IMG 20200728 220025

Modi : ಮೋದಿ ಸರ್ಕಾರದ ವಿರುದ್ಧ ದೇಶವ್ಯಾಪಿ ಪ್ರತಿಭಟನೆ….!

National - ಕನ್ನಡ

 

 ಮೋದಿ ಸರ್ಕಾರದ ವಿರುದ್ಧ ದೇಶವ್ಯಾಪಿ ಪ್ರತಿಭಟನೆ….!

ಆಗಸ್ಟ್  20ರಿಂದ 26  ರ ವರೆಗೆ ಮೋದಿ ಸರಕಾರದ ಜನ-ವಿರೋಧಿ ನಡೆಗಳ ವಿರುದ್ಧ ದೇಶವ್ಯಾಪಿ ಪ್ರತಿಭಟನಾ ವಾರಾಚರಣೆ ಮಾಡಲು ನಿರ್ಧಾರ.

ಕಾರ್ಮಿಕರು, ರೈತರು, ಕೃಷಿಕೂಲಿಕಾರರ ಆಗಸ್ಟ್ 9 ಪ್ರತಿಭಟನೆಗೆ ಬೆಂಬಲ- ಸಿಪಿಐ(ಎಂ) ಕೇಂದ್ರ ಸಮಿತಿ ಕರೆ

ದೇಶದಲ್ಲಿ ಕೊವಿಡ್‍-19 ಬಾಧಿತರ ಸಂಖ್ಯೆ ತೀವ್ರವಾಗಿ ಏರುತ್ತಿರುವಾಗ ಅದನ್ನು ಎದುರಿಸುವ ಗಂಭೀರ ಪ್ರಯತ್ನಗಳನ್ನು ನಡೆಸದ ಮೋದಿ ಸರಕಾರ, ಅದಕ್ಕೆ ಬದಲಾಗಿ ಒಂದೆಡೆಯಲ್ಲಿ ದೇಶದ ಸಂಪತ್ತನ್ನು, ಈ ಏಳು ದಶಕಗಳಲ್ಲಿ ದೇಶ ಕಟ್ಟಿ ಬೆಳೆಸಿದ ರಾಷ್ಟ್ರೀಯ ಆಸ್ತಿಗಳನ್ನು ಖಾಸಗೀ ಲೂಟಿಗೆ ತೆರೆದಿಡುತ್ತಿದೆ, ಇನ್ನೊಂದೆಡೆಯಲ್ಲಿ ದುಡಿಯುವ ಜನಗಳು ಪಡೆದುಕೊಂಡಿರುವ ಕಾನೂನಾತ್ಮಕ ಹಕ್ಕುಗಳ, ಅಧಿಕಾರಗಳ ಮೇಲೆ ದಾಳಿ ನಡೆಸುತ್ತಿದೆ. ಇದು ಈ ಸರಕಾರದ ನಿಜವಾದ ಚಾರಿತ್ರ್ಯವನ್ನು ಎತ್ತಿ ತೋರುತ್ತಿದೆ. ಇದರ ವಿರುದ್ಧ ದೇಶಾದ್ಯಂತ ಪ್ರತಿಭಟನೆಯನ್ನು ಗಟ್ಟಿಗೊಳಿಸಲು ಸಿಪಿಐ(ಎಂ) ಕೇಂದ್ರ ಸಮಿತಿ ನಿರ್ಧರಿಸಿದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚುರಿಯವರು ಜೂನ್‍ 27ರಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಪ್ರಸಕ್ತ ಪರಿಸ್ಥಿತಿಗಳಿಂದಾಗಿ ಸಿಪಿಐ(ಎಂ) ಕೇಂದ್ರ ಸಮಿತಿಯ ಫೇಸ್‍ಬುಕ್‍ನಿಂದ ಈ ಅಂತರ್ಜಾಲ ಪತ್ರಿಕಾಗೋಷ್ಠಿ ನಡೆಯಿತು.

