ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಕಟ್ಟಡ ಕಾರ್ಮಿಕರ ಪ್ರತಿಭಟನೆ.
ಪಾವಗಡ: ಇತ್ತೀಚಿನ ದಿನಗಳಲ್ಲಿ ಕಟ್ಟಡ ಕಾರ್ಮಿಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದು, ಸರ್ಕಾರ ಕೂಡಲೆ ಕಟ್ಟಡ ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ನೇತೃತ್ವದಲ್ಲಿ ಗುರುವಾರ ಕಟ್ಟಡ ಕಾರ್ಮಿಕರು ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟಿಸಿದರು. ವಸತಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸರ್ಕಾರ ಸ್ಪಷ್ಟವಾದ ನಿಯಮವನ್ನು ರೂಪಿಸದ ಕಾರಣ ಇಂದು ಕಟ್ಟಡ ಕಾರ್ಮಿಕರು ಅನೇಕ ರೀತಿಯ ಸಮಸ್ಯೆಗಳನ್ನು ಎದುರಿಸಬೇಕಿದೆ ಎಂದು ಪ್ರತಿಭಟನಾ ನಿರತರು ತಮ್ಮ ಅಳಲನ್ನು ತೋಡಿಕೊಂಡರು.
ಸರ್ಕಾರ ಕೂಡಲೇ ಕಾರ್ಮಿಕರ ನೆರವಿಗೆ ಬಂದು ಬಡ್ಡಿ ರಹಿತ ಸಾಲ ಸೌಲಭ್ಯ ನೀಡಬೇಕು. ಆರೋಗ್ಯ ಸಂಜೀವಿನಿ ಸೇವೆಯನ್ನು ಕಟ್ಟಡ ಕಾರ್ಮಿಕರ ಕುಟುಂಬಕ್ಕೆ ನೀಡಬೇಕು. ಸವಲತ್ತುಗಳಿಗಾಗಿ ಸಲ್ಲಿಸಿದ ಅರ್ಜಿ ವಿಲೇವಾರಿ ವಿಳಂಬ ಮಾಡಬಾರದು. ಕಿಟ್ ಗಳ ಖರೀದಿಗಾಗಿ ಕಾರ್ಮಿಕರ ಖಾತೆಗೆ ನಗದು ವರ್ಗಾವಣೆ ಮಾಡಬೇಕು ಎಂದು ಒತ್ತಾಯಿಸಿದರು.
ಶೀಘ್ರವೇ ಸಮಸ್ಯೆಗಳಿಗೆ ಸ್ಪಂದಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದೆಂದು ಎಚ್ಚರಿಸಿದರು.
ಸಂಘದ ಅಧ್ಯಕ್ಷ ರಾಮಾಂಜಿನಪ್ಪ, ಪ್ರಧಾನ ಕಾರ್ಯದರ್ಶಿ ಅಂಜಯ್ಯ, ಖಜಾಂಚಿ ಭೂಲಕ್ಷ್ಮಮ್ಮ, ಪದಾಧಿಕಾರಿಗಳಾದ ಗಂಗಾಧರ, ರಾಮಾಂಜಿ, ಸಂಜೀವಮ್ಮ, ಮಮತ, ಈರಮ್ಮ, ವಿಜಯಮ್ಮ, ಪಾರ್ವತಮ್ಮ, ಶಿವಲಿಂಗಮ್ಮ, ಚಂದ್ರಣ್ಣ, ಶಿವಣ್ಣ, ಆನಂದ, ಮದ್ಲೇಟಪ್ಪ ಉಪಸ್ಥಿತರಿದ್ದರು.
ವರದಿ: ಶ್ರೀನಿವಾಸಲು ಎ