DSC 8388

Tumkur:ರೈತರಿಗೆ ಉತ್ತಮ ಗುಣಮಟ್ಟದ ಗೊಬ್ಬರ, ಬಿತ್ತನೆ ಬೀಜ ಪೂರೈಸಲು ಅಧಿಕಾರಿಗಳಿಗೆ ಸೂಚನೆ…!

DISTRICT NEWS ತುಮಕೂರು

ರೈತರಿಗೆ ಉತ್ತಮ ಗುಣಮಟ್ಟದ ಗೊಬ್ಬರ, ಬಿತ್ತನೆ ಬೀಜ ಪೂರೈಸಲು ಅಧಿಕಾರಿಗಳಿಗೆ ಸಚಿವ ಆರಗ ಜ್ಞಾನೇಂದ್ರ ಸೂಚನೆ
ತುಮಕೂರು (ಕರ್ನಾಟಕ ವಾರ್ತೆ) ಡಿ.9: ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿ ಎಲ್ಲಾ ಕೆರೆ-ಕಟ್ಟೆಗಳು ತುಂಬಿದ್ದು, ರೈತರಿಗೆ ಸಕಾಲದಲ್ಲಿ ಉತ್ತಮ ಗುಣಮಟ್ಟದ ಗೊಬ್ಬರ, ಬಿತ್ತನೆ ಬೀಜ ಪೂರೈಸಬೇಕು. ಕೃಷಿ ಹಾಗೂ ತೋಟಗಾರಿಕೆ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ರೈತರನ್ನು ಭೇಟಿ ಮಾಡಿ ರೈತರಿಗೆ ಉಪಯೋಗವಾಗುವಂತಹ ಇಲಾಖಾ ಮಾಹಿತಿಗಳನ್ನು ನೀಡಬೇಕು ಎಂದು ಗೃಹ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆರಗ ಜ್ಞಾನೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.
ಅವರಿಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ 2022-23ನೇ ಸಾಲಿನ 2ನೇ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಶಾಲಾ ಕಟ್ಟಡಗಳು ಮತ್ತು ಅಂಗನವಾಡಿ ಕಟ್ಟಡಗಳ ದುರಸ್ತಿ ಮತ್ತು ನಿರ್ಮಾಣ ಕಾರ್ಯಗಳು ಜನವರಿ ಅಂತ್ಯದೊಳಗೆ ಪೂರ್ಣಗೊಳ್ಳಬೇಕು. ಒದಗಿಸಿರುವ ಅನುದಾನವನ್ನು ಖರ್ಚು ಮಾಡಬೇಕು. ರಸ್ತೆಗಳ ದುರಸ್ತಿ ಕಾರ್ಯವೂ ಸಹ ಪೂರ್ಣಗೊಳ್ಳಬೇಕು ಎಂದು ಸೂಚಿಸಿದರು.

