!
ಜಿಲ್ಲಾಧಿಕಾರಿ ಶ್ರೀನಿವಾಸ್ ಕೆ. ಅವರಿಂದ ಪ್ರಗತಿ ಪರಿಶೀಲನಾ ಸಭೆ
ತುಮಕೂರು(ಕ.ವಾ.)ಜೂ.22: ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ ವತಿಯಿಂದ ಕೈಗೊಳ್ಳಲಾದ ವಿವಿಧ ಯೋಜನೆಗಳ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ನಿನ್ನೆ ಸಂಜೆ ಜಿಲ್ಲಾಧಿಕಾರಿ ಕಚೇರಿ ನ್ಯಾಯಾಲಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆ ನಡೆಸಿ, ವಿವಿಧ ಇಲಾಖೆಗಳ ಯೋಜನೆಗಳ ಮತ್ತು ಕಾರ್ಯಕ್ರಮಗಳ ಅನುಷ್ಟಾನ ಕುರಿತಂತೆ ಪ್ರಗತಿ ಪರಿಶೀಲನೆ ನಡೆಸಿದರು.
“ಗೃಹ ಜ್ಯೋತಿ ಯೋಜನೆ”ಯು ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಕರ್ನಾಟಕದ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್‍ಗಳನ್ನು ಒಳಗೊಂಡಂತೆ ಉಚಿತ ವಿದ್ಯುತ್ ಒದಗಿಸುತ್ತದೆ. ಸರ್ಕಾರದ ಈ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮೊದಲಿಗೆ ಬೆಸ್ಕಾಂ ವತಿಯಿಂದ ಯೋಜನೆ ರೂಪಿಸಿ ಈ ಯೋಜನೆ ಕಾರ್ಯಗತಗೊಳಿಸಲು ಸಿದ್ಧರಾಗುವಂತೆ ಸೂಚಿಸಿದರು.
ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಕಾರ್ಯ ಯೋಜನೆಯನ್ನು ರೂಪಿಸಬೇಕು ಮತ್ತು ಜಿಲ್ಲೆಯಾದ್ಯಂತ ಆರ್‍ಓ ಘಟಕಗಳು ಸುಸ್ಥಿತಿಯಲ್ಲಿರಬೇಕು. ನೀರಿನ ಸಮಸ್ಯೆ ಇರುವ ಕಡೆ ಮೊದಲಿಗೆ ಕೊಳವೆ ಬಾವಿ ಮೂಲಕ ನೀರು ಪೂರೈಕೆ, ಕೊಳವೆ ಬಾವಿ ಇಲ್ಲದ ಕಡೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಬೇಕು. ಟ್ಯಾಂಕರ್‍ಗಳಿಗೆ ಜಿಪಿಎಸ್ ಅಳವಡಿಸಬೇಕು ಮತ್ತು ಇದಕ್ಕೆ ಟಾಸ್ಕ್‍ಪೋರ್ಸ್ ಸಮಿತಿಯ ಅನುಮತಿ ಇರಬೇಕು. ಪಾವಗಡದಂತಹ ಪ್ರದೇಶದಲ್ಲಿ ಜಲಮೂಲ ಇರುವ ಕಡೆಗಳಲ್ಲಿ ಕೊಳವೆ ಬಾವಿ ಕೊರೆದು ಪೈಪ್‍ಲೈನ್ ಎಳೆಯುವಂತೆ ಗ್ರಾಮೀಣ ನೀರು ನೈರ್ಮಲ್ಯ ಇಲಾಖೆ ಎಕ್ಸಿಕ್ಯೂಟಿವ್ ಇಂಜಿನಿಯರ್ ರವೀಶ್ ಅವರಿಗೆ ಸೂಚಿಸಿದರು.
ಇಂದಿರಾ ಕ್ಯಾಂಟೀನ್ ವ್ಯವಸ್ಥಿತವಾಗಿ ನಡೆಯಬೇಕು. ಅವ್ಯವಸ್ಥೆಯನ್ನು ತಾವು ಸಹಿಸುವುದಿಲ್ಲ. ಇಲ್ಲಿ ಸಿಸಿ ಟಿವಿ ಅಳವಡಿಸಿ ಜನರಿಗೆ ಉತ್ತಮ ಆಹಾರ ವಿತರಿಸುವಂತೆ ನಗರ ಯೋಜನಾ ಪ್ರಾಧಿಕಾರದ ಅಧಿಕಾರಿ ಅಂಜಿನಪ್ಪ ಅವರಿಗೆ ಸೂಚಿಸಿದರು.
