IMG 20230127 WA0020

ಎಸ್.ಎಂ.ಕೃಷ್ಣಅವರ ಸಾರ್ವಜನಿಕ ಬದುಕು ನಮಗೆಲ್ಲಾ ಮಾದರಿ…!

Genaral STATE

ಎಸ್.ಎಂ.ಕೃಷ್ಣಅವರ ಸಾರ್ವಜನಿಕ ಬದುಕು ನಮಗೆಲ್ಲಾ ಮಾದರಿ: ಸಿಎಂ ಬೊಮ್ಮಾಯಿ

ಬೆಂಗಳೂರು, ಜನವರಿ 27: ಎಸ್.ಎಂ.ಕೃಷ್ಣ ಅವರ ಸಾರ್ವಜನಿಕ ಬದುಕು ನಮಗೆಲ್ಲಾ ಮಾದರಿಯಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಪದ್ಮವಿಭೂಷಣ ಪ್ರಶಸ್ತಿಗೆ ಆಯ್ಕೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.‌ಕೃಷ್ಣ ಅವರ ನಿವಾಸಕ್ಕೆ ಭೇಟಿ ನೀಡಿ ಅಭಿನಂದಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

ನಾಡು ಕಂಡ ಸೃಜನಶೀಲ, ಸರಳ ಸಜ್ಜನಿಕೆಯ, ಸುರಾಜ್ಯ ನೀಡಿದ, ಉತ್ತಮ ಆಡಳಿತ ವ್ಯವಸ್ಥೆಗೆ ಹೆಸರಾದಂಥ ಹಲವಾರು ಜನಪರ ಯೋಜನೆಗಳನ್ನು ನೀಡಿರುವ ಎಸ್ ಎಂ ಕೃಷ್ಣ ಅವರಿಗೆ ರಾಷ್ಟ್ರಪತಿಗಳು ಪದ್ಮವಿಭೂಷಣ ಪ್ರಶಸ್ತಿ ನೀಡಿರುವುದು ನಮಗೆಲ್ಲಾ, ಸಂತೋಷ, ಆನಂದ, ಅಭಿಮಾನ ಮತ್ತು ಹೆಮ್ಮೆ ತಂದಿದೆ. ಕನ್ನಡ ನಾಡಿನ ಸಾರ್ವಜನಿಕ ವಲಯದಲ್ಲಿ ಉತ್ತಮ ಹಾಗೂ ಗುಣಾತ್ಮಕ ಆಡಳಿತ ನೀಡಿರುವ ವಿಚಾರದಲ್ಲಿ ಅವರಿಗೆ ಪ್ರಶಸ್ತಿ ನೀಡಿರುವುದು ಅತ್ಯಂತ ಯೋಗ್ಯವಾಗಿದೆ ಎಂದರು.

ಜನಪರ ಆಡಳಿತ
ಅವರ ಆಡಳಿತದ ಕಾಲದಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಎದುರಿಸಿದ್ದಾರೆ. ಜನಪರ ಆಡಳಿತ ನೀಡಿದ್ದಾರೆ. ಎಲ್ಲಾ ವರ್ಗಗಳಿಗೆ ಉತ್ತಮ ಕಾರ್ಯಕ್ರಮ ಗಳನ್ನು ನೀಡಿದ್ದರು. ಅವರ ಕಾಲದಲ್ಲಿ ಯಶಸ್ವಿನಿ ಯೋಜನೆ ನೀಡಿದರು. ಭಾರತಕ್ಕೆ ಆರೋಗ್ಯ ವಿಮೆ ಇನ್ನೂ ಪರಿಚಯ ಆಗಿರಲಿಲ್ಲ‌. ಸ್ಥಳೀಯ ರೈತರು, ವೈದ್ಯಾಧಿಕಾರಿಗಳನ್ನು ಕರೆಸಿ ಯಶಸ್ವಿನಿ ಯೋಜನೆಯನ್ನು ರೈತರಿಗಾಗಿ ನೀಡಿದ್ದನ್ನು ಸ್ಮರಿಸಿಕೊಳ್ಳಬೇಕು. ಅದನ್ನು ಮಧ್ಯದಲ್ಲಿ ಕೈ ಬಿಡಲಾಗಿತ್ತು.ಆದರೆ ನಾನು ಕಳೆದ ಬಜೆಟ್ ನಲ್ಲಿ ಘೋಷಣೆ ಮಾಡಿ 300 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ಕೆಲವು ಸುಧಾರಣೆಗಳನ್ನು ಮಾಡಿದ್ದೇನೆ. ರೈತರಿಗೆ ಆದಾಯ ಕಡಿಮೆ ಇದ್ದು, ಸುರಕ್ಷತೆಯ ಅವಶ್ಯಕತೆ ಇದೆ ಎಂದು ಮನಗಂಡು ಆರೋಗ್ಯ, ಶಿಕ್ಷಣ ಮೂಲಕ ಸುರಕ್ಷತೆ ನೀಡಲು ಯಶಸ್ವಿನಿ ಜಾರಿಗೆ ತಂದರು ಎಂದು ತಿಳಿಸಿದರು.

