ರೋಗಗ್ರಸ್ಥ ಕೈಗಾರಿಕಾ ಘಟಕಗಳ ಪುನಶ್ಚೇತನಕ್ಕೆ ಕ್ರಮ:ಸಚಿವ ಎಂಟಿಬಿ ನಾಗರಾಜ್
ಬೆಂಗಳೂರು: ಕಾಸಿಯಾ ಮತ್ತು ಎಂ.ಎಸ್.ಎಂ.ಇ. ಅಭಿವೃದ್ಧಿ ಸಂಸ್ಥೆಗಳು ಜಂಟಿಯಾಗಿ ಆಯೋಜಿಸಿದ್ದ ವಿ.ಡಿ.ಪಿ. ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಾರೋಪ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಾಜ್ಯ ಸಣ್ಣ ಕೈಗಾರಿಕೆಗಳ ಸಚಿವ ಎಂ.ಟಿ.ಬಿ. ನಾಗರಾಜ್ ರವರು ಕೋವಿಡ್ ಸಾಂಕ್ರಮಿಕದಿಂದಾಗಿ ಕಳೆದ ಎರಡು ವರ್ಷಗಳಲ್ಲಿ ಬಹಳಷ್ಟು ಘಟಕಗಳು ತಮ್ಮ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿ ಮುಚ್ಚಲ್ಪಟ್ಟಿರುವ ಅಂಶವು ಸರ್ಕಾರದ ಗಮನಕ್ಕೆ ಬಂದಿದ್ದು, ಅವುಗಳ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ, ಮುಚ್ಚಲ್ಪಟ್ಟಿರುವ ಘಟಕಗಳು ಯಾವ ಕಾರಣಗಳಿಂದಾಗಿ ಮುಚ್ಚಲ್ಪಟ್ಟಿವೆ ಇತ್ಯಾದಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಗೆ ಸೂಚನೆ ನೀಡಿರುವುದಾಗಿ ತಿಳಿಸಿದರು.
ಸಣ್ಣ ಕೈಗಾರಿಕೆಗಳ ಸ್ಥಾಪನೆಗಾಗಿ ತಾಲ್ಲೂಕು ಮಟ್ಟದಲ್ಲಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತಗೊಳಿಸುವುದಾಗಿ ಸಹ ಅವರು ತಿಳಿಸಿದರು. ಹಾಗೂ ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸ್ ಅಂಡ್ ಇನೊವೇಶನ್ ಯೋಜನೆಗೆ ಬರಬೇಕಾದ ರೂ. 2.65 ಕೋಟಿ ಬಾಕಿ ಅನುದಾನವನ್ನು ತ್ವರಿತವಾಗಿ ಬಿಡುಗಡೆ ಮಾಡುವ ಕುರಿತು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಏಷ್ಯಾ ಖಂಡದ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶಗಳಲ್ಲಿ ಒಂದಾದ ಪೀಣ್ಯ ಕೈಗಾರಿಕಾ ಪ್ರದೇಶದ ಮೂಲ ಸೌಕರ್ಯಗಳ ಅಭಿವೃದ್ಧಿಗಾಗಿ 100 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಿರುವ ಕಾಮಗಾರಿಗಳಿಗೆ ಸದ್ಯದಲ್ಲೇ ಟೆಂಡರ್ ಆಹ್ವಾನಿಸಿ ಕಾಮಗಾರಿಗಳನ್ನು ಆರಂಭಿಸಲಾಗುವುದು ಎಂದು ಸಚಿವ ಎಂಟಿಬಿ ನಾಗರಾಜು ತಿಳಿಸಿದರು.
ಸಮಾರಂಭವು ಸಣ್ಣ ಮತ್ತು ಬೃಹತ್ ಕೈಗಾರಿಕೆಗಳನ್ನು ಒಗ್ಗೂಡಿಸುವ ಸೇತುವೆಯಂತೆ ಕಂಡುಬಂದಿತು.
ನೆಲಮಂಗಲ ಕೈಗಾರಿಕಾ ವಸಾಹತುವಿಗೆ ಸಂಬಂಧಿಸಿದ ಸಮಸ್ಯೆಗಳು, ಕೈಗಾರಿಕಾ ಘಟಕಗಳಿಗೆ ವಿಧಿಸುತ್ತಿರುವ ಆಸ್ತಿ ತೆರಿಗೆ ಹಾಗೂ ಇತರೆ ಸಮಸ್ಯೆಗಳ ಕುರಿತು ಕಾಸಿಯಾ ಸಲ್ಲಿಸಿದ್ದ ಬೇಡಿಕೆ ಕುರಿತಂತೆ ಅಧಿಕಾರಿಗಳ ಮಟ್ಟದಲ್ಲಿ ಸಭೆಗಳನ್ನು ಆಯೋಜಿಸಿ ತ್ವರಿತವಾಗಿ ಸಮಸ್ಯೆಗಳನ್ನು ಬಗೆಹರಿಸುವ ಕುರಿತು ಕ್ರಮ ಕೈಗೊಳ್ಳುವುದಾಗಿ ಸಚಿವರು ಆಶ್ವಾಸನೆ ನೀಡಿದರು.
ಸಮಾರಂಭದಲ್ಲಿ ದೆಬಾನಂದ ಸಾಹೂ, ಮುಖ್ಯ ಪ್ರಧಾನ ವ್ಯವಸ್ಥಾಪಕರು, ಕೆನರಾ ಬ್ಯಾಂಕ್, ಸುಧಾಕರ್ ನಾಯಕ್, ಪ್ರಧಾನ ವ್ಯವಸ್ಥಾಪಕರು, ಬ್ಯಾಂಕ್ ಆಫ್ ಬರೋಡಾ, ಹಾಗೂ ಸತ್ಯನಾರಾಯಣ ಭಟ್, ಜಂಟಿ ನಿರ್ದೇಶಕರು, ಯೋಜನೆ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಕಾಸಿಯಾ ಪದಾಧಿಕಾರಿಗಳು, ಸಂಘಟಕ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.
ನರಸಿಂಹಮೂರ್ತಿ ಕೆ.ಎನ್. ಅಧ್ಯಕ್ಷರು, ಕಾಸಿಯಾ ಸ್ವಾಗತಿಸಿದರು. ಗೌರವ ಪ್ರಧಾನ ಕಾರ್ಯದರ್ಶಿ ಪ್ರವೀಣ್ ವಂದನೆ ಸಲ್ಲಿಸಿದರು.