20220705 225915

PSI ಹಗರಣ: ಎಸಿಬಿಯ ಎಸ್ ಪಿ ಕೇಡರ್ ಅಧಿಕಾರಿಗೆ 50 ಲಕ್ಷ ರೂ. ಕೊಟ್ಟವರು ಯಾರು?

Genaral STATE

PSI ಹಗರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಪೊಲೀಸ್ ಪೋಸ್ಟಿಂಗ್ ಗೆ ರೇಟ್ ಫಿಕ್ಸ್ ಮಾಡ್ತಾರೆ,
*

ಎಸಿಬಿಯ ಎಸ್ ಪಿ ಕೇಡರ್ ಅಧಿಕಾರಿಗೆ 50 ಲಕ್ಷ ರೂ. ಕೊಟ್ಟವರು ಯಾರು?
ಮುಖ್ಯಮಂತ್ರಿಗೆ ಪ್ರಶ್ನೆ ಕೇಳಿದ ಮಾಜಿ ಮುಖ್ಯಮಂತ್ರಿ

ದಾಖಲೆ ಇಟ್ಟು ಮಾತನಾಡುತ್ತೇನೆ, ಗಾಳಿಯಲ್ಲಿ ಗುಂಡು ಹೊಡೆಯಲ್ಲ ಎಂದ ಮಾಜಿ ಸಿಎಂ


ಬೆಂಗಳೂರು: ಬಹುಕೋಟಿ ರೂಪಾಯಿ ಹಗರಣ ಪಿಎಸ್ಐ ಕರ್ಮಕಾಂಡದ ಬಗ್ಗೆ ನಾನು ಗಾಳಿಯಲ್ಲಿ ಗುಂಡು ಹೊಡೆದಿಲ್ಲ. ಇದ್ದದ್ದನ್ನು ಇದ್ದ ಹಾಗೆ ಹೇಳಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.

ನಗರದ ಚಾಮರಾಜಪೇಟೆಯ ಛಲವಾದಿ ಪಾಳ್ಯದಲ್ಲಿ ಇಂದು ಮಾತನಾಡಿದ ಅವರು; ಮಾಧ್ಯಮಗಳಲ್ಲೇ ಈ ಬಗ್ಗೆ ತನಿಖಾ ವರದಿಗಳು ಬಂದಿವೆ. ತಲಾ 30 ಲಕ್ಷ ರೂಪಾಯಿಯನ್ನು 25 ಅಭ್ಯರ್ಥಿಗಳಿಂದ ವಸೂಲಿ ಆಗಿದೆ ಅಂದರೆ, ಒತ್ತು ಮೊತ್ತ ಎಷ್ಟಾಯ್ತು? 200-300 ಜನ 70-80 ಲಕ್ಷ ಕೊಟ್ಟಿದ್ದರೆ ಒಟ್ಟು ಹಣ ಎಷ್ಟಾಯ್ತು? ಎಂದು ಅವರು ಪ್ರಶ್ನಿಸಿದರು.

ನಾನು ಯಾವುದೇ ಕಾರಣಕ್ಕೂ ಗಾಳಿಯಲ್ಲಿ ಗುಂಡು ಹೊಡೆದಿಲ್ಲ. ಹಗರಣದಲ್ಲಿ ಕಿಂಗ್ ಪಿನ್ ಬೇರೆ ಇದ್ದಾರೆ, ಅವರನ್ನು ಮೊದಲು ಬಂಧಿಸಿ. ಸಣ್ಣ ಪುಟ್ಟ ಮೀನು ಹಿಡಿಯಬೇಡಿ ಅಂದಿದ್ದೆ. ನಾನು ಸರ್ಕಾರಕ್ಕೆ ಎಚ್ಚರಿಕೆ‌ ಕೊಡ್ತಾ ಬಂದಿದ್ದೇನೆ. ಎಲ್ಲಾ ಮಾಹಿತಿ ಪಡೆದ ನಂತರವೇ ಚರ್ಚೆ ಮಾಡೋದು ಎಂದು ಸರಕಾರವನ್ನು ಅವರು ತರಾಟೆಗೆ ತೆಗೆದುಕೊಂಡರು.

ಎಸಿಬಿಯ ಒಬ್ಬ ಎಸ್ ಪಿ ಕೇಡರ್ ಅಧಿಕಾರಿಗೆ 50 ಲಕ್ಷ ರೂಪಾಯಿ ಹಣ ಕೊಟ್ಟವರು ಯಾರು? ಯಾರು ತೆಗೆದುಕೊಂಡು ಹೋಗಿ ಕೊಟ್ಟವರು? ಯಾರು ತೆಗೆದುಕೊಂಡು ಹೋದರು? ಎಲ್ಲಿಂದ, ಯಾರಿಂದ ಹಣ ಪಡೆದರು ಎನ್ನುವ ಮಾಹಿತಿ ಬೇಕಾ ಮುಖ್ಯಮಂತ್ರಿಗೆ. ನಾಚಿಕೆಯಾಗಬೇಕು ಇವರಿಗೆ. ಎಸಿಬಿಗೆ ಕೋರ್ಟ್ ಛೀಮಾರಿ ಹಾಕಿದೆ. ನನ್ನ ಬಗ್ಗೆ ಹುಡುಗಾಟಿಕೆ ಮಾಡಬೇಡಿ. ನಾನು ನಿಖರ ಮಾಹಿತಿಯನ್ನೇ ಹೇಳಿದ್ದೇನೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು.