ಹದಿನಾರು ಬೇಡಿಕೆಗಳ ಮೇಲೆ ಆಗಸ್ಟ್ 20ರಿಂದ 26 ರವರೆಗೆ ದೇಶಾದ್ಯಂತ ಗ್ರಾಮಗಳಿಂದ ಹಿಡಿದು ರಾಜ್ಯಗಳ ರಾಜಧಾನಿಗಳ ವರೆಗೆ ಎಲ್ಲ ಹಂತಗಳಲ್ಲಿ ಪ್ರತಿಭಟನಾ ವಾರಾಚರಣೆ ನಡೆಸಲು ಸಿಪಿಐ(ಎಂ) ಕೇಂದ್ರ ಸಮಿತಿ ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ. ಮತ್ತು ಆಗಸ್ಟ್ 9ರಂದು ಕಾರ್ಮಿಕರ, ರೈತರ ಮತ್ತು ಕೃಷಿಕೂಲಿಕಾರರ ಸಂಘಟನೆಗಳು ನಡೆಸಲು ನಿರ್ಧರಿಸಿರುವ ಅಖಿಲ ಭಾರತ ಪ್ರತಿಭಟನೆಗೆ ಬೆಂಬಲ ಮತ್ತು ಸೌಹಾರ್ದವನ್ನು ವ್ಯಕ್ತಪಡಿಸಿದೆ ಎಂದು ಯೆಚುರಿ ಹೇಳಿದ್ದಾರೆ.

ಕೊವಿಡ್‍-19 ರಿಂದಾಗಿ ಉಂಟಾಗಿರುವ ಪರಿಸ್ಥಿತಿಗಳಲ್ಲಿ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ಜುಲೈ 25 ಮತ್ತು 26ರಂದು ಮೊತ್ತ ಮೊದಲ ಬಾರಿಗೆ ಆನ್‍ ಲೈನಿನಲ್ಲಿ ನಡೆದಿದ್ದು ಕಳೆದ ಸುಮಾರು ನಾಲ್ಕು ತಿಂಗಳ ಬೆಳವಣಿಗೆಗಳನ್ನು ಚರ್ಚಿಸಿ ಈ ಕರೆಗಳನ್ನು ನೀಡಿದೆ.

ದೇಶದಲ್ಲಿ ಕೊವಿಡ್‍ ಸೋಂಕಿತರ ಒಟ್ಟು ದಾಖಲಾದ ಸಂಖ್ಯೆ 14ಲಕ್ಷ ದಾಟಿದೆ ಮತ್ತು ಸಾವಿಗೀಡಾದವರ ಸಂಖ್ಯೆ 30 ಸಾವಿರ ದಾಟಿದೆ. ಪ್ರಧಾನ ಮಂತ್ರಿಗಳು ಇದ್ದಕ್ಕಿದ್ದಂತೆ , ಯಾವುದೇ ಸಿದ್ಧತೆಯಿಲ್ಲದೆ, ಅಯೋಜಿತವಾಗಿ, ಏಕಪಕ್ಷೀಯವಾಗಿ ಘೋಷಿಸಿದ ಲಾಕ್‍ಡೌನ್‍ ದೇಶದಲ್ಲಿ ಈ ಮಹಾಮಾರಿ ತೀವ್ರವಾಗಿ ಹರಡುವುದನ್ನು ತಡೆಯುವಲ್ಲಿ ಪರಿಣಾಮಕಾರಿಯಾಗಿಲ್ಲ ಎಂಬುದು ಸಾಬೀತಾಗಿದೆ. ಸಂಪೂರ್ಣ ಲಾಕ್‍ಡೌನಿನ ದೀರ್ಘ ಅವಧಿಯನ್ನು ಆರೋಗ್ಯ ಸೌಕರ್ಯಗಳನ್ನು ಹೆಚ್ಚಿಸಲು, ಆರೋಗ್ಯ ಕಾರ್ಯಕರ್ತರಿಗೆ ಪಿ.ಪಿ.ಇ.ಗಳನ್ನು ಒದಗಿಸಲು, ವ್ಯಾಪಕ ತಪಾಸಣೆ, ಸೋಂಕಿತರನ್ನು ಪ್ರತ್ಯೇಕಗೊಳಿಸುವುದು, ಸಂಪರ್ಕಗಳ ಪತ್ತೆ ಮತ್ತು ಕ್ವಾರಂಟೈನ್‍ ನ ವೈಜ್ಞಾನಿಕ ವಿಧಾನಗಳನ್ನು ಅನುಸರಿಸಲು ಬಳಸುವಲ್ಲಿ ಕೇಂದ್ರ ಸರಕಾರ ವಿಫಲವಾಗಿದೆ. ಮಹಾಭಾರತದೊಂದಿಗೆ ಹೋಲಿಸಿ ಮೊದಲ ಲಾಕ್‍ಡೌನಿನ 21ದಿನಗಳೊಳಗೆ ವಿಜಯ ಗಳಿಸುತ್ತೇವೆ ಎನ್ನುವ ಪ್ರಧಾನಮಂತ್ರಿಗಳ ಬಡಾಯಿ ಸಂಪೂರ್ಣ ಭ್ರಮೆ ಎಂದು ಸಾಬೀತಾಯಿತು.