DSC 8368


ಜಿಲ್ಲಾ ಮಟ್ಟದ ಅಧಿಕಾರಿಗಳು ತಾಲ್ಲೂಕುಗಳಿಗೆ ತೆರಳಿ ಸ್ಥಳೀಯ ಶಾಸಕರನ್ನು ಭೇಟಿ ಮಾಡಿ ಕುಡಿಯುವ ನೀರು, ರಸ್ತೆ, ಇನ್ನಿತರೆ ಎಲ್ಲಾ ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಬೇಕು. ಯೋಜನೆಗಳ ಅನುಷ್ಠಾನದ ಕೆಲಸ ತ್ವರಿತಗತಿಯಲ್ಲಿ ಆಗಬೇಕು. ಟೆಂಡರ್ ಪ್ರಕ್ರಿಯೆಗಳನ್ನು ಬೇಗ ಪೂರ್ಣಗೊಳಿಸಿ ಶಾಸಕರ ಮೂಲಕ ಗುದ್ದಲಿ ಪೂಜೆ ಮಾಡಿಸಿ ಕಾಮಗಾರಿಗಳನ್ನು ಆರಂಭಿಸಿ ತ್ವರಿತವಾಗಿ ಪೂರ್ಣಗೊಳಿಸಬೇಕು, ಎಲ್ಲಾ ಇಲಾಖೆಗಳ ಎಲ್ಲಾ ಯೋಜನೆಗಳಿಗೆ ಸಾಕಷ್ಟು ಅನುದಾನ ಒದಗಿಸಲಾಗಿದ್ದು, ಕೆಲಸಗಳು ನಿಗಧಿತ ಕಾಲಮಿತಿಯೊಳಗಾಗಿ ಪೂರ್ಣಗೊಳಿಸಬೇಕು, ಕೆಲಸದ ಪ್ರಗತಿ ಕಡಿಮೆ ಇದ್ದಲ್ಲಿ ಸಹಿಸುವುದಿಲ್ಲ. ಗುತ್ತಿಗೆದಾರರು ಉದಾಸೀನತೆ ತೋರಿದಲ್ಲಿ ಅಂತಹವರಿಗೆ ನೋಟೀಸ್ ನೀಡುವುದು ಇಲ್ಲವಾದಲ್ಲಿ ಟೆಂಡರ್ ರದ್ದುಗೊಳಿಸಿ ಹೊಸ ಟೆಂಡರ್ ಕರೆಯುವಂತೆ ಸೂಚಿಸಿದರು.
ಯಾವುದೇ ಅಡೆ-ತಡೆ ಇಲ್ಲದೆ ಎತ್ತಿನಹೊಳೆ ಯೋಜನೆ ಪೂರ್ಣಗೊಳ್ಳಬೇಕು ಎಂಬುದು ಮುಖ್ಯಮಂತ್ರಿಗಳ ಆಶಯವಾಗಿದೆ. ಎತ್ತಿನ ಹೊಳೆ ಯೋಜನೆಯ ಪ್ರಗತಿ ಕುರಿತಂತೆ ಚರ್ಚಿಸಲು ಬೆಂಗಳೂರಿನಲ್ಲಿ ಶೀಘ್ರದಲ್ಲೇ ಸಭೆ ಕರೆಯುವುದಾಗಿ ಸಚಿವರು ಸಭೆಯಲ್ಲಿ ಉಪಸ್ಥಿತರಿದ್ದ ಸಂಸದರಾದ ಜಿ.ಎಸ್. ಬಸವರಾಜು ಅವರಿಗೆ ತಿಳಿಸಿದರು.
ಮಂಗಳ ಏತ ನೀರಾವರಿ ಯೋಜನೆ ಕುಣಿಗಲ್ ತಾಲ್ಲೂಕಿನ ಅತ್ಯಮೂಲ್ಯ ಯೋಜನೆಯಾಗಿದ್ದು, ಈ ಯೋಜನೆಗೆ ಸಂಬಂಧಿಸಿದಂತೆ ಅನುದಾನ ಬಿಡುಗಡೆಯಾಗಿ 1 ವರ್ಷ ಕಳೆದಿದ್ದು, ಇದುವರೆಗೂ ಟೆಂಡರ್ ಕರೆದಿರುವುದಿಲ್ಲವೆಂಬ ಶಾಸಕ ಡಾ: ರಂಗನಾಥ್ ಅವರ ದೂರಿಗೆ ಪ್ರತಿಕ್ರಿಯಿಸಿದ ಸಚಿವರು ಈ ಕುರಿತಂತೆ ಸಧ್ಯದಲ್ಲೇ ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸುವುದಾಗಿ ತಿಳಿಸಿದರು.

