IMG 20240207 WA0018

ನವದೆಹಲಿ : ಕೇಂದ್ರ ಸರ್ಕಾರದ ಆರ್ಥಿಕ ದೌರ್ಜನ್ಯದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ….!

National - ಕನ್ನಡ POLATICAL STATE

ಕೇಂದ್ರ ಸರ್ಕಾರದ ಆರ್ಥಿಕ ದೌರ್ಜನ್ಯದ ವಿರುದ್ಧ ನವದೆಹಲಿಯಲ್ಲಿ ಪ್ರತಿಭಟನೆ*

ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ- ಐದು ವರ್ಷಗಳಲ್ಲಿ 1.88 ಕೋಟಿ ರೂ. ಕಡಿತ: ಮುಖ್ಯಮಂತ್ರಿ ಸಿದ್ದರಾಮಯ್ಯ*

ನವದೆಹಲಿ, ಫೆಬ್ರವರಿ 07: ಕೇಂದ್ರ ಸರ್ಕಾರದ ಮಲತಾಯಿ ಧೋರಣೆಯಿಂದಾಗಿ 2017-18 ರಿಂದ ಕರ್ನಾಟಕಕ್ಕೆ 1,87,867 ಕೋಟಿ ರೂ.ಗಳ ನಷ್ಟವಾಗಿದ್ದು ಇದರಿಂದ ರಾಜ್ಯದ ಸರ್ವತೋಮುಖ ಅಭಿವೃದ್ಧಿಯ ಅವಕಾಶವನ್ನು ತಪ್ಪಿಸಿದಂತಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಕರ್ನಾಟಕ ಮತ್ತು ಕನ್ನಡಿಗರ ಮೇಲೆ ಕೇಂದ್ರ ಸರ್ಕಾರ ಎಸಗಿರುವ ಆರ್ಥಿಕ ದೌರ್ಜನ್ಯದ ಕೇಂದ್ರ ದ ವಿರುದ್ಧ ಜಂತರ್ ಮಂತರ್ ನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ರಾಜ್ಯಕ್ಕೆ ಬರಬೇಕಾದ ತೆರಿಗೆ ಪಾಲಿನ ಹಂಚಿಕೆಯಲ್ಲಿ ಇಳಿಕೆ, ಮೂಲಸೌಕರ್ಯ ಬದ್ಧತೆಗಳ ಈಡೇರಿಕೆಯಲ್ಲಿ ಮತ್ತು ಕೇಂದ್ರ ಸರ್ಕಾರದಿಂದ ವಿಪತ್ತು ನಿರ್ವಹಣೆಗೆ ಅನುದಾನ ಬಿಡುಗಡೆಯಲ್ಲಿನ ವಿಳಂಬದ ಕುರಿತು ಸವಿಸ್ತಾರವಾಗಿ ಮಾತನಾಡಿದ ಅವರು, ಇದು ಕನ್ನಡಿಗರ ಅಸ್ಮಿತೆಯ ಮೇಲಾಗುತ್ತಿರುವ ವ್ಯವಸ್ಥಿತ ದಾಳಿ ಎಂದು ವ್ಯಾಖ್ಯಾನಿಸಿದರು. ಕೇಂದ್ರದ ನಿರ್ಲಕ್ಷ್ಯದಿಂದ ಕನ್ನಡಿಗರಿಗೆ ತೊಂದರೆಯುಂಟಾಗುತ್ತಿರುವುದು ಗಾಬರಿ ಹುಟ್ಟಿಸುವಂತಿದೆ. ಕನ್ನಡಿಗರ ಹಿತಾಸಕ್ತಿಯನ್ನು ಕೇಂದ್ರ ಬಿಜೆಪಿ ನಾಯಕರು ದುರ್ಬಲಗೊಳಿಸುತ್ತಿದ್ದಾರೆ. ಸಂವಿಧಾನದೆಡೆಗೆ ಹಾಗೂ ಮತ್ತು ಸಹಕಾರಿ ಒಕ್ಕೂಟದೆಡೆಗೆ ಅವರ ಬದ್ಧತೆ ಇಲ್ಲವಾಗಿದೆ ಎಂದರು.

