IMG 20221106 WA0015

Congres: ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು…!

POLATICAL STATE

ಬೆಂಗಳೂರು : ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಲು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸರ್ವೋದಯ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಸವಿಸ್ತಾರವಾಗಿ ಮಾತನಾಡಿದರು…

ನಾನು ಒಬ್ಬ ಕಾರ್ಮಿಕ ಕುಟುಂಬದಲ್ಲಿ ಹುಟ್ಟಿ ಬೆಳೆದು, ವಿದ್ಯಾರ್ಥಿ ಸಂಘಟನೆ ಕಟ್ಟಿ ಅದರ ಅಧ್ಯಕ್ಷನಾಗಿ ಜವಳಿ ಕಾರ್ಮಿಕರ ಸಂಘಗಳ ಜತೆ ಕೆಲಸ ಮಾಡಿ ಅಲ್ಲಿ ಆರಿಸಿ ಬಂದಿದ್ದೆ.

ನಾವು ನಮ್ಮ ಸ್ವಂತ ಶಕ್ತಿ ಮೇಲೆ ಮುಂದೆ ಬಂದಾಗ ಬೇರೆಯವರು ಅದನ್ನು ಗುರುತಿಸುತ್ತಾರೆ. ನಿಮ್ಮಲ್ಲಿರುವ ಶಕ್ತಿಗೆ ಬೆಂಬಲ ಸಿಗುತ್ತದೆ.

ನನ್ನ ಸಂಘಟನೆ ನೋಡಿ ಕಾಂಗ್ರೆಸ್ 1969ರಲ್ಲೀ ಇಬ್ಬಾಗ ಆದಾಗ ನಮ್ಮ ಜಿಲ್ಲೆಯ ಕನ್ವೀನರ್ ಧರ್ಮರಾವ್ ಅವರು ಗುಲ್ಬರ್ಗಾ ಬ್ಲಾಕ್ ಅಧ್ಯಕ್ಷರಾಗಿ ಪಕ್ಷ ಕಟ್ಟಲು ನೇರವಾಗಿ. ನಿಮಗೆ ಇತ್ತ ಭವಿಷ್ಯ ಇದೆ ಎಂದು ಪ್ರೋತ್ಸಾಹ ನೀಡಿದರು.

ದೇಶದಲ್ಲಿ ಕಾಂಗ್ರೆಸ್ ಬಲವಾಗಿ ಅಧಿಕಾರಕ್ಕೆ ಬರಲಿದೆ. ಇಂದಿರಾ ಗಾಂಧಿ ಅವರು ಬೆಳೆಯುತ್ತಾರೆ. ನೀವು ಪ್ರಮುಖರಾಗಿ ಇರಬೇಕು ಎಂದರು. ದೇವರಾಜ ಅರಸು ಅವರು ಕನ್ವೀನರ್ ಆಗಿದ್ದಾಗ ನಾನು, ಧರ್ಮ ಸಿಂಗ್ ಸೇರಿದಂತೆ 10-15 ಯುವಕರನ್ನು ಕರೆದು ಪಕ್ಷದ ಕೆಲಸ ಮಾಡಿ ನಿಮಗೆ ಪಕ್ಷದಿಂದ ಟಿಕೆಟ್ ನೀಡುವುದಾಗಿ ಭರವಸೆ ನೀಡಿದರು.

1969ರಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷನಾದೆ ನಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷನಾಗಿ, ಕೆಪಿಸಿಸಿ ಕಾರ್ಯದರ್ಶಿಯಾಗಿ, ಕೆಪಿಸಿಸಿ ಉಪಾಧ್ಯಕ್ಷನಾಗಿ, ಕೆಪಿಸಿಸಿ ಅಧ್ಯಕ್ಷನಾಗಿ, ಸಿಡಬ್ಲ್ಯೂಸಿ ಸದಸ್ಯನಾಗಿ ಹಾಗೂ ಈಗ ಎಐಸಿಸಿ ಅಧ್ಯಕ್ಷನಾಗಿ ಆಯ್ಕೆ ಮಾಡಿದ್ದಾರೆ.

IMG 20221106 WA0010

ನಾನು ಒಂದೇ ಬಾರಿಗೆ ಈ ಸ್ಥಾನಕ್ಕೆ ಜಿಗಿದಿಲ್ಲ. ಹಂತ ಹಂತವಾಗಿ ಬೆಳೆದಿದ್ದೇನೆ. ಎಲ್ಲವೂ ಒಂದೇ ಬಾರಿಗೆ ಆಗುವುದಿಲ್ಲ. ಇಂತಹ ಚಿಂತನೆ ಇರಬಾರದು. ಸೇವೆ ಮಾಡಬೇಕು, ಗುರಿ ಇಟ್ಟುಕೊಳ್ಳಬೇಕು.

ನಾವು ಅಧಿಕಾರಕ್ಕೆ ಪಕ್ಷ ಸೇರುವುದಿಲ್ಲ. ಪಕ್ಷದ ತತ್ವ ಸಿದ್ಧಾಂತ ಅರಿತು ಪಕ್ಷ ಅಧಿಕಾರಕ್ಕೆ ಬಂದಾಗ ಅದನ್ನು ಜಾರಿಗೊಳಿಸಲು ಕೆಲಸ ಮಾಡಬೇಕು. ಪಕ್ಷದ ತತ್ವ ಸಿದ್ಧಾಂತ ಬೆಳೆಸಲು ಶ್ರಮಿಸಬೇಕು.

ನೆಹರೂ, ಅಂಬೇಡ್ಕರ್, ಗಾಂಧಿ ಅವರ ವಿಚಾರ ಅರಿಯದಿದ್ದರೆ ಮನಬಂದಂತೆ ನಡೆದುಕೊಳ್ಳುತ್ತಾರೆ. ಯಾರಿಗೆ ಬದ್ಧತೆ, ನಂಬಿಕೆ ಇರುತ್ತದೆಯೋ ಅವರು ಎಂದಿಗೂ ಪಕ್ಷ ಬಿಡುವುದಿಲ್ಲ.