ಭ್ರಷ್ಟಾಚಾರದ ಸ್ವೇಚ್ಚಾಚಾರ

ನಿನ್ನೆ ಇಬ್ಬರು ಹಿರಿಯ ಅಧಿಕಾರಿಗಳ ಬಂಧನವಾಗಿದೆ. ಈ ಘಟನೆಗೆ ಕಾರಣ ಅನೇಕ ವರ್ಷಗಳಿಂದ ಆಗಿರುವ ಆಡಳಿತದ ಕುಸಿತ. ಆಡಳಿತ ನಡೆಸುವ ಮುಖ್ಯಸ್ಥರ ನಡವಳಿಕೆಯೇ ಇದಕ್ಕೆ ಕಾರಣ. ರಾಜ್ಯದಲ್ಲಿ ಭ್ರಷ್ಟಾಚಾರ ಸ್ವೇಚ್ಚಾಚಾರವಾಗಿ ನಡೀತಾ ಇದೆ. ಇದು ಕೇವಲ ಬಿಜೆಪಿ ಪಕ್ಷದ ಭ್ರಷ್ಟಾಚಾರ ಅಷ್ಟೆ ಅಲ್ಲ ಕಾಂಗ್ರೆಸ್ ಆಡಳಿತದಲ್ಲೂ ಇತ್ತು. ಆಗ ಕಠಿಣ ಕ್ರಮ ತೆಗದುಕೊಳ್ಳದೇ ಅಂತಹ ವ್ಯಕ್ತಿಗಳಿಗೆ ರಕ್ಷಣೆ ಕೊಟ್ಟರು ಎಂದು ಕುಮಾರಸ್ವಾಮಿ ಅವರು ದೂರಿದರು.

ಕಾಂಗ್ರೆಸ್ ಅಧಿಕಾರದಲ್ಲಿ ಇದ್ದಾಗ ಹಿರಿಯ ಅಧಿಕಾರಿ ಫ್ಲಾಟ್ ನಲ್ಲಿ 5 ಕೋಟಿ ಹಣ ಸಿಕ್ಕಿತು. ಯಶವಂತಪುರ ಫ್ಲಾಟ್ ನಲ್ಲಿ ಆ ಹಣವನ್ನು ಸೀಜ್ ಮಾಡಿದರು. ಆ ಅಧಿಕಾರಿಗೆ ಮತ್ತೆ ರಕ್ಷಣೆ ಕೊಟ್ಟು ಉನ್ನತ ಹುದ್ದೆ ಕೊಟ್ಟರು. ಇಂಥ ಹಿನ್ನೆಲೆ ಕಾಂಗ್ರೆಸ್ ನಿಂದ ಪ್ರಾರಂಭ ಆಗಿ ಬಿಜೆಪಿ ಅದನ್ನು ಮುಂದುವರೆಸಿದೆ. ಇದರಿಂದಲೇ ಯಾವುದೇ ಅಧಿಕಾರಿಗಳಿಗೆ ಭಯ ಭೀತಿ ಇಲ್ಲ ಎಂದರು ಅವರು.

ಗುರೂಜಿ ಕೊಲೆ: ಪೊಲೀಸ್ ಪೋಸ್ಟಿಂಗ್ ಗೆ ರೇಟ್ ಫಿಕ್ಸ್ ಮಾಡ್ತಾರೆ, ಅದಕ್ಕೆ ಹೀಗೆ

ಹುಬ್ಬಳ್ಳಿಯಲ್ಲಿ ನಡೆದ ಚಂದ್ರಶೇಖರ ಗುರೂಜಿ ಕೊಲೆ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ಕುಮಾರಸ್ವಾಮಿ ಅವರು, ಯಾರಿಗೂ ಇವತ್ತು ಭಯ ಭಕ್ತಿ ಇಲ್ಲ ಹಾಗೂ ಯಾರಿಗೂ ರಕ್ಷಣೆಯೂ ಇಲ್ಲ. ಬಿಜೆಪಿ ಆಡಳಿತದಲ್ಲಿ ಏನೆಲ್ಲ ಆಗುತ್ತಿದೆ ಎನ್ನುವುದಕ್ಕೆ ಇದು ಜ್ವಲಂತ ಉದಾಹರಣೆ ಎಂದರು.

ನಾವೇ ಇಲ್ಲಿ ನಿಂತಿದ್ದೇವೆ, ನಾಳೆ ಏನಾಗುತ್ತೋ ಗೊತ್ತಿಲ್ಲ. ಆ ರೀತಿ ಘಟನೆ ಆಗಲು ರಾಜ್ಯದ ಆಡಳಿತ ಕುಸಿತವೇ ಕಾರಣ. ಒಂದು ಹೋಟೆಲ್ ರಿಸಪ್ಷನ್ ನಲ್ಲಿ ಬರ್ಬರ ಹತ್ಯೆ ಆಗುತ್ತೆ ಅಂದರೆ ಏನು ಅರ್ಥ? ಇದಕ್ಕೆ ಕಾರಣ ಭ್ರಷ್ಟಾಚಾರ. ಪೊಲೀಸರ ಪೋಸ್ಟಿಂಗ್ ನಲ್ಲಿ ರೇಟ್ ಫಿಕ್ಸ್ ಮಾದುವುದರಿಂದ. ಒಂದೊಂದು‌ ಪೊಲೀಸ್ ಠಾಣೆಗೆ ವರ್ಗಾವಣೆಗೆ ಹಣ ಫಿಕ್ಸ್ ಮಾಡ್ತಿದಾರೆ. ಹೀಗೆಲ್ಲ ಆಗಲು ಅದೇ ಕಾರಣ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.