*ಗೊರಗುಂಟೆಪಾಳ್ಯದ ರಾಷ್ಟ್ರೀಯ ಹೆದ್ದಾರಿ ಉನ್ನತೀಕರಣಕ್ಕೆ ಕೇಂದ್ರ ಸಚಿವರ ಭರವಸೆ : *ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರು, ಸೆಪ್ಟೆಂಬರ್ 09: ಕೇಂದ್ರ ರಾಷ್ಟ್ರೀಯ ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಗೊರಗುಂಟೆಪಾಳ್ಯದಿಂದ ಇರುವ ರಾಷ್ಟ್ರೀಯ ಹೆದ್ದಾರಿಯನ್ನು ಉನ್ನತೀಕರಿಸುವುದಾಗಿ ತೀರ್ಮಾನಿಸಿ, ಕೇಬಲ್ ಗಳನ್ನು ಅಳವಡಿಸಲು ಯಾವ ಏಜೆನ್ಸಿಗಳನ್ನು ನೇಮಿಸಬೇಕು ಎಂದು ತೀರ್ಮಾನಿಸಿ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಇಂದು ಅವರ ಅಧ್ಯಕ್ಷತೆಯಲ್ಲಿ ಲೋಕೋಪಯೋಗಿ, ಬಿಬಿಎಂಪಿ, ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಇಡೀ ಕರ್ನಾಟಕದ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಯಾವ ರೀತಿ ಸುಧಾರಣೆ ಮಾಡಬೇಕು. ಬೆಂಗಳೂರಿಗೆ ಸಂಬಂಧಿಸಿದಂತೆ ಎಸ್.ಟಿ.ಆರ್.ಆರ್ ಗೆ ಕೆಲವು ವಿನಾಯಿತಿಗಳನ್ನು ನೀಡಬೇಕಿತ್ತು. ವಿನಾಯಿತಿ ನೀಡಲು ಒಪ್ಪಿಗೆ ನೀಡಲಾಗಿದೆ. ಇಲ್ಲಿನ ಸಣ್ಣ ಪಟ್ಟಿಯನ್ನೂ ಸಹ ಸಂಪರ್ಕಿಸಲು ಸೂಚಿಸಲಾಗಿದ್ದು ಈ ಸಂಬಂಧ ಪ್ರಸ್ತಾವನೆ ಕಳುಹಿಸುವಂತೆ ಸೂಚನೆ ನೀಡಲಾಗಿದೆ ಎಂದರು.
ಬೆಂಗಳೂರು ಮೈಸೂರು ಹೆದ್ದಾರಿ ಚರಂಡಿ ವ್ಯವಸ್ಥೆಯ ಆಡಿಟ್
ಬೆಂಗಳೂರು ಮೈಸೂರು ಹೆದ್ದಾರಿ ಚರಂಡಿ ವ್ಯವಸ್ಥೆಯನ್ನು ಸಂಪೂರ್ಣವಾಗಿ ಆಡಿಟ್ ಮಾಡಲಾಗುವುದು. ಎಲ್ಲೆಲ್ಲಿ ಒಳಚರಂಡಿಯನ್ನು ದೊಡ್ಡದು ಮಾಡಬೇಕು, ಗ್ರೇಡಿಯಂಟ್ ಹೆಚ್ಚಿಸಬೇಕು, ಅಡಚಣೆಗಳು ಎಲ್ಲವೂ ಆಡಿಟ್ ನಲ್ಲಿ ತಿಳಿದುಬರುತ್ತದೆ. ಚರಂಡಿ ಸಾಮರ್ಥ್ಯ ಇದರಿಂದ ಹೆಚ್ಚಲಿದೆ ಎಂದು ತೀರ್ಮಾನಿಸಲಾಗಿದೆ. ಬೆಂಗಳೂರಿಗೆ ಬರುವ ಚೆನ್ನೈ ಎಕ್ಸ್ಪ್ರೆಸ್ , ಮುಂಬೈ ಎಕ್ಸ್ ಪ್ರೆಸ್ , ಹೈದರಾಬಾದ್ ಎಕ್ಸ್ ಪ್ರೆಸ್ ಗಳಿಗೆ ಒಳಸಂಪರ್ಕ, ನಗರಗಳಲ್ಲಿ ಹಾದುಹೋಗುವ ಅಂತರ ಗಳನ್ನು ಕಡಿಮೆ ಮಾಡುವ ಬಗ್ಗೆ ತೀರ್ಮಾನವಾಗಿದೆ. ರಾಷ್ಟ್ರೀಯ ಹೆದ್ದಾರಿ ಮೇಲೆ ಹೈ ಡೆನ್ಸಿಟಿ ಕಾರಿಡಾರ್ ನ ಕೆಲವೆಡೆ ಫ್ಲೈ ಓವರ್, ಹಾಗೂ ಅಂಡರ್ ಪಾಸ್ ಮಾಡಬೇಕಿದೆ. ಸ್ಕೈ ವಾಕ್ ಮಾಡುವುದನ್ನು ಗುರುತಿಸಿ ನೀಡಲಾಗಿದೆ. ಇಂದು ಚರ್ಚೆ ಯಾಗಿರುವ ಯೋಜನೆಗಳೆಲ್ಲಾ ತುರ್ತಾಗಿ ಆಗವಂಥವು. ಒಂದೂವರೆ ತಿಂಗಳಲ್ಲಿ ಯೋಜನೆ ಸಿದ್ಧವಾದಲ್ಲಿ ತಕ್ಷಣವೇ ಮಂಜೂರಾತಿ ನೀಡುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ. ಇದೇ ವರ್ಷ ಕಾಮಗಾರಿ ಪ್ರಾರಂಭವಾಗಬೇಕೆನ್ನುವುದು ನಮ್ಮ ಉದ್ದೇಶ. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ ಎಂದರು.
