚಾರವಾಗಿ ತನಿಖಾ ವರದಿಯನ್ನು ಅಡ್ವೊಕೇಟ್ ಜನರಲ್ ಸೀಲ್ಡ್ ಕವರ್‌ನಲ್ಲಿ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಮುಚ್ಚಿದ ಲಕೋಟೆಯಲ್ಲಿ ಈ ವರದಿ ಏಕೆ ಕೊಡಬೇಕು, ಬಹಿರಂಗವಾಗಿ ನೀಡಲಿ. ಜನರಿಗೆ ಎಲ್ಲ ವಿಚಾರ ಗೊತ್ತಾಗಲಿ.
ಇದುವರೆಗೂ ಶಿಫಾರಸ್ಸಿನ ಮೇರೆಗೆ ಒಂದೆರಡು ಅಂಕ ಹೆಚ್ಚಿಸಿದ್ದಾರೆ ಎಂಬ ಮಾತು ಕೇಳಿದ್ದೆವೇ ಹೊರತು, ಈ ರೀತಿ 20-30 ಅಂಕ ಪಡೆದವರಿಗೆ 100 ಅಂಕ ನೀಡಿರುವ ಪ್ರಕರಣವನ್ನು ಇದೇ ಮೊದಲ ಬಾರಿಗೆ ನೋಡುತ್ತಿದ್ದೇವೆ. ಇದು ದೇಶದಲ್ಲೇ ಅತ್ಯಂತ ಭ್ರಷ್ಟ ರಾಜ್ಯವಾಗಿದೆ. ಇದು 40% ಗಿಂತ ಹೆಚ್ಚಿನ ಭ್ರಷ್ಟಾಚಾರದ ಸರ್ಕಾರವಾಗಿದೆ.
ಈ ಭ್ರಷ್ಟ ಸರ್ಕಾರವನ್ನು ವಜಾಗೊಳಿಸಿ ರಾಜ್ಯಪಾಲರು ರಾಜ್ಯದ ಮರ್ಯಾದೆ ಉಳಿಸಬೇಕು.’