ಮುಜರಾಯಿ ದೇವಸ್ಥಾನಗಳಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಭಕ್ತರ ಕಾಣಿಕೆಗಳನ್ನು ಹುಂಡಿಗೆ ಹಾಕುವ ನಿಟ್ಟಿನಲ್ಲಿ ಕ್ರಮವಹಿಸುವಂತೆ ಮುಜರಾಯಿ ತಹಶೀಲ್ದಾರ್ ಅವರಿಗೆ ಸೂಚಿಸಿದರು.
ಜಿಲ್ಲೆಯಾದ್ಯಂತ ರೈತರಿಗೆ ಉತ್ತಮ ಗುಣಮಟ್ಟದ ಬಿತ್ತನೆ ಬೀಜಗಳು ಹಾಗೂ ರಸಗೊಬ್ಬರಗಳನ್ನು ವಿತರಿಸಬೇಕು. ಎಲ್ಲೂ ಕೊರತೆಯಾಗದ ಹಾಗೆ ಕ್ರಮವಹಿಸುವಂತೆ ಕೃಷಿ ಜಂಟಿ ನಿರ್ದೇಶಕ ರವಿಕುಕಮಾರ್ ಅವರಿಗೆ ಸೂಚಿಸಿದರು.
ನಗರದ ಕೈಗಾರಿಕಾ ಪ್ರದೇಶಗಳಲ್ಲಿ ಎಲ್ಲೆಲ್ಲಿ ಅನಿಲ ಕಾರ್ಖಾನೆಗಳಿವೆಯೋ ಅಲ್ಲಿ ಒಂದು ಉಪ ಅಗ್ನಿಶಾಮಕ ಘಟಕಗಳನ್ನು ಸ್ಥಾಪಿಸಬೇಕು. ಮತ್ತು ಕಾಲಕಾಲಕ್ಕೆ ಅಣಕು ಪ್ರದರ್ಶನ ಏರ್ಪಡಿಸುವಂತೆ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ 371 ಸಣ್ಣ ಕೆರೆಗಳಿದ್ದು, ಹೆಚ್ಚಿನ ಮಳೆ ಸುರಿದಲ್ಲಿ ಕೆರೆ ಒಡೆಯದ ಹಾಗೆ ಬದುಗಳನ್ನು ಪರಿಶೀಲಿಸಬೇಕು. ಎಲ್ಲೂ ಸಹ ಕೆರೆ ಒಡೆಯದ ಹಾಗೆ ಮುನ್ನೆಚ್ಚರಿಕಾ ಕ್ರಮ ವಹಿಸುವಂತೆ ಸಣ್ಣ ನೀರಾವರಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ. ಕರಾಳೆ, 3 ಉಪವಿಭಾಗಗಳ ಉಪವಿಭಾಗಾಧಿಕಾರಿಗಳು, ಎಲ್ಲಾ ತಾಲ್ಲೂಕುಗಳ ತಹಶೀಲ್ದಾರರುಗಳು ಸೇರಿದಂತೆ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಗೃಹ ಜ್ಯೋತಿ ಯೋಜನೆ
ಗೃಹಜ್ಯೋತಿ ಕರ್ನಾಟಕ ಸರ್ಕಾರದ ಪ್ರಮುಖ ಯೋಜನೆಯಾಗಿದ್ದು, ಇದು ಕರ್ನಾಟಕದ ಪ್ರತಿ ಗೃಹ ಬಳಕೆದಾರರಿಗೆ 200 ಯೂನಿಟ್ ಒಳಗೊಂಡಂತೆ ಉಚಿತ ವಿದ್ಯುತ್ ಒದಗಿಸುವ ಯೋಜನೆಯಾಗಿರುತ್ತದೆ.
ಈ ಯೋಜನೆಯನ್ನು ಪಡೆಯಲು ಪ್ರತಿ ಗೃಹ ಬಳಕೆದಾರರು ಮೊದಲಿಗೆ ಸೇವಾ ಸಿಂಧು ವೆಬ್‍ಸೈಟ್‍ನಲ್ಲಿ ನೋಂದಾಯಿಸಿಕೊಳ್ಳಬೇಕು.