1670605827601 DSC 8413


ಕುಣಿಗಲ್ ತಾಲ್ಲೂಕಿನಲ್ಲಿ 21 ಪಿ.ಹೆಚ್.ಸಿ. ಗಳಿಗೆ 7 ಜನ ವೈದ್ಯರು ಮಾತ್ರ ಇದ್ದು, ಸ್ಟಾಫ್ ನರ್ಸ್ ಸಹ ಕಡಿಮೆ ಇದ್ದಾರೆ. ಶೇ. 50ರಷ್ಟು ಸಿಬ್ಬಂದಿ ಕೊರತೆ ಇದ್ದು, ಇದನ್ನು ನಿವಾರಿಸುವಂತೆ ಕೋರಿದ ಕುಣಿಗಲ್ ಶಾಸಕರ ಮನವಿಗೆ ಸ್ಪಂದಿಸಿದ ಸಚಿವರು, ಪೊಲೀಸ್, ಶಿಕ್ಷಕರು, ವೈದ್ಯರು ಸೇರಿದಂತೆ ಬಹುತೇಕ ನೇಮಕಾತಿ ಪ್ರಕ್ರಿಯೆ ಪ್ರಶ್ನಿಸಿ ಅಭ್ಯರ್ಥಿಗಳು ಕೋರ್ಟ್‍ಗಳಿಗೆ ಹೋಗುತ್ತಿರುವ ಕಾರಣ ನೇಮಕಾತಿ ವಿಳಂಬವಾಗುತ್ತಿದೆ. ಸಾಧ್ಯವಾದಷ್ಟು ಕುಣಿಗಲ್ ತಾಲ್ಲೂಕಿಗೆ ವೈದ್ಯರ ಮತ್ತು ಇತರೆ ಸಿಬ್ಬಂದಿಗಳ ನಿಯೋಜನೆ ವ್ಯವಸ್ಥೆ ಮಾಡುವುದಾಗಿ ಸಚಿವರು ಭರವಸೆ ನೀಡಿದರು.
ತುಮಕೂರು ಜಿಲ್ಲೆಯಲ್ಲಿ ಜಾನುವಾರುಗಳಿಗೆ ತಗಲಿರುವ ಚರ್ಮಗಂಟು ರೋಗ ನಿಯಂತ್ರಣಕ್ಕೆ ಬರುತ್ತಿದ್ದು, ರೋಗ ಉಲ್ಭಣಗೊಳ್ಳದಂತೆ ಸೂಕ್ತ ಚಿಕಿತ್ಸೆ ನೀಡಬೇಕು ಮತ್ತು ಔಷಧ ದಾಸ್ತಾನು ಇಡಬೇಕು ಎಂದು ಪಶು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ತುಮಕೂರು ಜಿಲ್ಲಾಸ್ಪತ್ರೆಯು ಸೇರಿದಂತೆ ಎಲ್ಲಾ ಪಿ.ಹೆಚ್.ಸಿ. ಮತ್ತು ಸಿಹೆಚ್‍ಸಿಗಳಲ್ಲಿ ಪ್ರಾಥಮಿಕ ಹಂತದ ಔಷಧಿಗಳ ದಾಸ್ತಾನು ಇರಬೇಕು. ಎಲ್ಲಾ ವೈದ್ಯರು ಸಕಾಲದಲ್ಲಿ ಆಸ್ಪತ್ರೆಗೆ ಆಗಮಿಸಬೇಕು. ಅನಸ್ತೀಷಿಯಾ ತಜ್ಞರು ಸೇರಿದಂತೆ ವೈದ್ಯಾಧಿಕಾರಿಗಳಿಗೆ ಕ್ಲಿಷ್ಟ ಪರಿಸ್ಥಿತಿ ನಿಭಾಯಿಸುವ ಸೂಕ್ತ ತರಬೇತಿಯನ್ನು ಕಾಲಕಾಲಕ್ಕೆ ನೀಡಬೇಕು. ಸಾರ್ವಜನಿಕರಿಗಾಗಿ 24 ಗಂಟೆ ಹೆಲ್ಫ್ ಡೆಸ್ಕ್ ಸ್ಥಾಪಿಸಬೇಕು. ವಾರ್ಡ್‍ವೈಸ್ ನೋಡಲ್ ಅಧಿಕಾರಿಗಳ ನೇಮಕ ಮಾಡಬೇಕು, ನಾನ್ ಕ್ಲಿನಿಕಲ್ ಸಿಬ್ಬಂದಿಗಳಿಗೆ ಬಯೋಮೆಟ್ರಿಕ್ ಕಡ್ಡಾಯ ಮಾಡಬೇಕು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಇತ್ತೀಚೆಗೆ ನಡೆದ ಹಣಕಾಸು ಅವ್ಯವಹಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥ ಅಧಿಕಾರಿ/ ಸಿಬ್ಬಂದಿ ವೇತನದಿಂದ ಹಣ ಕಟಾಯಿಸಬೇಕು ಮತ್ತು ಅಗತ್ಯವಿದ್ದಲ್ಲಿ ಹಣ ಮರುಪಾವತಿಸದ ಅಧಿಕಾರಿ/ ಸಿಬ್ಬಂದಿಯನ್ನು ಅಮಾನತ್ತು ಮಾಡಲು ಶಿಫಾರಸ್ಸು ಮಾಡುವಂತೆ ಡಿಹೆಚ್‍ಓ ಮತ್ತು ಜಿಲ್ಲಾ ಶಸ್ತ್ರಚಿಕಿತ್ಸಕರಿಗೆ ಸಚಿವರು ಸೂಚಿಸಿದರು.