ಹಲವು ಜನ ಮಂತ್ರಿ ಸ್ಥಾನ, ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ ಎಂದು ಪಕ್ಷ ಬಿಡುತ್ತಾರೆ. ನಾವು ಕುರ್ಚಿಗಾಗಿ ಪಕ್ಷ ಸೇರಬಾರದು.

ನಾವು ಇಂದು ನಂಬಿರುವ ತತ್ವ ಉಳಿಸಿ ಬೆಳೆಸಿಕೊಂಡು ಹೋಗಬೇಕು. ಆಮೂಲಕ ಪಕ್ಷಕ್ಕೆ ಶಕ್ತಿ ತುಂಬಬೇಕು. ನಮ್ಮ ವಿಚಾರಧಾರೆಗೆ ಧಕ್ಕೆ ಆದಾಗ ನನ್ನ ನೋವುಗಳನ್ನು ಬದಿಗಿಟ್ಟು ಪಕ್ಷದ ಜತೆಗೆ ಇರುತ್ತೇನೆ. ಇದನ್ನು ನಾವು ತಿಳಿಯಬೇಕು.

ಬಹಳ ಮಂದಿ ನೀವು 70 ವರ್ಷದಲ್ಲಿ ಏನು ಮಾಡಿದ್ದೀರಿ ಎಂದು ಕೇಳುತ್ತಾರೆ. ನಾವು 70 ವರ್ಷದಲ್ಲಿ ಏನೂ ಮಾಡದಿದ್ದರೆ ದೇಶ ಇಷ್ಟು ಗಟ್ಟಿಯಾಗಿ ಒಂದಾಗಿರಲು ಸಾಧ್ಯವಾಗುತ್ತಿರಲಿಲ್ಲ.

ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಆಳವಾಗಿ ಬೇರೂರಿರುವುದು, ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನ ಉಳಿಯಬೇಕು. ಆಗ ಮೋದಿ, ಶಾ ಉಳಿಯುತ್ತಾರೆ. ನಿಮಗೆ ಹಕ್ಕು, ಮೂಲಭೂತ ಅಧಿಕಾರ ಸಿಗುತ್ತದೆ. ನಾವು ಹೆದರಿ ಮನೆಯಲ್ಲಿ ಕೂತರೆ ಏನೂ ಆಗುವುದಿಲ್ಲ. ಈ ದೇಶ ಪ್ರಜಾಪ್ರಭುತ್ವ, ಸಂವಿಧಾನ ಉಳಿಸಬೇಕಾದರೆ ನೀವು ಜನರನ್ನು ಸಂಘಟಿಸಬೇಕು. ಆಗ ದೇಶದಲ್ಲಿರುವ ಕೆಟ್ಟ ಸರ್ಕಾರ ಕಿತ್ತೊಗೆಯಲು ಸಾಧ್ಯ.

ಮೋದಿ ಸರ್ಕಾರ ಹಾಗೂ ರಾಜ್ಯ ಬಿಜೆಪಿ ಸರ್ಕಾರ ಮನಬಂದಂತೆ ಮಾತನಾಡುತ್ತಾರೆ. ಇವರು ಮೋದಿ ಅವರ ಶಾಲೆಯಲ್ಲಿ ಕಲಿತವರೆ? ಇವರು ನಾವು ಮಾಡಿರುವ ಶಾಲೆ, ಕಾಲೇಜಿನಲ್ಲಿ ಓದಿ, ನಮ್ಮ ಸಾರ್ವಜನಿಕ ಉದ್ದಿಮೆಯಲ್ಲಿ ದುಡಿದು ಬೆಳೆದಿದ್ದಾರೆ. ಆದರೂ ಇವರು ನೀವು ಏನು ಮಾಡಿದ್ದೀರಿ ಎಂದು ಕೇಳುತ್ತಾರೆ.

ನಾವು ದೇಶ ರಕ್ಷಣೆ ಮಾಡಿ ದೇಶವನ್ನು ಒಗ್ಗಟ್ಟಾಗಿ ಇಟ್ಟಿದ್ದೇವೆ. ಬಾಂಗ್ಲಾ ಪ್ರತ್ಯೇಕ ದೇಶ ಮಾಡಿದ್ದು ಇಂದಿರಾ ಗಾಂಧಿ. ದೇಶದ ವಿದೇಶಾಂಗ ನೀತಿ ಮಾಡಿದ್ದು ನೆಹರೂ ಅವರು.

ಪದೇ ಪದೇ ನೆಹರೂ, ಇಂದಿರಾ ಗಾಂಧಿ, ಸೋನಿಯಾ ಗಾಂಧಿ ಏನು ಮಾಡಿದ್ದಾರೆ ಎಂದು ಟೀಕೆ ಮಾಡುವುದಲ್ಲ. ಸೋನಿಯಾ ಗಾಂಧಿ ಅವರು ಮಾಡಿರುವ ತ್ಯಾಗ ನೀವು ಮಾಡಿಲ್ಲ. ಯುಪಿಎ ಮೊದಲ ಸರ್ಕಾರ ಸಮಯದಲ್ಲಿ ಸೋನಿಯಾ ಗಾಂಧಿ ಅವರಿಗೆ ಪ್ರಧಾನಿ ಆಗುವಂತೆ ಕೇಳಿದಾಗ ನಾನು ಪ್ರಧಾನಿ ಆಗುವುದಿಲ್ಲ. ದೇಶದ ಆರ್ಥಿಕ ತಜ್ಞ ಮನಮೋಹನ್ ಸಿಂಗ್ ಅವರಿಗೆ ಪ್ರಧಾನಿ ಸ್ಥಾನ ತ್ಯಾಗ ಮಾಡಿದರು.