*ಕೇಂದ್ರ ತೆರಿಗೆಯಲ್ಲಿ ರಾಜ್ಯದ ಪಾಲು ಶೇ 4.71 ರಿಂದ 3.64% ಗೆ ಇಳಿಕೆ*
ಕೇಂದ್ರ ತೆರಿಗೆಯಲ್ಲಿ ಕರ್ನಾಟಕ ರಾಜ್ಯದ ಪಾಲಿನಲ್ಲಿ ಅನ್ಯಾಯವಾಗುತ್ತಿರುವ ಬಗ್ಗೆ ಸುದೀರ್ಘವಾಗಿ ವಿವರಿಸಿದ ಮುಖ್ಯಮಂತ್ರಿಗಳು, 14 ನೇ ಹಣಕಾಸು ಆಯೋಗದಿಂದ 4.71% ರಿಂದ 15 ನೇ ಹಣಕಾಸು ಆಯೋಗದಲ್ಲಿ 3,64% ಗೆ ಇಳಿಕೆಯಾಗಿರುವುದು ಕಳೆದ 5 ವರ್ಷಗಳಲ್ಲಿ ಅಂದಾಜು ರೂ.62,098 ಕೋಟಿಗಳಷ್ಟು ನಷ್ಟವಾಗಲು ಕಾರಣವಾಗಿದೆ. ವರದಾನವೆಂದೇ ಬಣ್ಣಿಸಲಾದ ಜಿ.ಎಸ್.ಟಿ ಅನುಷ್ಠಾನವು ಜೂನ್ 2022 ರಲ್ಲಿ ನಿಲ್ಲಿಸಲಾದ ಪರಿಹಾರದಿಂದಾಗಿ ಶಾಪವಾಗಿ ಪರಿಣಮಿಸಿದೆ. ಈ ಹಠಾತ್ ನಿಲುಗಡೆಯಿಂದ ನಮ್ಮ ಹಣಕಾಸು ಪರಿಸ್ಥಿತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದು, ನಾವು ಹೆಮ್ಮೆಯಿಂದ ನಿರ್ವಹಿಸುತ್ತಿದ್ದ ಶೇ 15% ಬೆಳವಣಿಗೆ ದರವನ್ನು ನಿರ್ವಹಿಸುವುದನ್ನು ಕಷ್ಟಕರವಾಗಿದೆ. ಜಿ.ಎಸ್.ಟಿ ಯ ಅವೈಜ್ಞಾನಿಕ ಅನುಷ್ಠಾನದಿಂದಾಗಿ ಕರ್ನಾಟಕ 59,274 ಕೋಟಿ ರೂ.ಗಳ ನಷ್ಟವನ್ನು ಅನುಭವಿಸಿದೆ ಎಂದರು.IMG 20240207 WA0019

ಜಿ.ಎಸ್.ಟಿ ಪರಿಹಾರದ ಕುರಿತು ಮಾಹಿತಿ ಕೋರಿ ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಅವರಿಗೆ ಮೂರು ಪತ್ರಗಳನ್ನು ರಾಜ್ಯ ಸರ್ಕಾರ ಬರೆದಿದೆ. ಆದರೆ ದುರದೃಷ್ಟವಶಾತ್ ಅವರಿಂದ ಯಾವುದೇ ಉತ್ತರ ಬಂದಿಲ್ಲ. ಪ್ರತಿ ವರ್ಷ 4,30,000 ಕೋಟಿ ರೂ.ಗಳ ತೆರಿಗೆ ರಾಜಸ್ವವನ್ನು ಸಂದಾಯ ಮಾಡುತ್ತಿದ್ದರೂ, ಕೇಂದ್ರ ಸರ್ಕಾರದಿಂದ ರೂ. 50,000 ಕೋಟಿ ರೂ.ಗಳನ್ನು ಮಾತ್ರ ಪಡೆಯುತ್ತಿದ್ದೇವೆ ಎಂದರು.