ಬದಲಿಗೆ ಈ ಲಾಕ್‍ಡೌನ್‍ ಗಳೇ ಬಹುಪಾಲು ಜನಗಳ ಮೇಲೆ, ಅದರಲ್ಲೂ ದಲಿತರು, ಬುಡಕಟ್ಟು ಜನಗಳು, ಮಹಿಳೆಯರು ಮತ್ತು ವಿಕಲಾಂಗರ ಮೇಲೆ ಹೇಳತೀರದ ಸಂಕಷ್ಟಗಳನ್ನು ಹೇರಿದವು. ವ್ಯಾಪಕ ಪ್ರಮಾಣದಲ್ಲಿ ಉದ್ಯೋಗ ನಷ್ಟಗಳನ್ನು ಉಂಟು ಮಾಡಿ, ಜೀವನೋಪಾಯಗಳನ್ನು ಹಾಳುಗೆಡವಿ ಹಸಿವು ಮತ್ತು ಸಂಕಟಗಳನ್ನು ಹೆಚ್ಚಿಸಿವೆ. ಆದರೂ ಕೇಂದ್ರ ಸರಕಾರ ತಕ್ಷಣವೇ ನಗದು ವರ್ಗಾವಣೆ ಮತ್ತು ಆಹಾರಧಾನ್ಯಗಳನ್ನು ಉಚಿತವಾಗಿ ಹಂಚಬೇಕು ಎಂಬ ಬೇಡಿಕೆಗಳನ್ನು ಈಡೇರಿಸಲು ನಿರಾಕರಿಸುತ್ತಲೇ ಇದೆ.