IMG 20221106 WA0011

ನಾವು ಒಂದು ಚೇರ್ಮನ್, ಮಂತ್ರಿ ಸ್ಥಾನ, ಪಕ್ಷದ ಹುದ್ದೆ ಸಿಗಲಿಲ್ಲ ಎಂದರೆ ಮುನಿಸಿಕೊಳ್ಳುತ್ತೇವೆ. ಆ ಕುಟುಂಬದ ತ್ಯಾಗ ಬಲಿದಾನ, ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರು ಪ್ರಾಣತ್ಯಾಗ, ರಾಜಕೀಯದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ತ್ಯಾಗ ಮಾಡಿದ್ದಾರೆ. ಅವರು ಪ್ರಧಾನಿ ಆಗಬಹುದಿತ್ತು ಆದರೆ ಆಗಲಿಲ್ಲ. ಗಾಂಧಿ ಕುಟುಂಬ ಸದಸ್ಯರೇ ಅಧ್ಯಕ್ಷರಾಗಿ ಇರಬೇಕು ಎಂದು ಕೇಳಿದೆವು. ಆಗ ನಾವು ಆಗುವುದಿಲ್ಲ. ನೀವು ಚುನಾವಣೆ ನಡೆಸಿ ಅಲ್ಲಿ ಗೆಲ್ಲುವವರು ಪಕ್ಷದ ಅಧ್ಯಕ್ಷರಾಗುತ್ತಾರೆ. ಹೀಗೆ ತ್ಯಾಗಮೂರ್ತಿ ಸೋನಿಯಾ ಗಾಂಧಿಯವರು.

ಅವರು ಪಕ್ಷದಲ್ಲಿ ಒಗ್ಗಟ್ಟು ಇರಬೇಕು, ಬೆಳೆಯಬೇಕು ಎಂದು ಈ ತ್ಯಾಗ ಮಾಡಿದ್ದಾರೆ. ಇಂದು ಆರ್ ಎಸ್ ಎಸ್, ಮೋದಿ, ಶಾ ಅವರು ಕಿರುಕುಳ ನೀಡುತ್ತಿದ್ದಾರೆ. ಪದೇ ಪದೆ ನಮ್ಮ ಪಕ್ಷದ ವಿರುದ್ಧ ಮಾತನಾಡುತ್ತಾರೆ.

ಗಾಂಧಿ ಕುಟುಂಬ ಈ ಚುನಾವಣೆ ನಿಲ್ಲಲಿಲ್ಲ, ಆದರೂ ಬಿಜೆಪಿ ಅವರು ಮಾತನಾಡುವುದು ನಿಲ್ಲಿಸಲ್ಲ. ನಮ್ಮ ಪಕ್ಷದ ಬಗ್ಗೆ ನಿಮಗೆ ಯಾಕೆ? ದೇಶ ಮುನ್ನಡೆಸುವ ಬಗ್ಗೆ ಗಮನಹರಿಸಿ.

ಈ ದೇಶದಲ್ಲಿ ಸ್ವತಂತ್ರ ಸಿಗುವ ಮುನ್ನ 400 ಕಾಲೇಜು ಇದ್ದವು. ಇಂದು 11 ಲಕ್ಷ ಶಾಲೆ ಕಾಲೇಜು ಇವೆ. 1947ದಲ್ಲಿ 2 ಲಕ್ಷ ಪ್ರಾಥಮಿಕ ಶಾಲೆ ಇದ್ದವು. 2014ರಲ್ಲ 7 ಲಕ್ಷ ಪ್ರಾಥಮಿಕ ಶಾಲೆ ಇದ್ದವು. 877 ಹೈಸ್ಕೂಲ್ ಇದ್ದವು ಇಂದು 1 ಲಕ್ಷ ಹೈಸ್ಕೂಲ್ ಇದ್ದಾವೆ. 27 ವಿವಿ ಇದ್ದವು ಇಂದು 723 ವಿವಿ ಗಳಿವೆ.

ಅಕ್ಷರಸ್ಥ ಪ್ರಮಾಣ ಶೇ16 ರಷ್ಟಿತ್ತು 2014ರಲ್ಲಿ ಇದು ಶೇ.74 ರಷ್ಟು ಆಯಿತು. ಪರಿಶಿಷ್ಟ ಜಾತಿ ಪಂಗಡದವರು 08%ರಷ್ಟು ಅಕ್ಷರಸ್ಥರು ಇದ್ದರು. ಇಂದು 67% ಇದ್ದಾರೆ.

ಸ್ವಾತಂತ್ರ ಪೂರ್ವದಲ್ಲಿ 4 ಲಕ್ಷ ಕಿಮೀ ಇದ್ದ ರಸ್ತೆ ಇಂದು 54 ಲಕ್ಷ ಕಿಮೀ ರಸ್ತೆ ಮಾಡಿದ್ದೇವೆ.

ಸರ್ಕಾರಿ ನೌಕರಿ ವಿಚಾರ. ವಾಡಿ ಗದಗ 2200 ಕೋಟಿ ಯೋಜನೆಗೆ ನಾವು ನಿರ್ಧರಿಸಿದೆವು. ಅದಕ್ಕೆ ಅಂದಿನ ಸಿಎಂ ಸಿದ್ದರಾಮಯ್ಯ ಅಡಿಗಲ್ಲು ಹಾಕಬೇಕಿತ್ತು. ಆಗ ನಾನು ಈ ಯೋಜನೆಗೆ ಗೈರಾದೆ. ಕಾರಣ ಕೋಲಾರದಲ್ಲಿ ರೈಲ್ವೆ ಬೋಗಿ ಯೋಜನೆ ಮಂಜೂರು ಮಾಡಲು ಗೈರಾದೆ. ಆದರೆ ಮೋದಿ ಒಂದು ರೈಲು ಚಾಲನೆಗೂ ಹೋಗಿ ಪ್ರಚಾರ ಪಡೆಯುತ್ತಾರೆ. ನನ್ನ ಕಾಲದಲ್ಲಿ ಅಂತಹ 27 ರೈಲು ಆರಂಭಿಸಿದ್ದೇನೆ. ಇಂತಹ ದೊಡ್ಡ ಯೋಜನೆ ಕೊಟ್ಟರೂ ಪ್ರಚಾರ ಪಡೆಯಲಿಲ್ಲ.

