IMG 20221031 WA0029

ಜೆಡಿಎಸ್:ನಾಳೆಯಿಂದ ಪಂಚರತ್ನ ರಥಯಾತ್ರೆ ಆರಂಭ…!

POLATICAL STATE

ನ. 1ರಿಂದ ಜೆಡಿಎಸ್ ಪಂಚರತ್ನ ರಥಯಾತ್ರೆ ಆರಂಭ
*
ಮಾಜಿ ಪ್ರಧಾನಿ ಪ್ರಧಾನಿ ಹೆಚ್.ಡಿ.ದೇವೆಗೌಡರ ಉಪಸ್ಥಿತಿ
*
ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವ
*
ಕೋಲಾರ ಜಿಲ್ಲೆ ಮುಳಬಾಗಿಲಿನ ಕುರುಡುಮಲೆಯಿಂದ ರಥಯಾತ್ರೆ ಶುರು


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ನಡೆಯಲಿರುವ ಜೆಡಿಎಸ್ ಪಂಚರತ್ನ ರಥಯಾತ್ರೆ ಕೋಲಾರ ಜಿಲ್ಲೆ ಮುಳಬಾಗಿಲಿನ ಕುರುಡುಮಲೆಯಿಂದ ಮಂಗಳವಾರ ಆರಂಭವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತಿಳಿಸಿದರು.

ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದ ಅವರು; ಕನ್ನಡ ರಾಜ್ಯೋತ್ಸವದ ದಿನವಾದ ನವೆಂಬರ್ 1ರಂದು ಗಡಿ ಜಿಲ್ಲೆ ಕೋಲಾರದ ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಕುರುಡುಮೇಲೆ ಶ್ರೀ ಗಣಪತಿ ದೇವಾಲಯದಿಂದ ರಥಯಾತ್ರೆ ಆರಂಭವಾಗಲಿದೆ. ಅಂದು ಬೆಳಗ್ಗೆ 9 ಗಂಟೆಗೆ ಮಹಾಗಣಪತಿಗೆ ಪೂಜೆ ಸಲ್ಲಿಸುವ ಮೂಲಕ ರಥಯಾತ್ರೆಗೆ ಮಾಜಿ ಪ್ರಧಾನಮಂತ್ರಿಗಳು, ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾದ ಹೆಚ್.ಡಿ.ದೇವೇಗೌಡರು ಅವರು ಚಾಲನೆ ನೀಡಲಿದ್ದಾರೆ ಎಂದರು.

ಅಲ್ಲದೆ, ಮಧ್ಯಾಹ್ನ 2 ಗಂಟೆಗೆ ಮುಳಬಾಗಿಲು ಪಟ್ಟಣದ ತಿರುಪತಿ ಬೈಪಾಸ್ ರಸ್ತೆಯಲ್ಲಿರುವ ಬಾಲಾಜಿ ಭವನದ ಪಕ್ಕದ ಜಾಗದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ಸಮಾವೇಶದಲ್ಲಿ ಸುಮಾರು ಎರಡು ಲಕ್ಷ ಜನರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.

ಈ ಸಮಾವೇಶದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಪಕ್ಷದ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಪಕ್ಷದ ಎಲ್ಲ ಶಾಸಕರು, ಮಾಜಿ ಸಚಿವರು, ಎಲ್ಲ ಕ್ಷೇತ್ರಗಳ ಸಂಭವನೀಯ ಅಭ್ಯರ್ಥಿಗಳು ಭಾಗವಹಿಸಲಿದ್ದಾರೆ. ಎಂದು ಅವರು ಹೇಳಿದರು.

ಪಂಚ ಯೋಜನೆಗಳ ಪಂಚರತ್ನ:

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ 123 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಗುರಿ ಹೊಂದಿರುವ ಜೆಡಿಎಸ್ ಪಕ್ಷವು, ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಬೇಕೆಂಬ ಉದ್ದೇಶ ಹೊಂದಿದೆ. ಇದಕ್ಕಾಗಿ ಪಂಚರತ್ನ ಯಾತ್ರೆ ಹೆಸರಿನಲ್ಲಿ ಚುನಾವಣಾ ಪ್ರಚಾರವನ್ನು ಕೈಗೊಳ್ಳುತ್ತಿದೆ ಎಂದು ಮಾಜಿ ಮುಖ್ಯಮಂತ್ರಿಗಳು ಮಾಹಿತಿ ನೀಡಿದರು.

‘ ಪಂಚರತ್ನ ರಥಯಾತ್ರೆ; ನವ ಕರ್ನಾಟಕ ನಿರ್ಮಾಣಕ್ಕಾಗಿ ಮಹಾಯಾತ್ರೆ ‘ ಹೆಸರಿನಲ್ಲಿ ಈ ರಥಯಾತ್ರೆ ಕೈಗೊಳ್ಳಲಾಗುತ್ತಿದೆ. ಸಮಗ್ರ ಕರ್ನಾಟಕ ಅಭಿವೃದ್ಧಿಗೆ ಪಂಚರತ್ನ ಪರಿಪೂರ್ಣ ಪರಿಹಾರ ಎಂದು ಬಿಂಬಿಸಲಾಗುತ್ತಿದೆ. ಶಿಕ್ಷಣವೆ ಆಧುನಿಕ ಶಕ್ತಿ, ಆರೋಗ್ಯ ಸಂಪತ್ತು. ಕೃಷಿ ಚೈತನ್ಯ, ಯುವ ನವಮಾರ್ಗ ಮತ್ತು ಮಹಿಳಾ ಸಬಲೀಕರಣ ಹಾಗೂ ವಸತಿ ಆಸರೆ ಪಂಚರತ್ನ ಯೋಜನೆಗಳಾಗಿವೆ. ಚುನಾವಣೆ ಪ್ರಣಾಳಿಕೆಯಲ್ಲಿ ಕೂಡ ಈ ಐದು ಅಂಶಗಳೇ ಪ್ರಮುಖ ಯೋಜನೆಗಳಾಗಿರುತ್ತವೆ ಎಂದು ಅವರು ಹೇಳಿದರು.