ಜುಲೈ 2023ರಲ್ಲಿ ಬಳಸಿದ ವಿದ್ಯುತ್ ಬಳಕೆಯನ್ನು ಆಗಸ್ಟ್ 2023ರಲ್ಲಿ ನೀಡುವ ಬಿಲ್ಲಿಗೆ ಅನ್ವಯವಾಗುವಂತೆ ಯೋಜನೆಯನ್ನು ಜಾರಿಗೊಳಿಸಲಾಗುವುದು. ಎಲ್ಲಾ ಗೃಹ ಬಳಕೆ ಗ್ರಾಹಕರಿಗೆ ಗ್ರಾಮ ಒನ್, ಕರ್ನಾಟಕ ಒನ್, ಬೆಂಗಳೂರು ಒನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಸಲ್ಲಿಸಬೇಕಾದ ದಾಖಲೆಗಳು :-
ಆಧಾರ್ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ಖಾತೆ ಸಂಖ್ಯೆ, ಬಾಡಿಗೆ/ ಭೋಗ್ಯದ ಕರಾರು ಪತ್ರ(ಬಾಡಿಗೆ/ಭೋಗ್ಯದಾರರಾಗಿದ್ದಲ್ಲಿ) ಸಲ್ಲಿಸುವುದು ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಸಲ್ಲಿಸುವುದು. ಈ ಯೋಜನೆಯಡಿ ಯಾವುದೇ ಶುಲ್ಕವನ್ನು ಸೇವಾಸಿಂಧು ಪೋರ್ಟಲ್‍ನಲ್ಲಿ ಪಾವತಿಸಬೇಕಾಗಿರುವುದಿಲ್ಲ.
ಒಂದಕ್ಕಿಂತ ಹೆಚ್ಚು ವಿದ್ಯುತ್ ಮಾಪಕಗಳಿದ್ದರೆ ಪ್ರತಿ ಗ್ರಾಹಕರ ಒಂದು ಮೀಟರ್‍ಗೆ ಮಾತ್ರ ಯೋಜನೆ ಅನ್ವಯಿಸುತ್ತದೆ.
ಅರ್ಜಿ ಸಲ್ಲಿಸಿದ ನಂತರ ಸೇವಾ ಸಿಂಧುವಿನಿಂದ ಗ್ರಾಹಕರ ನೋಂದಾಯಿತ ಇ-ಮೇಲ್ ಅಥವಾ ಮೊಬೈಲ್‍ಗೆ ಸಂದೇಶವನ್ನು ಕಳುಹಿಸಲ್ಪಡುತ್ತದೆ. ಜುಲೈ-2023ರಲ್ಲಿ ನೀಡಿದ ಬಿಲ್ಲನ್ನು ಯೋಜನೆಯ ಲಾಭ ಇಲ್ಲದೆ ಪಾವತಿಸಬೇಕಾಗುತ್ತದೆ. ಯೋಜನೆಯ ಪ್ರಯೋಜನಗಳು ಮೀಟರ್ ಓದುವ ದಿನಾಂಕದಿಂದ ಅಂದರೆ 1ನೇ ಆಗಸ್ಟ್ 2023ರಂದು ಅಥವಾ ನಂತರ ಅನ್ವಯಿಸುತ್ತದೆ(ಜುಲೈ 2023ರ ಬಳಕೆಗಾಗಿ). ಅಪಾರ್ಟ್‍ಮೆಂಟ್ ಮಾಲೀಕನಾಗಿದ್ದರೂ ಸಹ ಪ್ರತ್ಯೇಕ ವಿದ್ಯುತ್ ಮೀಟರ್ ಲಭ್ಯವಿದ್ದರೆ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಬಾಡಿಗೆದಾರರಾಗಿದ್ದು, ಬಿಲ್ ಮಾಲೀಕರ ಹೆಸರಿನಲ್ಲಿದ್ದರೆ ಆಧಾರ್ ಸಂಖ್ಯೆ, ಬಿಲ್ಲಿನಲ್ಲಿ ನಮೂದಿಸಲಾಗಿರುವ ಗ್ರಾಹಕರ ಸಂಖ್ಯೆ/ ಖಾತೆ ಸಂಖ್ಯೆ, ಬಾಡಿಗೆ/ ಭೋಗ್ಯದ ಕರಾರು ಪತ್ರ ಸಲ್ಲಿಸಿದಲ್ಲಿ ಅಥವಾ ಸಂಬಂಧಿತ ವಿಳಾಸವನ್ನು ಸೂಚಿಸುವ ವೋಟರ್ ಐಡಿ ಸಲ್ಲಿಸಿ ಯೋಜನೆಯ ಲಾಭ ಪಡೆಯಬಹುದಾಗಿದೆ.