ಗುಜರಾತ್ ಚುನಾವಣೆಯಲ್ಲಿ ಕಳೆದ 9 ದಿನದಿಂದ ಪ್ರಚಾರ ಮಾಡುತ್ತಿದ್ದಾರೆ. ಯಾವ ಮಟ್ಟಕ್ಕೆ ಎಂದರೆ ಮೋರ್ಬಿ ಸೇತುವೆ ರಿಪೇರಿಗೆ 2 ಕೋಟಿ ನೀಡಲಾಗಿತ್ತು. ಇವರು 2 ಕೋಟಿ ಯೋಜನೆ ಉದ್ಘಟನೆ ಮಾಡಿದರು. ಇವರ ಕೈಗುಣವೋ ಏನೋ ಉದ್ಘಾಟನೆ ಮಾಡಿದ 5 ದಿನದಲ್ಲೇ ಸೇತುವೆ ಬಿದ್ದು ಹೋಯಿತು. 138 ಜನ ಸತ್ತರು. ಇದಕ್ಕೆ ಯಾರು ಜವಾಬ್ದಾರಿ ಹೊತ್ತರು? ಯಾರಾದರೂ ರಾಜೀನಾಮೆ ಕೊಟ್ಟರು? ಅದೇ ಪಶ್ಚಿಮ ಬಂಗಾಲದಲ್ಲಿ ಸೇತುವೆ ಬಿದ್ದಾಗ ದೇವರು ಇವರ ಆಡಳಿತ ನೋಡಿ ಬೇಸತ್ತು ಸೇತುವೆ ಕೆಡವಿದ್ದಾನೆ ಎಂದು ಹೇಳಿದ್ದರು.

ನಾವು ಮಾಡಿದ ಪ್ರತಿ ಕೆಲಸಕ್ಕೆ ಅಡ್ಡಗಾಲು ಹಾಕಿದ್ದಾರೆ. ಹೆಸರು ಬದಲಿಸುತ್ತಾರೆ. ನೀವು ಸತ್ಯನಾಶ ಮಾಡುತ್ತಿದ್ದೀರಿ. ನಾವು ಸತ್ಯದ ಪರವಾಗಿದ್ದೇವೆ. ನೀವು ಸುಳ್ಳು ಹೇಳಿ ಬದುಕುತ್ತಿದ್ದೀರಿ. ಮತ ಪಡೆಯಲು ಜಾತಿ ಧರ್ಮ ನಡುವೆ ದ್ವೇಷ ಬಿತ್ತುತ್ತಿದ್ದಾರೆ. ಮಹಿಳೆ ಮೇಲಿನ ದೌರ್ಜನ್ಯ ವಿರುದ್ಧ ಒಂದು ದಿನ ಧ್ವನಿ ಎತ್ತಿಲ್ಲ. ಮಾತೆತ್ತಿದರೆ ಗುಹೆ, ಮಂದಿರದಲ್ಲಿ ಪ್ರಾರ್ಥನೆ ಮಾಡುವುದಾಗಿದೆ. ದೇವರ ಪೂಜೆ ನಿಮ್ಮ ಮನೆಯಲ್ಲಿ ಮಾಡಿ. ಉಪವಾಸದಲ್ಲಿ ಜನ ಸಾಯಿತ್ತಿದ್ದು, ನಿರುದ್ಯೋಗ ಹೆಚ್ಚುತ್ತಿದೆ. ಬೆಲೆ ಏರಿಕೆಯಾಗಿದೆ. ರೂಪಾಯಿ ಮೌಲ್ಯ ಕುಸಿಯುತ್ತಿದೆ. ಈ ಬಗ್ಗೆ ಮಾತನಾಡುವ ಬದಲು ಕಾಂಗ್ರೆಸ್ ವಿರುದ್ಧ ಮಾತನಾಡುತ್ತಾರೆ.

ಭಾರತ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು 3500 ಕಿಮೀ ಪಾದಯಾತ್ರೆ ಆರಂಭಿಸಿದ ನಂತರ ಬಿಜೆಪಿಗೆ ನಡುಕ ಹುಟ್ಟಿದೆ. ಈಗ ರಾಹುಲ್ ಗಾಂಧಿ ಅವರ ಬಗ್ಗೆ ಜನರ ಪ್ರೀತಿ ಕಂಡು ದಿಗಿಲು ಹುಟ್ಟಿದೆ.

ನೀವು ಕಾಂಗ್ರೆಸ್ ಪಕ್ಷದ ಬಗ್ಗೆ ಯೋಚಿಸಬೇಡಿ. ನಾವು ಒಟ್ಟಾಗಿದ್ದೇವೆ. ನಮ್ಮನ್ನು ಬೇರೆ ಮಾಡಲು ಸಾಧ್ಯವಿಲ್ಲ. ಮುಂದಿನ ಚುನಾವಣೆಯಲ್ಲಿ ಎಲ್ಲಾ ಒಟ್ಟಾಗಿ ಕೆಲಸ ಮಾಡಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸುತ್ತಾರೆ.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಲ್ಲಾ ಸರ್ಕಾರಿ ಹುದ್ದೆ ತುಂಬುತ್ತೆವೆ. ನಾವು ಅಧಿಕಾರದಲ್ಲಿದ್ದಾಗ ಶಿಕ್ಷಣ ಇಲಾಖೆಯಲ್ಲಿ 18 ಸಾವಿರ ಬ್ಯಾಕ್ ಲಾಗ್ ಹುದ್ದೆ ಭರ್ತಿ ಮಾಡಿದ್ದೆವು. ದೇಶದಲ್ಲಿ 14 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇವೆ. ಅವುಗಳನ್ನು ಯಾಕೆ ತುಂಬುತ್ತಿಲ್ಲ. ಕಾರಣ ಬಡವರು ದಲಿತರಿಗೆ ಉದ್ಯೋಗ ಸಿಗುತ್ತದೆ. ಹೀಗಾಗಿ ಅವರು ತುಂಬಲ್ಲ. 70 ಸಾವಿರ ಸರ್ಕಾರಿ ನೌಕರಿ ತುಂಬಿ ಪ್ರಮಾಣ ಪತ್ರ ನೀಡುತ್ತಾರೆ.