ಇಂದು ಆಗಿರುವ
ಚರ್ಚೆಯ ಪ್ರಕಾರ ಯೋಜನೆ, ಅಂದಾಜು ಪಟ್ಟಿ ಸಿದ್ಧಪಡಿಸಿ ಸಲ್ಲಿಸಬೇಕು. ಅದನ್ನು ಅಂತಿಮ ಗೊಳಿಸಿದರೆ ಅದನ್ನು ರಾಷ್ಟ್ರೀಯ ಹೆದ್ದಾರಿಗಳ ಸಚಿವಾಲಯ ಅನುದಾನವನ್ನು ಒದಗಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿಗೆ ಸಾರಿಗೆ ಪ್ರಾಧಿಕಾರ
ಇಡೀ ಬೆಂಗಳೂರಿನ ಒಟ್ಟಾರೆ ಸಾರಿಗೆ ಬಗ್ಗೆ ಒಂದು ಪ್ರಾಧಿಕಾರವಿರಬೇಕು ಎಂಬ ಉದ್ದೇಶವಿದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಮಸೂದೆ ಮಂಡಿಸಿ ಅನುಮೋದನೆ ನೀಡಲಾಗುವುದು. ಇದಕ್ಕೆ ಹಲವಾರು ಏಜೆನ್ಸಿಗಳ ಸಮನ್ವಯದಲ್ಲಿ ಕೆಲಸ ಮಾಡಬೇಕಿದೆ. ಈಗ ಬಹಳಷ್ಟು ಕಡೆ ಸಮನ್ವಯದ ಕೊರತೆಯಿಂದ ಬಾಕಿ ಕೆಲಸಗಳು ಬಾಕಿ ಉಳಿದಿವೆ. ಒಂದೇ ಪ್ರಾಧಿಕಾರ ರಚಿಸಬೇಕೆಂಬ ಕಾನೂನು ಜಾರಿಮಾಡಲಾಗುವುದು ಎಂದರು.
ಹೊಸ ರಾಷ್ಟ್ರೀಯ ಹೆದ್ದಾರಿ
ಶಿರಡಿ ರಸ್ತೆಯನ್ನು ವೇಗವಾಗಿ ಪೂರ್ಣಗೊಳಿಸುವುದಾಗಿ ತಿಳಿಸಿದ್ದಾರೆ. ಹೊಸ ರಾಷ್ಟ್ರೀಯ ಹೆದ್ದಾರಿ ಬಗ್ಗೆ ಪ್ರಸ್ತಾವನೆ ಗಳನ್ನು ಕೇಂದ್ರ ರಸ್ತೆ ನಿಧಿಯಡಿ ತರಲಾಗುತ್ತಿದೆ ಎಂದರು.
ಜನೋತ್ಸವ
ಜನೋತ್ಸವಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು ನಾಳೆ ಬೆಳಿಗ್ಗೆ 11 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಭಾಜಪ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಆಗಮಿಸುವ ಬಗ್ಗೆ ಇಂದು ಸಂಜೆ ಖಾತ್ರಿ ಪಡಿಸಲಿದ್ದಾರೆ. ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ಆಗಮಿಸಲಿದ್ದಾರೆ ಎಂದರು.