!
ಕಾಂಗ್ರೆಸ್ ಪಕ್ಷದ ಮತಬ್ಯಾಂಕ್ ರಾಜಕಾರಣ ನಡೆಯುವುದಿಲ್ಲ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬಳ್ಳಾರಿ,ನವೆಂಬರ್ 20 : ಕಾಂಗ್ರೆಸ್ ಪಕ್ಷ ತಳಸಮುದಾಯಗಳಿಗೆ ರಕ್ಷಣೆ ನೀಡದೇ, ಕೇವಲ ಸುಳ್ಳು ಭರವಸೆಗಳು ನೀಡಿದ್ದಾರೆ. ಇನ್ನು ಮುಂದೆ ಅವರ ಮತಬ್ಯಾಂಕ್ ರಾಜಕಾರಣ ನಡೆಯುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಭಾರತೀಯ ಜನತಾ ಪಕ್ಷದ ಎಸ್.ಟಿ. ಮೋರ್ಚಾ ವತಿಯಿಂದ ಬಳ್ಳಾರಿಯ ಜೀ ವೃತ್ತದ ಬಳಿ ಆಯೋಜಿಸಿರುವ “ ಎಸ್.ಟಿ.ಮೋರ್ಚಾ ಬೃಹತ್ ಸಮಾವೇಶ”ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಿದ್ದರಾಮಯ್ಯ ನವರ ‘ಅಹಿಂದ’ ಎಲ್ಲಿದೆ, ಆ ಸಮುದಾಯದವರಿಗೆ ಬಡತನ ನಿರ್ಮೂಲನೆ ಮಾಡಲಿಲ್ಲ, ಸ್ವಾಭಿಮಾನದ ಬದುಕನ್ನು ನೀಡಲಿಲ್ಲ. ಆದರೆ ಇಂದು ಎಸ್ ಸಿ ಎಸ್ ಟಿ ಸಮುದಾಯಗಳು ಜಾಗೃತರಾಗಿದ್ದಾರೆ. ಅವರ ಜೊತೆ ಭಾಜಪ ಸರ್ಕಾರವಿದೆ. ಅವರ ಏಳಿಗೆಗೆ ಸರ್ಕಾರ ಹೆಗಲಿಗೆ ಹೆಗಲು ನೀಡಲಿದೆ ಎಂದರು.
ಕಾಂಗ್ರೆಸ್ ನವರು 60 ವರ್ಷ ದೇಶವಾಳಿದರು. ಎಸ್ ಸಿ ಎಸ್ ಟಿ ನಮ್ಮ ಬಾಂಧವರು ಎಂದು ಬಾಯಿಮಾತಿನಲ್ಲಿ ಹೇಳಿದರೆ ಹೊರತು , ಅವರ ಬಡತನ ನಿರ್ಮೂಲನೆಗೆ ಶ್ರಮಿಸಲಿಲ್ಲ. ಕಾಂಗ್ರೆಸ್ ನವರು ಎಸ್ ಸಿ , ಎಸ್ ಟಿ ಜನಾಂಗದವರನ್ನು ಕೇವಲ ಮತಬ್ಯಾಂಕ್ ಆಗಿ ಮಾಡಿಕೊಂಡಿದ್ದರು. ಸಣ್ಣ ಮೈದಾನದಲ್ಲಿ ಕಾರ್ಯಕ್ರಮ ನಡೆಸಿ,ಕಾಂಗ್ರೆಸ್ ನವರ ಭಾರತ್ ಜೋಡೋಯಾತ್ರೆ ಸುನಾಮಿ ಎಬ್ಬಿಸಿದೆ ಎಂದು ಸುಳ್ಳು ಹೇಳುತ್ತಾರೆ. ಎಸ್ ಸಿ ಎಸ್ ಟಿ , ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಭಾಜಪ ಸರ್ಕಾರ ಶ್ರಮಿಸಲಿದ್ದು, ಸ್ವಾಭಿಮಾನದ ಬದುಕನ್ನು ನಿಮ್ಮದಾಗಿಸಲಿದೆ ಎಂದರು. ಈಗ ಪರಿವರ್ತನೆಯ ಕಾಲ ಬಂದಿದೆ ಎಂದರು.
ಭಾಜಪ ಸುನಾಮಿಯಲ್ಲಿ ಕಾಂಗ್ರೆಸ್ ಧೂಳಿಪಟ :
ಬಳ್ಳಾರಿಯಿಂದ ಲೋಕಸಭೆಗೆ ಗೆದ್ದ ಶ್ರೀಮತಿ ಸೋನಿಯಾಗಾಂಧಿಯವರು ಬಳ್ಳಾರಿಗೆ 3 ಸಾವಿರ ಕೋಟಿ ನೀಡುವುದಾಗಿ ತಿಳಿಸಿದ್ದರು. ಆದರೆ ಅವರು ಮೂರು ಕಾಸನ್ನು ನಿಮಗೆ ನೀಡದೇ ಬಳ್ಳಾರಿ ಜನರಿಗೆ ಮೋಸ ಮಾಡಿದರು. ಇದು ಕಾಂಗ್ರೆಸ್ ಪಕ್ಷದ ನೀತಿ. ಕಾಂಗ್ರೆಸ್ ಅವರಿಗೆ ಈ ಬಾರಿಯ ಚುನಾವಣೆಯಲ್ಲಿ ಸರಿಯಾದ ಪಾಠವನ್ನು ಬಳ್ಳಾರಿಯ ಜನ ಕಲಿಸಲಿದ್ದಾರೆ. ಭಾರತೀಯ ಜನತಾ ಪಕ್ಷದ ಸುನಾಮಿಯಲ್ಲಿ ಕಾಂಗ್ರೆಸ್ ಧೂಳಿಪಟವಾಗಲಿದೆ. ಕಾಂಗ್ರೆಸ್ ಅವಧಿಯಲ್ಲಿ ಕೇವಲ 8 ಸಾವಿರ ಕೋಟಿ, 15 ಸಾವಿರ ಕೋಟಿ ನಿಗದಿಪಡಿಸಿ, ಕೆಲಸ ಮಾಡಲಿಲ್ಲ. ಸಿದ್ದರಾಮಯ್ಯನವರ ಸರ್ಕಾರದ ಅವಧಿಯಲ್ಲಿ ಹಾಲು ಮತದ ಸಮುದಾಯಕ್ಕೆ ನ್ಯಾಯ ನೀಡಲಿಲ್ಲ. ಕೇವಲ ಬಾಯಿಮಾತಿನಲ್ಲಿ ಸಾಮಾಜಿಕ ನ್ಯಾಯವೆನ್ನುತ್ತಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ಭಗವಂತ ಖೂಬಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಸಾರಿಗೆ ಹಾಗೂ ಎಸ್ಟಿ ಇಲಾಖೆಗಳ ಸಚಿವ ಬಿ. ಶ್ರೀರಾಮುಲು, ಸಚಿವರಾದ ಗೋವಿಂದ ಕಾರಜೋಳ, ಆನಂದ ಸಿಂಗ್, ಪ್ರಭು ಚೌಹ್ವಾಣ್, ಶಾಸಕರಾದ ಸೋಮಶೇಖರ್ ರೆಡ್ಡಿ, ಕರುಣಾಕರ್ ರೆಡ್ಡಿ, ರಾಜು ಗೌಡ ಹಾಗೂ ಮತ್ತಿತರರು ಹಾಜರಿದ್ದರು.