ಯುವಕರಿಗೆ ಕೆಲಸ ಕೊಡಿ. ಯಾಕೆ ಕೊಡುತ್ತಿಲ್ಲ. ಬಡವರಿಗೆ ಹಣ ಬಂದರೆ ಅವರು ಹೊಟ್ಟೆ ತುಂಬಾ ಊಟ ಮಾಡುತ್ತಾರೆ ಎಂದು ತುಂಬುತ್ತಿಲ್ಲ. ರೈಲ್ವೆಯಲ್ಲಿ 1.34 ಲಕ್ಷ ಹುದ್ದೆ ತುಂಬುವುದಾಗಿ ಹೇಳಿದ್ದಾರೆ. ಈ ಹುದ್ದೆ ಹಲವು ವರ್ಷಗಳಿಂದ ಖಾಲಿ ಇದ್ದರೂ ತುಂಬಲಿಲ್ಲ. ಆದರೆ ಸಂಸತ್ ಚುನಾವಣೆ ಹತ್ತಿರ ಬರುತ್ತಿದ್ದಂತೆ ಈಗ ತುಬುವುದಾಗಿ ಹೇಳುತ್ತಿದ್ದಾರೆ.

ಹಿಮಾಚಲ, ಗುಜರಾತ್, ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಈ ರೀತಿ ಹೇಳುತ್ತಿದ್ದಾರೆ. ವರ್ಷಕ್ಕೆ 2 ಕೋಟಿ ಕೊಡುವುದಾಗಿ ಹೇಳಿದ್ದರು. 8 ವರ್ಷದಲ್ಲಿ 16 ಕೋಟಿ ಉದ್ಯೋಗ ಎಲ್ಲಿ? ಹೊಸ ಉದ್ಯೋಗ ಸೃಷ್ಟಿಸುವುದಿರಲಿ ಸರ್ಕಾರಿ ಖಾಲಿ ಹುದ್ದೆ ತುಂಬುತ್ತಿಲ್ಲ.

ಕಲ್ಯಾಣ ಕರ್ನಾಟಕ ಭಾಗಕ್ಕೆ ನೀಡಬೇಕಾದ ಅನುದಾನ, ಸಿದ್ದರಾಮಯ್ಯ ಅವರ ಕಾಲದಲ್ಲಿ ತರಲಾದ ಎಸ್ ಸಿಪಿ ಟಿಎಸ್ ಪಿ ಯೋಜನೆ ಅನುದಾನ ನೀಡದೆ, ಅವುಗಳನ್ನು ಬೇರೆಡೆಗೆ ವರ್ಗಾವಣೆ ಮಾಡಲಾಗುತ್ತಿದೆ.

IMG 20221106 WA0016

ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಶ್ರಮಿಸಬೇಕು.

ನನಗೆ ಇಂದು ನೀವು ಗೌರವಿಸಿ ಅಭಿನಂದಿಸಲು ಈ ಕಾರ್ಯಕ್ರಮ ಮಾಡುತ್ತಿದ್ದೀರಿ. ನೀವು ನನಗೆ ಯಾವಾಗ ಗೌರವ ನೀಡುತ್ತೀರಿ ಎಂದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದಾಗ ಗೌರವ ಸಲ್ಲಿಸಿದಂತೆ ಆಗುತ್ತದೆ. ಈ ಹಾರ ತುರಾಯಿ ಸಾಮಾನ್ಯ. ನನಗೆ ನಿಜವಾಗಿ ಗೌರವ ಸಲ್ಲುವುದು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ. ಹೀಗಾಗಿ ವೇದಿಕೆ ಮೇಲೆ ಇರುವ ನಾಯಕರು ತಮ್ಮ ಸಣ್ಣ ಪುಟ್ಟ ವ್ಯತ್ಯಾಸ ಮರೆತು ಒಟ್ಟಾಗಿ ಕೆಲಸ ಮಾಡಬೇಕು.

ಈ ಸರ್ಕಾರ 40% ಕಮಿಷನ್ ಸರ್ಕಾರ ಕಿತ್ತೊಗೆಯಲು ನಮ್ಮ ಸರ್ಕಾರ ಬರಬೇಕು. ಅದಕ್ಕಾಗಿ ನಾವೆಲ್ಲ ಒಟ್ಟಾಗಿ ಕೆಲಸ ಮಾಡಬೇಕು. ಅನೇಕ ಕಾರ್ಯಕ್ರಮಗಳು ಕಾಂಗ್ರೆಸ್ ಸರ್ಕಾರ ಸಿದ್ದರಾಮಯ್ಯ ನೇತೃತ್ವದಲ್ಲಿ ನೀಡಿದ್ದೀರಿ. ಈಗ ಮತ್ತೆ ಅದೇ ಕೆಲಸ ಮಾಡಬೇಕು.

ನಾವು ಒಗ್ಗಟ್ಟಾಗಿ ಮುಂದೆ ಸಾಗಿದರೆ ಇದನ್ನು ಸಾಧಿಸಬಹುದು. ಮುನಿಸಿಕೊಂಡಿರುವವರು, ನಮ್ಮಿಂದ ದೂರ ಆಗಿರುವವರು, ಹೊಸ ಯುವಕರನ್ನು ಪಕ್ಷಕ್ಕೆ ಕರೆ ತನ್ನಿ.