ಮಹಾಮಾರಿಯನ್ನು ತಡೆಯುವಲ್ಲಿ ವಿಫಲವಾದ ಪ್ರಧಾನ ಮಂತ್ರಿಗಳು ಮತ್ತು ಕೇಂದ್ರ ಸರಕಾರ ಈಗ ಅಷ್ಟೇ ಅಯೋಜಿತವಾಗಿ ಲಾಕ್‍ಡೌನನ್ನು ತೆರವು ಮಾಡುತ್ತ, ತಮ್ಮ ಹೊಣೆಯಿಂದ ಸಂಪೂರ್ಣವಾಗಿ ಜಾರಿಕೊಂಡು ತಾವು ಹೇರಿದ ಕ್ರಮ ಉಂಟುಮಾಡಿದ ಸಮಸ್ಯೆಗಳನ್ನು ಎದುರಿಸುವ ಹೊರೆಯನ್ನು ರಾಜ್ಯ ಸರಕಾರಗಳಿಗೆ ದಾಟಿಸಿ ಜನಗಳನ್ನು ಅವರ ಪಾಡಿಗೆ ಸಂಕಟಪಡಲು ಬಿಟ್ಟು, ತಮ್ಮ ಅಜೆಂಡಾವನ್ನು ಸತತವಾಗಿ ಮುಂದೊತ್ತುವುದರ ಮೇಲೆಯೇ ಗಮನ ನೆಟ್ಟಿದ್ದಾರೆ ಎಂದು ಕೇಂದ್ರ ಸಮಿತಿ ಹೇಳಿರುವುದಾಗಿ ಯೆಚುರಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅವರ ಈ ಅಜೆಂಡಾದ ಭಾಗವಾಗಿ ಬಿಜೆಪಿ ಕೇಂದ್ರ ಸರಕಾರ ಒಂದೆಡೆಯಲ್ಲಿ ರಾಷ್ಟ್ರೀಯ ಆಸ್ತಿಗಳನ್ನು ಲೂಟಿ ಹೊಡೆಯುವ, ಇನ್ನೊಂದೆಡೆಯಲ್ಲಿ ದುಡಿಯುವ ಜನಗಳ ಮೇಲೆ ಪ್ರಹಾರಗಳನ್ನು ನಡೆಸುವ ಮಾರಣಾಂತಿಕ ಸಂಯೋಜನೆಯ ಒಂದು ಆರ್ಥಿಕ ದಿಕ್ಕನ್ನು ಹಿಡಿದಿದೆ. ಅದರ ‘ಆತ್ಮನಿರ್ಭರ್’ ಅಭಿಯಾನದ ನಿಜವಾದ ಅರ್ಥ ಸ್ವಾವಲಂಬನೆಯಲ್ಲ, ಬದಲಿಗೆ ದೇಶಿ-ವಿದೇಶಿ ಖಾಸಗಿ ಬಂಡವಾಳಕ್ಕೆ ಸ್ವಯಂ-ಅಡಿಯಾಳುತನ.

ಎರಡನೆಯದಾಗಿ, ಕೋಮು ಧ್ರುವೀಕರಣದ ಕೆಲಸ ತೀಕ್ಷ್ಣಗೊಳ್ಳುತ್ತಿದೆ. ದಿಲ್ಲಿ ಗಲಭೆಗಳಲ್ಲಿ ಹಿಂಸಾಚಾರಗಳಿಗೆ ಗುರಿಯಾದವರ ಮೇಲೆಯೇ ಕೇಸುಗಳನ್ನು ಹಾಕಲಾಗುತ್ತಿದೆ, ಅತ್ತ ಹಿಂಸಾಚಾರ ನಡೆಸಿದವರು ರಾಜಾರೋಷವಾಗಿ ತಿರುಗಾಡುತ್ತಿದ್ದಾರೆ.

ಮೂರನೆಯದಾಗಿ, ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ದಾಳಿ ನಡೆಯುತ್ತಿದೆ, ಸರಕಾರದ ನಿಲುವನ್ನು ಒಪ್ಪದವರನ್ನು ದೇಶದ್ರೋಹಿಗಳು ಎನ್ನಲಾಗುತ್ತಿದೆ, ಅತ್ಯಂತ ಕರಾಳ ಕಾನೂನುಗಳನ್ನು ಬಳಸಿ ಅವರನ್ನು ಜೈಲಿಗಟ್ಟಲಾಗುತ್ತಿದೆ.

