ಕರ್ನಾಟಕ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಸನ್ನ ಬಾಲಚಂದ್ರ ವರಲೆ ಅಧಿಕಾರ ಸ್ವೀಕಾರ
ಬೆಂಗಳೂರು, ಅಕ್ಟೋಬರ್ 17, (ಕರ್ನಾಟಕ ವಾರ್ತೆ) :
ಕರ್ನಾಟಕ ಉಚ್ಛನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾಗಿ ಪ್ರಸನ್ನ ಬಾಲಚಂದ್ರ ವರಲೆ ಅವರು ಇಂದು ಅಧಿಕಾರ ವಹಿಸಿಕೊಂಡರು.
ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ಇಂದು ಹಮ್ಮಿಕೊಳ್ಳಲಾದ ಸರಳ ಸಮಾರಂಭದಲ್ಲಿ ಅಧಿಕಾರ ವಹಿಸಿಕೊಂಡು ಮಾತನಾಡಿದ ಮುಖ್ಯ ನ್ಯಾಯಮೂರ್ತಿಗಳು ಕರ್ನಾಟಕ ತನ್ನ ಸಂಸ್ಕøತಿ, ಕಲಾವೈಭವಕ್ಕೆ ಹೆಸರುವಾಸಿಯಾಗಿದೆ. ಅನೇಕ ರಾಜಮನೆತನಗಳು ಇಲ್ಲಿ ನೆಲೆಗೊಂಡು ಈ ನೆಲವನ್ನು ಶ್ರೀಮಂತಗೊಳಿಸಿದೆ ಎಂದರು.
ಕರ್ನಾಟಕ ಉಚ್ಛನ್ಯಾಯಾಲಯಕ್ಕೆ ತನ್ನದೇ ಆದ ಉನ್ನತ ಸ್ಥಾನಮಾನವಿದೆ. ಈಗ ಎಲ್ಲವೂ ಗಣಕೀಕೃತಗೊಂಡಿದೆ. ಲೋಕ್ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗುತ್ತಿದೆ. ಇಲ್ಲಿರುವ ಎಲ್ಲಾ ನ್ಯಾಯಾಧೀಶರು, ವಕೀಲರು ನ್ಯಾಯಾಂಗ ಸಂಘ, ಸಂಸ್ಥೆಗಳ ಸಹಕಾರವನ್ನು ಕೋರಿ ಮುಂಬರುವ ದಿನಗಳಲ್ಲಿ ಉತ್ತಮ ಕೆಲಸ ನಿರ್ವಹಿಸುವುದಾಗಿ ತಿಳಿಸಿದರು.
ಸಮಾರಂಭದಲ್ಲಿ ಕರ್ನಾಟಕ ಬಾರ್ ಕೌನ್ಸಿಲ್ ಅಧ್ಯಕ್ಷರು ಗಣ್ಯರನ್ನು ಸ್ವಾಗತಿಸಿದರು. ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿಗಳು, ನ್ಯಾಯಾಧೀಶರು, ವಕೀಲರು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.
ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಲೆ ಅವರು 1962 ಇಸವಿಯಲ್ಲಿ ಬೆಳಗಾವಿಯ ನಿಪ್ಪಾಣಿಯಲ್ಲಿ ಜನಿಸಿದರು. ತಮ್ಮ ಪದವಿ ಶಿಕ್ಷಣವನ್ನು ಔರಂಗಾಬಾದಿನ ಅಂಬೇಡ್ಕರ್ ಕಾನೂನು ವಿಶ್ವವಿದ್ಯಾಲಯದಲ್ಲಿ ಪೂರೈಸಿದರು. ವಕೀಲ ವೃತ್ತಿಯಿಂದ ತಮ್ಮ ಜೀವನವನ್ನು ಆರಂಭಿಸಿದರು. ಮುಂಬೈ ಹೈಕೋರ್ಟ್‍ನಲ್ಲಿ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿಯಾಗಿ ಸಹ ಸೇವೆ ಸಲ್ಲಿಸಿದರು.