*ಪ್ರತಿ ನೂರು ರೂ.ಗಳಿಗೆ ರಾಜ್ಯಕ್ಕೆ ಕೇವಲ 12-13 ರೂ. ಮಾತ್ರ ದೊರೆಯುತ್ತಿದೆ*
ದುರದೃಷ್ಟವಶಾತ್ , ಕರ್ನಾಟಕ ನೀಡುವ ಪ್ರತಿ 100 ರೂ.ಗಳಿಗೆ ಕೇವಲ 12-1 3 ರೂ.ಗಳನ್ನು ಮಾತ್ರ ಪಡೆಯುತ್ತಿದೆ.ಈ ಅಸಮಾನ ಹಂಚಿಕೆಯಿಂದಾಗಿ ನಮ್ಮ ಅಭಿವೃದ್ಧಿ ಮತ್ತು ಕಲ್ಯಾಣ ಕಾರ್ಯಕ್ರಮಗಳಿಗೆ ನಾವೇ ಅನುದಾನ ಹೊಂದಿಸಿಕೊಳ್ಳಲು ನೇರ ಹೊಡೆತ ಕೊಟ್ಟಂತಾಗಿದೆ ಎಂದರು. ಕೇಂದ್ರ ಸರ್ಕಾರದ ಆಯವ್ಯಯವು ಕಳೆದ 5 ವರ್ಷಗಳಲ್ಲಿ ದುಪ್ಪಟ್ಟಾಗಿದ್ದರೂ ಕರ್ನಾಟಕದ ಹಂಚಿಕೆ ಮಾತ್ರ ಅರ್ಧದಷ್ಟಾಗಿದೆ. 2018-19ರಲ್ಲಿ ಕೇಂದ್ರ ಸರ್ಕಾರದ ಬಜೆಟ್ 24, 42,213 ಕೋಟಿ ರೂ.ಗಳಾಗಿದ್ದರೆ , ಕರ್ನಾಟಕಕ್ಕೆ 46,288 ಕೋಟಿ ರೂ.ಗಳ ಒಟ್ಟು ಅನುದಾನ ದೊರಕಿತು. 2023-24 ರಲ್ಲಿ ಕೇಂದ್ರ ಬಜೆಟ್ 45,03,097 ಕೋಟಿಗಳಷ್ಟಾದರೂ ಕರ್ನಾಟಕಕ್ಕೆ ಮಾತ್ರ 50, 257 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ನ್ಯಾಯ ಎಲ್ಲಿದೆ ? ನ್ಯಾಯವಾಗಿ ನಮಗೆ ಒಂದು ಲಕ್ಷ ಕೋಟಿ ರೂ.ಗಳಿಗಿಂತ ಹೆಚ್ಚು ಮೊತ್ತ ಬರಬೇಕಿದ್ದು , ಆದರೆ ಅದರ ಅರ್ಧದಷ್ಟು ಮಾತ್ರ ದೊರೆತಿದೆ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