ನಾಲ್ಕನೆಯದಾಗಿ, ಅಧಿಕಾರಗಳ ವಿಪರೀತ ಕೇಂದ್ರೀಕರಣವಾಗುತ್ತಿದೆ, ಸಂಸತ್ತು, ನ್ಯಾಯಾಂಗ, ತನಿಖಾ ಸಂಸ್ಥೆಗಳು ಹೀಗೆ ಎಲ್ಲ ಸಂವಿಧಾನಿಕ ಸಂಸ್ಥೆಗಳನ್ನು ದುರ್ಬಲಗೊಳಿಸಲಾಗುತ್ತಿದೆ. ಕೊವಿಡ್‍ ವಿರುದ್ಧ ಸಮರದ, ಲಾಕ್‍ ಡೌನಿನ ದುಷ್ಪರಿಣಾಮಗಳನ್ನು ಎದುರಿಸುವ ಹೊಣೆಯನ್ನು ರಾಜ್ಯಸರಕಾರಗಳಿಗೆ ದಾಟಿಸಿದರೂ, ಅದಕ್ಕೆ ಅಗತ್ಯವಾದ ಸಾಧನ-ಸಂಪನ್ಮೂಲಗಳನ್ನು ಒದಗಿಸುತ್ತಿಲ್ಲ, ಅವುಗಳಿಗೆ ನ್ಯಾಯವಾಗಿ ಸಲ್ಲಬೇಕಾದ ಜಿಎಸ್‍ಟಿ ಪಾಲನ್ನೂ ಕೊಡುತ್ತಿಲ್ಲ. ಅಲ್ಲದೆ ಚುನಾವಣಾ ಬಾಂಡುಗಳು ಇತ್ಯಾದಿಗಳ ಮೂಲಕ ಸಂಗ್ರಹಿಸಿದ ಹಣದಿಂದ ಕುದುರೆ ವ್ಯಾಪಾರಗಳನ್ನು ನಡೆಸಿ ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸುವ ಕೆಲಸಗಳನ್ನು ನಡೆಸಲಾಗುತ್ತಿದೆ ಎಂದು ಕೇಂದ್ರಸಮಿತಿ ಗಮನಿಸಿರುವುದಾಗಿ ಯೆಚುರಿ ಹೇಳಿದರು.

ಈ ಸಂಬಂಧವಾಗಿ ಪತ್ರಕರ್ತರು ರಾಜಸ್ಥಾನ ಮತ್ತು ಕೇರಳದಲ್ಲಿನ ವಿದ್ಯಮಾನಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರಿಸುತ್ತ,. ಮಹಾಮಾರಿಯ ಅವಧಿಯಲ್ಲಿ ರಾಜ್ಯ ಸರಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ತೀವ್ರಗೊಂಡಿದೆ, ರಾಜಸ್ಥಾನದಲ್ಲಿ ರಾಜ್ಯಪಾಲರು ಸಂವಿಧಾನದ ಪ್ರಕಾರ ನಡೆದುಕೊಳ್ಳುತ್ತಿಲ್ಲ ಎಂದ ಯೆಚುರಿಯವರು ಬಿಜೆಪಿಯ ಕುತಂತ್ರಗಳನ್ನು ಸೋಲಿಸಲು ಸಿಪಿಐ(ಎಂ) ಬದ್ಧವಾಗಿದೆ ಎಂದು ಪುನರುಚ್ಚರಿಸಿದರು.