ಪಕ್ಷದ ಅಧ್ಯಕ್ಷನಾದ ನಂತರ ನಾನು ಮಾಡಬೇಕಾದ ಕೆಲಸಗಳು ಇವೆ. ಉದಯಪುರ ಸಭೆ ನಿರ್ಣಯಗಳನ್ನು ಕಾರ್ಯಕ್ರಮಗಳನ್ನು ಜಾರಿ ತರಲು ಆರಂಭಿಸಿದ್ದು, ಎಲ್ಲವನ್ನೂ ಒಂದೊಂದಾಗಿ ಅನುಷ್ಟಾನಕ್ಕೆ ತರಲು ಮುಂದಾಗಿದ್ದೇನೆ.

ಯುವಕರಿಗೆ 50%, ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಎಲ್ಲಾ ಘಟಕಗಳಿಗೆ ಜವಾಬ್ದಾರಿ ನೀಡಿ. ಸಂಘಟನೆಗೆ ಅವಕಾಶ ನೀಡಿ.

ಮಾಧ್ಯಮಗಳಲ್ಲಿ ನಮ್ಮ ವಿಚಾರ ಹೆಚ್ಚು ಪ್ರಚಾರ ಆಗುವುದಿಲ್ಲ. ಹೀಗಾಗಿ ಮನೆ ಮನೆಗೆ ಹೋಗಿ ಪಕ್ಷದ ಪರ ಪ್ರಚಾರ ಮಾಡಿ. ನಾವು ಪಟ್ಟಣ ಬಿಟ್ಟು ಹಳ್ಳಿ ಹಳ್ಳಿಗೆ ಹೋಗಿ ಜನರಿಗೆ ಮನವರಿಕೆ ಮಾಡಿದಾಗ ಮಾತ್ರ ಬಿಜೆಪಿ ಎದುರಿಸಲು ಸಾಧ್ಯ. ಪಕ್ಷಕ್ಕೆ ಶಕ್ತಿ ತುಂಬಲು ಸಾಧ್ಯ. ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯಿಂದ ಸಿಗುತ್ತಿರುವ ಲಾಭವನ್ನು ಸರಿಯಾಗಿ ಬಳಸಿಕೊಳ್ಳಬೇಕು. ರಾಜ್ಯದ ಯಾತ್ರೆ ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ.

ನನಗೆ ಅದ್ದೂರಿ ಸ್ವಾಗತ ಮಾಡಿದ ಎಲ್ಲಾ ನಾಯಕರಿಗೆ ಧನ್ಯವಾದ ಸಲ್ಲಿಸುತ್ತೇನೆ.

IMG 20221106 WA0014

ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಲು ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿದ್ದ ಸರ್ವೋದಯ ಸಮಾವೇಶದಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಭಾಗವಹಿಸಿ ಮಾತನಾಡಿದರು:

ಮಲ್ಲಿಕಾರ್ಜುನ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾದ ಮೇಲೆ ಇಂದು ಮೊದಲ ಬಾರಿ ರಾಜ್ಯಕ್ಕೆ ಆಗಮಿಸಿದ್ದಾರೆ. ಇಂದು ಕಾರ್ಯಕರ್ತರಲ್ಲಿ ಹಬ್ಬದ ವಾತಾವರಣ ಕಾಣುತ್ತಿದ್ದೇವೆ. ಎಸ್‌, ನಿಜಲಿಂಗಪ್ಪನವರ ನಂತರ ಖರ್ಗೆ ಅವರು ಎಐಸಿಸಿ ಅಧ್ಯಕ್ಷರಾಗಿರೋದು ಕರ್ನಾಟಕದ ಏಳು ಕೋಟಿ ಕನ್ನಡಿಗರಿಗೆ ಹೆಮ್ಮೆ ಎಂದು ಹೇಳಲು ಬಯಸುತ್ತಿದ್ದೇನೆ. ಅಧ್ಯಕ್ಷರಾಗಿ ಖರ್ಗೆಯವರು ಕೆಲವು ಸಲಹೆಗಳನ್ನು ನೀಡಿ, ಅದರ ಜೊತೆಗೆ ತಮಗೆ ಸಂತೋಷ ಆಗಬೇಕಾದರೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರವನ್ನು ಕಿತ್ತುಹಾಕಬೇಕು ಎಂದು ಹೇಳಿದ್ದಾರೆ. ನನ್ನ ಪ್ರಕಾರ ರಾಜ್ಯದ ಜನ ಈಗಾಗಲೇ ಸಂಕಲ್ಪ ಮಾಡಿದ್ದಾರೆ, ಅದೇನೆಂದರೆ ಬಿಜೆಪಿಯ ಭ್ರಷ್ಟ, ದುರಾಡಳಿತದ ಸರ್ಕಾರವನ್ನು ಕಿತ್ತುಹಾಕಬೇಕು ಎಂಬುದಾಗಿದೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ಬರುತ್ತಿದೆ, ಈ ಹಿನ್ನೆಲೆಯಲ್ಲಿ ನಾನು ಖರ್ಗೆಯವರಿಗೆ ನೀಡುವ ಭರವಸೆ ಎಂದರೆ ರಾಜ್ಯದ ಜನ ಬಿಜೆಪಿ ಸರ್ಕಾರವನ್ನು ಕಿತ್ತುಹಾಕಿ ಕಾಂಗ್ರೆಸ್‌ ಸರ್ಕಾರವನ್ನು ರಚನೆ ಮಾಡಿ, ಆ ಮೂಲಕ ನಿಮಗೆ ಅಭಿನಂದನೆ ಸಲ್ಲಿಸುತ್ತಾರೆ, ಇದರಲ್ಲಿ ಯಾವ ಸಂಶಯವೂ ಬೇಡ. ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಇರಬಹುದು ಆದರೆ ನಮಗೆ ಇರುವ ಸವಾಲು ಕರ್ನಾಟಕದಲ್ಲಿ ಕೋಮುವಾದಿ, ಬಡವರ ವಿರೋಧಿ, ರೈತರ ಮತ್ತು ಅಲ್ಪಸಂಖ್ಯಾತರ ವಿರೋಧಿ ಸರ್ಕಾರವನ್ನು ಕಿತ್ತುಹಾಕಬೇಕು ಎಂಬುದು. ಅಧಿಕಾರಕ್ಕೆ ಬಂದು ಮೂರು ವರ್ಷಗಳನ್ನು ಕಳೆದಿರುವ ಬಿಜೆಪಿ ಸರ್ಕಾರ ರಾಜ್ಯದ ಬಡವರು. ಯುವಕರು, ರೈತರು, ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಮಾಡಿಲ್ಲ. ಈ ಸರ್ಕಾರವನ್ನು 40% ಕಮಿಷನ್‌ ಸರ್ಕಾರ ಎಂದು ಗುತ್ತಿಗೆದಾರರ ಸಂಘದವರು ಪ್ರಧಾನಿ ಮೋದಿ ಅವರಿಗೆ ಪತ್ರ ಬರೆದು ದೂರಿದ್ದಾರೆ. ನಮ್ಮನ್ನು ಈ 40% ಕಮಿಷನ್‌ ಹಾವಳಿಯಿಂದ ರಕ್ಷಿಸಿ ಎಂದು ಮನವಿ ಮಾಡಿದ್ದಾರೆ. ಸುಮಾರು 27,000 ಕೋಟಿ ರೂಪಾಯಿ ನಮಗೆ ಬರಬೇಕಾದ ಬಾಕಿ ಬಿಲ್‌ ಇದೆ, ಇದಕ್ಕೆ 40% ಕಮಿಷನ್‌ ಕೇಳುತ್ತಿದ್ದಾರೆ. ಇದನ್ನು ಕೊಡಲು ನಮ್ಮಿಂದ ಆಗಲ್ಲ, ನೀವೇ ನಮಗೆ ರಕ್ಷಣೆ ಕೊಡಬೇಕು ಎಂದಿದ್ದಾರೆ. ಮೋದಿ ಅವರು ಯಾವ ಕ್ರಮ ಕೈಗೊಂಡಿಲ್ಲ.

