27 YNH 01

ನೇಕಾರ ಸನ್ಮಾನ್ : ನೇಕಾರರ ಅಸಮಾಧಾನ

DISTRICT NEWS ತುಮಕೂರು

ನೇಕಾರ ಸನ್ಮಾನ್ : ನೇಕಾರರ ಅಸಮಾಧಾನ
ವೈ.ಎನ್.ಹೊಸಕೋಟೆ : ಕೇಂದ್ರ ಸರ್ಕಾರದ ನೇಕಾರ ಸನ್ಮಾನ್ ಯೋಜನೆಯು ಕೇವಲ ಕೆಲವರಿಗೆ ಮಾತ್ರ ಲಭ್ಯವಾಗುತ್ತಿದ್ದು, ಬಹಳಷ್ಟು ಜನರಿಗೆ ತಲುಪುತಿಲ್ಲ ಎಂದು ಗ್ರಾಮದ ನೇಕಾರರಾದ ಅನಿಲ್, ಗೋವಿಂದ, ಗಂಗಾಧರ ಮತ್ತಿತರರು ಅಸಮಧಾನ ವ್ಯಕಪಡಿಸಿದ್ದಾರೆ.
ವೈ.ಎನ್.ಹೊಸಕೋಟೆ ಮತ್ತು ಸುತ್ತಮುತ್ತಲಿನ ಹಳ್ಳಿಗಳಲ್ಲಿ ಸುಮಾರು 12 ಸಾವಿರ ಜನ ನೇಕಾರರಿದ್ದಾರೆ. ಆದರೆ ಅದರಲ್ಲಿ ಕೇವಲ 4 ಸಾವಿರ ಜನ ನೇಕಾರರಿಗೆ ಮಾತ್ರ ನೇಕಾರ ಸನ್ಮಾನ್ ಯೋಜನೆಯ ಫಲ ದೊರೆಯುತ್ತಿದೆ.
ನೇಕಾರ ಅನುಕೂಲಕ್ಕಾಗಿ ವೈ.ಎನ್.ಹೊಸಕೋಟೆಯಲ್ಲಿ 3 ಸಹಕಾರ ಸಂಘಗಳು, ಸಾಸಲಕುಂಟೆ-1, ಎಸ್.ಆರ್.ಪಾಳ್ಯ-1, ನಿಡಗಲ್ಲು-1, ವೆಂಕಟಾಪುರ-1 ಸಹಕಾರಿ ಸಂಘಗಳಿವೆ. ಎಲ್ಲಾ ಪ್ರದೇಶಗಳು ಸೇರಿ ಸುಮಾರು 8 ಸಾವಿರ ಜನ ಕೂಲಿ ನೇಕಾರರಿದ್ದಾರೆ. ಇವರೊಟ್ಟಿಗೆ ಮಗ್ಗದ ಮಾಲೀಕರು ಸುಮಾರು 4 ಸಾವಿರ ಜನರಿದ್ದಾರೆ.