ಕೇರಳದಲ್ಲೂ ಎಲ್‍ಡಿಎಫ್‍ ಸರಕಾರದ ಮೇಲೆ ಗುರಿಯಿಡಲಾಗುತ್ತಿದೆ. ಇದಕ್ಕೆ ಚಿನ್ನದ ಕಳ್ಳಸಾಗಾಣಿಕೆಯ ಪ್ರಕರಣವನ್ನು ಬಳಸುವ ಪ್ರಯತ್ನವನ್ನು ಕಾಂಗ್ರೆಸ್‍ ನೇತೃತ್ವದ ಯುಡಿಎಫ್‍ ಮತ್ತು ಬಿಜೆಪಿ ನಡೆಸುತ್ತಿವೆ. ಸ್ವತಃ ಮುಖ್ಯಮಂತ್ರಿಗಳೇ ಯಾವುದೇ ಕೇಂದ್ರೀಯ ಏಜೆನ್ಸಿಯಿಂದ ಈ ಬಗ್ಗೆ ತನಿಖೆ ನಡೆಸಿ ಎಂದು ಆರಂಭದಲ್ಲೇ ಕೇಂದ್ರ ಸರಕಾರವನ್ನು ಒತ್ತಾಯಿಸಿ, ಅದರಿಂದಾಗಿ ಈಗ ಎನ್‍ಐಎ ತನಿಖೆ ಆರಂಭಿಸಿದ್ದರೂ ಸುಳ್ಳು ಆಪಾದನೆಗಳ ಮೇಲೆ ಮುಖ್ಯಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಒತ್ತಾಯಿಸುವಲ್ಲಿ ಈ ಪಕ್ಷಗಳು ಕೈಜೋಡಿಸಿವೆ. ಎಲ್ಲರೂ ಕೊವಿಡ್‍-19 ಮಹಾಮಾರಿಯ ವಿರುದ್ಧ ಸಮರದಲ್ಲಿ ಕೈಜೋಡಿಸಬೇಕಾಗಿರುವ ಸಮಯದಲ್ಲಿ ಕಾಂಗ್ರೆಸ್‍ ನೇತೃತ್ವದ ಪ್ರತಿಪಕ್ಷಗಳು ಬಿಜೆಪಿ ಜತೆಗೆ ಹೆಜ್ಜೆ ಹಾಕಿ ವಿಚ್ಛಿದ್ರಕಾರಿ ರಾಜಕೀಯವನ್ನು ಬಳಸಿಕೊಂಡು ಎಲ್‍ಡಿಎಫ್‍ ಸರಕಾರವನ್ನು ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿವೆ ಎಂದು ಖೇದ ವ್ಯಕ್ತಪಡಿಸಿದ ಯೆಚುರಿ ಕೇರಳದ ಜನತೆ ಈ ವಿಚ್ಛಿದ್ರಕಾರಿ ನಡೆಯನ್ನು ಸೋಲಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಪಿಐ(ಎಂ) ಕೇಂದ್ರ ಸಮಿತಿ ಅಂಗೀಕರಿಸಿದ, ಆಗಸ್ಟ್ 20-26ರ ದೇಶವ್ಯಾಪಿ ಪ್ರತಿಭಟನಾ ವಾರಾಚರಣೆಯ 16 ಬೇಡಿಕೆಗಳು ಈ ಕೆಳಗಿನಂತಿವೆ:

