DSC 5266 scaled

ಕೇಂದ್ರ ಚುನಾವಣಾ ಆಯೋಗ ತಂಡದ ತುಮಕೂರು ಜಿಲ್ಲಾ ಭೇಟಿ ಕಾರ್ಯಕ್ರಮ

DISTRICT NEWS ತುಮಕೂರು

ಕೇಂದ್ರ ಚುನಾವಣಾ ಆಯೋಗ ತಂಡದ ತುಮಕೂರು ಜಿಲ್ಲಾ ಭೇಟಿ ಕಾರ್ಯಕ್ರಮ

ತುಮಕೂರು (ಕ.ವಾ.) ನ.23: ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ-2023ರ ಹಿನ್ನೆಲೆಯಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಗೆ ಸಂಬಂಧಿಸಿದಂತೆ ಕೇಂದ್ರ ತಂಡ ಇಂದು ತುಮಕೂರು ಜಿಲ್ಲೆಗೆ ಆಗಮಿಸಿ ಪರಿಶೀಲನೆ ನಡೆಸಿತು.
ಭಾರತದ ಚುನಾವಣಾ ಆಯೋಗದ ನಿರ್ದೇಶನಗಳನ್ನು ಪಾಲಿಸುತ್ತಿದ್ದಾರಾ ಎಂಬುದನ್ನು ತುಮಕೂರು ಗ್ರಾಮಾಂತರ ಮತ್ತು ತುಮಕೂರು ನಗರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಬಿಎಲ್‍ಓ ಸೂಪರ್‍ವೈಸರ್‍ಗಳ ಕಾರ್ಯವೈಖರಿ ಪರಿಶೀಲಿಸಲಾಯಿತು.
ಬಿಎಲ್‍ಓಗಳು ಪ್ರತಿ ಮನೆ-ಮನೆಗೂ ಭೇಟಿ ನೀಡಿ ಇತ್ತೀಚೆಗೆ ಪ್ರಚುರಪಡಿಸಿದ ಕರಡು ಮತದಾರರ ಪಟ್ಟಿ ಆಧರಿಸಿ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಯುವ ಮತದಾರರು ಮತ್ತು ಸೇರ್ಪಡೆಗೊಳ್ಳುವವರ ಕುರಿತು ಕೇಂದ್ರ ತಂಡವು ಪರಿಶೀಲನೆ ನಡೆಸಿತು. ಮರಣ ಹೊಂದಿದವರು, ಖಾಯಂ ಸ್ಥಳಾಂತರಗೊಂಡಿರುವವರು ಅಂತಹವರನ್ನು ಫಾರಂ-7 ತೆಗೆದು ಡಿಲೀಟ್ ಮಾಡುವ ಪ್ರಕ್ರಿಯೆಗಳನ್ನು ಪರಿಶೀಲಿಸಲಾಯಿತು.
ಒಂದು ಬೀದಿಯಿಂದ ಮತ್ತೊಂದು ಬೀದಿಗೆ, ಒಂದು ಊರಿನಿಂದ ಮತ್ತೊಂದು ಊರಿಗೆ, ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ಕ್ಷೇತ್ರಕ್ಕೆ ವಲಸೆ ಹೋಗಿದ್ದಲ್ಲಿ ಅಂತಹವರಿಂದ ಫಾರಂ-8 ಪಡೆದು ಬಿಎಲ್‍ಓಗಳು ಅವರ ಹೆಸರುಗಳನ್ನು ಸೇರ್ಪಡೆಗೊಳಿಸುವ ಕೆಲಸವನ್ನು ಮಾಡುತ್ತಿದ್ದು, ಇದನ್ನು ಪರಿಶೀಲಿಸಲಾಯಿತು.
ತುಮಕೂರು ಜಿಲ್ಲೆಯಲ್ಲಿ ಯಾವ ರೀತಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿದೆ. ಬಿಎಲ್‍ಓಗಳು ಮನೆ-ಮನೆ ಭೇಟಿ ಮಾಡುತ್ತಿದ್ದಾರಾ? ಕುಟುಂಬಗಳ ಪರಿಶೀಲನೆ ಮಾಡುತ್ತಿದ್ದಾರಾ, ದಾಖಲೆ ಯಾವ ರೀತಿ ನಿರ್ವಹಿಸುತ್ತಿದ್ದಾರೆ ಎಂಬುದನ್ನು ತಂಡ ಪರಿಶೀಲನೆ ನಡೆಸಿತು.
ನವದೆಹಲಿಯಿಂದ ಆಗಮಿಸಿರುವ ಕೇಂದ್ರ ಚುನಾವಣಾ ಆಯೋಗದ ನಿಯೋಗವು ಇಂದು ಹಿರೇಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆ ಮತ್ತು ತುಮಕೂರು ಮಹಾನಗರಪಾಲಿಕೆಯ ಚುನಾವಣಾ ಶಾಖೆಗೆ ಭೇಟಿ ನೀಡಿ ಚುನಾವಣಾ ಸಿದ್ಧತೆ ಬಗ್ಗೆ ಪರಿಶೀಲನೆ ನಡೆಸಿತು.
ತಂಡದಲ್ಲಿ ಅಜಯ್ ಬೋಡೋ, ಡೆಪ್ಯೂಟಿ ಎಲೆಕ್ಷನ್ ಕಮೀಷನರ್ ಆಫ್ ಇಂಡಿಯಾ, ಬಿ.ಸಿ.ಪಾತ್ರಾ, ಸೆಕ್ರೆಟರಿ ಸೆಕ್ರೆಟೇರಿಯಟ್ ಆಫ್ ಎಲೆಕ್ಷನ್ ಕಮೀಷನ್ ಆಫ್ ಇಂಡಿಯಾ, ಅವಿನಾಶ್‍ಕುಮಾರ್, ಪ್ರಿನ್ಸಿಪಲ್ ಸೆಕ್ರೆಟರಿ, ಎಲೆಕ್ಷನ್ ಕಮಿಷನ್, ಮನೋಜ್ ಕುಮಾರ್, ಚೀಫ್ ಎಲೆಕ್ಟೋರಲ್ ಆಫೀಸರ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ: ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ. ಚೆನ್ನಬಸಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಶಹಪೂರ ವಾಡ್, ಉಪವಿಭಾಗಾಧಿಕಾರಿ ಅಜಯ್ ಸೇರಿದಂತೆ ಮತ್ತಿತರರು ಹಾಜರಿದ್ದರು.