*ಸೆಸ್ ಮತ್ತು ಸರ್ಚಾರ್ಜ್ ಗಳು ರಾಜ್ಯಗಳಿಗೆ ಅನುದಾನ ನಿರಾಕರಿಸುವ ದಾರಿ*

ಕೇಂದ್ರ ಸರ್ಕಾರವು ರಾಜ್ಯಗಳಿಗೆ ಅನುದಾನ ನಿರಾಕರಿಸಲು ಸೆಸ್ ಮತ್ತು ಸರ್ಚಾರ್ಜ್ ಗಳ ದಾರಿಯನ್ನು ಕಂಡುಕೊಂಡಿದೆ. ಈ ಹೆಚ್ಚುವರಿ ಸೆಸ್ ಮತ್ತು ಸರ್ಚಾರ್ಜ್ ಗಳಿಂದ 2017-18 ರಿಂದ ಕರ್ನಾಟಕ 55,000 ಕೋಟಿ ರೂ.ಗಳನ್ನು ಕಳೆದುಕೊಂಡಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಹೇಳುವಂತೆ ಹಣಕಾಸು ಆಯೋಗಗಳು ನಿಜಕ್ಕೂ ಸ್ವತಂತ್ರವಾಗಿವೆಯೇ ಎಂದು ಮುಖ್ಯಮಂತ್ರಿಗಳು ಪ್ರಶ್ನಿಸಿದರು. ಅಂತೆಯೇ ಹಣಕಾಸು ಆಯೋಗ ಈ ಕಡಿತವನ್ನು ಸರಿದೂಗಿಸಲು ಶಿಫಾರಸ್ಸು ಮಾಡಿದ್ದ 5495 ಕೋಟಿ ರೂ.ಗಳ ವಿಶೇಷ ಅನುದಾನವನ್ನು ಕೇಂದ್ರ ಸರ್ಕಾರ ಏಕೆ ತಿರಸ್ಕರಿಸಿತು ಎಂದೂ ಪ್ರಶ್ನಿಸಿದರು. ಬೆಂಗಳೂರು ಪೆರಿಫೆರಲ್ ರಿಂಗ್ ರೋಡ್ ಗಾಗಿ 3000 ಕೋಟಿ ರೂ ಹಾಗೂ ಬೆಂಗಳೂರಿನ ಕೆರೆಗಳ ಅಭಿವೃದ್ಧಿಗಾಗಿ ನೀಡಿದ್ದ ವಿಶೇಷ ಅನುದಾನವನ್ನು ಸಹ ಏಕೆ ತಿರಸ್ಕರಿಸಲಾಯಿತು ಎಂದರು. ಒಟ್ಟಾರೆಯಾಗಿ ಹಣಕಾಸು ಆಯೋಗ ಶಿಫಾರಸ್ಸು ಮಾಡಿದ್ದ 11,495 ಕೋಟಿ ರೂ.ಗಳ ಅನುದಾನವನ್ನು ಕೇಂದ್ರ ಸರ್ಕಾರವು ತಿರಸ್ಕರಿಸಿದೆ ಎಂದರು.

*ಮೂಲಸೌಕರ್ಯ ಬದ್ಧತೆಗಳನ್ನು ಈಡೇರಿಸುವಲ್ಲಿ ವಿಳಂಬ:*
ಮೂಲಸೌಕರ್ಯಗಳ ಬದ್ಧತೆಯನ್ನು ಈಡೇರಿಸಲು ವಿಳಂಬ ನೀತಿ ಅನುಸರಿಸುತ್ತಿರುವ ಕೇಂದ್ರ ಸರ್ಕಾರದ ಧೋರಣೆಯನ್ನು ಬಲವಾಗಿ ಟೀಕಿಸಿದ ಮುಖ್ಯಮಂತ್ರಿಗಳು, ಈ ವರ್ಷ ರಾಜ್ಯಕ್ಕೆ ಬಂದಿರುವ ಬರಗಾಲದ ಪರಿಸ್ಥಿತಿಯಲ್ಲಿ ಕೇಂದ್ರವು ರಾಜ್ಯದ ಜನತೆಯತ್ತ ಕಾಳಜಿ ವಹಿಸದಿರುವುದನ್ನೂ ಟೀಕಿಸಿದರು. ರಾಜ್ಯದ ಪ್ರಮುಖ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಣೆ ಮಾಡಿ ಭಾರಿ ಪ್ರಚಾರ ಗಳಿಸಲಾಯಿತೇ ಹೊರತು , ಕೇಂದ್ರದ ಭರವಸೆಗಳು , ಭರವಸೆಗಳಾಗಿಯೇ ಉಳಿದು , ಅನುದಾನವಿಲ್ಲದೇ ಯೋಜನೆಗಳು ಸೊರಗುತ್ತಿವೆ. ರಾಜ್ಯಕ್ಕೆ ನೀರನ್ನು ಸುಸ್ಥಿರಗೊಳಿಸಲಿದ್ದ ಮಹಾದಾಯಿ ಯೋಜನೆಯನ್ನು ಸ್ಥಗಿತಗೊಳಿಸಲಾಗಿದ್ದು, ಪರಿಸರ ತೀರುವಳಿಯನ್ನು ಇನ್ನೂ ನೀಡಲಾಗಿಲ್ಲ. ಅಂತೆಯೇ, ಬೆಂಗಳೂರಿನ ಕುಡಿಯುವ ನೀರಿನ ಅಗತ್ಯತೆಗೆ ಪೂರಕವಾದ ಮೇಕೆದಾಟು ಯೋಜನೆಗೆ ಅಗತ್ಯ ಅನುಮತಿಗಳನ್ನು ನೀಡದೇ ನಿರ್ಲಕ್ಷ್ಯಕ್ಕೆ ಗುರಿಯಾಗಿದೆ.

