ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ : ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್
ನರ ಹಾಗೂ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಳ ಕಳವಳಕಾರಿ
ಬೆಂಗಳೂರು, ಡಿಸೆಂಬರ್ 09, ಶುಕ್ರವಾರ ಮಾನಸಿಕ ಆರೋಗ್ಯ ಉತ್ತಮವಾಗಿದ್ದರೆ ಮಾತ್ರ ಮನುಷ್ಯ ಆರೋಗ್ಯವಾಗಿರುತ್ತಾನೆ. ಇತ್ತೀಚಿನ 10 ವರ್ಷಗಳಲ್ಲಿ ನರ ಹಾಗೂ ಮಾನಸಿಕ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿರುವುದು ಆತಂಕದ ವಿಷಯ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದರು.
ಬೆಂಗಳೂರಿನಲ್ಲಿ ನಿಮ್ಹಾನ್ಸ್ ನೇತೃತ್ವದಲ್ಲಿ ನಡೆಯುತ್ತಿರುವ ಬ್ರೈನ್ ಹೆಲ್ತ್ ಇನಿಷೆಯೇಟಿವ್ ಕಾರ್ಯಕ್ರಮದಲ್ಲಿ ಮಾತನಾಡಿದವ ಅವರು, ನಾವು ಎಷ್ಟು ವರ್ಷ ಬದುಕುತ್ತೇವೆ ಅನ್ನುವುದರ ಜೊತೆಗೆ ಹೇಗೆ ಬದುಕುತ್ತೇವೆ ಅನ್ನುವುದು ಕೂಡ ಮುಖ್ಯವಾಗಿದೆ. ಮಾನಸಿಕ ಆರೋಗ್ಯದಲ್ಲಿನ ಏರುಪೇರು ಮನುಷ್ಯನ ಆರೋಗ್ಯದಲ್ಲಿ ಸಮಸ್ಯೆ ಸೃಷ್ಟಿಸುವ ಜೊತೆಗೆ ಸಮಾಜಕ್ಕೂ ಆತಂಕ ತರುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನಲ್ಲಿ ನಿಮ್ಹಾನ್ಸ್‌ನಂತಹ ಸಂಸ್ಥೆ ಇರುವುದು ನಮ್ಮ ರಾಜ್ಯದ ಸೌಭಾಗ್ಯವಾಗಿದೆ. ಸಾಂಕ್ರಾಮಿಕವಲ್ಲದ ರೋಗಗಳಿಂದಲೂ ಬ್ರೈನ್‌ಗೆ ಸಂಬಂಧಿಸಿದ ಕಾಯಿಲೆಗಳು ಹೆಚ್ಚಾಗುತ್ತಿದೆ. ಕಳೆದ 10 ವರ್ಷಗಳಿಂದ ಮಾನಸಿಕ, ನರರೋಗಗಳು, ಸ್ಟ್ರೋಕ್, ತಲೆನೋವಿನಿಂದ ನರಳುತ್ತಿರುವ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅಂಕಿ-ಅಂಶಗಳ ಪ್ರಕಾರ ಮಾನಸಿಕ ಅರೋಗ್ಯದಿಂದಲೇ ಸುಮಾರು 7-8% ಜನರು ಸಾವಿಗೀಡಾಗುತ್ತಿದ್ದು, ಇದು ಸಾವಿಗೆ ಕಾರಣವಾಗಿರುವ ಅಂಶಗಳ ಪೈಕಿ 2ನೇ ಸ್ಥಾನ ಪಡೆದಿದೆ ಎಂದರು.
ಭಾರತ ಸರ್ಕಾರ T- MANAS ಮೂಲಕ ಮಾನಸಿಕ ರೋಗಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಅಭಿಯಾನವನ್ನು ಮಾಡುತ್ತಿದೆ. ರಾಜ್ಯ ಸರ್ಕಾರ ಹಬ್ & ಸ್ಪೋಕ್ ಮಾಡೆಲ್ ಮೂಲಕ ಈಗಾಗಲೇ ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರದಲ್ಲಿ ನಿಮ್ಹಾನ್ಸ್ ನೆರವಿನೊಂದಿಗೆ ಪೈಲಟ್ ಪ್ರಾಜೆಕ್ಟ್ ಮಾಡುತ್ತಿದೆ. ಇದನ್ನು ಮುಂದಿನ ದಿನಗಳಲ್ಲಿ ಈ ಸೇವೆ ರಾಜ್ಯದ ಎಲ್ಲಾ ಕಡೆ ಸಿಗುವಂತೆ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಪಿಎಚ್ ಸಿ ವೈದ್ಯರಿಗೆ ಮಾನಸಿಕ ರೋಗಿಗಳಿಗೆ ಕೌನ್ಸಿಲಿಂಗ್ ಹಾಗೂ ಚಿಕಿತ್ಸೆ ನೀಡುವ ಬಗ್ಗೆ ಈಗಾಗಲೇ 3 ತಿಂಗಳ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಎಎನ್‌ಎಂ, ಸಿಎಚ್‌ಒಗಳಿಗೆ ಹಾಗೂ ಆಶಾ ಕಾರ್ಯಕರ್ತೆಯರಿಗೂ ಈ ಸಂಬಂಧ ತರಬೇತಿ ನೀಡಿ ಮಾನಸಿಕ ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಅನ್ನುವ ಬಗ್ಗೆ ತಿಳಿಸಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.