1. ಆದಾಯ ತೆರಿಗೆ ವ್ಯಾಪ್ತಿಗೆ ಬರದ ಎಲ್ಲ ಕುಟುಂಬಗಳಿಗೆ ತಕ್ಷಣದಿಂದ ಮುಂದಿನ ಆರು ತಿಂಗಳ ವರೆಗೆ ತಿಂಗಳಿಗೆ ರೂ.7500 ನಗದು ವರ್ಗಾವಣೆ.
2. ತಕ್ಷಣದಿಂದಲೇ ಅಗತ್ಯವಿರುವ ಎಲ್ಲರಿಗೂ ಮುಂದಿನ ಆರು ತಿಂಗಳ ವರೆಗೆ ಪ್ರತಿ ವ್ಯಕ್ತಿಗೆ 10 ಕೆ.ಜಿ.ಯಂತೆ ಉಚಿತ ಆಹಾರ ಧಾನ್ಯಗಳ ವಿತರಣೆ
3. ಮನರೇಗವನ್ನು ವಿಸ್ತರಿಸಿ, ಕೂಲಿದರ ಏರಿಸಿ, ವರ್ಷದಲ್ಲಿ ಕನಿಷ್ಟ 200 ದಿನಗಳ ಕೆಲಸದ ಖಾತ್ರಿ ಒದಗಿಸಬೇಕು. ಒಂದು ನಗರ ಉದ್ಯೋಗ ಖಾತ್ರಿ ಕಾಯ್ದೆ ತರಬೇಕು. ಎಲ್ಲ ನಿರುದ್ಯೋಗಿಗಳಿಗೆ ನಿರುದ್ಯೋಗ ಭತ್ಯೆ ಪ್ರಕಟಿಸಬೇಕು.
4. ಅಂತರ-ರಾಜ್ಯ ವಲಸೆ ಕೆಲಸಗಾರರ (ಉದ್ಯೋಗ ಮತ್ತು ಸೇವಾಷರತ್ತುಗಳ ನಿಯಂತ್ರಣ) ಕಾಯ್ದೆ 1979ನ್ನು ತೆಗೆದು ಹಾಕುವ ಪ್ರಸ್ತಾಪವನ್ನು ರದ್ದು ಮಾಡಬೇಕು, ಬದಲಿಗೆ, ಈ ಕಾಯ್ದೆಯನ್ನು ಬಲಪಡಿಸಬೇಕು.
5. ಸಾರ್ವಜನಿಕ ಆರೋಗ್ಯಕ್ಕೆ ಕೇಂದ್ರೀಯ ವೆಚ್ಚವನ್ನು ಕನಿಷ್ಟ ಜಿಡಿಪಿಯ 3ಶೇ.ಕ್ಕೆ ಹೆಚ್ಚಿಸಬೇಕು.
6. ಅಗತ್ಯ ಸರಕುಗಳ ಕಾಯ್ದೆಯನ್ನು ತೆಗೆಯುವ ಮತ್ತು ರಾಜ್ಯದಿಂದ ರಾಜ್ಯಕ್ಕೆ ಆಹಾರ ಧಾನ್ಯಗಳನ್ನು ನಿಯಂತ್ರಣಹೀನ ಬೆಲೆನಿರ್ಧಾರದ ಆಧಾರದಲ್ಲಿ ಮುಕ್ತವಾಗಿ ಸಾಗಿಸಲಿಕ್ಕೆ ಅವಕಾಶ ನೀಡಲು ಎಪಿಎಂಸಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಗಳನ್ನು ರದ್ದು ಮಾಡಬೇಕು.
7. ಈಗಿರುವ ಕಾರ್ಮಿಕ ಕಾನೂನುಗಳನ್ನು ರದ್ದು/ತಿದ್ದುಪಡಿ/ಅಮಾನತು ಮಾಡುವ ಎಲ್ಲ ಪ್ರಸ್ತಾಪಗಳನ್ನು ಹಿಂತೆಗೆದುಕೊಳ್ಳಬೇಕು.
8. ಸಾರ್ವಜನಿಕ ವಲಯದ ಉದ್ದಿಮೆಗಳ , ವಿಶೇಷವಾಗಿ ಭಾರತೀಯ ರೈಲ್ವೆ ಮತ್ತು ವಿದ್ಯುತ್, ಪೆಟ್ರೋಲಿಯಂ, ಕಲ್ಲಿದ್ದಲು, ಬ್ಯಾಂಕ್/ವಿಮೆ, ರಕ್ಷಣಾ ಉತ್ಪಾದನಾ ವಲಯಗಳಲ್ಲಿನ ಉದ್ದಿಮೆಗಳ, ಖಾಸಗೀಕರಣವನ್ನು ರದ್ದು ಮಾಡಬೇಕು.
9. ಪ್ರಧಾನ ಮಂತ್ರಿಗಳ ಹೆಸರನ್ನು ಹೊತ್ತಿರುವ ಒಂದು ಖಾಸಗಿ ಟ್ರಸ್ಟ್ ನಿಧಿಯಲ್ಲಿ ಸಂಗ್ರಹವಾಗಿರುವ ಎಲ್ಲ ನಿಧಿಗಳನ್ನು ಸಾಂಕ್ರಾಮಿಕವನ್ನು ಎದುರಿಸುವಲ್ಲಿ ಮುಂಚೂಣಿಯಲ್ಲಿರುವ ರಾಜ್ಯಗಳಿಗೆ ವರ್ಗಾಯಿಸಬೇಕು.