ಹಾಸ್ಟೆಲ್‍ಗಳಿಗೆ ಸಮರ್ಪಕವಾಗಿ ಗುಣಮಟ್ಟದ ಆಹಾರ ಪೂರೈಕೆ ಆಗುತ್ತಿದೆಯೆ ಎಂಬುದನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಹಾಗೂ ಬಿಸಿಎಂ ಅಧಿಕಾರಿಗಳು ಕಾಲಕಾಲಕ್ಕೆ ಪರಿಶೀಲಿಸಬೇಕು ಎಂದು ಸೂಚಿಸಿದರು.
ತೋಟಗಳಲ್ಲಿ ಮನೆ ನಿರ್ಮಿಸಿಕೊಂಡವರಿಗೆ ಮತ್ತು ಹೊರವಲಯಗಳಲ್ಲಿ ಪ್ರತ್ಯೇಕವಾಗಿ ಮನೆ ನಿರ್ಮಾಣ ಮಾಡಿಕೊಂಡಂತಹವರಿಗೆ ವಿದ್ಯುತ್ ಸೌಲಭ್ಯ ಕಲ್ಪಿಸಬೇಕೆಂದು ಸೂಚಿಸಿದರು.
ಕೊರಟಗೆರೆ ತಾಲ್ಲೂಕಿನ ಮರಿಪಾಳ್ಯ ಗ್ರಾಮದ ಶಾಲೆ ದುಸ್ಥಿತಿಯಲ್ಲಿದ್ದು, ಮಧುಗಿರಿ ಡಿಡಿಪಿಐ ತಕ್ಷಣವೇ ಸ್ಥಳ ಪರಿಶೀಲನೆ ನಡೆಸುವಂತೆ ಸೂಚಿಸಿದ ಸಚಿವರು, ಅಂಗನವಾಡಿ ಕೇಂದ್ರಗಳೂ ಸಹ ಸುಸಜ್ಜಿತವಾಗಿ ಇರುವಂತೆ ನೋಡಿಕೊಳ್ಳಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರು ನೀಡಬೇಕೆಂಬುದು ಪ್ರಧಾನಿಯವರ ಕನಸಾಗಿದ್ದು, ಜೆಜೆಎಂ ಕುಡಿಯುವ ನೀರಿನ ಯೋಜನೆಗಳನ್ನು ಕಾಲಮಿತಿಯೊಳಗಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ರಸ್ತೆ ಗುಂಡಿಗಳು ಅಪಘಾತಕ್ಕೆ ಕಾರಣವಾಗಿದ್ದು, ಲೋಕೋಪಯೋಗಿ ಇಲಾಖೆಯು ರಸ್ತೆ ಗುಂಡಿಗಳನ್ನು ಮುಚ್ಚಿಸುವ ಕೆಲಸಕ್ಕೆ ಪ್ರಥಮ ಆದ್ಯತೆ ನೀಡಬೇಕು. ಎಲ್ಲಾ ರೀತಿಯ ನಿರ್ವಹಣೆ ಕಾರ್ಯಗಳ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳಬೇಕೆಂದು ಮಧುಗಿರಿ ಹಾಗೂ ತುಮಕೂರು ವಿಭಾಗದ ಎಇಇಗಳಿಗೆ ಸೂಚಿಸಿದರು.
ಸಭೆಯಲ್ಲಿ ಸಂಸದರಾದ ಜಿ.ಎಸ್. ಬಸವರಾಜು, ಶಾಸಕರುಗಳಾದ ಜಿ.ಬಿ.ಜ್ಯೋತಿ ಗಣೇಶ್, ಡಾ: ರಾಜೇಶ್ ಗೌಡ, ಡಾ: ರಂಗನಾಥ್, ಚಿದಾನಂದ ಎಂ. ಗೌಡ ಮತ್ತು ಕೃಷ್ಣಕುಮಾರ್, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಸಿಇಓ ಡಾ: ಕೆ. ವಿದ್ಯಾಕುಮಾರಿ, ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.