236 ತಾಲ್ಲೂಕುಗಳಲ್ಲಿ 223 ತಾಲ್ಲೂಕುಗಳು ತೀವ್ರ ಬರಪರಿಸ್ಥಿತಿಯ ಸಂಕಷ್ಟಕ್ಕೆ ರಾಜ್ಯ ಸಿಲುಕಿದ್ದು, 17,901 ಕೋಟಿ ರೂ. ಬರಪರಿಹಾರ ನೀಡಲು ರಾಜ್ಯದ ಮನವಿಗೆ ಕೇಂದ್ರ ಸ್ಪಂದಿಸದಿರುವುದು ನಿರಾಶಾದಾಯಕವಾಗಿದೆ. ನಮ್ಮ ರೈತರು ನರಳುತ್ತಿದ್ದು, ನಮ್ಮ ಭೂಮಿ ಒಣಗುತ್ತಿದ್ದರೂ , ತುರ್ತು ನೆರವಿನ ಅಗತ್ಯವಿರುವ ನಮಗೆ ಕೇಂದ್ರದ ಸಹಾಯ ದೂರದ ಕನಸಾಗಿಯೇ ಉಳಿದಿದೆ. ಕೇಂದ್ರ ಸರ್ಕಾರದ ವಿವಿಧ ಪಾಲುದಾರರಿಗೆ ರಾಜ್ಯ ಸರ್ಕಾರದಿಂದ ಪರಿಹಾರದ ಶೀಘ್ರ ಬಿಡುಗಡೆ ಕೋರಿ 17 ಪತ್ರಗಳನ್ನು ಬರೆದಿದ್ದರೂ ಸಹ , ಅವರಿಂದ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆತಿಲ್ಲ ಎಂದು ಆರೋಪಿಸಿದರು.IMG 20240207 WA0001

*ನಮ್ಮ ತೆರಿಗೆ, ನಮ್ಮ ಹಕ್ಕು : ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯ ವ್ಯಾಖ್ಯಾನ ನಮ್ಮ ಹಕ್ಕನ್ನು ಕಸಿದುಕೊಳ್ಳಬಾರದು:*