ಜ್ಞಾನಾಧಾರಿತ ಅಭಿವೃದ್ಧಿಗೆ ದೊಡ್ಡ ಕೊಡುಗೆ

ಅವರ ಕಾಲದಲ್ಲಿ ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದಿದ್ದು, ನಾವು ಯಾರೂ ಮರೆಯಲು ಸಾಧ್ಯವಿಲ್ಲ. ಹಸಿದ ಹೊಟ್ಟೆಯಲ್ಲಿ ಕಲಿಕೆ ಕಷ್ಟ ಎಂದು ಮನವರಿಕೆ ಮಾಡಿಕೊಂಡು ಮಧ್ಯಾಹ್ನದ ಊಟವನ್ನು ದೊಡ್ಡ ಪ್ರಮಾಣದಲ್ಲಿ ಮಕ್ಕಳಿಗೆ ದಿನನಿತ್ಯ ಒದಗಿಸುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಿದ ವಿಚಾರವನ್ನು ಯಾರೂ ಮರೆಯುವಂತಿಲ್ಲ. ಕಾವೇರಿ ,ಕೃಷ್ಣಾ ವಿಚಾರದಲ್ಲಿ ಅವರು ತೆಗೆದುಕೊಂಡ ನಿಲುವು, ಕೆಲವು ವಿಚಾರಗಳಲ್ಲಿ ಇಡೀ ವ್ಯವಸ್ಥೆಯನ್ನೇ ಎದುರು ಹಾಕಿಕೊಂಡು ತೆಗೆದುಕೊಂಡ ರೀತಿ,
ರೈತಪರ ಹೋರಾಟ, ಜ್ಞಾನಾಧಾರಿತ ಅಭಿವೃದ್ಧಿಗೆ ಎಸ್.ಎಂ.ಕೃಷ್ಣ ಅವರು ದೊಡ್ಡ ಕಾಣಿಕೆ ನೀಡಿದ್ದಾರೆ. ಐ.ಟಿ, ಬಿಟಿ ಕೈಗಾರಿಕೆಗಳು ದೊಡ್ಡ ಪ್ರಮಾಣದಲ್ಲಿ ಬೆಂಗಳೂರಿನಲ್ಲಿ ಬೆಳೆಸಿದ್ದಾರೆ ಅದರ ಮೂಲ ಬೀಜಾಂಕುರ, ಬೆಂಬಲ ನೀಡಿ ಬೆಳೆಸಿದ್ದು ಎಸ್.ಎಂ ಕೃಷ್ಣ ಅವರು. ಎಲ್ಲ ರಂಗದಲ್ಲೂ ಕೂಡ ಉತ್ತಮ ಆಡಳಿತ, ಉತ್ತಮ ಕಾರ್ಯಕ್ರಮ, ಜನಪರ, ನಾಡಿನ ಪರ ಗಟ್ಟಿಯಾದ ನಿಲುವು , ಇದೆಲ್ಲ ಒಬ್ಬರೇ ವ್ಯಕ್ತಿ ಯಲ್ಲಿ ಸಮ್ಮಿಳಿತಗೊಂಡಿರುವುದು ಎಸ್ ಎಂ ಕೃಷ್ಣ ಅವರಲ್ಲಿ ಮಾತ್ರ. ಇವರನ್ನು ಗುರುತಿಸಿ ಪ್ರಧಾನಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿರುವುದು ಅವರೊಬ್ಬ ಮುತ್ಸದ್ದಿ ರಾಜಕಾರಣಿ ಎಂದು ತೋರಿಸುತ್ತದೆ ಎಂದರು.
ರಾಜ್ಯದ ಎಂಟು ಜನರೂ ತಮ್ಮ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆ ಮಾಡಿದವರು. ಈ ಪ್ರಶಸ್ತಿ ಯನ್ನು ಬಯಸದೆ ಪ್ರಾಮಾಣಿಕವಾಗಿ ಮಾಡಿದ ಕೆಲಸಕ್ಕೆ ಗುರುತಿಸಲ್ಪಟ್ಟ ಅನರ್ಘ್ಯ ಮುತ್ತುಗಳಾಗಿದ್ದಾರೆ‌‌. ಈ ವಿಚಾರದಲ್ಲಿ ಪ್ರಧಾನಮಂತ್ರಿಗಳ ನಿಲುವು ಹಾಗೂ ಕಾರ್ಯವೈಖರಿಯನ್ನು ಇಡೀ ನಾಡು ಮೆಚ್ಚಿಕೊಳ್ಳುವಂಥದ್ದು. ಕನ್ನಡ ನಾಡು ಸದಾ ಅವರಿಗೆ ಋಣಿಯಾಗಿದೆ. ಅವರನ್ನು ಗುರುತಿಸಿ ದೊಡ್ಡ ಗೌರವ ನೀಡಿರುವ ವ್ಯವಸ್ಥೆಯನ್ನು ತಂದಿರುವ ರಾಷ್ಟ್ರಪತಿಗಳು ಹಾಗೂ ಪ್ರಧಾನ ಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.