ಅಂಗಡಿ ಮಾಲೀಕರಿಗೆ ಈ ಯೋಜನೆಯ ಪ್ರಯೋಜನ ಇರುವುದಿಲ್ಲ. ಇದು ಕೇವಲ ಗೃಹ ಬಳಕೆದಾರರಿಗೆ ಮಾತ್ರ.
2022-23ರ ಸರಾಸರಿ ವಿದ್ಯುತ್ ಬಳಕೆ+ಶೇ.10ರ ಹೆಚ್ಚಳ(2 ಸೇರಿಸಿದರೆ ಒಟ್ಟು 200 ಯೂನಿಟ್ ಒಳಗಿರಬೇಕು) ಸರಾಸರಿ ಬಳಕೆಯ ಆಧಾರದ ಮೇಲೆ ಲಾಭವನ್ನು ಲೆಕ್ಕೀಕರಿಸಲಾಗುತ್ತದೆ.
ಈ ಯೋಜನೆಯನ್ನು ಪಡೆಯಲು ಗ್ರಾಹಕ ಸಂಖ್ಯೆ/ಖಾತೆ ಸಂಖ್ಯೆಯೊಂದಿಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಾಗಿರುತ್ತದೆ. ಒಂದು ಪಕ್ಷ ಗ್ರಾಹಕರ ಆಧಾರ್ ಕರ್ನಾಟಕದ ಹೊರಗೆ ನೋಂದಾಯಿಸಲ್ಪಟ್ಟಿದ್ದಲ್ಲಿ ಗ್ರಾಹಕರು ಕರ್ನಾಟಕದ ವಿಳಾಸ ಪುರಾವೆಯೊಂದಿಗೆ ಕರ್ನಾಟಕದಲ್ಲಿ ವಾಸಿಸುತ್ತಿದ್ದಲ್ಲಿ ಯೋಜನೆಯ ಲಾಭ ಪಡೆಯಬಹುದಾಗಿರುತ್ತದೆ.
ವಿದ್ಯುತ್ ಬಿಲ್ಲು ಬಾಕಿ ಉಳಿಸಿಕೊಂಡಿದ್ದಲ್ಲಿ ಜೂನ್ 30ರವರೆಗಿನ ವಿದ್ಯುತ್ ಬಾಕಿಯನ್ನು 3 ತಿಂಗಳೊಳಗಾಗಿ ಪಾವತಿಸಬೇಕಾಗುತ್ತದೆ. ಪಾವತಿಸದಿದ್ದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗುವುದು.
ವಿದ್ಯುತ್ ಬಿಲ್ಲು ಮನೆಯ ಮೃತ ಮಾಲೀಕರ ಹೆಸರಿನಲ್ಲಿದ್ದರೆ, ವಿದ್ಯುತ್ ಸಂಪರ್ಕವನ್ನು ಮುಂದಿನ ವಾರಸುದಾರರ ಹೆಸರಿಗೆ ವರ್ಗಾಯಿಸಿಕೊಟ್ಟು ತದನಂತರ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಮಾಸಿಕ ವಿದ್ಯುತ್ ಬಳಕೆಯು 200 ಯೂನಿಟ್‍ಗಳಿಗಿಂತಲೂ ಹೆಚ್ಚಿದ್ದರೆ ಆ ನಿರ್ಧಿಷ್ಟ ತಿಂಗಳಿಗೆ ಮಾತ್ರ ಸಂಪೂರ್ಣ ಬಿಲ್ ಮೊತ್ತವನ್ನು ಪಾವತಿಸಬೇಕಾಗುತ್ತದೆ. ವಿದ್ಯುತ್ ಬಳಕೆಯು ಅರ್ಹ ಯೂನಿಟ್‍ಗಳಿಗಿಂತ ಕಡಿಮೆ ಇದ್ದಲ್ಲಿ “ಶೂನ್ಯ ಬಿಲ್” ಅನ್ನು ಗ್ರಾಹಕರು ಪಡೆಯುತ್ತಾರೆ.