ಸಂತೋಷ್‌ ಪಾಟೀಲ್‌ ಎಂಬ ಗುತ್ತಿಗೆದಾರ ತನ್ನ ಸಾವಿಗೆ ಈಶ್ವರಪ್ಪ ಅವರೇ ಕಾರಣ ಎಂದು ಡೆತ್‌ ನೋಟ್‌ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಮೊನ್ನೆಮೊನ್ನೆ ನಂದೀಶ್‌ ಎಂಬ ಇನ್ಸ್‌ ಪೆಕ್ಟರ್‌ ಒತ್ತಡದಿಂದ ಹೃದಯಾಘಾತಕ್ಕೀಡಾಗಿ ಸಾವನ್ನಪ್ಪಿದ್ದಾರೆ. ಬಸವರಾಜ್‌ ಎಂಬ ಗುತ್ತಿಗೆದಾರ ರಾಷ್ಟ್ರಪತಿಗಳಿಗೆ ಪತ್ರ ಬರೆದು ದಯಾಮರಣ ಕೊಡಿ ಎಂದು ಕೇಳಿಕೊಂಡಿದ್ದಾರೆ. ಇಂಥಾ ಸರ್ಕಾರ ರಾಜ್ಯದ ಇತಿಹಾಸದಲ್ಲಿ ಯಾವತ್ತೂ ಬಂದಿರಲಿಲ್ಲ. ಮೊನ್ನೆ ನಂದೀಶ್‌ ಎಂಬುವವರು 70-80 ಲಕ್ಷ ಲಂಚ ಕೊಟ್ಟು ಕೆ.ಆರ್‌ ಪುರಂ ಗೆ ವರ್ಗಾವಣೆ ಮಾಡಿಸಿಕೊಂಡು ಬಂದಿದ್ದಾರೆ. ಇದನ್ನು ಸಚಿವ ಎಂಟಿಬಿ ನಾಗರಾಜ್‌ ಅವರೇ ಹೇಳಿ, ಕೊನೆಗೆ ತಾನು ಈ ರೀತಿ ಹೇಳಿಲ್ಲ ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಈ ಸಾವಿಗೆ ಮುಖ್ಯಮಂತ್ರಿ ಮತ್ತು ಗೃಹಸಚಿವರೇ ಕಾರಣ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾನ ಮರ್ಯಾದಿ ಇದ್ದಿದ್ದರೆ ಎಂಟಿಬಿ ನಾಗರಾಜ್‌ ಅವರು ಹೇಳಿಕೆ ನೀಡಿದ ತಕ್ಷಣ ರಾಜೀನಾಮೆ ನೀಡಿ ಮನೆಗೆ ಹೋಗಬೇಕಿತ್ತು. ಈ ಸರ್ಕಾರಕ್ಕೆ ಮಾನ ಮರ್ಯಾದಿ ಇಲ್ಲ. ಇಲ್ಲಿ ಭ್ರಷ್ಟಾಚಾರ ಮುಗಿಲು ಮುಟ್ಟಿದೆ, ಅಭಿವೃದ್ಧಿ ಶೂನ್ಯ ಆಡಳಿತ ಇದೆ. ಇಂಥಾ ಸರ್ಕಾರವನ್ನು ಕಿತ್ತುಹಾಕಲೇ ಬೇಕು.

