ಕೊಲೆ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾದ ಖಾಕಿ ಪಡೆ
ಪಾವಗಡ:. ತಾಲ್ಲೂಕಿನ ನಾಗಲಮಡಿಕೆ ಹೋಬಳಿಯ ತಪಗಾನದೊಡ್ಡಿ ಗೇಟ್ ಬಳಿ ಸೆಪ್ಟೆಂಬರ್ 28 ರ ಮಂಗಳವಾರ ಮಾಣಿಕ್ಯಂಬಾಷ(60) ಎಂಬುವರನ್ನು ಹತ್ಯೆ ಮಾಡಲಾಗಿತ್ತು, ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು.
ಹತ್ಯೆಯಾದ ಕೆಲವೇ ದಿನಗಳಲ್ಲಿ ಆರೋಪಿಗಳನ್ನು ತಿರುಮಣಿ ಪೊಲೀಸರು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಶುಕ್ರವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದರು.
ಘಟನೆಯ ವಿವರ
ಆಂಧ್ರ ಪ್ರದೇಶದ ಅನಂತಪುರ ನಿವಾಸಿ ರಮಾದೇವಿ(41), ವೆಂಕಟಾಪುರ ದ ನಿವಾಸಿ ನಾಗರಾಜು(42) ಬಂಧಿತ ಆರೋಪಿಗಳಾಗಿದ್ದಾರೆ. ಮಂಗಳವಾರ ತಪಗಾನದೊಡ್ಡಿ ಗೇಟ್ ಬಳಿಯ ಗುಡ್ಡದಲ್ಲಿ ವೃದ್ಧನ ಮೃತ ದೇಹ ಪತ್ತೆಯಾಗಿತ್ತು. ಮೃತ ಧರಿಸಿದ್ದ ಷರ್ಟ್ ನ ಮೇಲಿದ್ದ ಟೈಲರ್ ಅಂಗಡಿಯ ಹೆಸರಿನ ಜಾಡು ಹಿಡಿದು ಪೊಲೀಸರ ತಂಡ ಅನಂತಪುರದಲ್ಲಿ ಮೃತನ ಪತ್ತೆ ಕಾರ್ಯ ಆರಂಭಿಸಿತು. ಒಂದೇ ದಿನದಲ್ಲಿ ಮೃತನ ಹೆಸರು, ವಿಳಾಸ ಪತ್ತೆ ಹಚ್ಚಿ, ಹತ್ಯೆ ಮಾಡಿದವರ ಬಗ್ಗೆ ಮಾಹಿತಿ ಸಂಗ್ರಹಿಸುವಲ್ಲಿ ಸರ್ಕಲ್ ಇನ್ ಸ್ಪೆಕ್ಟರ್ ಕಾಂತರೆಡ್ಡಿ ತಂಡ ಯಶಸ್ವಿಯಾಗಿತ್ತು.
ಮಹಿಳೆಯೊಂದಿಗೆ ಹೊಂದಿದ್ದ ಅನೈತಿಕ ಸಂಬಂಧ ಹತ್ಯೆಗೆ ಕಾರಣ ಎಂದು ತಿಳಿದು ಬಂದಿದೆ.
ಮಹಿಳೆ ಮಾಣಿಕ್ಯಂ ಪಾಷನನ್ನು ಅನಂತಪುರದಿಂದ ತಪಗಾನದೊಡ್ಡಿ ಗೇಟ್ ಬಳಿಗೆ ಕರೆದುಕೊಂಡು ಬಂದಿದ್ದಳೆಂದು, ನಂತರ ಆರೋಪಿಗಳಿಬ್ಬರು ಸೇರಿ ವೃದ್ಧನ ತಲೆಯ ಮೇಲೆ ಕಲ್ಲು ಹಾಕಿ ಹತ್ಯೆ ಮಾಡಿ ದ್ವಿಚಕ್ರ ವಾಹನದಲ್ಲಿ ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.
ಅತ್ಯಂತ ಕಡಿಮೆ ಅವಧಿಯಲ್ಲಿ ಹತ್ಯೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಯಶಸ್ವಿಯಾಗಿದ್ದಾರೆ.
ವರದಿ: ಶ್ರೀನಿವಾಸಲು ಎ.