10. ಸಾಂಕ್ರಾಮಿಕವನ್ನು ಎದುರಿಸಲು ವಿಪತ್ತು ನಿರ್ವಹಣಾ ಕಾಯ್ದೆಯನ್ನು ಬಳಸುತ್ತಿರುವುದರಿಂದ, ಸಾಂಕ್ರಾಮಿಕಕ್ಕೆ ತುತ್ತಾಗಿರುವವರ ಕುಟುಂಬಗಳಿಗೆ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯ ನಿಯಮಗಳ ಪ್ರಕಾರ ಒಂದು ಏಕ-ಸಮಯದ ಹಣಕಾಸು ನೆರವನ್ನು ಪ್ರಕಟಿಸಬೇಕು.
11.ಪರಿಶಿಷ್ಟ ಜಾತಿ/ಪರಿಶಿಷ್ಟ ಬುಡಕಟ್ಟು/ಒಬಿಸಿ ಮತ್ತು ವಿಕಲಾಂಗರಿಗೆ ಮೀಸಲಾತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಎಲ್ಲ ಖಾಲಿ ಬಿಟ್ಟಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು.
12. ಅಂತಿಮ ವರ್ಷದ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಅವರ ಹಿಂದಿನ ಸೆಮೆಸ್ಟರುಗಳ ಸಾಧನೆಗಳ ಆಧಾರದಲ್ಲಿ ಪರೀಕ್ಷಿಸಬೇಕು ಮತ್ತು ಪದವಿಗಳನ್ನು ಕೊಡಬೇಕು.
13. ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಸ್ಟ್ 2019ರಿಂದ ನಿರ್ಬಂಧದಲ್ಲಿ ಇರುವ ಎಲ್ಲರನ್ನೂ ತಕ್ಷಣ ಬಿಡುಗಡೆ ಮಾಡಬೇಕು. ಎಲ್ಲ ಸಂಪರ್ಕಗಳನ್ನು ಮತ್ತೆ ಸ್ಥಾಪಿಸಬೇಕು ಮತ್ತು ಜನಗಳ ಮುಕ್ತ ಓಡಾಟಕ್ಕೆ ಅವಕಾಶ ಕೊಡಬೇಕು.
14. ಯು.ಎ.ಪಿ.ಎ,, ಎನ್‍.ಎಸ್‍.ಎ., ರಾಜದ್ರೋಹದ ಕಾಯ್ದೆ ಮುಂತಾದ ಕರಾಳ ಕಾನೂನುಗಳ ಅಡಿಯಲ್ಲಿ ಜೈಲುಗಳಲ್ಲಿ ನಿರ್ಬಂಧಿಸಿ ಇಟ್ಟಿರುವ ಎಲ್ಲ ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡಬೇಕು.
15. ಪರಿಸರ ಪರಿಣಾಮ ನಿರ್ಧಾರಣೆ (ಇ. ಐ.ಎ.)2020 ಅಧಿಸೂಚನೆಯನ್ನು ಹಿಂತೆಗೆದುಕೊಳ್ಳಬೇಕು.
16. ಹೆಚ್ಚುತ್ತಿರುವ ದಲಿತರ ವಿರುದ್ಧದ ಹಿಂಸಾಚಾರ, ಮಹಿಳೆಯರ ವಿರುದ್ಧದ ಕುಟುಂಬ ಮತ್ತು ಲೈಂಗಿಕ ಹಿಂಸಾಚಾರಗಳನ್ನು ಎಸಗುತ್ತಿರುವವರನ್ನು ಮತ್ತು ಬುಡಕಟ್ಟು ಜನಗಳ ಶೋಷಣೆ ನಡೆಸುತ್ತಿರುವವರನ್ನು ಶಿಕ್ಷಿಸಬೇಕು.