ಮಾಜಿ ಸಿಎಂ ಗ್ರಾಮ ವಾಸ್ತವ್ಯ:

ನವೆಂಬರ್ 1ರಂದು ಮುಳಬಾಗಿಲು ವಿಧಾನಸಭೆ ಕ್ಷೇತ್ರದಲ್ಲಿ ಪಂಚರತ್ನ ರಥಯಾತ್ರೆ ನಡೆಯಲಿದೆ. ಅದೇ ದಿನ ಕ್ಷೇತ್ರದ ಗ್ರಾಮ ಒಂದರಲ್ಲಿ ಮಾಜಿ ಮುಖ್ಯಮಂತ್ರಿಗಳು ವಾಸ್ತವ್ಯ ಹೂಡುವರು.

ಗ್ರಾಮ ವಾಸ್ತವ್ಯದ ನಿಮಿತ್ತ ಕುಮಾರಸ್ವಾಮಿ ಅವರು ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಥವಾ ದೇಗುಲದಲ್ಲಿ ಉಳಿದುಕೊಳ್ಳಲಿದ್ದಾರೆ. ಅಂದು ಅವರು ಗ್ರಾಮದ ಜನರ ಜತೆ ಸಂವಾದ, ವಿಚಾರ ವಿನಿಮಯ ನಡೆಸುವರು. ಮುಖ್ಯವಾಗಿ ಮಹಿಳೆಯರು, ಯುವಕರು, ರೈತರು, ವೃದ್ಧರ ಜತೆ ಚರ್ಚೆ ನಡೆಸುವರು. ಹಳ್ಳಿಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯುವುದರ ಜತೆಗೆ, ಸ್ವತಃ ತಾವೇ ಗ್ರಾಮ ಸಂಚಾರ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಮುಳಬಾಗಿಲು ಕ್ಷೇತ್ರ ಅಭ್ಯರ್ಥಿ ಕೂಡ ಜತೆಯಲ್ಲಿ ಇರುತ್ತಾರೆ.

IMG 20221031 WA0030

ನವೆಂಬರ್ 1ರಂದು ಮುಳಬಾಗಿಲು ಕ್ಷೇತ್ರದಲ್ಲಿ ರಥಯಾತ್ರೆ ಆರಂಭವಾಗಲಿದ್ದು, ದಿನಕ್ಕೊಂದು ಕ್ಷೇತ್ರದಂತೆ ಕ್ರಮವಾಗಿ ಬಂಗಾರಪೇಟೆ, ಮಾಲೂರು, ಕೋಲಾರ, ಶ್ರೀನಿವಾಸಪುರ; ನಂತರ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ, ಶಿಡ್ಲಘಟ್ಟ, ಬಾಗೇಪಲ್ಲಿ, ಗೌರಿಬಿದನೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ನೆಲಮಂಗಲ; ತುಮಕೂರು ಜಿಲ್ಲೆಯ ತುಮಕೂರು ನಗರ, ಕೊರಟಗೆರೆ, ಮಧುಗಿರಿ, ಪಾವಗಡ, ಶಿರಾ, ಗುಬ್ಬಿ, ಚಿಕ್ಕನಾಯಕನಹಳ್ಳಿ, ತುರುವೇಕೆರೆ, ತಿಪಟೂರು; ಹಾಸನ ಜಿಲ್ಲೆಯ ಬೇಲೂರು, ಅರಸೀಕೆರೆ, ಹಾಸನ, ಸಕಲೇಶಪುರ, ಅರಕಲಗೂಡು, ಹೊಳೆನರಸೀಪುರ, ಚನ್ನರಾಯಪಟ್ಟಣ; ಪುನಾ ನವೆಂಬರ್ 30ರಂದು ತುಮಕೂರು ಜಿಲ್ಲೆಯ ಕುಣಿಗಲ್, ಡಿಸೆಂಬರ್ 1ರಂದು ತುಮಕೂರು ಗ್ರಾಮಾಂತರ ಹಾಗೂ; ಡಿಸೆಂಬರ್ 2ರಿಂದ ಕ್ರಮವಾಗಿ ರಾಮನಗರ ಜಿಲ್ಲೆಯ ಮಾಗಡಿ, ರಾಮನಗರ, ಚನ್ನಪಟ್ಟಣ, ಕನಕಪುರ, ಆನೇಕಲ್ ನಲ್ಲಿ ರಥಯಾತ್ರೆ ನಡೆಯಲಿದೆ.

ಮೊದಲ ಹಂತದ ರಥಯಾತ್ರೆ ನವೆಂಬರ್ 1ರಂದು ಮುಳಬಾಗಿಲಿನಲ್ಲಿ ಶುರುವಾಗಿ ಡಿಸೆಂಬರ್ 6ಕ್ಕೇ ಆನೇಕಲ್ ನಲ್ಲಿ ಮುಗಿಯಲಿದೆ ಎಂದು ಕುಮಾರಸ್ವಾಮಿ ಅವರು ತಿಳಿಸಿದರು.

ಅಕ್ಟೋಬರ್ 27ರಂದು ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪಂಚರತ್ನ ರಥಕ್ಕೆ ಸಾಂಕೇತಿಕವಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಚಾಲನೆ ನೀಡಿದ್ದರು