27 YNH 02

ಮಗ್ಗದ ಮಾಲೀಕ ಕುಟುಂಬದ ಬಹುಬಾಗ ಎಲ್ಲಾ ಸದಸ್ಯರು ಪೇಚಾನ್ ಕಾರ್ಡನ್ನು ಹೊಂದಿದ್ದು, ಅವರುಗಳಿಗೆ ನೇಕಾರ ಸನ್ಮಾನ್ ಹಣ ಕೈಸೇರುತ್ತಿದೆ. ಒಂದು ಕುಟುಂಬದಲ್ಲಿ 4-5 ಜನ ಫಲಾನುಭವಿಗಳನ್ನು ಕಾಣಬಹುದು. ಆದರೆ ಬೆರಳೆಣಿಕೆಯಷ್ಟು ಜನರನ್ನು ಹೊರತುಪಡಿಸಿದರೆ ಉಳಿದ ಕೂಲಿ ನೇಕಾರರಿಗೆ ಮತ್ತು ಅವರ ಕುಟುಂಬದ ಯಾರಿಗೂ ಪೇಚಾನ್ ಕಾರ್ಡ್ ಲಭ್ಯವಾಗಿಲ್ಲ. ಹಾಗಾಗಿ ಇವರೆಲ್ಲಾ ನೇಕಾರ್ ಸನ್ಮಾನ್ ಯೋಜನೆಯಿಂದ ವಂಚಿತರಾಗುತಿದ್ದಾರೆ. ಪೇಚಾನ್ ಕಾರ್ಡಿನ ಸಮಸ್ಯೆಯಿಂದ ಈ ಕುಟುಂಬದ ವಿದ್ಯಾರ್ಥಿಗಳಿಗೂ ವಿದ್ಯಾರ್ಥಿ ವೇತನ ದೊರೆಯುತ್ತಿಲ್ಲ.
3-4 ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ನೇಕಾರರ ಗಣತಿಗಾಗಿ ಒಂದು ಖಾಸಗಿ ಏಜೆನ್ಸಿಗೆ ಜವಾಬ್ದಾರಿಯನ್ನು ನೀಡಿದ್ದು, ಅವರು ಮನಸೋಇಚ್ಚೆ ಗಣತಿ ಮಾಡಿದ್ದಾರೆ. ಗಣತಿ ವೇಳೆ ಮನೆಯಲ್ಲಿ ಲಭ್ಯವಿಲ್ಲದ ನೇಕಾರರನ್ನು ಕೈಬಿಡಲಾಗಿದೆ. ಕೆಲವು ಸಹಕಾರಿ ಸಂಘದ ಪದಾಧಿಕಾರಿಗಳು ತಮಗೆ ಸನಿಹದಲ್ಲಿದ್ದವರ ಮತ್ತು ಸಂಬಂಧಿಗಳ ಬಳಿ ಖುದ್ದಾಗಿ ಹೋಗಿ ಗಣತಿ ಮಾಡಿಸಿಕೊಟ್ಟ್ಟು ಉಳಿದವರನ್ನು ಕಡೆಗಣಿಸಿರುವುದು ಉಂಟು. ವಿಷಯ ತಿಳಿದು ದಾಖಲೆಗಳನ್ನು ತೆಗೆದುಕೊಂಡು ಸಂಘದ ಬಳಿ ಕೆಲವು ನೇಕಾರರು ಹೋದಾಗ ಸಮಯ ಮುಗಿದಿದೆ ಎಂದು ವಾಪಸ್ಸು ಕಳುಹಿಸಿದ್ದಾರೆ. ಫಲವಾಗಿ ಹೆಚ್ಚಿನ ಸಂಖ್ಯೆಯಲ್ಲಿ ನೇಕಾರರಿಗೆ ಫಲ ದೊರೆಯುತ್ತಿಲ್ಲ ಎಂದು ಜೋಡಿಅಚ್ಚಮ್ಮನಹಳ್ಳಿ ನೇಕಾರರಾದ ತಿಪ್ಪೇಸ್ವಾಮಿ, ವೆಂಕಟೇಶ, ಮಂಜುನಾಥ ಇನ್ನಿತರರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಗ್ರಾಮಕ್ಕೆ ಬರುವ ಇಲಾಖೆಯ ಅಧಿಕಾರಿಗಳು ಸಹಕಾರಿ ಸಂಘದ ಕಾರ್ಯದರ್ಶಿಗಳು ಮತ್ತು ಪದಾಧಿಕಾರಿಗಳ ಇಚ್ಚೆಗೆ ತಕ್ಕಂತೆ ನಡೆದುಕೊಳ್ಳುತ್ತಾ ನೈಜ ನೇಕಾರರಿಗೆ ಅನ್ಯಾಯ ಮಾಡುತ್ತಿದ್ದಾರೆ. ಗ್ರಾಮದಲ್ಲಿರುವ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಮಗದ ಶಾಖೆಯಿದ್ದು, ಅದರಡಿ ಪ್ರಾರಂಭಿಕವಾಗಿ 200 ಮೇಲ್ಪಟ್ಟು ಕೈಮಗ್ಗಗಳು ನಡೆಯುತ್ತಿದ್ದವು. ಆದರೆ ಅಧಿಕಾರಿಗಳ ನಿರ್ಲಕ್ಷದ ಪರಿಣಾಮ ಅವುಗಳ ಸಂಖ್ಯೆ ಕೇವಲ 20ಕ್ಕೆ ಇಳಿದು ನೇಕಾರರಿಗೆ ಅನ್ಯಾಯವಾಗುತ್ತಿದೆ.
ಈಗಲಾದರೂ ಸಂಬಂಧಿಸಿದ ಇಲಾಖೆಯ ರಾಜ್ಯ ಮಟ್ಟದ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಿ ಎಲ್ಲಾ ನೇಕಾರರನ್ನು ಮರುಗಣತಿ ಮಾಡಿಸಿ ಪ್ರತಿಯೊಬ್ಬರಿಗೂ ಇಲಾಖೆಯ ಸೌಲಭ್ಯಗಳು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಇಲ್ಲವಾದಲ್ಲಿ ಮುಂದೆ ನೇಕಾರ ಬೀದಿಗಿಳಿದು ಪ್ರತಿಭಟನೆ ಮಾಡಬೇಕಾದ ಅಗತ್ಯ ಮೂಡಬಹುದು ಎಂದು ಎಚ್ಚರಿಸಿದ್ದಾರೆ.

ವರದಿ: ರಾಮಚಂದ್ರ- Y.N ಹೊಸಕೋಟೆ