ಅತ್ತಿಬೆಲೆ ಪುರಸಭೆ ವ್ಯಾಪ್ತಿಯಲ್ಲಿ ಕಸ ವಿಲೇವಾರಿ ಮಾಡಲು ಜಾಗ ಮಂಜೂರು ಮಾಡಿಕೊಡುವಂತೆ ಜಿಲ್ಲಾದಿಕಾರಿಗಳನ್ನು ಆಗ್ರಹಿಸಿ ಇಂದು ಆನೇಕಲ್ ತಾಲೂಕು ಕಚೇರಿ ಮುಂಭಾಗದಲ್ಲಿ ಅತ್ತಿಬೆಲೆ ಪುರಸಭಾ ಸದಸ್ಯರು ಪ್ರತಿಭಟನೆಯನ್ನು ನಡೆಸಿದರು.
ಕಳೆದ ೫ ವರ್ಷಗಳಿಂದ ಅತ್ತಿಬೆಲೆ ಪುರಸಭೆಗೆ ಕಸ ವಿಲೇವಾರಿ ಮಾಡಲು ಜಾಗ ನೀಡುವಂತೆ ಜಿಲ್ಲಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ತಂದರೂ ಮತ್ತು ಹಲವು ಬಾರಿ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಎಂದು ಪುರಸಭಾ ಸದಸ್ಯರು ಆಕ್ರೋಶವನ್ನು ವ್ಯಕ್ತ ಪಡಿಸಿದರು.
ಇನ್ನು ಒಂದು ತಿಂಗಳಲ್ಲಿ ಕಸ ಹಾಕಲು ಜಾಗ ಮಂಜೂರು ಮಾಡಿಕೊಡದಿದ್ದರೆ ಆನೇಕಲ್ ತಾಲೂಕು ಕಚೇರಿ ಮುಂಭಾಗವೇ ಕಸವನ್ನು ತಂದು ಸುರಿದು ಪ್ರತಿಭಟನೆ ಮಾಡಲಾಗುವುದು ಎಂದು ಅತ್ತಿಬೆಲೆ ಪುರಸಭಾ ಸದಸ್ಯರು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಎಚ್ಚರಿಕೆಯನ್ನು ನೀಡಿದರು.
ಇನ್ನು ಪ್ರತಿಭಟನೆಯಲ್ಲಿ ಅತ್ತಿಬೆಲೆ ಪುರಸಭೆಯ ಅಧ್ಯಕ್ಷರಾದ ಚಂದನಾ ಕುಮಾರ್, ಉಪಾಧ್ಯಕ್ಷರಾದ ಜಯಲಕ್ಷ್ಮಿ ವೆಂಕಟೇಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ನಾರಾಯಣಸ್ವಾಮಿ, ಪುರಸಭೆ ಸದಸ್ಯರಾದ ತಿಮ್ಮಾರೆಡ್ಡಿ, ಮುನಿರಾಜು, ಗಣೇಶ್, ಸುವರ್ಣಮ್ಮ, ರಾಜೇಶ್ವರಿ ರವಿಕುಮಾರ್, ಮೀನಾ, ಕಾಂತಮ್ಮ, ರಮೇಶ್ ಮತ್ತಿತರು ಹಾಜರಿದ್ದರು