ರಾಜ್ಯದಲ್ಲಿ ಬಡವರು, ದಲಿತರು, ಅಲ್ಪಸಂಖ್ಯಾತರು ನೆಮ್ಮದಿಯಾಗಿ ಬದುಕಲು ಸಾಧ್ಯವಾಗದ ಪರಿಸ್ಥಿತಿ ಇದೆ. ದ್ವೇಷ ರಾಜಕಾರಣ, ನಿರುದ್ಯೋಗ, ರೈತರ ಸಮಸ್ಯೆಗಳು ಇವುಗಳಿಗೆ ಪರಿಹಾರ ನೀಡುವ ಕೆಲಸ ಇಂದು ನಡೆಯುತ್ತಿಲ್ಲ. ಇದೇ ಕಾರಣಕ್ಕೆ ನಮ್ಮ ನಾಯಕರಾದ ರಾಹುಲ್‌ ಗಾಂಧಿ ಅವರು ಭಾರತ್‌ ಜೋಡೋ ಯಾತ್ರೆ ಕೈಗೊಂಡಿದ್ದಾರೆ. ಇದರ ಮೂಲಕ ಜನರನ್ನು ಒಂದುಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ರಾಜ್ಯದ ಕಾಂಗ್ರೆಸ್‌ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ.

ಖರ್ಗೆಯವರು ರಾಜ್ಯದಲ್ಲಿ ಸುದೀರ್ಘ ಕಾಲ ರಾಜಕಾರಣ ಮಾಡಿದವರು, ಆಡಳಿತ ನಡೆಸಿದ ಅನುಭವ ಇರುವವರು. ಹಲವು ಇಲಾಖೆಗಳಲ್ಲಿ ಅಭಿವೃದ್ಧಿಪರ ಚಿಂತನೆಗಳಿಂದ ಹೆಜ್ಜೆ ಗುರುತುಗಳನ್ನು ಬಿಟ್ಟು ಹೋಗಿದ್ದಾರೆ. ಖರ್ಗೆಯವರಿಗೆ ದ್ವೇಷದ, ಶ್ರೀಮಂತರ ಪರವಾದ ರಾಜಕಾರಣ ಮಾಡಿ ಗೊತ್ತಿಲ್ಲ. ಬಡವರ ಪರವಾದ, ಬುದ್ಧ, ಬಸವ, ಅಂಬೇಡ್ಕರ್‌ ಅವರ ಸಿದ್ದಾಂತಗಳಿಗೆ ಬದ್ಧರಾಗಿ, ಯಾವ ರಾಜಿಯಿಲ್ಲದೆ ರಾಜಕಾರಣ ಮಾಡಿಕೊಂಡು ಬಂದಿದ್ದಾರೆ. ಖರ್ಗೆಯವರು ಒಬ್ಬ ಸ್ವಾಭಿಮಾನಿ ರಾಜಕಾರಣಿ. ನಾನು ಕಂಡಂತೆ ಕರ್ನಾಟಕದಲ್ಲಿ ಸಮಚಿತ್ತವಿರುವ, ಮೌಢ್ಯವಿರೋಧಿ, ಪ್ರಗತಿಪರ ರಾಜಕಾರಣಿ ಇದ್ದರೆ ಅದು ಮಲ್ಲಿಕಾರ್ಜುನ ಖರ್ಗೆಯವರು. ಇಷ್ಟು ವರ್ಷಗಳ ಕಾಲ ಲೋಕಸಭೆ, ರಾಜ್ಯಸಭೆಯಲ್ಲಿ ಸೇವೆ ಮಾಡಿ, ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿರೋದು ಹೆಮ್ಮೆಯ ವಿಚಾರ. ಇದು ರಾಜ್ಯ ಕಾಂಗ್ರೆಸ್‌ ಗೆ ಶಕ್ತಿಯನ್ನು ತಂದುಕೊಟ್ಟಿದೆ. 2023ರಲ್ಲಿ ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಖರ್ಗೆಯವರು ನೀಡಿರುವ ಎಚ್ಚರಿಕೆ ಮಾತುಗಳಂತೆ ನಾವು ನಡೆದುಕೊಳ್ತೇವೆ ಎಂಬುದನ್ನು ಹೇಳಲು ಬಯಸುತ್ತೇನೆ.

ಎಐಸಿಸಿ ಚುನಾವಣೆಯಲ್ಲಿ ಖರ್ಗೆಯವರು ಬಹಳ ದೊಡ್ಡ ಬಹುಮತದಿಂದ ಗೆಲುವು ಸಾಧಿಸಿದ್ದಾರೆ. ಬಿಜೆಪಿಯವರು ಕಾಂಗ್ರೆಸ್‌ ನಲ್ಲಿ ವಂಶಪಾರಂಪರ್ಯ ಆಡಳಿತ ಇದೆ, ಬೇರೆಯವರಿಗೆ ಅವಕಾಶ ಇಲ್ಲ ಎಂದು ಮಾತನಾಡುತ್ತಿದ್ದರು ಆದರೆ ಇಂದು ಖರ್ಗೆಯವರು ಅಧ್ಯಕ್ಷರಾಗಿ ಅಂಥಾ ಟೀಕೆಗಳಿಗೆ ಸರಿಯಾದ ಉತ್ತರ ನೀಡಿದ್ದಾರೆ. ಕಾಂಗ್ರೆಸ್‌ ನಲ್ಲಿ ಆಂತರಿಕ ಪ್ರಜಾಪ್ರಭುತ್ವ ಇದೆ ಎಂಬುದು ಇದರಿಂದ ಸಾಬೀತಾಗಿದೆ.

ನಾಡಿನ ಜನತೆ, ಕಾಂಗ್ರೆಸ್‌ ಪಕ್ಷದ ಪರವಾಗಿ ಹಾಗೂ ವೈಯಕ್ತಿವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆ ಸಲ್ಲಿಸಲು ಬಯಸುತ್ತೇನೆ. ಧನ್ಯವಾದಗಳು.