ಬಿಜೆಪಿಯವರ ಇತ್ತೀಚಿನ ನಿರೂಪಣೆಯನ್ನು ಅಲ್ಲಗೆಳೆದ ಮುಖ್ಯಮಂತ್ರಿಗಳು, ಪ್ರತಿಭಟನೆಯು ಗ್ಯಾರಂಟಿ ಯೋಜನೆಗಳಿಗೆ ಹಣ ಪೂರೈಸುವ ಹತಾಶೆಯ ಕ್ರಮವೆಂದು ಬಿಜೆಪಿಯವರು ಅನ್ಯಾಯವಾಗಿ ಟೀಕಿಸುತ್ತಿದ್ದಾರೆ. ಆದರೆ ಗ್ಯಾರಂಟಿ ಯೋಜನೆಗಳು ರಾಜ್ಯದ ಆರ್ಥಿಕ ಬೆಳವಣಿಗೆಗೆ ಪೂರಕವಾಗಿದ್ದು, ಜಿಎಸ್ ಟಿ ಸಂಗ್ರಹಣೆಯು ಶೇ.18 ರಷ್ಟು ಹೆಚ್ಚಳವನ್ನು ಕಂಡಿದೆ ಎಂದರು.
ಕರ್ನಾಟಕದ ಆರ್ಥಿಕ ಆರೋಗ್ಯ ಸುಸ್ಥಿರವಾಗಿದ್ದು, ಸಾಮಾಜಿಕ ನ್ಯಾಯ ಮತ್ತು ಸಮಾನತೆಯಲ್ಲಿ ದೃಢ ನಂಬಿಕೆಯಿಂದಾಗಿ ಈ ಯೋಜನೆಗಳ ಬಗ್ಗೆ ನಮ್ಮ ಬದ್ಧತೆ ಅಚಲವಾಗಿದೆ. ನಮ್ಮ ಲೆಕ್ಕಾಚಾರ ಹಾಗೂ ಸಂಪನ್ಮೂಲಗಳು ಉತ್ತಮವಾಗಿದೆ. ನಮ್ಮ ಆರ್ಥಿಕ ಭದ್ರತೆ ಅಥವಾ ಬಾಧ್ಯತೆಗೆ ರಾಜಿಯಾಗದಂತೆ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲು ನಮ್ಮ ಆಡಳಿತ ಸಮರ್ಥವಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದರು.
1,87,867 ಕೋಟಿ ರೂ.ಗಳ ಕೊರತೆಯು ಕರ್ನಾಟಕದ ಪರಿವರ್ತನೆಯ ಅಭಿವೃದ್ಧಿಯ ಅವಕಾಶವನ್ನು ತಪ್ಪಿಸಿದಂತಾಗಿದೆ. ಈ ಮೊತ್ತದಿಂದ 1000 ಉತ್ಕೃಷ್ಟ ಶಾಲೆಗಳು, 500 ಆಧುನಿಕ ಆರೋಗ್ಯ ಸೌಲಭ್ಯಗಳುಳ್ಳ ಆಸ್ಪತ್ರೆಗಳು, ದೂರದ ಗ್ರಾಮಗಳನ್ನು ಸಂಪರ್ಕಿಸುವ ಸಾವಿರಾರು ಕಿ.ಮೀ. ರಸ್ತೆಗಳನ್ನು ನಿರ್ಮಿಸುವ ಮೂಲಕ , ಇಂತಹ ಸವಾಲಿನ ಸಂದರ್ಭದಲ್ಲಿ ನಮ್ಮ ಆರೋಗ್ಯ ಕ್ಷೇತ್ರದ ಮೂಲಸೌಕರ್ಯಗಳನ್ನು ವೃದ್ಧಿಸಬಹುದಾಗಿತ್ತು ಎಂದು ವಿವರಿಸಿದರು.
ನಮಗೆ ನಿರಾಕರಿಸಲಾದ ಪ್ರತಿ ಒಂದು ರೂಪಾಯಿಯು ನಮ್ಮ ಮಕ್ಕಳ ಶಿಕ್ಷಣ, ನಮ್ಮ ಕುಟುಂಬಗಳ ಆರೋಗ್ಯ ಮತ್ತು ನಮ್ಮ ಸಮುದಾಯಗಳ ಸಂಪರ್ಕ ಮತ್ತು ಸಮೃದ್ಧಿಯ ಕನಸನ್ನು ಮುಂದೂಡಿದಂತೆ. ಇದು ನಾವು ಎದುರಿಸುತ್ತಿರುವ ಕೊರತೆಗೆ ತೆರುತ್ತಿರುವ ಬೆಲೆ ಎಂದು ತಿಳಿಸಿದರು.
ಇಂತಹ ಆಧಾರರಹಿತ ಆರೋಪಗಳು ಅಥವಾ ರಾಜಕೀಯ ತಂತ್ರಗಾರಿಕೆಗೆ ಬಲಿಯಾಗಬಾರದು ಎಂದು ಪ್ರತಿಭಟನಾಕಾರರಿಗೆ ಕರೆಕೊಟ್ಟ ಮುಖ್ಯಮಂತ್ರಿಗಳು, ನಮ್ಮ ಹೋರಾಟ ನ್ಯಾಯಕ್ಕಾಗಿ, ನಮ್ಮ ನ್ಯಾಯಸಮ್ಮತ ಪಾಲಿಗಾಗಿ ಹಾಗೂ ಪ್ರತಿಯೊಬ್ಬ ಕನ್ನಡಿಗನ ಗೌರವಾಭಿಮಾನಕ್ಕಾಗಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.